ನಾಗರಿಕರಿಗೆ ಪೂರಕವಾದ ಬಜೆಟ್ ಮಂಡನೆ

ಶಿವಮೊಗ್ಗ: ನಾಗರಿಕರಿಗೆ ಪೂರಕ ಬಜೆಟ್​ಅನ್ನು ಈ ಬಾರಿ ಮಂಡಿಸಲಾಗುವುದು ಎಂದು ಉಪಮೇಯರ್ ಎಸ್.ಎನ್.ಚನ್ನಬಸಪ್ಪ ಭರವಸೆ ನೀಡಿದರು.

ಸ್ವಚ್ಛತೆ ಹಾಗೂ ಪರಿಸರಕ್ಕೆ ಪೂರಕ, ಪ್ಲಾಸ್ಟಿಕ್ ಹಾಗೂ ಹಂದಿ ಮುಕ್ತ ಶಿವಮೊಗ್ಗ ನಿರ್ವಣಕ್ಕೆ ಬಜೆಟ್​ನಲ್ಲಿ ಆದ್ಯತೆ ನೀಡಲಾಗುವುದು ಎಂದು ಮಂಗಳವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು.

ಎರಡು ಹಂತಗಳಲ್ಲಿ ಸಭೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ನಾಗರಿಕರು ಮುಂದಿನ ಬಜೆಟ್ ಹೇಗಿರಬೇಕು? ಯಾವುದಕ್ಕೆ ಆದ್ಯತೆ ನೀಡಬೇಕೆಂದು ಅನಿಸಿಕೆ ಹಂಚಿಕೊಂಡಿದ್ದಾರೆ. ಅದೆಲ್ಲವನ್ನೂ ಒಟ್ಟುಗೂಡಿಸಿ ಸಮಗ್ರ ಬಜೆಟ್ ನೀಡಲಾಗುವುದು ಎಂದು ಹೇಳಿದರು.

ಸಾರ್ವಜನಿಕರ ನಿರೀಕ್ಷೆಗಳು: ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ನಾಗರಿಕರು ಪಾಲಿಕೆ ಆಡಳಿತದ ದೃಷ್ಟಿಯಿಂದ ಹಲವು ಸಲಹೆ ನೀಡುವ ಜತೆಗೆ ಬಜೆಟ್​ನಲ್ಲಿ ಯಾವುದಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಅನಿಸಿಕೆ ಹಂಚಿಕೊಂಡರು. ನಗರಸಭೆ ಮಾಜಿ ಸದಸ್ಯ ಉಮಾಪತಿ ಮಾತನಾಡಿ, ಸ್ಮಾರ್ಟ್ ಸಿಟಿಯಾಗುತ್ತಿರುವ ಶಿವಮೊಗ್ಗದಲ್ಲಿ ಪಾಲಿಕೆ ದಾಖಲೆಗಳೂ ಸ್ಮಾರ್ಟ್ ಆಗಲಿ. ಆ ನಿಟ್ಟಿನಲ್ಲಿ ಇ-ಆಫೀಸ್​ಗೆ ಹೆಚ್ಚು ಒತ್ತು ನೀಡಿ ಎಂದರು.

ಆಲ್ಪ್ರೆಡ್ ಎಂಬುವರು ಮಾತನಾಡಿ, ರಾಜ ಕಾಲುವೆಯಲ್ಲಿ ಹೂಳು ಸಂಗ್ರಹವಾಗಿದೆ. ಮಳೆಗಾಲದಲ್ಲಿ ಸಮಸ್ಯೆ ಸೃಷ್ಟಿಯಾಗುವ ಮುನ್ನ ಹೂಳು ತೆಗೆಯುವ ಪ್ರಕ್ರಿಯೆ ಪೂರ್ಣಗೊಳಿಸಿ. ಗೋಪಿ ವೃತ್ತದಿಂದ ರೈಲ್ವೆ ನಿಲ್ದಾಣದ ಮಾರ್ಗದಲ್ಲಿ ಹಲವೆಡೆ ಫುಟ್​ಪಾತ್ ಇಲ್ಲ. ಹೀಗಾಗಿ ಬಜೆಟ್​ನಲ್ಲಿ ಇದಕ್ಕೂ ಒತ್ತು ನೀಡಬೇಕೆಂದರು.

ಉಪನ್ಯಾಸಕ ನಿತೀನ್ ಮಾತನಾಡಿ, ಖಾಸಗಿ ಸಿಟಿ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಅಲ್ಲಿ ಪ್ರಯಾಣಿಕರು ನಿಲ್ಲಲು ತಂಗುದಾಣದ ವ್ಯವಸ್ಥೆಯಿಲ್ಲ. ಹಂದಿ ಹಾಗೂ ಕಸದ ಬೀಡಾಗಿದೆ. ನಗರದ ಹೃದಯ ಭಾಗದಲ್ಲಿ ಇಂತಹ ಅವ್ಯವಸ್ಥೆಯಿರುವುದು ನಿಜಕ್ಕೂ ಕಪ್ಪುಚುಕ್ಕೆ. ಇನ್ನು ನಗರದ ಪ್ರವೇಶ ದ್ವಾರಗಳನ್ನು ನಿರ್ವಿುಸುವ ಕೆಲಸಕ್ಕೆ ಬಜೆಟ್​ನಲ್ಲಿ ಅನುದಾನ ಮೀಸಲಿರಿಸಬೇಕು. 10 ವರ್ಷ ಹಿಂದೆ ಇದ್ದಂತೆ ಎಎ ವೃತ್ತ, ಗೋಪಿ ವೃತ್ತ, ಅಶೋಕ ವೃತ್ತಗಳಲ್ಲಿ ಸಿಗ್ನಲ್ ಲೈಟ್ ಅಳವಡಿಸಬೇಕೆಂದು ಸಲಹೆ ನೀಡಿದರು. ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಉಪಸ್ಥಿತರಿದ್ದರು.