ನಲ್ಲಿ ತಿರುವಿದರೆ ಅನಿಲ!

ಹುಬ್ಬಳ್ಳಿ:ಸಿಲಿಂಡರ್ ಬುಕ್ ಮಾಡಿ ವಾರ, 15 ದಿನ ಆಯ್ತು, ಇನ್ನೂ ಬಂದಿಲ್ಲ ಎಂದು ಚಿಂತಿಸಬೇಕಿಲ್ಲ, ತಿಂಗಳೋ, ಎರಡು ತಿಂಗಳಿಗೋ ಸಿಲಿಂಡರ್ ಬದಲಿಸುವ ಅವಶ್ಯಕತೆಯೂ ಇನ್ನಿಲ್ಲ, ತುಂಬಿದ ಸಿಲಿಂಡರ್ ಸೋರಿಕೆಯಾಗಿ ಆಕಸ್ಮಿಕ ಅವಘಡಗಳ ಅಪಾಯವೂ ಇನ್ನಿರದು….

ಮನೆಯಲ್ಲಿ ನಿರಂತರ ನೀರು ಯೋಜನೆಯ ನಲ್ಲಿ ತಿರುವಿದಾಗ ನೀರು ಹರಿದು ಬರುವಂತೆ ಇನ್ನು ವಾಲ್ವ್ ತಿರುವಿದರೆ ಸಾಕು ಬೇಕೆಂದಷ್ಟು ಅಡುಗೆ ಅನಿಲ ಲಭ್ಯವಾಗಲಿದೆ. ಅದು ಕೂಡ ನಿರಂತರ. ಅಡುಗೆ ಅನಿಲ ಸಂಗ್ರಹ ಮಾಡಿಕೊಳ್ಳುವ ಅಗತ್ಯವಿಲ್ಲ.

ಹೌದು! ಇದು ಪೆಟ್ರೋಲಿಯಂ ನೈಸರ್ಗಿಕ ಅನಿಲ (ಪಿಎನ್​ಜಿ)ದ ಕಮಾಲ್. ಹುಬ್ಬಳ್ಳಿ- ಧಾರವಾಡ ಅವಳಿ ನಗರ ಸೇರಿ ಧಾರವಾಡ ಜಿಲ್ಲೆಯಲ್ಲಿ ಪೈಪ್ ಮೂಲಕ ಅಡುಗೆ ಅನಿಲ ಪೂರೈಕೆ ಯೋಜನೆ ಜಾರಿಯಾಗಿದ್ದು, ಈಗಾಗಲೇ ಹುಬ್ಬಳ್ಳಿಯ ನವನಗರದಲ್ಲಿ ಮನೆಮನೆಗೆ ಅನಿಲ ಪೂರೈಕೆ ಕಾರ್ಯ ಪ್ರಾರಂಭಿಸಲಾಗಿದೆ. ಇಂಡಿಯನ್ ಆಯಿಲ್ ಕಾಪೋರೇಶನ್ ಹಾಗೂ ಅದಾನಿ ಗ್ಯಾಸ್ ಪ್ರೖೆ. ಲಿಮಿಟೆಡ್ ಜಂಟಿಯಾಗಿ ಧಾರವಾಡ ಜಿಲ್ಲೆಗೆ ಪೈಪ್ ಮೂಲಕ ಅನಿಲ ಪೂರೈಕೆ ಯೋಜನೆ ಕಾರ್ಯ ಕೈಗೊಂಡಿದ್ದು, ಈಗಾಗಲೇ ಅವಳಿ ನಗರದಲ್ಲಿ ಪೈಪ್​ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ದಾಬೋಲ್-ಬೆಂಗಳೂರು ಪೈಪ್​ಲೈನ್ ಮಾರ್ಗದಿಂದ ಧಾರವಾಡ ಜಿಲ್ಲೆಗೆ ಗ್ಯಾಸ್ ಪೂರೈಕೆಯಾಗುತ್ತಿದೆ. ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಗೇಲ್) ಧಾರವಾಡ ಜಿಲ್ಲೆಗೆ ಸಗಟು ಅನಿಲ ವಿತರಣೆ ಏಜೆನ್ಸಿಯಾಗಿದ್ದು, ಅದಾನಿ ಹಾಗೂ ಇಂಡಿಯನ್ ಆಯಿಲ್ ಕಂಪನಿಗಳು ಮನೆ ಮನೆಗೆ ಹಾಗೂ ಕೈಗಾರಿಕೆ ಉದ್ದೇಶಕ್ಕೆ ಪೂರೈಕೆ ಹೊಣೆ ಹೊತ್ತಿವೆ. ಮುಂದಿನ ದಿನಗಳಲ್ಲಿ ಅಡುಗೆ ಅನಿಲ ಹಾಗೂ ಇತರೆ ಬಳಕೆಯ ಅನಿಲ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಯಾಗಲಿದೆ.

