ನಾಯಕನಹಟ್ಟಿ ಜಾತ್ರೆ ಪ್ರಸಾದಕ್ಕೆಕಡಿವಾಣ ಉಚಿತ ಬಸ್ಸಿನ ಸೌಕರ್ಯಕ್ಕೆಸಂಹಿತೆ ಬಿಸಿ


ಚಿತ್ರದುರ್ಗ: ಸುಳ್ವಾಡಿ ದುರಂತದ ಹಿನ್ನೆಲೆಯಲ್ಲಿ ಪ್ರಸಿದ್ಧ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ಮಹೋತ್ಸವ ವೇಳೆ ಪ್ರಸಾದ ವಿತರಣೆಗೆ ಕಡಿವಾಣಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಚಳ್ಳಕೆರೆ ತಾಲೂಕು ನಾಯಕನಹಟ್ಟಿಯಲ್ಲಿ ಮಾ.22ರಂದು ಜರುಗಲಿರುವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ಮಹೋತ್ಸವ ವೇಳೆ ಭಕ್ತರು ಪ್ರಸಾದ ಹಂಚದಂತೆ ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಬುಧವಾರ ಜಾತ್ರೆ ಪೂರ್ವಭಾವಿ ಸಭೆ ಹಾಗೂ ಕಾಮಗಾರಿ ಪ್ರಗತಿ ಪರಿಶೀಲಿಸಿ ಮಾತನಾಡಿ,ಯಾರೂ ಪ್ರಸಾದ ವಿತರಿಸ ಬಾರದು. ಒಂದು ವೇಳೆ ಪ್ರಸಾದ ವಿತರಣೆ ಕಂಡು ಬಂದಲ್ಲಿ ಅಂಥವರ ಗುರುತಿನ ಚೀಟಿ,ದೂರವಾಣಿ ಸಂಖ್ಯೆ ಪಡೆದುಕೊಳ್ಳ ಬೇಕು. ಪ್ರಸಾದ ಹಂಚುವವರ ಮಾಹಿತಿಯನ್ನು ಮೊದಲೇ ಸಂಗ್ರಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಆರೋಗ್ಯದೆಡೆ ನಿಗಾ
ರಥ ಸಾಗುವ ಬೀದಿಯಲ್ಲಿರುವ ಅಂಗಡಿಗಳನ್ನು ತೆರವು ಗೊಳಿಸಬೇಕು. ಶುದ್ಧ ಕುಡಿಯುವ ನೀರು,ಆರೋಗ್ಯ ಸುರಕ್ಷತೆಗೆ ಹೆಚ್ಚಿನ ನಿಗಾ ವಹಿಸಬೇಕು. ಸ್ವಚ್ಛ ಟ್ಯಾಂಕ್‌ರಗಳ ಮೂಲಕ ನೀರು ಪೂರೈಸಬೇಕು. ನೀರಿಗೆ ಯಾರನ್ನು ಸಂಪರ್ಕಿಸ ಬೇಕೆಂಬ ಮಾಹಿತಿ ಹಾಗೂ ನೀರಿಗಾಗಿ ಸಹಾಯವಾಣಿ ಆರಂಭಿಸಬೇಕು.

ಜಾತ್ರೆ ಪ್ರದೇಶದ 2 ಕಿ.ಮೀ.ವ್ಯಾಪ್ತಿಯಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಿ ಪ್ರಾಣಿಗಳ ಸಾಗಾಣಿಕೆ ತಡೆಯ ಬೇಕು. ಜಾತ್ರೆಯಲ್ಲಿ 3 ದಿನಗಳ ಕಾಲ ಮದ್ಯ ನಿಷೇಧಿಸಲಾಗಿದೆ. ಇಲಾಖೆಗಳ ಬ್ಯಾನರ್‌ಗಳಲ್ಲಿ ಮತದಾನ ಜಾಗೃತಿ ಸಂದೇಶ ಇರ ಬೇಕೆಂದರು.