ಕಮಲನಗರ: ಉರ್ದು ಮತ್ತು ಮರಾಠಿ ಭಾಷೆ ಪ್ರಾಬಲ್ಯಕ್ಕೆ ಸಿಲುಕಿದ್ದ ಗಡಿಭಾಗದಲ್ಲಿ ಕನ್ನಡಕ್ಕೆ ಮರುಜೀವ ತುಂಬಿದ ಲಿಂಗೈಕ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು, ಸಮಾಜದಲ್ಲಿನ ಅಶಕ್ತರಿಗೆ ಸಹಾಯ ಜತೆಗೆ ಅನ್ನ ದಾಸೋಹ ಕರುಣಿಸಿ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ ನಾಡಿನ ಶ್ರೇಷ್ಠ ಸಂತ ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಬಣ್ಣಿಸಿದರು.
ಪಟ್ಟಣದ ಹಿರೇಮಠ ಸಂಸ್ಥಾನದ ಶಾಖಾ ಮಠದಲ್ಲಿ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ೧೩೫ನೇ ಜಯಂತಿ ನಿಮಿತ್ತ ಬಸವಜ್ಯೋತಿ ಪಾದಯಾತ್ರೆ ವೇದಿಕೆ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿದ ಅವರು, ಅಳಿವಿನಂಚಿನಲ್ಲಿದ್ದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿದ ಕೀರ್ತಿ ಪೂಜ್ಯರದು. ಹಿರೇಮಠ ವಿದ್ಯಾಪೀಠದಲ್ಲಿ ವ್ಯಾಸಂಗ ಮಾಡಿದ ಅನೇಕ ಮಕ್ಕಳು ಇಂದು ದೇಶ-ವಿದೇಶಗಳಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಸೋಹಂ ಎಂದೆನಿಸದೆ ದಾಸೋಹಂ ಎಂದಿನಸಯ್ಯ ಎಂಬ ಶರಣರ ವಾಣಿಯಂತೆ ನಾವೆಲ್ಲರೂ ಹೆಜ್ಜೆ ಹಾಕಬೇಕು. ತೋರಿಕೆಗಲ್ಲದೆ ಅಂತರಂಗದ ಆತ್ಮಶಾಂತಿಗಾಗಿ ದಾಸೋಹ ಮಾಡಬೇಕು. ಈ ಮೂಲಕ ಹಸಿವು ನೀಗಿಸುವ ಕೆಲಸವನ್ನು ಜೀವಿತಾವಧಿವರೆಗೂ ಮಾಡಬೇಕು. ಡಾ.ಚನ್ನಬಸವ ಪಟ್ಟದ್ದೇವರಿಂದಲೇ ಕಮಲನಗರ ರಾಜ್ಯಾದ್ಯಂತ ಹೆಸರು ಮಾಡಿದೆ ಎಂದು ಹೇಳಿದರು.
ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ ಮಾತನಾಡಿ, ಜಾತಿ, ಧರ್ಮರಹಿತ ಸಮಾಜ ನಿರ್ಮಾಣಕ್ಕಾಗಿ ೧೨ನೇ ಶತಮಾನದಲ್ಲಿ ನಡೆದ ವೈಚಾರಿಕ ಕ್ರಾಂತಿಯನ್ನು ೨೧ನೇ ಶತಮಾನದಲ್ಲಿ ಮುಂದುವರಿಸಿದ ಲಿಂಗೈಕ್ಯ ಡಾ.ಪಟ್ಟದ್ದೇವರ ಜೀವನ ಅನುಕರಣೀಯವಾಗಿದೆ ಎಂದು ಸ್ಮರಿಸಿದರು.
ಅನುಭವ ಮಂಟಪ ಟ್ರಸ್ಟ್ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಮಹಾಲಿಂಗ ದೇವರು, ಶ್ರೀ ಪ್ರಭುಲಿಂಗ ದೇವರು, ಶ್ರೀ ಶಿವಬಸವ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನ್, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶಶಿಧರ ಕೋಸಂಬೆ, ಪ್ರಮುಖರಾದ ಪ್ರಕಾಶ ಟೊಣ್ಣೆ ಬಂಡೆಪ್ಪ ಕಂಟೆ, ರವೀಂದ್ರ ಮೀಸೆ, ಪ್ರಕಾಶ ಘೂಳೆ, ಜೈರಾಜ ಖಂಡ್ರೆ, ಶಕುಂತಲಾ ಬೆಲ್ದಾಳೆ, ಪ್ರೊ.ಎಸ್.ಎನ್. ಶಿವಣಕರ, ರಾಜಕುಮಾರ ಬಿರಾದಾರ, ಅವಿನಾಶ ಶಿವಣಕರ, ಪ್ರಭುರಾವ ಬಿರಾದಾರ, ಸುರೇಶ ಸೊಲ್ಲಾಪುರೆ, ಸಂಗಮೇಶ ಟೊಣ್ಣೆ, ಶಿವಶರಣಪ್ಪ ಚಿಕಮುರ್ಗೆ, ಅಮರ ಶಿವಣಕರ, ಹಾವಗಿರಾವ ಟೊಣ್ಣೆ, ಅಜೀತ ರಾಗಾ, ಪ್ರಕಾಶ ಸೊಲ್ಲಾಪುರೆ, ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ಗ್ರೇಡ್-೨ ತಹಸೀಲ್ದಾರ್ ರಮೇಶ ಪೆದ್ದೆ, ಪಿಎಸ್‌ಐ ಚಂದ್ರಶೇಖರ ನಿರ್ಣೆ ಇತರರಿದ್ದರು.
