More

  ನಾದಮೇಳದೊಂದಿಗೆ ದೇವರ ರಥೋತ್ಸವ

  ಅರಕಲಗೂಡು: ತಾಲೂಕಿನ ರುದ್ರಪಟ್ಟಣದಲ್ಲಿ ಸಂಗೀತೋತ್ಸವ ಸಮಿತಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 21ನೇ ಸಂಗೀತೋತ್ಸವ ಅಂಗವಾಗಿ ಭಾನುವಾರ ದೇವರ ರಥೋತ್ಸವ ನಾದಮೇಳದೊಂದಿಗೆ ಭಕ್ತಿ ಸಂಭ್ರಮದಿಂದ ನೆರವೇರಿತು.

  ಬೆಳಗ್ಗೆ ಶ್ರೀರಾಮ ಮಂದಿರದಲ್ಲಿ ವಿದ್ವಾನ್ ಡಾ.ಆರ್.ಕೆ. ಪದ್ಮನಾಭ ಹಾಗೂ ಅವರ ಶಿಷ್ಯರಿಂದ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ನಡೆಯಿತು. ಬಳಿಕ ಅಲಂಕೃತ ರಥದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಸಲಾಯಿತು.

  ರಥೋತ್ಸವದ ವೇಳೆ ನಾಮ ಸಂಕೀರ್ತನೆ ನಡೆಸಲಾಯಿತು. ವಿದ್ವಾನ್ ಆರ್.ಕೆ. ಪದ್ಮನಾಭ ಅವರು ನಾದ ವಾದ್ಯದೊಂದಿಗೆ ನುಡಿಸಿದ ರಘಪತಿ ರಾಘವ ರಾಜಾ ರಾಮ್ ಹಾಡಿಗೆ ನೃತ್ಯ ಪ್ರದರ್ಶಿಸಿ ರಂಜಿಸಿದರು. ಇವರ ನೃತ್ಯಕ್ಕೆ ನೆರೆದಿದ್ದ ಭಕ್ತರು ಹೆಜ್ಜೆ ಹಾಕಿ ಸಂಭ್ರಮಿಸಿದರು.

  ನಾಚಾರಮ್ಮ ಪ್ರಶಸ್ತಿ ಪ್ರದಾನ: ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ ವತಿಯಿಂದ ಕೊಡಮಾಡುವ 2024ರ ನಾಚಾರಮ್ಮ ಪ್ರಶಸ್ತಿ ಹಾಗೂ ಗಾನಕಲಾ ಸ್ಪರ್ಶ ಮಣಿ ಬಿರುದನ್ನು ಶನಿವಾರ ಸಂಜೆ ವಯೋಲಿನ್ ವಾದಕ ವಿದ್ವಾನ್ ಆರ್.ಕೆ.ರಾಮಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಮಕುಮಾರ್ ಅವರು ಸಾದ್ವಿಮಣಿ ನಾಚಾರಮ್ಮ ಪ್ರಶಸ್ತಿ ಒಲಿದಿರುವುದು ನನ್ನ ಬದುಕಿನ ಪುಣ್ಯ ಕ್ಷಣಗಳಲ್ಲಿ ಒಂದಾಗಿದೆ. ನನ್ನ ಸಂಗೀತ ಸೇವೆ ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದರು.

  ಕಾರ್ಯಕ್ರಮದಲ್ಲಿ ಕುಮಾರಿ ಐಶ್ವರ್ಯಾ ರುದ್ರಪಟ್ಟಣ ಬದರಿನಾಥ ಅವರಿಗೆ ರುದ್ರಪಟ್ಟಣ ಗ್ರಾಮದ ಪ್ರಥಮ ಮಹಿಳಾ ಪೈಲೆಟ್ ಎಂದು ಗುರುತಿಸಿ ಸನ್ಮಾನಿಸಲಾಯಿತು.

  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಎ.ಮಂಜು ಸನ್ಮಾನ ಸ್ವೀಕರಿಸಿ ಮಾತನಾಡಿ, ಹಳ್ಳಿಯೊಂದರಲ್ಲಿ ಮೇರು ಮಟ್ಟದ ಕಲಾವಿದರನ್ನು ಕರೆಸಿ ವಿಧ ವಿಧವಾದ ಮಾದರಿಯಲ್ಲಿ ಶಾಸ್ತ್ರೀಯ ಸಂಗೀತ ಕಛೇರಿ ಆಯೋಜಿಸಿರುವ ಪದ್ಮನಾಭ ಅವರ ಸಾಧನೆ ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
  ಶಾಸಕರ ಪತ್ನಿ ತಾರಾ ಮಂಜುಗೌಡ, ಚಿತ್ರನಟಿ ಮಾಳವಿಕಾ ಅವಿನಾಶ್ ಮತ್ತಿತರ ಗಣ್ಯರು ಇದ್ದರು. ಮೈಸೂರು ಚಂಪಕ ಅಕಾಡೆಮಿ ಸಂಸ್ಥಾಪಕರಾದ ಡಾ. ನಾಗಲಕ್ಷ್ಮೀ ನಾಗರಾಜ್ ಮತ್ತು ವೃಂದದವರಿಂದ ನಡೆದ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts