Wednesday, 12th December 2018  

Vijayavani

ಅಂತೂ ಹೊರಬಿತ್ತು ಮಧ್ಯಪ್ರದೇಶದ ಫಲಿತಾಂಶ: ಅತಂತ್ರ ರಾಜ್ಯದಲ್ಲಿ ಯಾರಿಗೆ ಅಧಿಕಾರ?        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಮಾಡಲು ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದಲೂ ಹಕ್ಕು ಮಂಡನೆ        ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತೆಯ ಕುರಿತು ಚರ್ಚಿಸಲು ರಾಜ್ಯಸಭೆಯಲ್ಲಿ ಸಮಯ ಕೋರಿದ ಟಿಎಂಸಿ        ರಾಹುಲ್​ ಗಾಂಧಿಯನ್ನು ದೇಶ ಒಪ್ಪಿಕೊಳ್ಳುತ್ತಿದೆ ಎಂದ ಎಂಎನ್​ಎಸ್​ ವರಿಷ್ಠ ರಾಜ್​ ಠಾಕ್ರೆ        ತೆಲಂಗಾಣದ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಕೆ. ಚಂದ್ರಶೇಖರ್​ ರಾವ್​       
Breaking News

ನವಭಾರತದ ನಿರ್ಮಾಣದತ್ತ ಮಹತ್ವದ ನಡೆ…

Thursday, 18.05.2017, 3:05 AM       No Comments

 ಬಡಜನರ ಉದ್ಧಾರ, ಮಹಿಳೆಯರ ಸಬಲೀಕರಣ ಸೇರಿದಂತೆ ದೇಶದ ಸರ್ವಾಂಗೀಣ ಅಭಿವೃದ್ಧಿಯ ಸಾಕಾರಕ್ಕೆ ಕಟಿಬದ್ಧವಾಗಿರುವ ಮೋದಿ ಸರ್ಕಾರ, ಮೂರು ವರ್ಷಗಳ ಅಲ್ಪಾವಧಿಯಲ್ಲೇ ಈ ನಿಟ್ಟಿನಲ್ಲಿ ಭರವಸೆ ಮೂಡಿದೆ. ಹೀಗಾಗಿ ದೇಶದ ಪ್ರತಿಯೊಂದು ವರ್ಗವೂ ಮೋದಿ ಮೋಡಿಗೆ ಒಳಗಾಗಿದೆ.

| ಅನಿಲ್ ಬಲೂನಿ

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರನೇ ವರ್ಷ ಪೂರೈಸುತ್ತಿದೆ. ದೇಶದ ಘನತೆ-ಗೌರವ ಹೆಚ್ಚಿಸುವ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ಕೆಲಸಮಾಡುವಂಥ ಹೊಣೆಗಾರಿಕೆಯನ್ನು ಮೋದಿಯವರ ನಾಯಕತ್ವಕ್ಕೆ, ತನ್ಮೂಲಕ ಬಿಜೆಪಿಗೆ 3 ವರ್ಷಗಳ ಹಿಂದೆ ಜನ ನೀಡಿದರು. ಇದು ದೇಶವನ್ನು ಪರಿವರ್ತನೆಯ ಹೊಸ್ತಿಲಲ್ಲಿ ನಿಲ್ಲಿಸಲೆಂದು ದಕ್ಕಿದ ಜನಾದೇಶವಾಗಿತ್ತೇ ಹೊರತು, ಓರ್ವ ಪ್ರಧಾನಮಂತ್ರಿಯನ್ನೋ ಅಥವಾ ಸರ್ಕಾರವನ್ನೋ ಬದಲಿಸುವುದಕ್ಕಷ್ಟೇ ಸೀಮಿತವಾಗಿರಲಿಲ್ಲ ಎಂಬುದನ್ನು ನಾವು ಗಮನಿಸಬೇಕು. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪ್ರಧಾನಿ ಮೋದಿ 125 ಕೋಟಿ ಭಾರತೀಯರ ಹೃನ್ಮನಗಳನ್ನು ತಟ್ಟುವಂಥ ಕೆಲಸಗಳನ್ನೇ ಮಾಡಿದ್ದಾರೆ, ಮಾಡುತ್ತಿದ್ದಾರೆ. ನೈತಿಕತೆಯ ಅಧಃಪತನ, ಅಸ್ತವ್ಯಸ್ತತೆ, ಹತಾಶ ಚಿತ್ತಸ್ಥಿತಿಗಳನ್ನು ನಿಭಾಯಿಸಲು ಇನ್ನಿಲ್ಲದಂತೆ ಹೆಣಗುತ್ತಿದ್ದ ಭಾರತದಲ್ಲಿ ಹೊಸ ಚೈತನ್ಯ ಮತ್ತು ಭರವಸೆಯನ್ನು ಅವರು ತುಂಬಿದ್ದಾರೆ ಎನ್ನಬಹುದು. ಅಭಿವೃದ್ಧಿ ವಿಷಯ ಕುರಿತಾದ ತಮ್ಮ ಕೋರಿಕೆ, ಭಾಷಣ ಮತ್ತು ಪ್ರಚಾರಾಂದೋಲನಗಳ ಮೂಲಕ ಮೋದಿಯವರು ಸಾಮಾಜಿಕ ಹೊಣೆಗಾರಿಕೆಗಳೆಡೆಗೆ ಶ್ರೀಸಾಮಾನ್ಯನನ್ನು ಸೆಳೆದಿದ್ದಾರೆ. ಒಂದರ್ಥದಲ್ಲಿ, ದೈನಂದಿನ ಬದುಕಿನ ಸವಾಲುಗಳ ಕುರಿತೇ ಭಾಷಣಗಳಲ್ಲಿ ಉಲ್ಲೇಖಿಸುವ ಮೂಲಕ, ಶ್ರೀಸಾಮಾನ್ಯನ ಸಮಸ್ಯೆಗಳಿಗೆ ಪರಿಹಾರೋಪಾಯ ಕಟ್ಟಿಕೊಡುವ ಭರವಸೆಯ ವ್ಯಕ್ತಿಯಾಗಿ ಮೋದಿ ಹೊಮ್ಮಿಬಿಟ್ಟಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಕೆಂಪುಕೋಟೆಯಲ್ಲಿ ಭಾಷಣ ಮಾಡುವಾಗ ಸ್ವಚ್ಛಭಾರತದ ವಿಷಯವನ್ನು ಯಾರಾದರೂ ಪ್ರಧಾನಿ ಮುನ್ನೆಲೆಗೆ ತಂದದ್ದುಂಟಾ? ಹೊಲಸು ವಾತಾವರಣದಲ್ಲಿ ದಿನದೂಡುವುದೇ ಹಣೆಬರಹವಾಗಿಬಿಟ್ಟಿದ್ದ ಈ ದೇಶದಲ್ಲಿ, ಈ ಗುರಿಸಾಧನೆಗೆ ಮತ್ತಷ್ಟು ಸಮಯ ಹಿಡಿಯುತ್ತದೆ ಎಂಬುದೇನೋ ದಿಟವೇ; ಆದರೆ, ಕಡೇಪಕ್ಷ ಜನ ಈ ವಿಷಯದಲ್ಲಿ ಚಿಂತನೆಗೆ ಶುರುವಿಟ್ಟುಕೊಂಡಿರುವುದಂತೂ ಹೌದು. ‘ಬೇಟಿ ಬಚಾವೊ, ಬೇಟಿ ಪಢಾವೊ’ದಂಥ ಯೋಜನೆಗಳೊಂದಿಗೆ ದೇಶದ ಹೆಣ್ಣುಮಕ್ಕಳ ಸಬಲೀಕರಣದ ಕುರಿತು ಪ್ರಧಾನಿಯೊಬ್ಬರು ಪ್ರಚಾರಾಂದೋಲನದಲ್ಲಿ ತೊಡಗಿಸಿಕೊಳ್ಳುವುದನ್ನು ಯಾರಾದರೂ ಊಹಿಸಿಕೊಂಡಿದ್ದರೇ? ನದಿಗಳ ಸಂರಕ್ಷಣೆಯ ಸುಸಂಘಟಿತ ಯತ್ನಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಚಾಲನೆ ನೀಡಿದ, ಹಾಲೂಡಿಸುವ ತಾಯಂದಿರಿಗೆ ತಿಂಗಳಲ್ಲಿ ಒಂದು ದಿನ ಉಚಿತ ಚಿಕಿತ್ಸೆ ನೀಡುವಂತೆ ವೈದ್ಯರಲ್ಲಿ ಮನವಿ ಮಾಡಿಕೊಂಡ ಪ್ರಧಾನಿಯನ್ನು ಹಿಂದೆಂದಾದರೂ ಕಂಡಿದ್ದಿರಾ? ಅಷ್ಟೇಕೆ, ಪರೀಕ್ಷೆಗಳ ಬಗೆಗೆ ಚಿಂತಿಸುವ ಬದಲು ಉತ್ತಮ ಚಾರಿತ್ರ್ಯ ಅಳವಡಿಸಿಕೊಳ್ಳುವ ಕುರಿತು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದ, ಜಲಸಂರಕ್ಷಣೆಗೆ ಮುಂದಾಗುವಂತೆ ಎಲ್ಲ ವಯೋಮಾನದವರಲ್ಲೂ ಮನವಿಮಾಡಿದ, ಕೃಷಿಕರ ಆದಾಯ ದುಪ್ಪಟ್ಟು ಮಾಡುವುದರೆಡೆಗೆ ಯತ್ನಿಸಿದ ಮತ್ತಾವುದಾದರೂ ಪ್ರಧಾನಿಯ ನಿದರ್ಶನ ಸಿಗುವುದೇ? ಬಡಮಹಿಳೆಯರು ಅಡುಗೆಮನೆಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಬಹುತೇಕರಿಗೆ ಗೊತ್ತಿದ್ದರೂ, ಮೋದಿ ಪರಿಕಲ್ಪನೆಯ ‘ಉಜ್ವಲಾ ಯೋಜನೆ’ಯಂಥ ದಿಟ್ಟ ಉಪಕ್ರಮವನ್ನು ಕೈಗೊಳ್ಳಲಿಲ್ಲವೇಕೆ? ಮುಗಿಲುಮುಟ್ಟಿರುವ ಔಷಧ ಬೆಲೆಗಳಿಗೆ ಲಗಾಮುಹಾಕುವ ಆಶಯದ ಅಂಗವಾಗಿ ಸರ್ಕಾರ ಉಚಿತ ವೈದ್ಯಕೀಯ ವಿಮೆಯನ್ನು ಪರಿಚಯಿಸಲು ಪರಿಶ್ರಮಿಸಿರುವುದೂ ಗೊತ್ತಿರುವ ಸಂಗತಿಯಲ್ಲವೇ?

