ನಾಯಿ ದಾಳಿಗೆ ಬಾಲಕ ಬಲಿ

ಬೆಂಗಳೂರು: ನಗರದಲ್ಲಿ ಬೀದಿನಾಯಿಗಳ ಉಪಟಳ ಮತ್ತೆ ಹೆಚ್ಚಾಗಿದ್ದು, ಸೋಲದೇವನಹಳ್ಳಿಯಲ್ಲಿ ಮಂಗಳವಾರ ಬೀದಿನಾಯಿಗಳ ದಾಳಿಯಿಂದಾಗಿ ಪುಟಾಣಿ ಬಾಲಕ ಮೃತಪಟ್ಟಿದ್ದಾನೆ.

ಸೋಲದೇವನಹಳ್ಳಿಯ ಅಜ್ಜೇಗೌಡಪಾಳ್ಯದಲ್ಲಿ ಕಟ್ಟಡ ಕಾರ್ವಿುಕ ಕಲಬುರಗಿ ಜಿಲ್ಲೆ ಸೇಡಂ ಮೂಲದ ಮಲ್ಲಪ್ಪ- ಮಲ್ಲಮ್ಮ ದಂಪತಿ ಪುತ್ರ ದುರ್ಗೆಶ್(5) ನಾಯಿಗಳ ಕ್ರೂರ ದಾಳಿಗೆ ಬಲಿಯಾಗಿದ್ದಾನೆ. 8 ರಿಂದ 10 ನಾಯಿಗಳು ದುರ್ಗೆಶ್ ಮೇಲೆ ಎರಗಿವೆ.

ದುರ್ಗೆಶ್ ಪಾಲಕರು ಸೋಲದೇವನಹಳ್ಳಿಯ ಆಚಾರ್ಯ ಕಾಲೇಜು ಹಿಂಭಾಗದಲ್ಲಿ ಕಟ್ಟಡ ನಿರ್ವಣದಲ್ಲಿ ತೊಡಗಿದ್ದರು. ಪ್ರತಿದಿನ ತಾಯಿಯೊಂದಿಗೆ ಕಟ್ಟಡ ನಿರ್ಮಾಣ ಸ್ಥಳಕ್ಕೆ ಬರುತ್ತಿದ್ದ ಬಾಲಕ ಮುಂಭಾಗದ ರಸ್ತೆಯಲ್ಲಿ ಆಟವಾಡುತ್ತಿದ್ದ, ಮಂಗಳವಾರ ಮಧ್ಯಾಹ್ನವೂ ಅಲ್ಲಿಯೇ ಇದ್ದ ಬಾಲಕ ಸಮೀಪದ ತೋಪಿನ ಬಳಿ ಆಟಕ್ಕೆ ತೆರಳಿದ್ದ. ಅಲ್ಲಿದ್ದ ನಾಯಿಗಳ ಹಿಂಡು ಆತನ ಮೇಲೆ ದಾಳಿ ನಡೆಸಿವೆ. ನಂತರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬಾಲಕ ಅಸುನೀಗಿದ್ದಾನೆ. ಸಪ್ತಗಿರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದಂಪತಿಗೆ ಐದು ಮಕ್ಕಳಿದ್ದು, ದುರ್ಗೆಶ್4ನೇಯವನಾಗಿದ್ದಾನೆ. ಇತ್ತೀಚೆಗಷ್ಟೇ ಮಲ್ಲಮ್ಮ 5ನೇ ಮಗುವಿಗೆ ಜನ್ಮ ನೀಡಿದ್ದರು. ಮಗನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಕೆಲಸ ಮುಗಿಸಿ ಮನೆಗೆ ಬರುವ ಸಿದ್ಧತೆ ಯಲ್ಲಿದ್ದೆ. ಉಳಿದ ಮಕ್ಕಳ ಜತೆಗೆ ಆಡಿ ಕೊಂಡಿದ್ದ ಮಗ ನಾನಿರುವ ಜಾಗಕ್ಕೆ ಹುಡುಕಿಕೊಂಡು ಬರುತ್ತಿದ್ದ. ಅಷ್ಟರಲ್ಲಿ ನಾಯಿಗಳು ದಾಳಿ ನಡೆಸಿವೆ. ಮಗನೇ ಇಲ್ಲವಾದ ಮೇಲೆ ದೂರು ನೀಡಿ ಏನು ಮಾಡಲಿ. ಮಗ ವಾಪಸ್ ಬರಲು ಸಾಧ್ಯವೇ?

| ಮಲ್ಲಪ್ಪ ಮೃತ ದುರ್ಗೆಶ್ ತಂದೆ

1.26 ಲಕ್ಷ ನಾಯಿ ಕಡಿತ ಪ್ರಕರಣ

ಬಿಬಿಎಂಪಿ ಅಂಕಿ-ಅಂಶದ ಪ್ರಕಾರ 2009-10 ರಿಂದ 2015-16ರವರೆಗೆ ( 7 ವರ್ಷಗಳ ಅವಧಿ) 1.26 ಲಕ್ಷ ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ. 2016-17ರಲ್ಲಿ 12 ಸಾವಿರ ನಾಯಿ ಕಡಿತ ಪ್ರಕರಣಗಳಾಗಿವೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದರೂ ಕ್ರಮಗಳು ಮಾತ್ರ ಜಾರಿ ಆಗಿಲ್ಲ. 2018ರಲ್ಲೂ ಮಾರಣಾಂತಿಕ ದಾಳಿಯ 4 ಘಟನೆಗಳು ನಡೆದಿದ್ದು, ಕೆಲವು ಪ್ರಕರಣಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿ ರಾಜಧಾನಿಯ ಜನರಲ್ಲಿ ಆತಂಕ ಮೂಡಿಸಿದ್ದವು. ಇದೀಗ ಮತ್ತೆ ಅಂತಹ ದಾರುಣ ಪ್ರಕರಣ ನಡೆದಿದ್ದು ನಗರದ ನಾಗರಿಕರು ಭಯಭೀತರಾಗಿದ್ದಾರೆ.

