ನಷ್ಟದಲ್ಲಿರುವ ಸಾರಿಗೆ ಸಂಸ್ಥೆ ವಿಲೀನ ಅಗತ್ಯ

ವಿಜಯವಣಿ ಸುದ್ದಿಜಾಲ ಕಲಬುರಗಿ
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ 1,470 ಕೋಟಿ ರೂ. ನಷ್ಟ ಉಂಟಾಗಿ 945 ಕೋಟಿ ರೂ. ಸಾಲದ ಸುಳಿಯಲ್ಲಿವೆ. ಹೀಗಾಗಿ ಖರ್ಚು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೆಎಸ್ಆರ್ಟಿಸಿಯಲ್ಲಿ ಮೂರು ನಿಗಮ ವಿಲೀನಗೊಳಿಸುವುದು ಒಳಿತು ಎಂದು ಕೆಎಸ್ಆರ್ಟಿಸಿ, ಎಸ್ಡಬ್ಲ್ಯುಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ವಿ. ಅನಂತಸುಬ್ಬರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾರ್ವಜನಿಕ ಉದ್ಯಾನ ಆವರಣದಲ್ಲಿ ಮಂಗಳವಾರ ಆರಂಭವಾಗಿರುವ ಮೂರು ದಿನದ ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್​ ಫೆಡರೇಷನ್ನ 6ನೇ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಮಾತನಾಡಿದ ಅವರು, 2017ರ ಮಾರ್ಚ 31ವರೆಗಿನ ಮಾಹಿತಿಯಂತೆ ಈಶಾನ್ಯ ಸಾರಿಗೆ ಸಂಸ್ಥೆ 575 ಕೋಟಿ, ಕೆಎಸ್ಆರ್ಟಿಸಿ 53, ಬಿಎಂಟಿಸಿ 181 ಮತ್ತು ವಾಯುವ್ಯ ಸಾರಿಗೆ ಸಂಸ್ಥೆಗೆ 721 ಕೋಟಿ ರೂ. ಹಾನಿಯಾಗಿದೆ. ಎಂಟು ಚಾಲಕ, ನಿರ್ವಾಹಕರಿದ್ದ ಮಾರ್ಗಸೂಚಿ ಈಗ ನಾಲ್ಕು ಹುದ್ದೆಗಳಿಗೆ ಇಳಿಸಲಾಗಿದೆ. ದುಡಿಯುವರ ಸಂಖ್ಯೆ ಇಳಿಕೆಗೊಂಡಿದ್ದು, ವ್ಯವಸ್ಥಾಪಕರ ಸಂಖ್ಯೆ ಹೆಚ್ಚಿದೆ. ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ ಕುಲಗೆಟ್ಟ ಆಡಳಿತ ಹೆಚ್ಚಾಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ 1.75 ಲಕ್ಷ ಸಾರಿಗೆ ಇಲಾಖೆ ನೌಕರರಿದ್ದು, ತಕ್ಷಣ ವರ್ಗಾವಣೆ ಪ್ರಕ್ರಿಯೆ ನಡೆಸಬೇಕು. ಎರಡು ತಿಂಗಳಲ್ಲೇ ಐವರು ನೌಕರರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಒಬ್ಬ ಮೃತಪಟ್ಟಿದ್ದಾರೆ. ರೈತರ ಬಳಿಕ ಹೆಚ್ಚು ಆತ್ಮಹತ್ಯೆ ಸಾರಿಗೆ ಇಲಾಖೆಯಲ್ಲಿ ಆಗುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದ ಅವರು, ನಾಲ್ಕು ನಿಗಮಗಳನ್ನು ಒಟ್ಟುಗೂಡಿಸಿ ಒಂದೇ ಮಾಡಬೇಕು ಎಂದು ಒತ್ತಾಯಿಸಿದರು.

ಸಿದ್ದಪ್ಪ ಫಾಲ್ಕಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಸ್.ಕೆ.ಕಾಂತಾ, ಜೈಪುರದ ಎಂ.ಎಲ್.ಯಾದವ್, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆ ಎ.ಜ್ಯೋತಿ, ಕೇಂದ್ರೀಯ ಯೋಮಿಯೋಪಥಿ ಮಂಡಳಿ ಮಾಜಿ ಸದಸ್ಯ ಡಾ.ಪಿ.ಸಂಪತರಾವ್ ಮಾತನಾಡಿದರು.