ಕೆಂಪುಗೂಟದ ಕಾರಿನ ಸಂಸ್ಕೃತಿಯ ಕುರಿತು ಬಹುತೇಕರಿಗೆ ಅಸಮಾಧಾನವಿದ್ದರೂ, ಒಂದೇ ಏಟಿಗೆ ಅದಕ್ಕೆ ಇತಿಶ್ರೀ ಹಾಡುವ ದಿಟ್ಟತನ ತೋರಿದ್ದು ಮಾತ್ರ ಮೋದಿ. ಕುತಂತ್ರಿ ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನಾ ಕೃತ್ಯಗಳು, ಯೋಧಯೋಗ್ಯವಲ್ಲದ ಬೆದರಿಕೆಗಳ ಕುರಿತು ಪ್ರತಿಯೊಬ್ಬರಿಗೂ ಗೊತ್ತಿದ್ದರೂ, ಸರ್ಜಿಕಲ್ ದಾಳಿ ನಡೆಸುವ ಮೂಲಕ ಸೂಕ್ತ ಪ್ರತ್ಯುತ್ತರ ನೀಡುವ ಕುರಿತು ಯಾರೂ ಯೋಚಿಸಿದ್ದಿಲ್ಲ. ಮೋದಿಯವರಿಗೆ ದೇಶದ ನಾಡಿಮಿಡಿತ ಗೊತ್ತಿದೆ ಎಂಬುದನ್ನು ತೋರಿಸಲು ಇಂಥ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ಈ ಎಲ್ಲ ಉಪಕ್ರಮಗಳ ಫಲಿತವೆಂದರೆ, ದೇಶದ ಜನರ ಭರವಸೆ, ಬಲ ಮತ್ತು ದನಿಯ ಒಂದು ‘ವಿಶ್ವಾಸಾರ್ಹ ಮೂಲ’ವೇ ಆಗಿಬಿಟ್ಟಿದ್ದಾರೆ ಮೋದಿ.

