ನಾಟಕ ಪ್ರದರ್ಶನಕ್ಕೆ ನೀತಿ ಸಂಹಿತೆ ಅಡ್ಡಿ

ನೆಲಮಂಗಲ: ಲೋಕಸಭಾ ಚುನಾವಣಾ ನೀತಿ ಸಂಹಿತೆಯನ್ನು ಮುಂದಿಟ್ಟು ಅಧಿಕಾರಿಗಳು ನಾಟಕ ಪ್ರದರ್ಶನಕ್ಕೆ ಅನುಮತಿ ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ರಂಗಭೂಮಿ ಕಲಾವಿದರು ಆರೋಪಿಸಿದ್ದಾರೆ.

ತಾಲೂಕಿನಾದ್ಯಂತ ಪ್ರತಿವರ್ಷದಂತೆ ಈ ಬಾರಿಯೂ ಬೇಸಿಗೆಯಲ್ಲಿ ಪೌರಾಣಿಕ ನಾಟಕ ಭರಾಟೆ ಜೋರಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿ ಆದಾಗಿನಿಂದ ಇಲ್ಲಿಯವರೆಗೆ 30ಕ್ಕೂ ಹೆಚ್ಚು ಕೃಪಾಪೋಷಿತ ನಾಟಕ ಮಂಡಳಿಯ ಕಲಾವಿದರು ನಾಟಕ ಪ್ರದರ್ಶನಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು, ಅಧಿಕಾರಿಗಳು ಈ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳದಿರುವುದು ರಂಗಕರ್ವಿುಗಳಲ್ಲಿ ಬೇಸರ ಉಂಟುಮಾಡಿದೆ.

ರಾಜಕೀಯ ಪ್ರಾಯೋಜಕತ್ವ ಹೊರತುಪಡಿಸಿ ಉಳಿದೆಲ್ಲ ಸಾಂಸ್ಕೃತಿಕ, ಧಾರ್ವಿುಕ ಕಾರ್ಯಕ್ರಮ ನಡೆಸಲು ಯಾವುದೇ ಅಡ್ಡಿಯಿಲ್ಲ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಕೆ ಮಾಡಬಾರದೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆಯೇ ಹೊರತು ಚುನಾವಣಾ ಆಯೋಗ ಯಾವುದೇ ನಿರ್ದೇಶನ ನೀಡಿಲ್ಲ. ಅದನ್ನು ಜಾರಿ ಮಾಡುವುದು ಆಯಾ ಜಿಲ್ಲಾಡಳಿತಕ್ಕೆ ಒಳಪಟ್ಟಿದೆ ಎಂಬುದನ್ನು ರಾಜ್ಯ ಚುನಾವಣಾ ಆಯೋಗದ ಹೆಚ್ಚುವರಿ ಚುನಾವಣಾಧಿಕಾರಿ ಜಗದೀಶ್ ಸ್ಪಷ್ಟಪಡಿಸಿದ್ದರೂ ಕಲಾವಿದರು ಕಚೇರಿಗಳಿಗೆ ನಿತ್ಯ ಎಡತಾಕುವುದು ತಪ್ಪಿಲ್ಲ.

ಹೀಗೆ ನಾಟಕ ಪ್ರದರ್ಶನಕ್ಕೆ ಚುನಾವಣಾಧಿಕಾರಿ ಅನುಮತಿ ನೀಡಿದ ಬಳಿಕ ಪೊಲೀಸ್, ಬೆಸ್ಕಾಂ ಅಧಿಕಾರಿಗಳ ಪರವಾನಗಿ ಪಡೆದುಕೊಳ್ಳಬೇಕಿದ್ದು, ಕೆಲ ನಾಟಕಗಳ ಪ್ರದರ್ಶನದ ದಿನ ಸಮೀಪಿಸಿದೆ. ಕಾಲಾವಕಾಶ ಕಡಿಮೆ ಇರುವುದರಿಂದ ನಾಟಕ ಮಂಡಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ಕಳೆದ ಎಲ್ಲ ಚುನಾವಣಾ ಸಂದರ್ಭಗಳಲ್ಲಿ ನಾಟಕ ಪ್ರದರ್ಶನಕ್ಕೆ ಷರತ್ತುಬದ್ಧ ಅನುಮತಿ ನೀಡಿ ಕಲಾವಿದರಿಗೆ ಅನುಕೂಲ ಮಾಡಿಕೊಡಲಾಗುತ್ತಿತ್ತು. ಆದರೆ ಈ ಬಾರಿ ಅನುಮತಿ ನೀಡದಿದ್ದಲ್ಲಿ ಆರೆಂಟು ತಿಂಗಳಿನಿಂದ ಮಾಡಿರುವ ನಾಟಕ ಅಭ್ಯಾಸ, ನಿಗದಿತ ದಿನದಂದು ಪ್ರದರ್ಶಿಸಿಲು ಮುಂಗಡವಾಗಿ ಸಾವಿರಾರು ಹಣ ಕೊಟ್ಟು ಕಾಯ್ದಿರಿಸಿರುವ ಡ್ರಾಮಾಸೀನರಿ ಸೇರಿ ಲಕ್ಷಾಂತರ ಹಣ ವ್ಯರ್ಥವಾಗಲಿದೆ ಎಂಬುದು ನಾಟಕ ಮಂಡಳಿಯ ಕಲಾವಿದರು ಅಳಲು.

ನಾಟಕ ಪ್ರದರ್ಶನ ಸೇರಿ ಯಾವುದೇ ಕಾರ್ಯಕ್ರಮ ನಡೆಸಲು ಅನುಮತಿ ನೀಡುವ ಅಧಿಕಾರ ಇದುವರೆಗೆ ಸಹಾಯಕ ಚುನಾವಣಾ ಅಧಿಕಾರಿಗಳಿಗಿಲ್ಲ. ಆದ್ದರಿಂದ ನೆಲಮಂಗಲ ತಾಲೂಕಿಗೆ ಸಂಬಂಧಿಸಿದ ದೇವಾಲಯ ಸಮಿತಿ, ನಾಟಕ ಮಂಡಳಿಗಳು ಚಿಕ್ಕಬಳ್ಳಾಪುರ ಜಿಲ್ಲಾ (ಜಿಲ್ಲಾಧಿಕಾರಿ) ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬಹುದಾಗಿದೆ. ಈ ಬಗ್ಗೆ ತಾಲೂಕು ಕಚೇರಿಯ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ.

| ಶಾಂತಾ.ಎಲ್.ಹುಲಮನಿ ಸ್ಥಳೀಯ ಸಹಾಯಕ ಚುನಾವಣಾಧಿಕಾರಿ