ಮೇಯರ್ ಮಲ್ಲಮ್ಮ ವಳಕೇರಿ, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಡಿ.ಎ., ಕಾರ್ಮಿಕ ನ್ಯಾಯವಾದಿ ಬಿ.ಆರ್. ಪಾಟೀಲ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಪ್ರಭುದೇವ ಯಳಸಂಗಿ, ಸಿದ್ದಣ್ಣ ಕಣ್ಣೂರ, ನಂದಪ್ಪ ಜಮಾದಾರ, ರತ್ನಪ್ಪ ಜೈನ, ಹಣಮಂತರಾಯ ಅಟ್ಟೂರ್, ಅಬ್ದುಲ್ ಕಲಿಂ, ಮಹೇಶಕುಮಾರ ರಾಠೋಡ, ಎಚ್.ಎಸ್.ಪತಕಿ ಇತರರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಅಲ್ಲಮಪ್ರಭು ಪಾಟೀಲ್ ಸ್ವಾಗತಿಸಿದರು. ರಾಮು ಗುತ್ತೇದಾರ್ ವಂದಿಸಿದರು. ಟಿ.ಎಲ್.ರಾಜಗೋಪಾಲ ನಿರೂಪಣೆ ಮಾಡಿದರು.

ಕೇಂದ್ರದ್ದು ಖಾಸಗಿ ಕಂಪನಿಗಳ ಸರ್ಕಾರ: ಕೇಂದ್ರದ್ದು ಖಾಸಗಿ ಕಂಪನಿಗಳ ಸರ್ಕಾರವೇ ಹೊರತು, ಜನತಾ ಸರ್ಕಾರವಲ್ಲ. ಆರೋಗ್ಯ, ಶಿಕ್ಷಣ, ಸಾರಿಗೆ, ವಿದ್ಯುತ್ ಕ್ಷೇತ್ರ ಖಾಸಗೀಕರಣ ಮಾಡುವ ಹುನ್ನಾರ ನಡೆದಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಕಾರ್ಪೋರೇಟ್ ಕಂಪನಿಗಳ ಸಿಇಒ ಅಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್​ ಫೆಡರೇಷನ್ ಗೌರವಾಧ್ಯಕ್ಷ ಡಾ.ಸಿದ್ದನಗೌಡ ಪಾಟೀಲ್ ಟೀಕಿಸಿದರು. 2019ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಮತ್ತೆ ಮೋದಿ ಅಧಿಕಾರಕ್ಕೆ ಬಂದರೆ ಕಾರ್ಪೊರೇಟ್ ಅಗ್ರಿಕಲ್ಚರ್ ಬರುವ ದಿನಗಳೇನೂ ದೂರವಿರಲ್ಲ, ಎಪಿಎಂಸಿ ಕಾಯ್ದೆ ಜಾರಿಗೆ ತರಲು ತೆರೆಮರೆಯಲ್ಲಿ ಸಿದ್ಧತೆ ನಡೆದಿದೆ. ಕಾರ್ಪೊರೇಟ್ ಲಾಬಿಗೆ ಮಣಿದು ಎಲ್ಲ ಕಾನೂನು ಬದಲಾಯಿಸಲು ಹೊರಟಿದೆ ಎಂದು ದೂರಿದರು. ಕೃಷಿ ಉದ್ಯಮಕ್ಕೆ 10 ಲಕ್ಷ ಕೋಟಿ ರೂ. ಕೊಡಬೇಕು ಎಂಬ ತೀರ್ಮಾನ ಆಗಿದೆ. ಆದರೆ ಖಾಸಗಿ ಕಂಪನಿಗಳಿಗೆ ಸಾಲ ನೀಡುತ್ತಿದೆ ಎಂದು ದೂರಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಖಾಸಗೀಕರಣ ನೀತಿ ವಿರೋಧಿಸಿ ಜನವರಿ 8ರಿಂದ ಎರಡು ದಿನ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗುವುದು. ಸಾರಿಗೆ ಇಲಾಖೆ ಖಾಸಗೀಕರಣಗೊಳಿಸುವ ಕೇಂದ್ರದ ಹುನ್ನಾರ, 18 ಸಾವಿರ ಕನಿಷ್ಠ ವೇತನ ಕಾಯ್ದೆ, ಕಾರ್ಮಿಕ ಕೋಡ್ ರದ್ದತಿ, ಕನಿಷ್ಠ ಪಿಂಚಣಿ ಸೌಲಭ್ಯ ಸೇರಿ 18 ಪ್ರಮುಖ ಬೇಡಿಕೆ ಮುಂದಿಟ್ಟುಕೊಂಡು ಮುಸ್ಕರ ನಡೆಯಲಿದೆ.
| ಎಚ್.ವಿ. ಅನಂತಸುಬ್ಬರಾವ್
ಪ್ರಧಾನ ಕಾರ್ಯದರ್ಶಿ, ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್​ ಫೆಡರೇಷನ್