ನಾಯಕರ ವಿರುದ್ಧ ಕೈ ಕಾರ್ಯಕರ್ತರು ಗರಂ

ಕೈಲಾಂಚ: ರಾಮನಗರ ವಿಧಾನಸಭೆ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು, ಒಂದು ವೇಳೆ ಕಣಕ್ಕಿಳಿಸದಿದ್ದರೆ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವ ಮಾತೇ ಇಲ್ಲ ಎಂದು ನಾಯಕರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಹರಿಹಾಯ್ದರು.

ಕೈಲಾಂಚ ಹೋಬಳಿಯ ಕವಣಾಪುರದ ಕಾಂಗ್ರೆಸ್ ಮುಖಂಡ ಶಿವಲಿಂಗಯ್ಯ ಮನೆಯಲ್ಲಿ ಸಂಸದ ಡಿ.ಕೆ. ಸುರೇಶ್ ಅಧ್ಯಕ್ಷತೆಯಲ್ಲಿ ಭಾನುವಾರ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆ ನಡೆಯಿತು.

30-40 ವರ್ಷಗಳಿಂದ ಕ್ಷೇತ್ರದಲ್ಲಿ ಜೆಡಿಎಸ್ ವಿರುದ್ಧವಾಗಿ ಹೋರಾಡಿದ್ದೇವೆ. ಅವರಿಂದ ಸಾಕಷ್ಟು ಕಿರುಕುಳ ಅನುಭವಿಸಿದ್ದೇವೆ. ನಮ್ಮ ಕಾರ್ಯಕರ್ತರನ್ನು ಅವರು ಕೋರ್ಟ್​ಗೂ ಎಳೆದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದರೂ ಕಾರ್ಯಕರ್ತರ ಕೆಲಸಗಳಾಗುತ್ತಿಲ್ಲ. ಎಲ್ಲದಕ್ಕೂ ಅಡ್ಡಗಾಲು ಹಾಕಲಾಗುತ್ತಿದೆ. ಅಧಿಕಾರಕ್ಕಾಗಿ ಸ್ನೇಹವೇ? ನಮ್ಮ ಕೆಲಸ ಕಾರ್ಯಗಳಿಗೆ ವಿರೋಧ ಏಕೆ ಎಂದು ಅಸಮಾಧಾನ ಹೊರಹಾಕಿದರು.

ಉಪಚುನಾವಣೆಯಲ್ಲಿ ಇಕ್ಬಾಲ್ ಹುಸೇನ್ ಪರ ಜನಾಭಿಪ್ರಾಯವಿದೆ. ಪಕ್ಷದಿಂದ ಅಭ್ಯರ್ಥಿ ಹಾಕದೆ ಕ್ಷೇತ್ರವನ್ನು ಅನಾಥವಾಗಿಸಬೇಡಿ ಎಂದು ಕೆಲವರು ಪಟ್ಟು ಹಿಡಿದರು.

ಅನಿವಾರ್ಯವಾದರೆ ಬಿಜೆಪಿಗೆ ಮತ: ಕಾಂಗ್ರೆಸ್​ನಿಂದ ಅಭ್ಯರ್ಥಿ ಕಣಕ್ಕಿಳಿಸದೆ ಜೆಡಿಎಸ್​ಗೆ ಮತನೀಡಿ ಎಂದರೆ ನಮ್ಮ ಕೈ ಕತ್ತರಿಸಿದರೂ ಜೆಡಿಎಸ್​ಗೆ ಮತ ನೀಡುವುದಿಲ್ಲ ಎಂದು ಕಾರ್ಯಕರ್ತನೊಬ್ಬ ಆಕ್ರೋಶ ವ್ಯಕ್ತಪಡಿಸಿದರೆ, ಅನಿವಾರ್ಯವಾದರೆ ಬಿಜೆಪಿಗೆ ಮತ ಹಾಕುತ್ತೇವೆ ಎಂದು ಮತ್ತೆ ಕೆಲವರು ಖಾರವಾಗಿಯೇ ಪ್ರತಿಕ್ರಿಯಿಸಿದರು.

ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಮತ್ತು ರಾಜ್ಯದಲ್ಲಿ ಪಕ್ಷ ಸದೃಢಗೊಳಿಸುವ ನಿಟ್ಟಿನಲ್ಲಿ ಹೈಕಮಾಂಡ್ ಸಮ್ಮಿಶ್ರ ಸರ್ಕಾರಕ್ಕೆ ಅನುವು ಮಾಡಿಕೊಟ್ಟಿದೆ. ಪಕ್ಷದ ಆದೇಶದಂತೆ ಕ್ಷೇತ್ರವನ್ನು ಜೆಡಿಎಸ್​ಗೆ ಬಿಡಲಾಗಿದೆ. ಪಕ್ಷದಿಂದ ಯಾರೂ ಸ್ಪರ್ಧಿಸುವುದಿಲ್ಲ, ಯಾವ ಬಂಡಾಯ ಅಭ್ಯರ್ಥಿಯೂ ಕಣಕ್ಕಿಳಿಯುವುದಿಲ್ಲ. ಕಾರ್ಯಕರ್ತರಿಗೆ ನೋವಾಗಿದೆ ಎಂಬುದು ತಿಳಿದಿದೆ. ಯಾವುದೇ ಕಾರಣಕ್ಕೂ ವಿಚಲಿತರಾಗಬೇಡಿ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ಪಕ್ಷದ ತೀರ್ವನದಂತೆ ಜೆಡಿಎಸ್ ಅಭ್ಯರ್ಥಿ ಬೆಂಬಲಿಸಿ ಎಂದು ಸಂಸದ ಡಿ.ಕೆ.ಸುರೇಶ್ ಕಾರ್ಯಕರ್ತರಿಗೆ ತಿಳಿಹೇಳಿದರು. ಕೆಲವರು ತಲೆದೂಗಿದರೆ, ಮತ್ತೆ ಕೆಲವರು ಏನೂ ಮಾತನಾಡದೆ ಸುಮ್ಮನಾದರು.

ಮುಖಂಡರಾದ ಜಯಣ್ಣ, ಧನರಾಜ್, ಶಿವಲಿಂಗಯ್ಯ, ವೆಂಕಟಸ್ವಾಮಿ, ವಿ.ಎಂ. ಶಿವಲಿಂಗಪ್ರಸಾದ್, ಕೃಷ್ಣಮೂರ್ತಿ, ಭಗೀರಥ, ಉಮೇಶ್, ಎ.ಎಸ್. ಕುಮಾರ್, ಶ್ರೀನಿವಾಸ್, ಆನಂದಗಿರಿಯಪ್ಪ, ಶಂಕರ್, ಸುಂದರ್, ಯತೀಶ್, ಶಂಕರೇಗೌಡ, ಚಿಕ್ಕೇಗೌಡ, ರವಿ, ವೆಂಕಟೇಶ್, ಆರ್. ಶಿವಾನಂದ, ರೇವಣ್ಣ, ಪಾರ್ಥ, ಲಿಂಗರಾಜು ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ನಗರಸಭಾ ಸದಸ್ಯರಾದ ಲೋಹಿತ್​ಬಾಬು, ಚೇತನ್, ಮುತ್ತುರಾಜ್ ಇದ್ದರು.

ನಾನು ಕಾಂಗ್ರೆಸ್​ನ ಸಾಮಾನ್ಯ ಕಾರ್ಯಕರ್ತ. ವರಿಷ್ಠರ ಸೂಚನೆಯಂತೆ ನಡೆಯುತ್ತೇನೆ. ಕಾರ್ಯಕರ್ತರು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಚಿರಋಣಿ. ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ಬಂಡಾಯ ಸ್ಪರ್ಧೆ ಮಾಡಲ್ಲ.

| ಇಕ್ಬಾಲ್ ಹುಸೇನ್, ಕಾಂಗ್ರೆಸ್ ಮುಖಂಡ

ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆಗೆ ಒತ್ತಡ ಇರುವುದು ಸತ್ಯ. ಪಕ್ಷದಿಂದ ಯಾರೂ ಸ್ಪರ್ಧೆ ಮಾಡದಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ನಮ್ಮ ಕಾರ್ಯಕರ್ತರು ಬಿಜೆಪಿಗೆ ಮತ ಹಾಕುವುದಿಲ್ಲ. ಯಾರೂ ಪಕ್ಷದಿಂದ ಇಲ್ಲವೇ ಸ್ವತಂತ್ರವಾಗಿ ಸ್ಪರ್ಧಿಸುವುದಿಲ್ಲ. ಎಲ್ಲರೂ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಹಾಗೂ ಪಕ್ಷದ ತೀರ್ವನಕ್ಕೆ ಬದ್ಧ.

| ಡಿ.ಕೆ. ಸುರೇಶ್, ಸಂಸದ