ಜ್ವರ ಇದ್ದಿದ್ದರಿಂದ ಮನೆಯಲ್ಲಿದ್ದ…!

ದುರ್ಗೆಶನಿಗೆ ಜ್ವರ ಇದ್ದಿದ್ದರಿಂದ ಮಂಗಳವಾರ ಶಾಲೆಗೆ ಹೋಗಿರಲಿಲ್ಲ. ಹೀಗಾಗಿ ತಂದೆ ಕೆಲಸ ಮಾಡುತ್ತಿದ್ದ ಕಟ್ಟಡದ ಬಳಿ ಬಂದಿದ್ದ. ಅಲ್ಲಿಗೆ ತೆರಳುವ ಮಾರ್ಗದಲ್ಲಿ ತೊಟ್ಟಿಯಲ್ಲಿ ಬಿಸಾಡಿದ್ದ ಆಹಾರ ತಿನ್ನಲು ತೊಟ್ಟಿ ಬಳಿ ನಾಯಿಗಳು ಜಮಾಯಿಸಿದ್ದವು ಈ ವೇಳೆ ದುರ್ಗೆಶನನ್ನು ಕಂಡು ಎರಗಿ ದಾಳಿ ಮಾಡಿವೆ ಎನ್ನಲಾಗಿದೆ.

ದಾಳಿ ಮಾಡುವಂತಹ ವರ್ತನೆ ತೋರುವ ಬೀದಿ ನಾಯಿಗಳನ್ನು ಕೊಲ್ಲಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಪಶುಸಂಗೋಪನೆ ಇಲಾಖೆ ಮನವಿ ಮಾಡಿದೆ. ಜು.1 ರಂದು ಹೈಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ. ನಂತರ ಕಾನೂನಿನಲ್ಲಿ ಬದಲಾವಣೆ ತರಬಹುದೇ ಎಂಬುದನ್ನು ಪರಿಶೀಲಿಸಬೇಕಿದೆ. ಸದ್ಯಕ್ಕೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

| ಗಂಗಾಂಬಿಕೆ ಮಲ್ಲಿಕಾರ್ಜುನ್ ಮೇಯರ್

ಶ್ವಾನ ದಾಳಿ ಇದೇ ಮೊದಲಲ್ಲ

ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡುತ್ತಿರುವುದು ಇದೇ ಮೊದಲಲ್ಲ. ರಾಜಧಾನಿ ಬೆಂಗಳೂರಿನಲ್ಲಿ ನಾಯಿಗಳ ಹಾವಳಿ ಹಿಂದಿಗಿಂತಲೂ ಹೆಚ್ಚಾಗಿದ್ದು, ಹತ್ತಾರು ಪ್ರಕರಣಗಳು ನಡೆದಿವೆ. ಹಲವು ಪ್ರಕರಣಗಳಲ್ಲಿ ಮಕ್ಕಳು ಮೃತಪಟ್ಟಿದ್ದರೂ ಬೀದಿನಾಯಿ ಹಾವಳಿಗೆ ಬ್ರೇಕ್ ಹಾಕುವಲ್ಲಿ ಬಿಬಿಎಂಪಿ ವಿಫಲವಾಗಿದೆ. ನಾಯಿ ಕಡಿತಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದರೂ ಕ್ರಮ ಜಾರಿಯಾಗುತ್ತಿಲ್ಲ. ಪದೇಪದೆ ಘಟನೆ ಜರುಗುತ್ತಿದ್ದರೂ ಅಧಿಕಾರಿಗಳು ತಲೆಕೆಡಿಸಿ ಕೊಳ್ಳುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ಬಾಲಕಿ ಮೆಲೆ ಮಾರಣಾಂತಿಕ ದಾಳಿ

ನೀಲಸಂದ್ರ ವಾರ್ಡ್​ನ ರೋಸ್​ಗಾರ್ಡನ್ ಪ್ರದೇಶದಲ್ಲಿ 8 ವರ್ಷದ ಬಾಲಕಿ ಮೇಲೆ ನಾಯಿಗಳು ದಾಳಿ ನಡೆಸಿವೆ. ಬಾಲಕಿಯ ಮುಖದ ಮೇಲೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕೈ ಹಾಗೂ ಕಾಲುಗಳಿಗೂ ಕಚ್ಚಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಕರು ಯಾವುದೇ ದೂರು ದಾಖಲಿಸಿಲ್ಲ. ನಾಯಿಗಳ ಹಾವಳಿ ವಿಚಾರವಾಗಿ ಹಲವು ಬಾರಿ ಕಾಪೋರೇಟರ್​ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಘಟನೆ ನಡೆದಿರುವುದೇ ಸುಳ್ಳು ಎಂದು ಪಾಲಿಕೆ ಸದಸ್ಯ ಜಿ. ಬಾಲಕೃಷ್ಣನ್ ಹೇಳಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆ ಹಾಗೂ ಆಸ್ಪತ್ರೆಗಳಿಂದ ಮಾಹಿತಿ ಕೇಳಿದ್ದೇನೆ. ಯಾವುದೇ ಘಟನೆ ನಡೆದಿರುವ ಬಗ್ಗೆ ಮಾಹಿತಿ ದೊರೆತಿಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *