ನವುಲೆ ಕೆರೆ ಏರಿ ಕಾಮಗಾರಿ ಮತ್ತೆ ಸ್ಥಗಿತ

ಶಿವಮೊಗ್ಗ: ಪರ-ವಿರೋಧದ ನಡುವೆ ಮತ್ತೆ ಸದ್ದಿಲ್ಲದೆ ಬುಧವಾರ ಆರಂಭಗೊಂಡಿದ್ದ ನವುಲೆ ಕೆರೆ ಏರಿ ಮೇಲೆ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಅಣ್ಣಾ ಹಜಾರೆ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಸ್ಥಳೀಯರು ಡಿಸಿ ಮೂಲಕ ಸ್ಥಗಿತಗೊಳಿಸಿದರು.

ಕಳೆದೆರೆಡು ವರ್ಷಗಳಿಂದ ರಸ್ತೆ ವಿಸ್ತರಣೆ ನೆಪದಲ್ಲಿ ಐತಿಹಾಸಿಕ ನವುಲೆ ಕೆರೆಯನ್ನು ಮುಚ್ಚಿ ಹಾಕಲು ನಡೆಸಿರುವ ಹುನ್ನಾರಕ್ಕೆ ಕಿಡಿ ಕಾರಿರುವ ಸ್ಥಳೀಯರು, ಕೆರೆ ಒತ್ತುವರಿ ಮಾಡದಂತೆ ಮನವಿ ಮಾಡಿದ್ದರೂ ಮತ್ತೆ ರಸ್ತೆ ಬದಿಯ ಕೆರೆಗೆ ಮಣ್ಣು ತಂದು ಮುಚ್ಚುವ ಪ್ರಯತ್ನ ನಡೆಸಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಣ್ಣಾ ಹಜಾರೆ ಹೋರಾಟ ಸಮಿತಿಯವರು, ಕಾಮಗಾರಿ ಸ್ಥಗಿತಗೊಳಿಸದಿದ್ದರೆ ಅಹೋ ರಾತ್ರಿ ಉಪವಾಸ ಕೈಗೊಳ್ಳುವ ಬೆದರಿಕೆವೊಡ್ಡಿದರು.

ತಕ್ಷಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜತೆ ರ್ಚಚಿಸಿ ಕಾಮಗಾರಿಗೆ ಕೇಂದ್ರ ಪರಿಸರ ಇಲಾಖೆ ಹಾಗೂ ರಾಷ್ಟ್ರ ಹಸಿರುಕರಣ ಪೀಠದ ಮಾನ್ಯತೆ ಪಡೆದಿಲ್ಲವೆಂಬುದು ಖಾತ್ರಿಪಡಿಸಿಕೊಂಡ ಡಿಸಿ ಕೆ.ಎ.ದಯಾನಂದ್, ಕೂಡಲೆ ಕಾಮಗಾರಿ ನಿಲ್ಲಿಸದಿದ್ದರೆ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದರಿಂದ ಮತ್ತೆ ಕೆರೆ ಏರಿ ವಿಸ್ತರಣೆ ಕಾಮಗಾರಿಗೆ ತಾತ್ಕಲಿಕ ತಡೆ ಬಿದ್ದಿದೆ.