ಹಾಗಂತ, ಮೋದಿಯವರಲ್ಲಿ ಶ್ರೀಸಾಮಾನ್ಯರು ಇಟ್ಟಿರುವ ವಿಶ್ವಾಸ ಸುಖಾಸುಮ್ಮನೆ ಬಂದದ್ದಲ್ಲ, ಅದಕ್ಕೆ ಕಾರಣಗಳಿವೆ. ಅವರು ಆಸೀನರಾಗಿರುವುದು ‘ಅಧಿಕಾರ ಸಿಂಹಾಸನ’ದಲ್ಲಲ್ಲ, ಜನರ ‘ಹೃದಯ ಸಿಂಹಾಸ’ನದಲ್ಲಿ; ತಾವು ‘ಪ್ರಧಾನ ಮಂತ್ರಿ’ ಅಲ್ಲ, ಜನರ ‘ಪ್ರಧಾನ ಸೇವಕ’ ಎಂದು ಹೇಳಿದ್ದೇ ಹೇಳಿದ್ದು, ಮೋದಿ ಜನರ ಚಿತ್ತಬಿಂಬವಾದರು. ಹಾಗಂತ ಅವರದ್ದು ಬಡಾಯಿಯಲ್ಲ, ಆಡಿದ್ದನ್ನು ಶಕ್ತಿಶಾಲಿ ನೈಪುಣ್ಯದ ನೆರವಿನೊಂದಿಗೆ ಅನುಷ್ಠಾನಕ್ಕೂ ತರುತ್ತಾರೆ.

ಅವರ ಪ್ರತಿಯೊಂದು ಮಾತೂ ಒಂದು ಪ್ರೇರಣೆಯಾಗುತ್ತದೆ ಎಂಬುದಕ್ಕೆ ಅವರಿಗಿರುವ ನಿಚ್ಚಳ ದೃಷ್ಟಿಕೋನವೇ ಸಾಕ್ಷಿ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಾಯಕತ್ವದಡಿಯಲ್ಲಿ, ಲಕ್ಷಾಂತರ ಕಾರ್ಯಕರ್ತರು ಮೋದಿ ಸರ್ಕಾರದ ಪ್ರತಿಯೊಂದು ಧ್ಯೇಯೋದ್ದೇಶ/ಕಾರ್ಯಕ್ರಮವನ್ನೂ ದೇಶದ ಮೂಲೆಮೂಲೆಗೆ ತಲುಪಿಸುತ್ತಿದ್ದಾರೆ. ನವಭಾರತವನ್ನು ನಿರ್ವಿುಸುವ ನಿಟ್ಟಿನಲ್ಲಿ, ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ನೆರವಿನೊಂದಿಗೆ ಅವರು ಬದಲಾವಣೆಯ ಹರಿಕಾರರೇ ಆಗಿಬಿಟ್ಟಿದ್ದಾರೆ.

