ನಾಗೇಶ್ ಹೆಗಡೆ, ಒಎಲ್​ಎನ್​ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

2016ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಡಾ.ನಾಗೇಶ್ ಹೆಗಡೆ, ಪ್ರೊ.ಓ.ಎಲ್. ನಾಗಭೂಷಣ ಸ್ವಾಮಿ ಸೇರಿ ಐವರನ್ನು ಆಯ್ಕೆ ಮಾಡಲಾಗಿದೆ. 2015ನೇ ಸಾಲಿನ ಪುಸ್ತಕ ಬಹುಮಾನ ವಿಜೇತರು ಹಾಗೂ ದತ್ತಿನಿಧಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅಕಾಡೆಮಿ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ, ಪ್ರಶಸ್ತಿ ಪ್ರದಾನ ಸಮಾರಂಭ ಫೆ.7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದರು. ವಿಜ್ಞಾನ ಸಾಹಿತಿ ಡಾ.ನಾಗೇಶ್ ಹೆಗಡೆ, ವಿಮರ್ಶಕಿ ಡಾ.ಎಚ್.ಎಸ್.ಶ್ರೀಮತಿ, ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ, ಕತೆಗಾರ ಬಸವರಾಜು ಕುಕ್ಕರಹಳ್ಳಿ, ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪುರ ಅವರಿಗೆ ಗೌರವ ಪ್ರಶಸ್ತಿ ನೀಡಲಾಗುವುದು.

16 ಕೃತಿಗಳಿಗೆ ಪುಸ್ತಕ ಬಹುಮಾನ: 2015ರ ವರ್ಷದ ಪುಸ್ತಕ ಬಹುಮಾನ ವಿಭಾಗದಲ್ಲಿ ಯಾರ ಹಂಗಿಲ್ಲ ಬೀಸುವ ಗಾಳಿಗೆ-ಕಾವ್ಯ (ಸತ್ಯ ಮಂಗಲ ಮಹದೇವ), ಕರಿನೀರು-ಕಾದಂಬರಿ (ಡಾ.ಲತಾಗುತ್ತಿ), ಜೋಗತಿ ಜೋಳಿಗೆ-ಸಣ್ಣಕತೆ (ಅನುಪಮಾ ಪ್ರಸಾದ್), ಕರುಳ ತೆಪ್ಪದ ಮೇಲೆ-ನಾಟಕ (ಚಿದಾನಂದ ಸಾಲಿ), ದಯವಿಟ್ಟು ಮುಚ್ಚಬೇಡಿ ರಸ್ತೆ ಗುಂಡಿಗಳನ್ನು-ಲಲಿತಪ್ರಬಂಧ (ಎಚ್. ಶಾಂತರಾಜ ಐತಾಳ್), ಆಸುಪಾಸು-ಪ್ರವಾಸ ಸಾಹಿತ್ಯ (ಡಾ.ಪ್ರಣತಾರ್ತಿಹರನ್), ಡಾ. ರಾಜ್​ಕುಮಾರ್ ಸಮಗ್ರ ಚರಿತ್ರೆ-ಜೀವನ, ಡಾ.ರಾಜ್​ಕುಮಾರ್ ಸಮಗ್ರ ಚರಿತ್ರೆ-ಚಲನಚಿತ್ರ (ದೊಡ್ಡಹುಲ್ಲೂರು ರುಕ್ಕೋಜಿ), ಸ್ತ್ರೀ ಎಂದರೆ ಅಷ್ಟೇ ಸಾಕೆ- ಸಾಹಿತ್ಯ ವಿಮರ್ಶೆ (ಡಾ.ಎಚ್.ಎಲ್.ಪುಷ್ಪಾ), ಪಪ್ಪು ನಾಯಿಯ ಪೀಪಿ-ಮಕ್ಕಳ ಸಾಹಿತ್ಯ (ವಿಜಯಶ್ರೀ ಹಾಲಾಡಿ), ಕಲಿಯುಗದ ಸಂಜೀವಿನಿ ಹೊಕ್ಕಳುಬಳ್ಳಿ-ವಿಜ್ಞಾನ ಸಾಹಿತ್ಯ (ಡಾ.ನಾ.ಸೋಮೇಶ್ವರ), ಬಹುವಚನ ಭಾರತ-ಮಾನವಿಕ (ಜಿ.ರಾಜಶೇಖರ), ಸಾಹಿತ್ಯ ಶೋಧ-ಸಂಶೋಧನೆ (ಪ್ರೊ. ನಾವಡ), ಕಾನ್ರಾಡ್ ಕಥೆಗಳು: ಸೃಜನಶೀಲ ಅನುವಾದ(ಶೈಲಜಾ), ಕದಡಿದ ಕಣಿವೆ: ಸೃಜನೇತರ ಅನುವಾದ (ಜಯಪ್ರಕಾಶ ನಾರಾಯಣ), ರಂಗದ ಒಳಹೊರಗೆ-ಸಂಕೀರ್ಣ (ಗೋಪಾಲ ವಾಜಪೇಯಿ), ಅಸ್ಮಿತಾ ಕವನ ಸಂಕಲನ-ಲೇಖಕರ ಮೊದಲ ಕೃತಿ (ದೀಪಾ ಗಿರೀಶ್) ಆಯ್ಕೆಯಾಗಿದೆ.

