ಎಚ್.ಡಿ.ಕೋಟೆ: ಕಳೆದ ಎಂಟು ವರ್ಷಗಳಿಂದ ತಾಲೂಕಿನಲ್ಲಿ ಮಾಡಿರುವ ಸಮಾಜ ಸೇವೆಯೇ ನನ್ನ ಗೆಲುವಿಗೆ ಸಹಕಾರಿ ಆಗಲಿದೆ ಎಂದು ಬಿಜೆಪಿ ಅಭ್ಯರ್ಥಿ ಕೆ.ಎಂ.ಕೃಷ್ಣನಾಯಕ ತಿಳಿಸಿದರು.
ಹೆಗ್ಗಡದೇವನಕೋಟೆ ಕ್ಷೇತ್ರದ ಮುಳ್ಳೂರು, ಕಲ್ಲಾಂಬಾಳು, ಹಾದನೂರು, ಎಂ.ಸಿ.ತಳಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗುರುವಾರ ಮತಯಾಚನೆ ಮಾಡಿ ಮಾತನಾಡಿದರು.
ಯಾವುದೇ ಸ್ವಾರ್ಥ ಇಲ್ಲದೆ ಸಮಾಜ ಸೇವೆ ಮಾಡಿದ ನನಗೆ ಜೆಡಿಎಸ್ ಟಿಕೆಟ್ ನೀಡುವುದಾಗಿ ನಂಬಿಸಿ ಮೋಸ ಮಾಡಿತು. ಆದರೆ ಬಿಜೆಪಿ ನನ್ನ ಸಮಾಜ ಸೇವೆ ಹಾಗೂ ತಾಲೂಕಿನಲ್ಲಿ ನನ್ನ ಬಗ್ಗೆ ಇದ್ದ ಜನಾಭಿಪ್ರಾಯ ನೋಡಿ ಗೆಲ್ಲುವ ನಂಬಿಕೆ ಮೇಲೆ ಟಿಕೆಟ್ ನೀಡಿದೆ. ತಾಲೂಕಿನ ಜನರು ಆ ನಂಬಿಕೆ ಸುಳ್ಳು ಮಾಡದೆ ಭಾರಿ ಅಂತರದಲ್ಲಿ ಗೆಲ್ಲಿಸುತ್ತಾರೆ ಎಂದು ಆಶಯ ವ್ಯಕ್ತಪಡಿಸಿದ್ದರು.
ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆದೇ ರೀತಿ ತಾಲೂಕಿನಲ್ಲಿ ಬಿಜೆಪಿ ಮೊದಲ ಬಾರಿಗೆ ಜಯಭೇರಿ ಬಾರಿಸಲಿದೆ. ನಾನು ಆಯ್ಕೆಯಾದ ನಂತರ ಮೊದಲ ಕೆಲಸವೇ ತಾಲೂಕಿನಲಿ ಕೈಗಾರಿಕೆ ಸ್ಥಾಪನೆ ಮಾಡಿ, ನಿರುದ್ಯೋಗ ಸಮಸ್ಯೆ ಬಗೆಹರಿಸಲು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಬಿಜೆಪಿ ಕಡೆಗೆ ಜನರು ಹೆಚ್ಚು ಒಲವು ತೋರುತ್ತಿದ್ದು, ಅದೇ ರೀತಿ ಮುಖಂಡರು ಹಾಗೂ ಕಾರ್ಯಕರ್ತರು ಹುಮ್ಮಸ್ಸಿನಿಂದ ಪ್ರಚಾರದಲ್ಲಿ ಭಾಗಿಯಾಗಿ ನನ್ನ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಪ್ರಚಾರಕ್ಕೆ ಹೋದ ಕಡೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳನ್ನು ಈ ಬಾರಿ ತಿರಸ್ಕರಿಸಿ ಬಿಜೆಪಿ ಬೆಂಬಲಿಸಲಿದ್ದಾರೆ ಎಂದರು.
ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಗಲಪುರ, ಹಾದನೂರು, ಯಶವಂತಪುರ, ಎತ್ತಿಗೆ. ಎಂ.ಸಿ.ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಲಳ್ಳಿ, ಚನ್ನಗುಂಡಿ, ಚನ್ನಗುಂಡಿ ಹಾಡಿ, ಎಂ ಸಿ ತಾಳಲು, ಜಯಲಕ್ಷ್ಮೀಪುರ, ಮುಗತನಮೂಲೆ, ಶಿವಪುರ, ಕನಕನಹಳ್ಳಿ, ದೊಡ್ಡಬರಗಿ, ಕಾಳಿಹುಂಡಿ, ಚಿಕ್ಕಬರಗಿ, ಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ ಹೊಸ ಬೀರ್ವಾಳ್, ಹೊಸಹೆಗ್ಗುಡಿಲು, ಚಂಗೌಡನಹಳ್ಳಿ, ಬೆಣ್ಣೆಗೆರೆ, ಕಲ್ಲಂಬಾಳು ಗ್ರಾ.ಪಂ.ವ್ಯಾಪ್ತಿಯ ಚಾಮಲಪುರ, ಕುಂದೂರು, ದಡದಹಳ್ಳಿ, ಕಲ್ಲಂಬಾಳು, ನಂಜೀಪುರ, ಕಟ್ಟೆ ಹುಣಸೂರು ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿದರು.
ಮುಖಂಡರಾದ ಬಸವರಾಜಪ್ಪ, ಗುರುಸ್ವಾಮಿ, ಸಿ.ವಿ.ನಾಗರಾಜು, ಸಿ.ಕೆ.ಗಿರೀಶ್, ಮನುಗನಹಳ್ಳಿ ಮಂಜುನಾಥ್, ಶಿವನಂಜೇಗೌಡ, ಶಿವಯ್ಯ, ಕಾಳಪ್ಪಾಜಿ, ಮುಳ್ಳೂರು ನಿಂಗರಾಜು, ಎಡತೊರೆ ಹರೀಶ್, ಮಹಾದೇವಸ್ವಾಮಿ ಇದ್ದರು.
ನಾನು ಮಾಡಿರುವ ಸೇವೆಯೇ ಗೆಲುವಿಗೆ ಶ್ರೀರಕ್ಷೆ
ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಹಾದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾದನೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಂ.ಕೃಷ್ಣನಾಯಕ ಮತಯಾಚನೆ ಮಾಡಿದರು.