ನಾಲ್ಕು ಶುದ್ಧ ನೀರಿನ ಘಟಕ ಬಂದ್

ಮುಂಡರಗಿ: ಪಟ್ಟಣದ ಜನತೆ ಶುದ್ಧ ಕುಡಿಯುವ ನೀರಿಗಾಗಿ ನಿತ್ಯ ಪರಿತಪಿಸುತ್ತಿದ್ದಾರೆ. ಪಟ್ಟಣದ 13 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಕೋಟೆಭಾಗ, ಜಾಗೃತ ಸರ್ಕಲ್, ಕನ್ನಿಕಾಪರಮೇಶ್ವರಿ ದೇವಸ್ಥಾನ ಹಾಗೂ ಕೆಇಬಿ ಮುಂದಿರುವ ಶುದ್ಧ ಕುಡಿಯುವ ನೀರಿನ ಘಟಕವು ಒಂದು ವಾರದಿಂದ ಬಂದ್ ಆಗಿದ್ದು ಸ್ಥಳೀಯರು ಬೇರೊಂದು ನೀರಿನ ಘಟಕದ ಮುಂದೆ ಸರದಿಯಲ್ಲಿ ನಿಂತು ನೀರು ಪಡೆಯುತ್ತಿದ್ದಾರೆ.

ಕೊರ್ಲಹಳ್ಳಿ ಪಂಪ್​ಹೌಸ್​ನಿಂದ ಪಟ್ಟಣಕ್ಕೆ ಪೂರೈಕೆಯಾಗುತ್ತಿದ್ದ ತುಂಗಭದ್ರಾ ನದಿ ನೀರು ಸಹ ಕಳೆದ ಹಲವಾರು ತಿಂಗಳುಗಳಿಂದ ಸ್ಥಗಿತಗೊಂಡಿದೆ. ಜಾಲವಾಡಗಿ ತುಂಗಭದ್ರಾ ನದಿ ನೀರು ಸಂಸ್ಕರಣ ಘಟಕದಿಂದ ಪೂರೈಸುವ ಕುಡಿಯುವ ನೀರಿಗೆ ಸವಳು ನೀರು ಮಿಶ್ರಣ ಮಾಡಿ ಎರಡ್ಮೂರು ದಿನಕೊಮ್ಮೆ ಪೂರೈಸಲಾಗುತ್ತದೆ.

ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆಯ ಶುದ್ಧ ಕುಡಿಯುವ ನೀರಿನ ಘಟಕಗಳ ಮೇಲ್ವಿಚಾರಕ ರವಿ ಕುಂಬಾರ ಅವರು, ಮಾ.15ರಂದು ಹೊಸ ಮುಖ್ಯಾಧಿಕಾರಿ ನೇಮಕವಾಗುತ್ತಾರೆ. ಅವರ ಗಮನಕ್ಕೆ ತಂದು ಬಂದ್ ಆಗಿರುವ ನೀರಿನ ಘಟಕ ದುರಸ್ತಿಗೊಳಿಸಿ ಪ್ರಾರಂಭಿಸುತ್ತೇವೆ ಎಂದರು.