ನರೇಗಾ ಕೆಲಸ ಡಿಸೆಂಬರ್​ನಲ್ಲಿ ಚುರುಕು

ಹುಬ್ಬಳ್ಳಿ: ಉದ್ಯೋಗ ಖಾತ್ರಿ ಯೋಜನೆ ಅಡಿ 2018- 19ನೇ ಸಾಲಿನಲ್ಲಿ ತಾಲೂಕಿನಲ್ಲಿ ನಡೆದ ಕಾಮಗಾರಿಯ ವಾರ್ಷಿಕ ಗುರಿ ಶೇ. 35.15ರಷ್ಟು ತಲುಪಿದ್ದು, ಬರಗಾಲ ಪ್ರದೇಶವೆಂದು ಘೊಷಣೆಯಾದ ಮೇಲೆ ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ಚುರುಕಾಗಿದೆ.

2018-19ನೇ ಸಾಲಿನ ನರೇಗಾ ಕಾಮಗಾರಿಗೆ 17 ಕೋಟಿ 83 ಲಕ್ಷ ರೂ. ಮೊತ್ತದ ಕ್ರಿಯಾ ಯೋಜನೆ ಸಲ್ಲಿಸಿದ್ದರಿಂದ ಅನುದಾನ ಬಿಡುಗಡೆಯಾಗಿದೆ. 2018ರ ಮಾರ್ಚ್​ನಿಂದ ಡಿಸೆಂಬರ್ ತಿಂಗಳವರೆಗೆ ಬರೀ 5 ಕೋಟಿ 52 ಲಕ್ಷ ರೂಪಾಯಿ (ಕಾರ್ವಿುಕರ ಕೂಲಿ ಮತ್ತು ಸಾಮಗ್ರಿ ಸೇರಿ) ಖರ್ಚು ಮಾಡಲಾಗಿದೆ.

ಹುಬ್ಬಳ್ಳಿ ತಾಲೂಕು ಬರಪೀಡಿತ ಪ್ರದೇಶವೆಂದು ರಾಜ್ಯ ಸರ್ಕಾರ ಪ್ರಕಟಿಸಿದೆ. ಇದಕ್ಕೂ ಮೊದಲೇ ನರೇಗಾ ಯೋಜನೆ ಅಡಿ ಬಿಡುಗಡೆಯಾದ ಅನುದಾನ ಬಳಕೆಗೆ ಒತ್ತು ನೀಡಲಾಗಿದೆ. ಇದಕ್ಕಾಗಿಯೇ ರಾಜ್ಯ ಸರ್ಕಾರ ವಿಶೇಷ ಅನುದಾವನ್ನೇನೂ ಮೀಸಲಿಟ್ಟಿಲ್ಲ. ಕುಸುಗಲ್ ಭಾಗದ ವಾರ್ಷಿಕ ಗುರಿಯಲ್ಲಿ ಶೇ. 69.55ರಷ್ಟು ಕಾಮಗಾರಿ ನಡೆದಿದ್ದು, 31 ಲಕ್ಷ 82 ಸಾವಿರ ರೂ. ಖರ್ಚು ಮಾಡಲಾಗಿದೆ. ಛಬ್ಬಿ ಭಾಗದಲ್ಲಿ ಶೇ. 60.88ರಷ್ಟು ಕಾಮಗಾರಿಗೆ 28 ಲಕ್ಷ 28 ಸಾವಿರ ರೂ. ಅನುದಾನ ಬಳಕೆಯಾಗಿದೆ. ಅದರಗುಂಚಿ, ಅಗಡಿ, ಬೆಳಗಲಿ ಭಾಗದಲ್ಲಿ ಶೇ. 50ರ ಆಸುಪಾಸು ಕಾಮಗಾರಿ ನಡೆದಿರುವುದು ಅಂಕಿ-ಅಂಶಗಳಿಂದ ತಿಳಿದುಬರುತ್ತದೆ.

ನರೇಗಾ ಅನುದಾನ ಬಿಡುಗಡೆಯಾದ ವರ್ಷಾರಂಭದಲ್ಲಿ ಅಧಿಕಾರಿಗಳು ತೋರಿದ ನಿರ್ಲಕ್ಷ್ಯ ಫಲವಾಗಿ ಕಾಮಗಾರಿ ವೇಗ ಪಡೆದಿರಲಿಲ್ಲ. ಬರಗಾಲ ಪ್ರದೇಶವೆಂದು ಘೊಷಣೆಯಾದ ಬಳಿಕ ಕೆಲವೆಡೆ ಕಾಮಗಾರಿ ನಡೆದಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕೃಷಿ ಹೊಂಡ, ಬದು ನಿರ್ವಣ, ಕೆರೆ ಹೂಳೆತ್ತುವುದು ಸೇರಿ ಇತರೆ ಕೆಲಸದ ಮಾಹಿತಿ ನೀಡುತ್ತಿದ್ದು, ಡಿಸೆಂಬರ್ ತಿಂಗಳ ಆರಂಭದ ವರದಿ ನೋಡಿದರೆ ಶೇ. 46.86ರಷ್ಟು ಕಾಮಗಾರಿ ಪೂರ್ಣಗೊಂಡಿರುವುದು ಗೊತ್ತಾಗುತ್ತಿದೆ. ಹಳ್ಯಾಳ, ಬ. ಅರಳಿಕಟ್ಟಿ, ಹೆಬಸೂರ, ಇಂಗಳಹಳ್ಳಿ, ಕಿರೆಸೂರ, ಮಂಟೂರು ಭಾಗದಲ್ಲಿ ವಾರ್ಷಿಕ ಗುರಿ ಕಾಮಗಾರಿ ಶೇ. 20ರ ಆಸುಪಾಸು ನಡೆದಿವೆ. ಮಾನವ ದಿನ ಬಳಕೆ ಮಾಡುವಲ್ಲಿಯೂ ಅಧಿಕಾರಿಗಳು ಎಡವಿರುವುದು ಸ್ಪಷ್ಟವಾಗಿದ್ದು, ಕೂಲಿಕಾರ್ವಿುಕರ ಮನೆಗೆ ಹೋಗಿ ಕೆಲಸಕ್ಕೆ ಕರೆತರಬೇಕಾದ ದುಸ್ಥಿತಿ ಎದುರಾಗಿದೆ ಎಂದು ಅಧಿಕಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ಹುಬ್ಬಳ್ಳಿ ತಾಲೂಕು ಬರಪೀಡಿತ ಪ್ರದೇಶವೆಂದು ಘೊಷಣೆಯಾದ ಬಳಿಕ ನರೇಗಾ ಕಾಮಗಾರಿ ಶುರುವಾಗಿವೆ. ಡಿಸೆಂಬರ್ ತಿಂಗಳು ಆರಂಭದಲ್ಲಿ ಎಲ್ಲ ಕಡೆ ಕೆಲಸ ನಡೆದಿವೆ. ವಾರ್ಷಿಕ ಗುರಿಯೂ ತಲುಪಲಾಗುವುದು.

| ಎಂ.ಎಂ. ಸವದತ್ತಿ ಹುಬ್ಬಳ್ಳಿ ತಾಪಂ ಇಒ