ನರೇಗಲ್ಲ ಪಟ್ಟಣಕ್ಕೆ ನೀರು ಕೊಡಿ

ನರೇಗಲ್ಲ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನರೇಗಲ್ಲ ಪಟ್ಟಣಕ್ಕೆ ನೀರು ಪೂರೈಸಬೇಕು ಎಂದು ಪ.ಪಂ. ಸದಸ್ಯರು ಶನಿವಾರ ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ಪ.ಪಂ. ಸದಸ್ಯ ದಾವುದ್ ಅಲಿ ಕುದರಿ ಮಾತನಾಡಿ, ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆರಂಭಿಸುವಾಗಲೇ ನರೇಗಲ್ಲ ಪಟ್ಟಣಕ್ಕೆ ನೀರು ಪೂರೈಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಯೋಜನೆಯನ್ನು ಗ್ರಾಮ ಮಟ್ಟಕ್ಕೆ ಮಾತ್ರ ರೂಪಿಸಲಾಗಿದ್ದು, ಪಟ್ಟಣಗಳಿಗೆ ನೀರು ಪೂರೈಕೆ ಅಸಾಧ್ಯ ಎಂದು ಹೇಳಿ ಈಗ ಗಜೇಂದ್ರಗಡ ಹಾಗೂ ರೋಣ ನಗರಗಳಿಗೆ ನೀರು ಪೊರೈಕೆ ಮಾಡುವ ಮೂಲಕ ನರೇಗಲ್ಲ ಪಟ್ಟಣಕ್ಕೆ ಅನ್ಯಾಯ ಮಾಡಲಾಗಿದೆ. ಸಚಿವ ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನರೇಗಲ್ಲಕ್ಕೆ ಬಹುಗ್ರಾಮ ಕುಡಿಯುವ ನೀರು ಪೂರೈಸುವ ಬಗ್ಗೆ ಭರವಸೆ ನೀಡಲಾಗಿತ್ತು. ಆದರೆ, ಇದು ಆಶ್ವಾಸನೆಯಾಗಿಯೇ ಉಳಿದಿದೆ. ವಾರ್ಡ್​ಗಳಲ್ಲಿ ಜನರ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವಾಗದಂತಾಗಿದೆ’ ಎಂದರು.

ಸದಸ್ಯ ಶ್ರೀಶೈಲಪ್ಪ ಬಂಡಿಹಾಳ ಮಾತನಾಡಿ, ಅಂತರ್ಜಲ ಕುಸಿತದಿಂದಾಗಿ ಕೊಳವೆ ಬಾವಿಗಳು ಬರಿದಾಗಿವೆ. ಇರುವ ಕೊಳವೆ ಬಾವಿಗಳಲ್ಲಿ ಫ್ಲೋರೈಡ್ ಅಂಶ ಇರುವುದರಿಂದ ಕುಡಿಯಲು ಯೋಗ್ಯವಾಗಿಲ್ಲ. ಗಜೇಂದ್ರಗಡ ಹಾಗೂ ರೋಣ ಪಟ್ಟಣಗಳ ಅಭಿವೃದ್ಧಿಯಲ್ಲಿ ನರೇಗಲ್ಲ ಪಟ್ಟಣವನ್ನು ಕಡೆಗಣಿಸಲಾಗುತ್ತಿದ್ದು, ಮಲತಾಯಿ ಧೋರಣೆ ಮಾಡಲಾಗುತ್ತಿದೆ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ನರೇಗಲ್ಲ ಪಟ್ಟಣಕ್ಕೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪಟ್ಟಣವನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುತ್ತದೆ ಎಂದರು.

ತಹಸೀಲ್ದಾರ್ ಗುರುಸಿದ್ದಯ್ಯ ಮಾತನಾಡಿ, ಪಟ್ಟಣದಲ್ಲಿ ನೀರಿನ ಅಭಾವವಾಗದಂತೆ ಎಲ್ಲ ರೀತಿಯ ಕ್ರಮ ಕೈಗೋಳ್ಳಲಾಗಿದೆ. ಬಹು ಗ್ರಾಮ ಕುಡಿಯುವ ಯೋಜನೆಯಿಂದ ನೀರು ಲಭ್ಯವಾದರೆ ಮತ್ತಷ್ಟು ಸಹಕಾರಿಯಾಗಲಿದೆ. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ರ್ಚಚಿಸಲಾಗುತ್ತದೆ ಎಂದರು.

ರಾಚಯ್ಯ ಮಾಲಗಿತ್ತಿಮಠ, ಈರಪ್ಪ ಜೋಗಿ, ಮುತ್ತಪ್ಪ ನೂಲ್ಕಿ, ಮಲ್ಲಿಕಾರ್ಜುನಗೌಡ ಬೂಮನಗೌಡ್ರ, ಮಲ್ಲಿಕಸಾಬ ರೋಣದ, ಕುಮಾರಸ್ವಾಮಿ ಕೋರಧಾನ್ಯಮಠ, ಜ್ಯೋತಿ ಪಾಯಪ್ಪಗೌಡ್ರ, ಅಕ್ಕಮ್ಮ ಮಣ್ಣವಡ್ಡರ, ಸುಮಿತ್ರಾ ಕಮಲಾಪೂರ, ಮಂಜುಳಾ ಹುರಳಿ, ವಿಜಯಕ್ಷ್ಮಿ , ಬಸಿರಾಬಾನು ನದಾಫ್, ವಿಶಾಲಾಕ್ಷಿ ಹೊಸಮನಿ, ಯಲ್ಲಪ್ಪ ಮಣ್ಣವಡ್ಡರ, ಮೌನೇಶ ಹೊಸಮನಿ, ಮಂಜುನಾಥ ಕಮಲಾಪೂರ, ಚನ್ನಪ್ಪ ಮಾಳವಾಡ ಇತರರಿದ್ದರು.

Leave a Reply

Your email address will not be published. Required fields are marked *