ಪ್ರಧಾನಿಯಾದ ತರುವಾಯದಲ್ಲೇ ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತಾಡಿದ ಮೋದಿಯವರು, ತಮ್ಮ ಸರ್ಕಾರ ಬಡವರ ಸೇವೆಗೆ ಮುಡಿಪಾಗಿರಲಿದೆ ಎಂದರಲ್ಲದೆ, ನಿರಂತರ ಶೋಷಿಸಲ್ಪಟ್ಟ, ಅನ್ಯಾಯದ ಬಲಿಪಶುವಾಗಿಸಲ್ಪಟ್ಟ ಮತ್ತು ಬದುಕುವ ಹಕ್ಕಿನಿಂದ ವಂಚಿತರಾದ ಗ್ರಾಮೀಣರು, ಕೃಷಿಕರು, ದಲಿತರಿಗಾಗಿ ಹಾಗೂ ಯುವಪೀಳಿಗೆ ಮತ್ತು ಮಹಿಳೆಯರ ಕನಸಿನ ಸಾಕಾರಕ್ಕಾಗಿ ಸರ್ಕಾರ ಕೆಲಸ ಮಾಡಲಿದೆ ಎಂಬುದನ್ನು ಸ್ಪಷ್ಟಪಡಿಸಿದರು. ಈ ಭರವಸೆಗಳನ್ನು ಅವರು ನೆರವೇರಿಸಿದ್ದಾರೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಕಳೆದ 3 ವರ್ಷಗಳಲ್ಲಿ, ದೇಶದ ಅಭಿವೃದ್ಧಿ ಹಾಗೂ ಬಡಜನರ ಕಲ್ಯಾಣವನ್ನು ದೃಷ್ಟಿಯಲ್ಲಿಟ್ಟುಕೊಂಡು 105ಕ್ಕೂ ಹೆಚ್ಚು ಯೋಜನೆಗಳನ್ನು ಪ್ರಧಾನಿ ಮೋದಿ ಜಾರಿಮಾಡಿದ್ದಾರೆ. ಬಡಜನರ ಕಲ್ಯಾಣಕ್ಕೆಂದು ಜಾರಿಮಾಡಲಾದ ಯೋಜನೆಗಳ ಉದಾಹರಣೆಯನ್ನೇ ತೆಗೆದುಕೊಳ್ಳೋಣ- ಕಾಳಧನಿಕರು ಇರಿಸಿದ ಠೇವಣಿಗಳಿಂದ ಪಡೆಯಲಾದ ನಿಧಿಯನ್ನು ಸರ್ಕಾರ ಈ ಯೋಜನೆ ಯಡಿಯಲ್ಲಿ ಬಡವರ ಶ್ರೇಯೋಭಿವೃದ್ಧಿಗೆಂದು ಬಳಸುತ್ತದೆ. ಜನಧನ ಯೋಜನೆಯೂ ಮತ್ತೊಂದು ವಿಶಿಷ್ಟ ಉಪಕ್ರಮವೇ. ಇದರಡಿ ಪ್ರಸ್ತುತ 1.26 ಲಕ್ಷದಷ್ಟು ‘ಬ್ಯಾಂಕ್ ಮಿತ್ರ’ ಸಿಬ್ಬಂದಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಬ್ಯಾಂಕ್ ವ್ಯವಹಾರಕ್ಕೆ ಅಡಿಯಿಡುವ ಕುರಿತೂ ಆಲೋಚಿಸದಿದ್ದವರಿಗೆ, ಸಮಾಜದಲ್ಲಿ ನಗಣ್ಯರೆನಿಸಿ ಕೊಂಡವರಿಗೆ ರೂಪೇ ಡೆಬಿಟ್ ಕಾರ್ಡ್​ಗಳನ್ನು ಗಣನೀಯ ಸಂಖ್ಯೆಯಲ್ಲಿ ವಿತರಿಸಲಾಗಿದೆ. ಇದೇ ರೀತಿಯಲ್ಲಿ, ಭದ್ರತಾ ವಿಮಾ ಯೋಜನೆ ಅಡಿಯಲ್ಲಿ, 10 ಕೋಟಿಗೂ ಹೆಚ್ಚು ಜನರನ್ನು ನೋಂದಾಯಿಸಲಾಗಿದ್ದು, 10,000ಕ್ಕೂ ಹೆಚ್ಚು ಜನ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆಯಡಿ 3 ಕೋಟಿಗೂ ಹೆಚ್ಚು ಜನರ ನೋಂದಣಿಯಾಗಿದ್ದರೆ, 61,000 ಮಂದಿ ಈಗಾಗಲೇ ಪ್ರಯೋಜನಗಳನ್ನು ಪಡೆದಿದ್ದಾರೆ. ರಾಷ್ಟ್ರೀಯ ಆರೋಗ್ಯ ಕಾರ್ಯನೀತಿಯಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಬಡಜನರಿಗೆ ಉಚಿತ ತಪಾಸಣೆ ಹಾಗೂ ಔಷಧ ಸೇವೆ ಒದಗಿಸಲು ಅವಕಾಶ ಕಲ್ಪಿಸಲಾಗಿರುವುದಲ್ಲದೆ, ಬಡವರಿಗೆ 1 ಲಕ್ಷ ರೂ. ಮೌಲ್ಯದ ವೈದ್ಯಕೀಯ ವಿಮಾ ರಕ್ಷಣೆಯನ್ನೂ ನೀಡಲಾಗುತ್ತಿದೆ. ಉಜ್ವಲ ಯೋಜನೆಯ ಮೂಲಕ 2 ಕೋಟಿ ಬಡಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿದ್ದು, 2019ರ ವೇಳೆಗೆ ಇದು 5 ಕೋಟಿಯನ್ನು ದಾಟಲಿದೆ. ಮಹಿಳಾ ಸಬಲೀಕರಣಕ್ಕೆ ಇದಕ್ಕಿಂತ ಯೋಜನೆ ಬೇಕೆ?

ದಿನವಿಡೀ ವಿದ್ಯುತ್ ಒದಗಿಸುವ ವಾಗ್ದಾನ ಈಡೇರಿಸಲೆಂದು, ದೀನದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆಗೆ 43,000 ಕೋಟಿ ರೂ.ಗಳನ್ನು ನೀಡಲು ಪ್ರಧಾನಿ ಅನುಮೋದಿಸಿದ್ದಾರೆ. 2019ರೊಳಗಾಗಿ ಎಲ್ಲ ಮನೆಗಳಿಗೂ ವಿದ್ಯುಚ್ಛಕ್ತಿ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಕಾರ್ಯವು ಪ್ರಗತಿಯಲ್ಲಿದೆ. 2018ರ ಮೇ 1ರ ಹೊತ್ತಿಗೆ ಎಲ್ಲ ಹಳ್ಳಿಗಳೂ ವಿದ್ಯುದೀಕರಣಗೊಳ್ಳಲಿವೆ. 2021ರೊಳಗಾಗಿ ಎಲ್ಲ ಬಡ ಜನರೂ ಸ್ವಂತಮನೆ ಹೊಂದುವಂತಾಗಬೇಕೆಂಬ ಕನಸು ಕಂಡಿರುವ ಈ ಸರ್ಕಾರ, ಆ ನಿಟ್ಟಿನಲ್ಲಿ ಪರಿಶ್ರಮಿಸುತ್ತಿದೆ; ಕಡಿಮೆ ಬಡ್ಡಿದರದ ಗೃಹಸಾಲದ ನೆರವಿನೊಂದಿಗೆ ಬಡಜನರಿಗೆ ಮನೆ ದಕ್ಕಲಿರುವುದು ಈ ಯೋಜನೆಯ ವಿಶೇಷ. ನೈಸರ್ಗಿಕ ವಿಪತ್ತಿನ ಕಾರಣದಿಂದಾಗಿ ನಷ್ಟಕ್ಕೀಡಾಗುವ ರೈತರಿಗೆ ನೆರವಾಗಲೆಂದು ಬೆಳೆವಿಮಾ ಯೋಜನೆಯಿದೆ.

ಕಳೆದ 3 ವರ್ಷಗಳಲ್ಲಿ, ದೇಶದ ಪ್ರತಿಯೊಂದು ವರ್ಗವೂ ಮೋದಿ-ಮೋಡಿಗೆ ಒಳಗಾಗಿರುವುದು ದಿಟ. ಗಡಿಯಲ್ಲಿ ದೇಶಕಾಯುತ್ತಿರುವ ಸೈನಿಕರೊಂದಿಗೆ ಹೇಗೆ ಮಾತಾಡಬೇಕು, ಶಾಲಾವಿದ್ಯಾರ್ಥಿಗಳೊಂದಿಗೆ ಹೇಗೆ ಸಂವಹಿಸಬೇಕು ಎಂಬುದು ಅವರಿಗೆ ಗೊತ್ತು. ಜಲಸಂರಕ್ಷಣೆ, ಸ್ವಚ್ಛಭಾರತ ಆಂದೋಲನ, ವಿದ್ಯುಚ್ಛಕ್ತಿಯ ಉಳಿತಾಯ, ಲಿಂಗ ತಾರತಮ್ಯ ತಡೆಗಟ್ಟುವಿಕೆ, ಮಕ್ಕಳು ಮತ್ತು ಯುವಜನರ ವ್ಯಕ್ತಿತ್ವ ವಿಕಸನ…. ಹೀಗೆ ವೈವಿಧ್ಯಮಯ ವಿಷಯಗಳನ್ನು ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದ ಮೂಲಕ ಅವರು ಹಂಚಿಕೊಂಡಿದ್ದಾರೆ. ವಯಸ್ಸಿನ ಭೇದವಿಲ್ಲದೆ ಎಲ್ಲರ ಮನಸ್ಸಲ್ಲೂ ಮೋದಿಯವರು ನೆಲೆಯೂರಿರುವುದು ಈ ಕಾರಣದಿಂದಲೇ.

ಈ ಪ್ರಪಂಚದ ಚಲನಶೀಲತೆಗೆ ಹೊಂದುವ ಗತಿಯಲ್ಲಿ ಹೆಜ್ಜೆಹಾಕಬಲ್ಲ ನವಭಾರತವನ್ನು, ಹೊಸನಾಡೊಂದನ್ನು ಕಟ್ಟಲು ನಾವು ಅಡಿಯಿರಿಸಿದ್ದೇವೆ. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶಕ್ಕೆ ದೃಢನಂಬಿಕೆ ಮತ್ತು ವಿಶ್ವಾಸವಿದೆ ಎಂಬುದು ಕಳೆದ ಮೂರೇ ವರ್ಷಗಳ ಅವಧಿಯಲ್ಲಿ ಸಾಬೀತಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top