ಬಸವ ಬಳಗದ ಜಿಲ್ಲಾಧ್ಯಕ್ಷ ಡಾ.ಸಂಜೀವಕುಮಾರ ಜುಮ್ಮಾ ಪ್ರಾಸ್ತಾವಿಕ ಮಾತನಾಡಿದರು. ಹಾವಗಿರಾವ ಮಠಪತಿ ಸ್ವಾಗತಿಸಿ ನಿರೂಪಣೆ ಮಾಡಿದರು. ಸುಧೀರ ಘಾಟೆ ದಾಸೋಹ ವ್ಯವಸ್ಥೆ ಮಾಡಿದರು. ಮಕ್ಕಳು ನಡೆಸಿಕೊಟ್ಟ ಶರಣರ ರೂಪಕ, ವಚನ ನೃತ್ಯ ನೋಡುಗರ ಗಮನ ಸೆಳೆದವು.
ಪಾದಯಾತ್ರೆ: ಶ್ರೀ ಗುರುಬಸವ ಪಟ್ಟದ್ದೇವರ ನೇತೃತ್ವದ ಪಾದಯಾತ್ರೆ ಗುರುವಾರ ಕಮಲನಗರದಿಂದ ಡಿಗ್ಗಿ, ಹೊಳಸಮುದ್ರ, ಸಾವಳಿ ಮೂಲಕ ಸಂಗಮ ತಲುಪಿ ವಾಸ್ತವ್ಯ ಮಾಡಲಿದೆ. ಶುಕ್ರವಾರ ಆಳಂದಿ, ಡೋಣಗಾಪುರ ಮೂಲಕ ಭಾಲ್ಕಿ ಚನ್ನಬಸವಾಶ್ರಮ ತಲುಪಲಿದೆ ಎಂದು ಶಶಿಧರ ಕೋಸಂಬೆ ತಿಳಿಸಿದ್ದಾರೆ.
ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ನುಡಿದಂತೆ ನಡೆದ ಶರಣರು. ಅವರ ಆದರ್ಶಮಯ ಜೀವನ ಮುಂದಿನ ಪೀಳಿಗೆಯವರಿಗೆ ಸ್ಫೂರ್ತಿಯಾಗಬೇಕು. ಅವರ ಮೌಲ್ಯಯುತ ಬದುಕಿನ ಜ್ಯೋತಿ ಎಲ್ಲರ ಅಂತರಂಗದಲ್ಲಿ ಬೆಳಗಲಿ ಎಂಬುದೇ ಬಸವ ಜ್ಯೋತಿ ಪಾದಯಾತ್ರೆ ಉದ್ದೇಶ.
| ಶ್ರೀ ಗುರುಬಸವ ಪಟ್ಟದ್ದೇವರು ಪೀಠಾಧಿಪತಿ ಹಿರೇಮಠ ಸಂಸ್ಥಾನ ಭಾಲ್ಕಿ
ನಡೆದಾಡುವ ದೇವರು ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ನೂತನ ಅನುಭವ ಮಂಟಪದ ಶಿಲ್ಪಿ. ಇದರ ನಿರ್ಮಾಣಕ್ಕಾಗಿ ಸರ್ಕಾರದಿಂದ ೬೫೦ ಕೋಟಿ ರೂ. ಮಂಜೂರಾಗಿ ಕಾಮಗಾರಿ ಪ್ರಗತಿಯಲ್ಲಿದೆ. ಅನುಭವ ಮಂಟಪ ಆವರಣದಲ್ಲಿ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ಭವ್ಯ ಮೂರ್ತಿ ಸರ್ಕಾರದಿಂದಲೇ ಪ್ರತಿಷ್ಠಾಪಿಸಬೇಕು.
| ಬಾಬು ವಾಲಿ ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