ನಾಟಕೋತ್ಸವ ಗ್ರಾಮೀಣರ ಜೀವನಾಡಿ

ಬೂದಿಕೋಟೆ: ಗ್ರಾಮೀಣ ಭಾಗಗಳಲ್ಲಿ ನಾಟಕೋತ್ಸವ ನಡೆಸುವುದರಿಂದ ಜನರಿಗೆ ನಾಟಕಗಳ ಬಗ್ಗೆ ಆಸಕ್ತಿ ಮೂಡುತ್ತದೆ ಎಂದು ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ ಅಭಿಪ್ರಾಯಪಟ್ಟರು.

ಬೂದಿಕೋಟೆ ಹೋಬಳಿ ಕಾರಮಾನಹಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಲಾರ ಹಾಗೂ ಗರಿಕೆ ಸಾಂಸ್ಕೃತಿಕ ಕೇಂದ್ರ ಭಾನುವಾರ ಹಮ್ಮಿಕೊಂಡಿದ್ದ ಗ್ರೀನ್ ರೂಂ ನಾಣಿ ನೆನಪಿನ ಎರಡು ದಿನಗಳ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಟಿವಿ ಹಾಗೂ ಮೊಬೈಲ್ ವ್ಯಾಮೋಹದಿಂದ ನಾಟಕ ವೀಕ್ಷಕರ ಸಂಖ್ಯೆ ಕ್ಷೀಣಿಸುತ್ತಿದೆ. ಇದರಿಂದ ನಾಟಕ ಕಲಾವಿದ ಸಂಖ್ಯೆ ಕುಂಠಿತವಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಆಗಾಗ ನಾಟಕೋತ್ಸವ ಹಮ್ಮಿಕೊಳ್ಳಬೇಕು. ಇಲ್ಲವಾದಲ್ಲಿ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳನ್ನು ನೋಡುವವರೇ ಇಲ್ಲವಾಗುತ್ತಾರೆ ಎಂದರು.

ಗರಿಕೆ ಸಂಸ್ಥೆಯಿಂದ ಗ್ರಾಮೀಣ ಮಕ್ಕಳಿಗೆ ಶಿಕ್ಷಣದೊಂದಿಗೆ ಪಠ್ಯವನ್ನು ಅಭಿನಯದ ಮೂಲಕ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಡಬೇಕು ಎಂದರು.

ಜನಪದ ಅಕಾಡೆಮಿ ಸದಸ್ಯ ಡಿ.ಆರ್.ರಾಜಪ್ಪ ಮಾತನಾಡಿ, ನಾಟಕಗಳಿಂದ ಮನುಷ್ಯನ ಆಲೋಚನೆ ಬದಲಾಗಿ, ಸಮಾಜ ಹಾಗೂ ದೇಶದ ಪ್ರಗತಿಗೆ ಹೇಗೆ ಮೌಲ್ಯ ರೂಪಿಸಿಕೊಳ್ಳಬೇಕು ಮತ್ತು ಹೇಗೆ ಬದುಕಬೇಕು ಎಂಬುದು ಅರಿವಾಗಲಿದೆ ಎಂದರು.

ರಂಗಭೂಮಿ ಕಲಾವಿದ ಬೂದಿಕೋಟೆಯ ಶೈನಿಂಗ್ ಸೀತಾರಾಮ ಅವರನ್ನು ಸನ್ಮಾನಿಸಲಾಯಿತು. ರಾಮಕೃಷ್ಣ ಬೆಳ್ತೂರು ನಿರ್ದೇಶನದ ಕಸಿಗಿಡದ ಹೂವು ನಾಟಕ ಪ್ರದರ್ಶನಗೊಂಡಿತು. ದಿನ್ನಹಳ್ಳಿ ಗ್ರಾಪಂ ಅಧ್ಯಕ್ಷೆ ಮಮತಾ ರೆಡ್ಡಿ, ಆಲಂಬಾಡಿ ಜ್ಯೋತೆನಹಳ್ಳಿ ಗ್ರಾಪಂ ಸದಸ್ಯ ಮುನಿಶಾಮಪ್ಪ, ನಾಟಕ ಅಕಾಡೆಮಿ ಸದಸ್ಯ ರಾಮಕೃಷ್ಣ ಬೆಳ್ತೂರು ಇದ್ದರು.