ನಾರಾಯಣಪುರ ಡ್ಯಾಂನಿಂದ ಭೀಮಾಕ್ಕೆ ನೀರು ಬಿಡುಗಡೆ; ಡಾ. ಅಜಯಸಿಂಗ್​

ವಿಜಯವಾಣಿ ಸುದ್ದಿಜಾಲ ಜೇವರ್ಗಿ
ಬರಗಾಲದಿಂದಾಗಿ ಭೀಮಾ ನದಿ ಬರಿದಾಗಿದ್ದರಿಂದ ತಾಲೂಕಿನ ನದಿ ಪಾತ್ರದ ಹಳ್ಳಿಗಳ ಜನರ ಮತ್ತು ಜೇವರ್ಗಿ ಪಟ್ಟಣ ಹಾಗೂ ಕಲಬುರಗಿ ನಗರದ ಜನರಿಗೆ ಕುಡಿವ ನೀರಿನ ಬವಣೆ ನೀಗಿಸಲು ನಾರಾಯಣಪುರ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಜೇವರ್ಗಿ ಶಾಸಕ ಡಾ.ಅಜಯಸಿಂಗ್ ತಿಳಿಸಿದ್ದಾರೆ.

ನಾರಾಯಣಪುರ ಜಲಾಶಯದಿಂದ ಶನಿವಾರ ಬೆಳಗ್ಗೆಯಿಂದಲೇ 700 ಕ್ಯೂಸೆಕ್ ನೀರು ಹರಿಸಲು ಆರಂಭಿಸಲಾಗಿದೆ. ನಾರಾಯಣಪುರದ ಮುಖ್ಯ ಕಾಲುವೆ ಮೂಲಕ ಕೆಂಭಾವಿ ಹತ್ತಿರ ವೈ ಜಂಕ್ಷನ್ ಮೂಲಕ ನೀರು ಹರಿಯುತ್ತಿದ್ದು, ಅಲ್ಲಿಂದ ಜೇವರ್ಗಿ ಶಾಖಾ ಕಾಲುವೆ (ಜೆಬಿಸಿ) ಮೂಲಕ ಭೀಮಾ ನದಿಗೆ ಬಂದು ತಲುಪಲಿದೆ ಎಂದು ಮಾಧ್ಯಮದವರಿಗೆ ತಿಳಿಸಿದರು.

ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾಗಿರುವ ಅರೋಗ್ಯ ಸಚಿವ ಶಿವಾನಂದ ಪಾಟೀಲ್ ಅವರನ್ನು ವಾರದ ಹಿಂದೆ ಭೇಟಿ ಮಾಡಿ ಗಂಭೀರತೆ ವಿವರಿಸಿ, ಒತ್ತಡ ಹೇರಿದ್ದರಿಂದ ಸ್ಪಂದಿಸಿ ನೀರು ಬಿಡುಗಡೆ ಮಾಡಿದ್ದಾರೆ. ಇದರಿಂದಾಗಿ ಜೇವರ್ಗಿ ಪಟ್ಟಣ ಮತ್ತು ಕಲಬುರಗಿ ಜನರಿಗೆ ನೀರು ಪೂರೈಕೆ ಮಾಡಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಬರದಿಂದ ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಮತ್ತೊಂದೆಡೆ ಭೀಮಾ ನದಿ ಬತ್ತಿ ಹೋಗಿ ನೀರಿಗಾಗಿ ಜನರು ಪರದಾಡುವಂತಾಗಿದೆ. ಹೀಗಾಗಿ ಜೇವರ್ಗಿ ತಾಲೂಕಿನಲ್ಲಿ ಉಲ್ಭಣಿಸಿದ ಕುಡಿಯುವ ನೀರಿನ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನಾರಾಯಣಪುರ ಎಡದಂಡೆ ಕಾಲುವೆ ಮುಖಾಂತರ ಭೀಮಾ ನದಿಗೆ ಶನಿವಾರ ನೀರು ಹರಿಸಲಾಗುತ್ತಿದೆ. ಜಲಾಶಯದಿಂದ 700 ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ತಿಳಿಸಿದರು.

ಇನ್ನೆರಡ್ಮೂರು ದಿನಗಳಲ್ಲಿ ನೀರು ಕಲ್ಲೂರ ಬ್ಯಾರೇಜ್ ಮೂಲಕ ಸರಡಗಿ ಬ್ಯಾರೇಜ್ ಅಲ್ಲಿಂದ ಕಟ್ಟಿ ಸಂಗಾವಿಗೆ ಬಂದು ತಲುಪಲಿದೆ. ಇದರಿಂದ ಜೇವರ್ಗಿ ಜನರು ಎದುರಿಸುತ್ತಿದ್ದ ನೀರಿನ ಸಮಸ್ಯೆ ಬಗೆಹರಿಯಲಿದೆ. ಅಲ್ಲದೆ ಭೀಮಾ ನದಿ ಸಂಪೂರ್ಣ ಬತ್ತಿದ್ದರಿಂದ ನದಿ ಪಾತ್ರದ ಗ್ರಾಮಸ್ಥರು ಹಾಗೂ ಜಾನುವಾರು ಕುಡಿವ ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ನೀರು ಹರಿಕೆ ಆರಂಭಗೊಂಡಿದ್ದರಿಂದ ಭೀಮಾ ನದಿಗೆ ಸ್ವಲ್ಪ ಪ್ರಮಾಣದಲ್ಲಿ ಒಳಹರಿವು ಪ್ರಾರಂಭವಾಗಲಿದೆ. ಜೇವರ್ಗಿ ಪಟ್ಟಣ ಸೇರಿದಂತೆ ಭೀಮಾ ಪಾತ್ರದ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಅನುಕೂಲವಾಗಲಿದೆ. ಜೇವರ್ಗಿ ಪಟ್ಟಣದ ಜನತೆಗೆ ಎರಡು ದಿನಗಳಲ್ಲಿ ಕುಡಿಯುವ ನೀರು ಸರಬುರಾಜ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಅಜಯಸಿಂಗ್ ಹೇಳಿದರು.