ನಾಲಾ ಅತಿಕ್ರಮಣ ನೋಡಿ ಹೌಹಾರಿದ ಜನ

ಹುಬ್ಬಳ್ಳಿ:ಮಹಾನಗರ ಪಾಲಿಕೆಯ ಅಂಧಾದುಂದಿ ದರ್ಬಾರ್​ಗೆ ಎಲ್ಲೆಂದರಲ್ಲಿ ಅಕ್ರಮ, ಅನಧಿಕೃತ ಕಟ್ಟಡಗಳು ತಲೆ ಎತ್ತುವುದು ಸಾಮಾನ್ಯವಾಗಿ ಬಿಟ್ಟಿದೆ. ಸಮತಟ್ಟಾದ ಜಾಗ ಬಿಡಿ ಮಳೆ ನೀರು ಹರಿಯುವ ನಾಲಾಗಳನ್ನೂ ಬಿಟ್ಟಿಲ್ಲ. ರಾಜಕಾಲುವೆಗಳನ್ನೂ ನುಂಗಿ ಬೃಹತ್ ಕಟ್ಟಡ ನಿರ್ಮಾಣ ಮಾಡಿದ್ದನ್ನು ನೋಡಿದ ಜನ ಹೌಹಾರಿದ್ದಾರೆ.

ಇಲ್ಲಿಯ ಹೊಸೂರ ಸರ್ಕಲ್ (ಪಾಲಿಕೆ ಕಟ್ಟಡ ಬಳಿ) ಹತ್ತಿರ ಈಚೆಗೆ ಬಿಆರ್​ಟಿಎಸ್​ಗೆ ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ಬೃಹತ್ ವಾಣಿಜ್ಯ ಕಟ್ಟಡ ಮುಂಭಾಗ ತೆರವು ಸಂದರ್ಭದಲ್ಲಿ ಕೆಳಗೆ ನಾಲಾ ಇರುವುದು ಬಹುತೇಕ ಜನರಿಗೆ ಗೊತ್ತಾಗಿದೆ. ಅಲ್ಲಿಯವರೆಗೆ ಎಷ್ಟೋ ಜನರಿಗೆ ಅಲ್ಲಿ ನಾಲಾ ಇದ್ದದ್ದೇ ಗೊತ್ತಿರಲಿಲ್ಲವೇನೋ?

ಸದ್ಯ ಅಲ್ಲಿನ ಸ್ಥಿತಿ ಹೇಗಿದೆ:ಬಿಆರ್​ಟಿಎಸ್​ಗಾಗಿ ಸಚಿನ್ ಬಾರ್ ಆಂಡ್ ರೆಸ್ಟೋರೆಂಟ್ ಹಾಗೂ ಪಕ್ಕದ ಬಿಲ್ಡಿಂಗ್​ನ್ನು 10-20 ಅಡಿ ಹಿಂದಕ್ಕೆ ಸರಿಸಲಾಗಿದೆ. ಕೆಳಗೆ ನಾಲಾ ಇದೆ. ಕಾಲಂ ಹಾಕಿ ನಿರ್ವಿುಸಿರುವ ಬಹುಮಹಡಿ ಕಟ್ಟಡದ ಕೆಳಗೆ ಕೊಳಚೆ ಹರಿಯುತ್ತಿದೆ. ಸದ್ಯ ಅದರ ಅಕ್ಕಪಕ್ಕದಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಳ್ಳಬೇಕಾಗಿದೆ. ಅಷ್ಟೊಂದು ಗಬ್ಬು ವಾಸನೆ ಹರಡುತ್ತಿದೆ.

ಕಟ್ಟಡದ ಕೆಳಗೆ ನೋಡಿದರೆ ಹಿಂದಿನಿಂದ ರಾಜಕಾಲುವೆ ಕಾಣಿಸುತ್ತದೆ. ಹಿಂದೆ ವಿಸ್ತಾರವಾಗಿ ಹರಿದು ಬರುವ ನಾಲಾ ಕಟ್ಟಡ ಕೆಳಗೆ ಇಕ್ಕಟ್ಟುಗೊಳಿಸಿ ರಸ್ತೆ ದಾಟಿಸಲು ಗಟಾರು ಕಾಮಗಾರಿ ಕೈಗೊಳ್ಳಲಾಗಿದೆ. ಈಗಾಗಲೇ ಅರ್ಧ ಕಾಮಗಾರಿ ಮುಗಿದಿದೆ.

ಐದಾರು ಅಡಿ ಇರುವ ಗಟಾರು ರಸ್ತೆ ದಾಟಿದ ನಂತರವೂ ಕೆಲವು ವಾಣಿಜ್ಯ ಕಟ್ಟಡ, ಆಸ್ಪತ್ರೆ ಕಟ್ಟಡಗಳಿಂದ ಮೇಲ್ಭಾಗ ಮುಚ್ಚಿಕೊಂಡಿದೆ. ನಂತರದಲ್ಲಿ ಮುಕ್ತವಾಗಿ ಹರಿಯುತ್ತದೆ. ಹಾಗಾಗಿ ಹೊಸೂರ ಸರ್ಕಲ್ ಅಕ್ಕಪಕ್ಕದಲ್ಲಿ ಎಲ್ಲಿಯೂ ನಾಲೆಗೆ ನೇರವಾಗಿ ಮಳೆ ನೀರು ತಲುಪಲು ಜಾಗವಿಲ್ಲದಂತಾಗಿದೆ.

ದೇಶಪಾಂಡೆ ನಗರ ಕಡೆಯಿಂದ 10- 20 ಅಡಿ ಅಗಲ ಇರುವ ನಾಲಾ ಬಿಲ್ಡಿಂಗ್ ಕೆಳಗೆ ಹೋಗಿ ಕೇವಲ ಐದಾರು ಅಡಿ ಗಟಾರು ಮೂಲಕ ಸಾಗಬೇಕಿದೆ.

ಸರ್ಕಲ್ ಜಲಾವೃತ:ಇದೇ ಕಾರಣಕ್ಕೆ ಏನೋ ಸಣ್ಣ ಮಳೆಯಾದರೂ ಹೊಸೂರ ಸರ್ಕಲ್ ಜಲಾವೃತವಾಗುತ್ತಿದೆ. ಬಿಆರ್​ಟಿಎಸ್ ಕಾಮಗಾರಿಗೆ ಎಷ್ಟು ಬೇಕೋ ಅಷ್ಟೇ ಜಾಗ ತೆರವು ಮಾಡಿಕೊಂಡು ಉಳಿದದ್ದು ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಅಧಿಕಾರಿಗಳು ನಡೆದುಕೊಂಡಿದ್ದಾರೆ. ಅದೇ ಕಟ್ಟಡದ ಕೆಳಗೆ ನಾಲಾ ಅವಸ್ಥೆ ಹದಗೆಟ್ಟಿದ್ದರೂ ಮಹಾನಗರ ಪಾಲಿಕೆಯಾಗಲಿ, ಬಿಆರ್​ಟಿಎಸ್ ಅಧಿಕಾರಿಗಳು ಜಾಣಮೌನ ವಹಿಸಿದ್ದಾರೆ.