ಚಿತ್ರದುರ್ಗ: ನಾಟಕಗಳ ಪ್ರದರ್ಶನದಿಂದಾಗಿ ನಾಡಿನಲ್ಲಿ ಸಾಂಸ್ಕೃತಿಕ ಪ್ರಜ್ಞೆ ಹೆಚ್ಚಲಿದೆ ಎಂದು ಪತ್ರಕರ್ತ ಬಾ.ಮ.ಬಸವರಾಜಯ್ಯ ಅಭಿಪ್ರಾಯಪಟ್ಟರು.
ಜಿಲ್ಲೆಯ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಜಿ, ಶ್ರೀ ಸೂರುದಾಸ್ ಜೀ ಅವರ ಪುಣ್ಯಾರಾಧನೆ ಅಂಗವಾಗಿ ಮೂರು ದಿನ ಹಮ್ಮಿಕೊಂಡಿದ್ದ ತಿರುಕನೂರಿನಲ್ಲಿ ರಂಗದಾಸೋಹ ನಾಟಕೋತ್ಸವದ ಶನಿವಾರದ ಸಮಾರೋಪದಲ್ಲಿ ಮಾತನಾಡಿದರು.
ಶಾಲಾ-ಕಾಲೇಜುಗಳಲ್ಲಿ ರಂಗ ಚಟುವಟಿಕೆಯ ಕಾರ್ಯ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಂಗೀತ, ಕಲೆ, ನೃತ್ಯ, ಸಾಹಿತ್ಯ ಜ್ಞಾನ ದೊರೆತು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಉತ್ತಮ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇನ್‌ಸೈಟ್ ಐಎಎಸ್ ಮುಖ್ಯಸ್ಥ ಬಿ.ಜಿ.ವಿನಯಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಶಿಕ್ಷಣದತ್ತ ಹೆಚ್ಚು ಗಮನ ಹರಿಸಬೇಕು. ಇಲ್ಲಿನ ಮಕ್ಕಳಿಗೆ ಅದು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ಸೇವಾಶ್ರಮ ಶ್ರಮಿಸುತ್ತಿದೆ ಎಂದರು.
ಅಣ್ಣಪ್ಪ ಅರಬಗಟ್ಟೆ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಮೂಲಸೌಲಭ್ಯಗಳ ಸಮೇತ ಅತ್ಯಂತ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುವ ಸಂಸ್ಥೆ ಇದಾಗಿದೆ ಎಂದು ಹೇಳಿದರು.
ಇದೇ ವೇಳೆ ಎಚ್.ಎಸ್.ವೆಂಕಟೇಶಮೂರ್ತಿ ರಚಿತ, ವೈ.ಡಿ.ಬಾದಾಮಿ ನಿರ್ದೇಶನ, ಎಚ್.ಎಸ್.ನಾಗರಾಜ ಮತ್ತು ಶರಣಕುಮಾರ ಸಂಗೀತ ಸಂಯೋಜನೆಯ ಚಿತ್ರಪಟ ನಾಟಕವನ್ನು ಮಲ್ಲಾಡಿಹಳ್ಳಿ ರಾಘವೇಂದ್ರ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಉದ್ಯಮಿ ಬೆಂಗಳೂರಿನ ಕೆ.ಎಂ.ಮನೋಹರ, ಸಾಹಿತಿ ಸುರೇಶ ಕಲಾಪ್ರಿಯ, ವಿಶ್ವಸ್ತ ಸಮಿತಿಯ ಉಪಾಧ್ಯಕ್ಷ ರಾಘವೇಂದ್ರ ಪಾಟೀಲ್ ಇತರರಿದ್ದರು.