ನಾಯಕಿ ಧಾರಾವಾಹಿಗೆ ಹರಿಪ್ರಿಯಾ ಪ್ರಚಾರಕಿ

ಬೆಂಗಳೂರು: ಇನ್ನು ಕೆಲ ದಿನಗಳು ಕಳೆದರೆ ಉದಯ ವಾಹಿನಿ 25 ವರ್ಷ ಪೂರೈಸಲಿದೆ. ಆ ಖುಷಿಯಲ್ಲಿಯೇ ‘ನಾಯಕಿ’ ಶೀರ್ಷಿಕೆಯ ಹೊಸ ಧಾರಾವಾಹಿಯನ್ನು ವೀಕ್ಷಕರ ಮಡಿಲಿಗೆ ಹಾಕಲು ವಾಹಿನಿ ಸಜ್ಜಾಗಿದೆ. ವಿಶೇಷ ಏನೆಂದರೆ ಈ ಧಾರಾವಾಹಿಗೆ ಸ್ಟಾರ್ ಪ್ರಚಾರಕಿಯಾಗಿ ನಟಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಯ ಕೆಲವು ಪ್ರೋಮೊಗಳಲ್ಲೂ ಅವರು ಅಭಿನಯಿಸಿದ್ದು, ಜೂನ್ 17ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7ಕ್ಕೆ ಉದಯ ವಾಹಿನಿಯಲ್ಲಿ ‘ನಾಯಕಿ’ ಪ್ರಸಾರವಾಗಲಿದೆ.

‘ನಾಯಕಿ’ ಧಾರಾವಾಹಿ ಅತ್ತೆ-ಸೊಸೆ ಜಗಳದ ಕಥೆ ಅಲ್ಲ. ನಾಯಕನಿಗಾಗಿ ಅಳುವ ನಾಯಕಿಯ ಕಥೆಯೂ ಅಲ್ಲ. ಕಥಾನಾಯಕಿಗೆ ಮೇಲಿಂದ ಮೇಲೆ ಕಷ್ಟ ಕೊಡುವ ಧಾರಾವಾಹಿ ಇದಲ್ಲ. ಇದು ಒಬ್ಬ ದಿಟ್ಟ ಹುಡುಗಿಯ ಕಥೆ. ಈ ನಾಯಕಿ ಕಷ್ಟಗಳನ್ನು ಎದುರಿಸುವುದಿಲ್ಲ, ಹೆದರಿಸುವ ದಿಟ್ಟೆ. ಸೌಂದರ್ಯಾ ಎಂಬ ಬಡ ಹುಡುಗಿ ತನ್ನ ಕುಡುಕ ಅಪ್ಪನನ್ನು ಸಾಕಲು ಮತ್ತು ತಮ್ಮನನ್ನು ಓದಿಸಲು ಪಡುವ ಕಷ್ಟಗಳ ಸುತ್ತ ಹೆಣೆದ ಕಥೆಯಿದು. ಸೂರ್ಯವರ್ಧನ್ ಹಣಕ್ಕಾಗಿ ನಾಯಕಿಯ ಹೆತ್ತವರನ್ನು ಕೊಂದು ಅವರ ಸ್ವತ್ತನ್ನು ತನ್ನದಾಗಿಸಿಕೊಂಡಿರುತ್ತಾನೆ. ಆದರೆ, ಈ ವಿಷಯ ಸೌಂದರ್ಯಳಿಗೆ ಗೊತ್ತಿರುವುದಿಲ್ಲ. ಕಾಕತಾಳೀಯವೆಂಬಂತೆ ಸೌಂದರ್ಯಾ ಆತನ ಕಂಪನಿಯಲ್ಲಿಯೇ ಕೆಲಸ ಮಾಡುತ್ತಿರುತ್ತಾಳೆ. ಸೂರ್ಯವರ್ಧನ್​ಗೆ ತಾನು ಆಳುತ್ತಿರುವ ಆಸ್ತಿಯ ಒಡತಿ ಜೀವಂತವಾಗಿರುವ ವಿಷಯ ತಿಳಿದು, ಅವಳನ್ನು ಹುಡುಕಿ ಸಾಯಿಸಲು ಹೊಂಚು ಹಾಕಿರುತ್ತಾನೆ. ಇತ್ತ ಅದೇ ಸಮಯಕ್ಕೆ ಸೌಂದರ್ಯಾಳಿಗೆ ಸೂರ್ಯವರ್ಧನ್ ಮಗ ಸಿದ್ಧಾರ್ಥ್​ನ ಮೇಲೆ ಪ್ರೀತಿ ಚಿಗುರುತ್ತದೆ. ಕೊನೆಗೆ ಸಿದ್ಧಾರ್ಥನಿಗೆ ತನ್ನ ಅಪ್ಪನ ನಿಜ ಮುಖ ಗೊತ್ತಾಗಲಿದೆಯೇ? ಸೌಂದರ್ಯಾಳಿಗೆ ತನ್ನ ಜನ್ಮರಹಸ್ಯ ತಿಳಿಯುತ್ತಾ? ಹೀಗೆ ಕುತೂಹಲದಲ್ಲಿಯೇ ಧಾರಾವಾಹಿ ಮೂಡಿಬರಲಿದೆಯಂತೆ. ಬಡ್ಡಿ ಬಂಗಾರಮ್ಮನಾಗಿ ಹಿರಿಯ ನಟಿ ಹೇಮಾಚೌಧರಿ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಕಾವ್ಯಾ ಕಥಾನಾಯಕಿಯಾಗಿ ಕಾಣಿಸಿಕೊಂಡರೆ, ಸಿದ್ಧಾರ್ಥ ಪಾತ್ರದಲ್ಲಿ ದೀಪಕ್ ನಟಿಸುತ್ತಿದ್ದಾರೆ. ಶ್ರೀಅನಘ ಕ್ರಿಯೇಷನ್ ಬ್ಯಾನರ್​ನಲ್ಲಿ ತಯಾರಾಗು ತ್ತಿರುವ ಧಾರಾವಾಹಿಗೆ ಶಶಿಧರ್ ಕೆ. ನಿರ್ದೇಶನ ಮಾಡುತ್ತಿದ್ದಾರೆ.