7 ದತ್ತಿನಿಧಿ ಬಹುಮಾನ: ಚಿ.ಶ್ರೀನಿವಾಸರಾಜು ದತ್ತಿನಿಧಿ ಕಾವ್ಯ ಹಸ್ತಪ್ರತಿಗೆ ಬಹುಮಾನ ನೀಡಲಾಗುತ್ತಿದ್ದು, 10 ಸಾವಿರ ರೂ.ಗಳನ್ನೊಳಗೊಂಡ ಈ ಪ್ರಶಸ್ತಿಗೆ ಸಿದ್ದು ಎಂ. ಸತ್ಯಣ್ಣವರ ಅವರ ‘ಕನಸ ಬೆನ್ಹತ್ತಿ ನಡಿಗೆ’ ಕೃತಿ ಆಯ್ಕೆಯಾಗಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಸಿ.ಎಚ್. ಭಾಗ್ಯ ತಿಳಿಸಿದರು. ದತ್ತಿನಿಧಿ ಪ್ರಶಸ್ತಿಗೆ ಜಾಣಗೆರೆ ವೆಂಕಟರಾಮಯ್ಯ ಅವರ ಮಹಾಯಾನ-ಕಾದಂಬರಿ(ಚದುರಂಗ ದತ್ತಿನಿಧಿ), ಡಾ.ಗಜಾನನ ಶರ್ವರ ಕಾಡು ಕಣಿವೆಯ ಹಾಡು ಹಕ್ಕಿ ಗರ್ತಿಕೆರೆ ರಾಘಣ್ಣ-ಜೀವನ ಚರಿತ್ರೆ (ಸಿಂಪಿ ಲಿಂಗಣ್ಣ ದತ್ತಿನಿಧಿ), ಡಾ.ಕವಿತಾ ರೈ ಅವರ ತಿಳಿಯಲು ಎರಡೆಂಬುದಿಲ್ಲ-ಸಾಹಿತ್ಯ ವಿಮರ್ಶೆ(ಪಿ. ಶ್ರೀನಿವಾಸರಾವ್ ದತ್ತಿನಿಧಿ), ಸೃಜನಶೀಲ ಅನುವಾದ ಕೃತಿ ವಿಭಾಗದಲ್ಲಿ ಡಾ.ಜಯಲಲಿತಾ ಅವರ ವಾರ್ಸಾದಲ್ಲೊಬ್ಬ ಭಗವಂತ-ಮೂಲ: ಡಾ.ಕಾಲೋಸ್​ನ ತಮಿಳು ಕಾದಂಬರಿ ವಾರ್ಸಾವಿಲ್ ಒರು ಕಡವುಳ್ (ಎಲ್.ಗುಂಡಪ್ಪ, ಶಾರದಮ್ಮ ದತ್ತಿನಿಧಿ) ಚಂಪ ಜೈಪ್ರಕಾಶ್ ಅವರ 21ನೇ ಕ್ರೋಮೋಜೋಮ್ ಮತ್ತು ಇತರೆ ಕಥನಗಳು- ಲೇಖಕರ ಮೊದಲ ಸ್ವತಂತ್ರ ಕೃತಿ (ಮಧುರಚೆನ್ನ ದತ್ತಿನಿಧಿ), ಕನ್ನಡದಿಂದ ವಿವೇಕ ಶಾನಭಾಗ ಅವರ ಘಾಚರ್ ಘೊಚರ್ ಕಾದಂಬರಿಯನ್ನು ಇಂಗ್ಲಿಷಿಗೆ ಅನುವಾದಿಸಿರುವ ಶ್ರೀನಾಥ್ ಪೆರೂರ್​ರ ಘಾಚರ್ ಘೊಚರ್ ಕೃತಿಗೆ ಅಮೆರಿಕನ್ನಡ ದತ್ತಿನಿಧಿ ಬಹುಮಾನ ನೀಡಲಾಗುವುದು.

Leave a Reply

Your email address will not be published. Required fields are marked *