ನಾಗಲಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ

ಬ್ಯಾಡಗಿ: ಕುಡಿಯುವ ನೀರು ಒದಗಿಸದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹಾಗೂ ತಾಲೂಕು ಆಡಳಿತದ ನಿರ್ಲಕ್ಷ್ಯ ಖಂಡಿಸಿ ಗುರುವಾರ ನಾಗಲಾಪುರ ಗ್ರಾಮಸ್ಥರು ಖಾಲಿ ಕೊಡ ಹಿಡಿದು ತಹಸೀಲ್ದಾರ್ ಕಾರ್ಯಾಲಯ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಮುಖಂಡ ಚನ್ನವೀರಗೌಡ್ರ ದೊಡ್ಡಗೌಡ್ರ, ಗ್ರಾಮದಲ್ಲಿ ಹಲವು ದಿನಗಳಿಂದ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದು, ಜನ ಹಾಗೂ ಜಾನುವಾರುಗಳು ನೀರಿಗೆ ಅಲೆದಾಡುವಂತಾಗಿದೆ. ಈ ಹಿಂದೆ ಜನಸ್ಪಂದನ ಹಾಗೂ ವಿವಿಧ ಗ್ರಾಮಸಭೆಗಳಲ್ಲಿ ತಿಳಿಸಿದರೂ ಗ್ರಾಮಸ್ಥರ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಹೀಗಾಗಿ ಪ್ರತಿದಿನ ಕಿ.ಮೀ. ಗಟ್ಟಲೇ ದೂರದ ಹೊಲಗಳಿಗೆ ತೆರಳಿ ನೀರು ಸಂಗ್ರಹಿಸಿಬೇಕಿದೆ. ಈ ಬಗ್ಗೆ ತಾಲೂಕು ಆಡಳಿತ ಕ್ಯಾರೇ ಅನ್ನುತ್ತಿಲ್ಲ ಎಂದು ಆರೋಪಿಸಿದರು.

ಗ್ರಾಮಸ್ಥರು ಮಾಹಿತಿ ಕೇಳಿದರೆ, ಸಿಬ್ಬಂದಿ ಸ್ಪಂದಿಸುತ್ತಿಲ್ಲ. ಟಾಸ್ಕ್​ಪೋರ್ಸ್ ಸಮಿತಿ ಖಾತೆಗೆ ಪ್ರತಿ ತಾಲೂಕಿಗೆ ಸರ್ಕಾರ ಲಕ್ಷಗಟ್ಟಲೇ ಅನುದಾನ ಬಿಡುಗಡೆ ಮಾಡಿದೆ. ಆದರೆ, ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ಹಣ ಏಕೆ ಬಳಸಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲಹೊತ್ತಿನ ಬಳಿಕ ಆಗಮಿಸಿದ ಶಿರಸ್ತೇದಾರ್ ಕೆ.ಎಂ. ಮುಗಳಿ ಗ್ರಾಮಸ್ಥರ ಮನವಿ ಸ್ವೀಕರಿಸಿ, ‘ನೀರಿನ ಸಮಸ್ಯೆ ಕುರಿತು ನನಗೇನೂ ಮಾಹಿತಿಯಿಲ್ಲ. ಸಾಹೇಬ್ರು, ಪತ್ರ ತೋಗಳ್ಳಾಕ ಹೇಳ್ಯಾರ. ಹೆಚ್ಚಿನ ವಿಷಯ ಬೇಕಾದ್ರೆ ತಹಸೀಲ್ದಾರರಿಗೆ ಕೇಳ್ರಿ’ ಎನ್ನುತ್ತಿದ್ದಂತೆ, ಗ್ರಾಮಸ್ಥರು ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಹರಿಹಾಯ್ದರು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ತಾಲೂಕು, ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರ ಸೂಚಿಸಿದ್ದರೂ, ತಾಲೂಕಿನಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಗ್ರಾಮಸ್ಥರಾದ ಮೌನೇಶ ಕಮ್ಮಾರ, ಬಸವರಾಜ ಹಳ್ಳಿ, ಮಂಜಪ್ಪ ಸಂಕಣ್ಣನವರ, ಶಿವಪ್ಪ ನಾಗಲಾಪುರ, ನಿಂಗಪ್ಪ ಸೊಮಣ್ಣನವರ, ಈರಪ್ಪ ಹರಿಜನ, ಶಂಕ್ರಪ್ಪ ತಳವಾರ, ಪ್ರಭು ತಳವಾರ, ಮಲ್ಲೇಶ ದಾನಣ್ಣನವರ, ನಾಗರಾಜ ಬೆನ್ನೂರು, ಕಾಂತೇಶ ತಳವಾರ, ನಾಗಪ್ಪ ನೂರಂದರ, ಮಂಜುನಾಥ ಪೂಜಾರ, ಮಹೇಶ ಯಲಗಚ್ಚ, ಮಲ್ಲನಗೌಡ ಪಾಟೀಲ, ಮಲ್ಲಿಕಾರ್ಜುನ ಬಳ್ಳಾರಿ, ಕಿರಣಕುಮಾರ ಗಡಿಗೋಳ ಇತರರಿದ್ದರು.