ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಲು ಆಗ್ರಹ

ಬೆಳಗಾವಿ: ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ಬೆಳಗಾವಿ ತಾಪಂ ಕಚೇರಿ ಆವರಣದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಅತವಾಡ ಗ್ರಾಮದ ಮಹಿಳಾ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ. ಆದರೆ, ಜನರು ಗೂಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಪಂಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ದೊರೆಯುತ್ತಿಲ್ಲ. ಮತ್ತೊಂದೆಡೆ ದುಡಿದ ಕಾರ್ಮಿಕರಿಗೆ ಕೂಲಿ ವೇತನ ನೀಡುತ್ತಿಲ್ಲ. ಮುತಗಾ ಗ್ರಾಪಂ ವ್ಯಾಪ್ತಿಯಲ್ಲಿ ಕೂಲಿ ಕೆಲಸಕ್ಕೆ ತೆರಳು ಸಾಧ್ಯವಿಲ್ಲ. ಅತವಾಡ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆಲಸ ನೀಡಬೇಕು. ಆದರೆ, ತಿಂಗಳಿನಿಂದ ಪಿಡಿಒ ಎನ್‌ಎಂಆರ್ ತಾಂತ್ರಿಕ ಸಮಸ್ಯೆ ಎದುರಾಗಿದೆ ಎನ್ನುತ್ತಿದ್ದಾರೆ. ಹಾಗಾಗಿ ಎನ್‌ಎಂಆರ್ ನೀಡಬೇಕು. ಮಾರ್ಚ್ ತಿಂಗಳು ಮುಗಿಯುವವರೆಗೆ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.

ಮನೀಷಾ ಪೀಕಳೆ, ಎಂ.ಎಸ್.ಪಾಟೀಲ, ವಿ.ಎಸ್.ಹಿರೇಮಠ, ಮಾಲು ಪಾಟೀಲ, ಸುನಿತಾ ಕಣಬರಕರ, ಅನಿತಾ ಮಂಡೂಳಕರ, ಕಲ್ಪನಾ ಕಾಂಬಳೆ, ಭಾರತಿ ಬೇಟನೂರ‌್ಕರ್ ಹಾಗೂ ಗ್ರಾಮಸ್ಥರು ಇದ್ದರು.