ಶಿವಮೊಗ್ಗ: ಕೇವಲ ಎಂಟು ದಿನಗಳಲ್ಲಿ ಸಪ್ತಪದಿ ತುಳಿಯಬೇಕಿದ್ದ ಯುವಕನ ನಾಪತ್ತೆ ಪ್ರಕರಣಕ್ಕೆ ತಿರುವು ಪಡೆದಿದ್ದು, ಮಂಡಗದ್ದೆ ಸಮೀಪ ತುಂಗಾ ಜಲಾಶಯದ ಹಿನ್ನೀರಿನಲ್ಲಿ ಆತನ ಶವ ಪತ್ತೆಯಾಗಿದೆ. ಗೋಪಾಲಗೌಡ ಬಡಾವಣೆ ನಿವಾಸಿ ಅರುಣ್ (28) ಮೃತ ಕೆಎಸ್ಆರ್ಟಿಸಿ ನೌಕರ. ಅರುಣ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಕೊಲೆ ಮಾಡಿ ಹಿನ್ನೀರಿನಲ್ಲಿ ಶವ ಎಸೆದಿರಬಹುದು ಎಂದು ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಶಂಕೆ ವ್ಯಕ್ತಪಡಿಸಿದ್ದಾರೆ.
ಅರುಣ್ ಮೇ 30ರಂದು ನಾಪತ್ತೆಯಾಗಿದ್ದ. ಭಾನುವಾರ ಬೆಳಗ್ಗೆ ಅವನ ಬೈಕ್ ಮಂಡಗದ್ದೆ ಕಾಡಿನಲ್ಲಿ ಪತ್ತೆಯಾಗಿದ್ದು , ಹಿನ್ನೀರಿನಲ್ಲಿ ಬೆಸ್ತರು ಬಳಸುವ ಹುಕ್ಕಡದಲ್ಲಿ ಆತನಿಗೆ ಸೇರಿದ ಪರ್ಸ್, ಮೊಬೈಲ್ ಹಾಗೂ ಶೂಗಳು ದೊರೆತಿದ್ದವು. ಶೋಧ ಮಾಡಿದಾಗ ಹಿನ್ನೀರಿನಲ್ಲಿ ಶವ ಸಿಕ್ಕಿದೆ.
ಅರುಣ್ಗೆ ಮದುವೆ ನಿಶ್ಚಯವಾಗಿತ್ತು. 8 ದಿನದಲ್ಲಿ ಮದುವೆ ಆಗಬೇಕಿತ್ತು. ಆತನ ಸಾವಿನ ಕುರಿತು ಆತನ ಸ್ನೇಹಿತರು ಹಾಗೂ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಯಾವುದೆ ಕಾರಣಕ್ಕೂ ಅರುಣ್ ಮಂಡಗದ್ದೆ ಕಡೆ ಹೋಗಲು ಬಲವಾದ ಕಾರಣಗಳಿಲ್ಲ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ದೇಹದ ಮೇಲೆ ಹಲ್ಲೆ ಗುರುತುಗಳು ಇವೆ ಎನ್ನಲಾಗಿದ್ದು, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.