ಮನೆಗೆ ಸಂಪರ್ಕ: ಹುಬ್ಬಳ್ಳಿಯ ನವನಗರದಲ್ಲಿ 300ಕ್ಕೂ ಹೆಚ್ಚು ಮನೆಗಳು ಈಗಾಗಲೇ ಸಂಪರ್ಕ ಪಡೆದುಕೊಂಡಿವೆ. ಪ್ರಾಯೋಗಿಕ ಕಾರ್ಯಾಚರಣೆ ನಂತರ ಇನ್ನೂ ಹಲವರು ಸಂಪರ್ಕ ಪಡೆದುಕೊಳ್ಳಲು ಮುಂದೆ ಬಂದಿದ್ದಾರೆ. ಮನೆಮನೆ ಅನಿಲ ಸಂಪರ್ಕ ಕಲ್ಪಿಸುವ ಕೆಲಸ ನಿರಂತರವಾಗಿ ನಡೆಯಲಿದೆ. ಈಗಾಗಲೇ ಪೈಪ್ ಮೂಲಕ ಬರುವ ಗ್ಯಾಸ್ ಬಳಕೆ ಮಾಡುತ್ತಿರುವ ಮನೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮನೆಗೆ ಸಂಪರ್ಕ ಪಡೆದುಕೊಳ್ಳುವ ಗ್ರಾಹಕರು 5000 ರೂ. ಠೇವಣಿ ಇಡಬೇಕಾಗುತ್ತದೆ. ಸಂಪರ್ಕ ನೀಡುವ ಕಂಪನಿ ಅದರೊಟ್ಟಿಗೆ ಮೀಟರ್ ಅಳವಡಿಸುತ್ತದೆ. ಪ್ರತಿ ಕ್ಯೂಬಿಕ್ ಮೀಟರ್ ಬಳಕೆ ಮೇಲೆ ಬಿಲ್ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಎಷ್ಟು ಬಳಸುತ್ತೀರೋ ಅಷ್ಟಕ್ಕೇ ಹಣ ಭರಣ..

ಸದ್ಯ ಸಿಲಿಂಡರ್ ಗ್ಯಾಸ್​ಗೆ ಪ್ರತಿ ತಿಂಗಳು 700 ರೂ. ಖರ್ಚಾಗುತ್ತಿದ್ದರೆ, ಪಿಎನ್​ಜಿಗೆ ಅದಕ್ಕಿಂತ ಒಂದಿಷ್ಟು ಕಡಿಮೆ ಖರ್ಚಾಗಲಿದೆ. ಎಷ್ಟು ಬಳಕೆ ಮಾಡುತ್ತೀರೋ ಅಷ್ಟಕ್ಕೆ ಹಣ ಭರಿಸಿದರಾಯಿತು ಎನ್ನುತ್ತಾರೆ ಕಂಪನಿ ಅಧಿಕಾರಿಗಳು. ಪೈಪ್ ಗ್ಯಾಸ್ ಸಂಪರ್ಕ ಪಡೆದ ನಂತರ ಸಿಲಿಂಡರ್ ಬುಕ್ ಮಾಡುವುದನ್ನು ನಿಲ್ಲಿಸಬಹುದಾಗಿದೆ. ಮನೆಗಷ್ಟೇ ಅಲ್ಲದೆ, ಉದ್ಯಮಗಳಿಗೆ, ವಾಣಿಜ್ಯ ಬಳಕೆಗೂ ಪೈಪ್ ಮೂಲಕ ಅನಿಲ ಪೂರೈಕೆಯಾಗಲಿದೆ. ಮಾತ್ರವಲ್ಲ, ಮುಂದಿನ ದಿನಗಳಲ್ಲಿ ವಾಹನಗಳಿಗೆ ಸಿಎನ್​ಜಿ (ಕಂಪ್ರೆಸ್ಡ್ ನ್ಯಾಚರಲ್ ಗ್ಯಾಸ್) ಪೂರೈಕೆಯಾಗಲಿದೆ. ಬೆಂಕಿ ಅವಘಡದಂತಹ ಅಪಾಯಗಳು ಇನ್ನಿರುವುದಿಲ್ಲ ಎಂದು ಹೇಳಲಾಗುತ್ತಿದೆ.

ಪ್ರಧಾನಿ ಲೋಕಾರ್ಪಣೆ

ಧಾರವಾಡ ನಗರ ಅನಿಲ ಪೂರೈಕೆ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಲೋಕಾರ್ಪಣೆಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವಳಿ ನಗರ ಸೇರಿ ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಿಗೂ ಅಡುಗೆ ಅನಿಲ ಪೈಪ್ ಮೂಲಕ ವಿತರಿಸುವ ಕಾರ್ಯಕ್ರಮ ಜಾರಿಯಾಗಲಿದೆ. ಸದ್ಯಕ್ಕೆ ಒಂದು ಉದ್ಯಮ ಮಾತ್ರ ಸಿಎನ್​ಜಿ ಇಂಧನ ಬಳಕೆ ಮಾಡಿಕೊಳ್ಳುತ್ತಿದ್ದು, ಇನ್ನುಮುಂದೆ ವಾಣಿಜ್ಯ, ಕೈಗಾರಿಕೆಗಳ ಬಳಕೆ ಕೂಡ ಹೆಚ್ಚುವುದು ನಿರೀಕ್ಷಿತವಾಗಿದೆ.