More

  ನಾಯಕರನ್ನು ತರಾಟೆಗೆ ತೆಗೆದುಕೊಂಡ ಕಾರ್ಯಕರ್ತರು..!

  ಮುದ್ದೇಬಿಹಾಳ: ಬಿಜೆಪಿ ಮಂಡಲ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳ ಏಕಪಕ್ಷೀಯ ನೇಮಕ ವಿಷಯದಲ್ಲಿ ಕಾವೇರಿದ ಚರ್ಚೆ ನಡೆದು, ಕೆಲ ಸ್ಥಳೀಯ ಮುಖಂಡರು, ಕಾರ್ಯಕರ್ತರ ಅಸಮಾಧಾನ ಸ್ಫೋಟಗೊಂಡ ಪ್ರಸಂಗ ಸೋಮವಾರ ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಲೋಕಸಭೆ ಚುನಾವಣೆ ಕುರಿತಾದ ಪೂರ್ವಭಾವಿ ಸಭೆಯಲ್ಲಿ ನಡೆಯಿತು.

  ಇದರಿಂದಾಗಿ ಸಭೆಗೆ ಆಗಮಿಸಿದ್ದ ಸಂಸದ ರಮೇಶ ಜಿಗಜಿಣಗಿ, ವೀಕ್ಷಕ- ಬೆಳಗಾವಿ ಜಿಲ್ಲೆ ರಾಯಭಾಗದ ಶಾಸಕ ದುರ್ಯೋಧನ ಐಹೊಳ್ಳಿ, ಮಾಜಿ ಎಂಎಲ್ಸಿ ಅರುಣ ಶಹಾಪುರ, ಬಿಜೆಪಿಯ ಬೆಳಗಾವಿ ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ ಅನಿರೀಕ್ಷಿತ ಘಟನೆಯಿಂದ ಕೆಲ ಕಾಲ ವಿಚಲಿತರಾಗಿ ಜೀತಿಗೀಡಾದರು.

  ರವೀಂದ್ರ ಬಿರಾದಾರ, ಸಂಜು ಬಾಗೇವಾಡಿ, ಶಿವು ಕನ್ನೊಳ್ಳಿ, ಉದಯಸಿಂಗ್ ರಾಯಚೂರ, ಅಶೋಕ ಚಿನಿವಾರ, ರಾಜಶೇಖರ ಹೊಳಿ ಸೇರಿ ಹಲವರು ವರಿಷ್ಠರು ಕುಳಿತಿದ್ದ ಸ್ಥಳದತ್ತ ಹೋಗಿ ಅವರ ಮೇಲೆ ಮುಗಿಬಿದ್ದಂತೆ ಮಾಡಿ ಪುಂಖಾನುಪುಂಖವಾಗಿ ಆರೋಪಗಳ ಸುರಿಮಳೆಗರೆದರು. ಮುಖಂಡ ಸಿದ್ದರಾಜ ಹೊಳಿಯವರಂತೂ ಸೌಮ್ಯವಾಗಿಯೇ ಮಾತು ಪ್ರಾರಂಭಿಸಿ ಕೆಲ ಕಟುಸತ್ಯಗಳನ್ನು ಹೊರಗೆಡವಿ ಆಕ್ರೋಶ ಹೊರಹಾಕಿದರು.

  ಪ್ರಧಾನಿ ಮೋದಿ ಅವರನ್ನು ಗೆಲ್ಲಿಸುವುದು ನಮ್ಮ ಗುರಿ. ಇದಕ್ಕಾಗಿ ಜಿಗಜಿಣಗಿ ಅವರನ್ನು ನಾವು ಗೆಲ್ಲಿಸಬೇಕು. ಜಿಗಜಿಣಗಿಯವರ ಪರವಾಗಿ ಗ್ರಾಮಗಳಲ್ಲಿ ಪ್ರಚಾರಕ್ಕೆ ಹೋದರೆ ಅಲ್ಲಿನ ಜನರು ಸಂಸದ ಜಿಗಜಿಣಗಿ ಏನು ಮಾಡಿದ್ದಾರೆ? ಅವರನ್ನು ನಾವು ನೋಡಿಯೇ ಇಲ್ಲವಲ್ಲ ಎಂದು ಕಾರ್ಯಕರ್ತರಾದ ನಮಗೆ ಅವಮಾನ ಮಾಡುತ್ತಾರೆ. ಇದನ್ನು ಸಹಿಸಿಕೊಂಡು ಪಕ್ಷದ ಪರ ಕೆಲಸ ಮಾಡುವ ನಮ್ಮಂಥ ಹಲವರನ್ನು ಕಡೆಗಣಿಸುತ್ತಾರೆ ಎಂದರೆ ಹೇಗೆ? ಎಂದು ಅಸಮಾಧಾನ ತೋಡಿಕೊಂಡರು.

  ಪುರಸಭೆ ಮಾಜಿ ಸದಸ್ಯ ರಾಜು ಬಳ್ಳೊಳ್ಳಿ ಮಾತನಾಡಿ, ಜನ ಸಂಘದಿಂದ ಬಂದ ಪಕ್ಷದ ಹಿರಿಯರನ್ನು ಬಿಟ್ಟು ಯಾಕೆ ಸಭೆ ಮಾಡುತ್ತಿದ್ದಿರಿ? ಎಂದು ಪ್ರಶ್ನಿಸಿದರೂ ಯಾರೊಬ್ಬರಿಂದಲೂ ಸ್ಪಷ್ಟ ಉತ್ತರ ಬರಲಿಲ್ಲ. ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡುವಾಗ ಮಂಡಲದ ಅಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಮಾಡಿದ್ದನ್ನು ಖಂಡಿಸಿದರು.

  ಸಿದ್ದರಾಜ ಹೊಳಿ ಮಾತನಾಡಿ, ಹಿಂದು ಸಂಘಟನೆ ಪದಾಧಿಕಾರಿಗಳು ಹಾಗೂ ಪಕ್ಷ ಬೆಂಬಲಿಸುವ ಸಮುದಾಯದವರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಪಕ್ಷದ ಮೂಲ ಕಾರ್ಯಕರ್ತರೆನ್ನಿಸಿಕೊಂಡವರಿಗೆ, ಪಕ್ಷ ಕಟ್ಟಿ ಬೆಳೆಸಿದವರಿಗೆ ಯಾವ ಸ್ಥಾನಮಾನ ನೀಡಿದ್ದೀರಿ? ಎಂದು ಹರಿಹಾಯ್ದರು.

  ಕಾರ್ಯಕರ್ತರ ಆಕ್ರೋಶಕ್ಕೆ ಸಂಸದರು, ಶಾಸಕರು ಪೆಚ್ಚುಮೋರೆ ಹಾಕಿ ಕುಳಿತರೆ, ಅರುಣ ಶಹಾಪುರ ಮಾತ್ರ ಕಾರ್ಯಕರ್ತರ ಅಸಮಾಧಾನ ಶಮನಕ್ಕೆ ಹರಸಾಹಸ ಪಡಬೇಕಾಯಿತು. ಅಂತಿಮವಾಗಿ ಜಿಗಜಿಣಗಿ ಅವರು ತಮ್ಮ ಅಧಿಕಾರ ಅವಧಿಯ ಸಾಧನೆಗಳ ಕುರಿತು ಎಲ್ಲೆಡೆ ಮಾತನಾಡುವಂತೆ ಇಲ್ಲಿಯೂ ಮಾತನಾಡಿ, ನಿರ್ಗಮಿಸುವಂತಾಯಿತು.

  ಜಿಪಂ ಮಾಜಿ ಉಪಾಧ್ಯಕ್ಷರಾದ ಎಂ.ಎಸ್. ಪಾಟೀಲ ನಾಲತವಾಡ, ಕೆಂಚಪ್ಪ ಬಿರಾದಾರ, ಜಿಪಂ ಮಾಜಿ ಅಧ್ಯಕ್ಷ ಗಂಗಾಧರರಾವ್ ನಾಡಗೌಡ, ಸಂಗಮೇಶ ಕರಭಂಟನಾಳ, ಎಸ್.ಎಚ್.ಲೊಟಗೇರಿ, ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ್ ಸೇರಿ ಹಲವು ಮುಖಂಡರು ಮೂಕಪ್ರೇಕ್ಷಕರಾಗುವಂತಾಯಿತು.

  ಪಕ್ಷದ ಹಿರಿಯರಾದ ಬಾಬುಲಾಲ್ ಓಸ್ವಾಲ್, ಪರಶುರಾಮ ಪವಾರ, ಬಿ.ಪಿ. ಕುಲಕರ್ಣಿ, ಪ್ರಭು ಕಡಿ ಮತ್ತಿತರರ ಅನುಪಸ್ಥಿತಿ ಸಭೆಯಲ್ಲಿ ಎದ್ದು ಕಾಣುವಂತಾಯಿತು. ಮೊದಲು ಸಭೆಗೆ ಮಾಧ್ಯಮದವರನ್ನು ಆಹ್ವಾನಿಸಲಾಗಿತ್ತು. ಗದ್ದಲ ಶುರುವಾದ ಕೂಡಲೇ ಮಾಧ್ಯಮದವರನ್ನು ಹೊರಗೆ ಕಳಿಸಿ ಆಮೇಲೆ ಪತ್ರಿಕಾಗೋಷ್ಠಿಗೆ ಕರೆಯುತ್ತೇವೆ ಎಂದು ಸಬೂಬು ನೀಡಿ ತಪ್ಪಿಗೆ ತೇಪೆ ಹಾಕುವ ಕೆಲಸ ನಡೆಯಿತು.

  ಜಿಗಜಿಣಗಿ ಸೇರಿ ಎಲ್ಲರೂ ಪತ್ರಿಕಾಗೋಷ್ಠಿ ನಡೆಸದೆ, ಮಾಧ್ಯಮದವರನ್ನೂ ಮಾತನಾಡಿಸದೆ ಎಸ್.ಎಚ್. ಲೊಟಗೇರಿ ವಕೀಲರು ಮತ್ತು ಪ್ರಭು ಕಡಿ ಅವರ ಮನೆಗಳಿಗೆ ಭೇಟಿ ನೀಡಿ, ನಿರ್ಗಮಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts