ನರೇಂದ್ರ ಮೋದಿಯಿಂದ ದೇಶದ ಗೌರವ ಹೆಚ್ಚಳ

ಶಿವಮೊಗ್ಗ: ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶ ಹಾಗೂ ಸ್ತ್ರೀಯರ ಗೌರವ ಹೆಚ್ಚಿದೆ. ಮಹಿಳೆಯರ ಆತ್ಮಗೌರವ ಹೆಚ್ಚಿಸುವಲ್ಲಿ ಕೇಂದ್ರದ ಬಯಲು ಶೌಚಮುಕ್ತ ಯೋಜನೆಯೂ ಒಂದಾಗಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಸೇನೆಯಲ್ಲಿ ಮಹಿಳೆಯರ ನೇಮಕಾತಿ ಮಾಡಿಕೊಳ್ಳಲಾಗಿದೆ. ಇಂದು ಭೂ, ವಾಯು ಹಾಗೂ ನೌಕಾ ಸೇನೆಯಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಪ್ರಾಧಾನ್ಯತೆ ನೀಡಲಾಗಿದೆ. ಸ್ತ್ರೀಯರ ಹಾಗೂ ಬಡವರ ಸಶಕ್ತೀಕರಣಕ್ಕಾಗಿ ಕೇಂದ್ರ ಸರ್ಕಾರ ಮುದ್ರಾ ಯೋಜನೆ ಜಾರಿಗೆ ತಂದಿದೆ ಎಂದರು.

ಆತ್ಮಾಹುತಿ ದಾಳಿಗಾಗಿ ಉಗ್ರರಿಗೆ ತರಬೇತಿ ನೀಡಲು ಬಾಲ್​ಕೋಟ್​ನಲ್ಲಿ ಸಿದ್ಧತೆ ಮಾಡಿಕೊಂಡಿತ್ತು. ಇದಕ್ಕಾಗಿ ಅಲ್ಲಿನ ಮದರಸಾದಲ್ಲಿ ಸಂಘಟನೆಯ ಪ್ರಮುಖರು ಸೇರಿಕೊಂಡಿದ್ದಾರೆಂಬ ಖಚಿತ ಮಾಹಿತಿ ಇತ್ತು. ಹಾಗಾಗಿ ನಿಖರ ದಾಳಿ ನಡೆಸಲಾಯಿತು ಎಂದು ತಿಳಿಸಿದರು. ಬಾಲ್​ಕೋಟ್ ಮೇಲಿನ ದಾಳಿ ಹಾಗೂ ಸೇನೆಯನ್ನು ನಾವು ರಾಜಕೀಯ ವಿಚಾರಕ್ಕೆ ಬಳಸಿಕೊಳ್ಳುತ್ತಿದ್ದೇವೆಂಬ ಕಾಂಗ್ರೆಸ್ ಟೀಕೆಯಲ್ಲಿ ಯಾವುದೇ ಅರ್ಥವಿಲ್ಲ ಎಂದು ತಿರುಗೇಟು ನೀಡಿದರು.

2008ರಲ್ಲಿ ಮುಂಬೈನಲ್ಲಿ ಉಗ್ರರ ದಾಳಿ ನಡೆದಾಗಲೇ ಅಂದಿನ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೆ 10 ವರ್ಷಗಳ ಕಾಲ ಭಯೋತ್ಪಾದಕ ಕೃತ್ಯಗಳಿಂದ ಪರಿತಪಿಸುವುದು ಬೇಕಿರಲಿಲ್ಲ. 1947ರಿಂದಲೂ ಪಾಕ್ ಪ್ರಚೋದಿತ ಉಗ್ರ ಕೃತ್ಯಗಳು ನಡೆಯುತ್ತಲೇ ಇವೆ. ಆದರೆ ಆಡಳಿತ ನಡೆಸಿದ ಸರ್ಕಾರಗಳು ಕಠೋರ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ. ಮೋದಿ ನೇತೃತ್ವದಲ್ಲಿ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ಸೈನಿಕರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮೋದಿ ಮಾಡಿದ್ದಾರೆ ಎಂದು ಹೇಳಿದರು.

ಮೋದಿ ಮಾಣಿಕ್ಯವಿದ್ದಂತೆ:ನರೇಂದ್ರ ಮೋದಿ ಮಾಣಿಕ್ಯವಿದ್ದಂತೆ. ಎಲ್ಲ ದೇಶಗಳಲ್ಲೂ ಇಂಥವರು ಯಾವಾಗಲೂ ಸಿಗುವುದಿಲ್ಲ. ಈಗ ಸಿಕ್ಕಿದ್ದಾರೆ. ಇಂಥವರನ್ನು ಉಳಿಸಿಕೊಳ್ಳಬೇಕು. ಅದಕ್ಕೋಸ್ಕರ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ಪ್ರಧಾನಿ ಮೋದಿ ತಮ್ಮನ್ನು ಪ್ರಧಾನ ಸೇವಕ ಎಂದು ಹೇಳಿಕೊಳ್ಳುತ್ತಾರೆ. ಮತ್ತೊಮ್ಮೆ ಮೋದಿ ಏಕೆ ಬೇಕು? ದೇಶಕ್ಕೆ ಅವರ ಅವಶ್ಯಕತೆಯೇನು? ಎಂಬುದನ್ನು ಮನನ ಮಾಡಿಕೊಳ್ಳಲು ಇದು ಸಕಾಲ ಎಂದು ಹೇಳಿದರು.

2014ರಲ್ಲಿ ನಾವು ಅಧಿಕಾರಕ್ಕೆ ಬಂದಾಗ ಬೇಳೆ ಕಾಳುಗಳ ಬೆಲೆ ಗಗನಕ್ಕೇರಿತ್ತು. ತೊಗರಿಬೇಳೆ ಕೆಜಿಗೆ 150 ರೂ. ಇತ್ತು. ದೇಶದ ವಾರ್ಷಿಕ ಬೇಡಿಕೆ 23 ಲಕ್ಷ ಟನ್ ಬೇಳೆಕಾಳು ಆಗಿದ್ದರೆ, ನಮ್ಮ ಉತ್ಪಾದನೆ 17 ಲಕ್ಷ ಟನ್ ಆಗಿತ್ತು. ಅದುವರೆಗಿನ ಸರ್ಕಾರಗಳು ರೈತರಿಗೆ ಪ್ರೋತ್ಸಾಹ ನೀಡದ ಕಾರಣ ಉತ್ಪಾದನೆ ಕುಸಿದಿತ್ತು. ಮೋದಿ ಅಧಿಕಾರಕ್ಕೆ ಬಂದ ಬಳಿಕ ಅಗತ್ಯ ಬೇಳೆ ಕಾಳುಗಳ ಆಮದಿಗೆ ಕ್ರಮ ಕೈಗೊಂಡರು. ರೈತರಿಗೆ ಪ್ರೋತ್ಸಾಹ ನೀಡಿದರು ಎಂದು ವಿವರಿಸಿದರು.

ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ, ಕ್ಷೇತ್ರ ಪ್ರಭಾರಿ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಕೆ.ಎಸ್.ಈಶ್ವರಪ್ಪ, ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಅಶೋಕ ನಾಯ್ಕ, ಎಂಎಲ್​ಸಿ ತೇಜಸ್ವಿನಿಗೌಡ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಜಿಲ್ಲಾಧ್ಯಕ್ಷೆ ಪದ್ಮಿನಿ, ಮೇಯರ್ ಲತಾ ಗಣೇಶ್, ಡಿ.ಎಸ್.ಅರುಣ್, ಟಿ.ಡಿ.ಮೇಘರಾಜ್, ಗುರುಮೂರ್ತಿ, ಎಸ್.ದತ್ತಾತ್ರಿ ಇತರರಿದ್ದರು.

2047ಕ್ಕೆ ಭಾರತ ಅಭಿವೃದ್ಧಿ:2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 100 ವರ್ಷ ಪೂರ್ಣಗೊಳ್ಳಲಿದೆ. ಆ ಸಂದರ್ಭದಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶದ ಸ್ಥಾನ ಪಡೆಯಬೇಕು. 2022ಕ್ಕೆ ಪ್ರತಿಯೊಬ್ಬರೂ ಸೂರು ಹೊಂದಬೇಕು. ರೈತರ ಆದಾಯ ದ್ವಿಗುಣವಾಗಬೇಕೆಂಬುದು ಪ್ರಧಾನಿ ಮೋದಿ ಆಶಯ. ಕೇವಲ ಯೋಜನೆಗಳನ್ನು ಘೊಷಣೆ ಮಾಡುವುದು ಮಾತ್ರವಲ್ಲ, ಅವುಗಳನ್ನು ಅನುಷ್ಠಾನ ಮಾಡುವ ತಾಕತ್ತು ಇರುವ ನೇತಾರ ಮೋದಿ ಎಂದು ನಿರ್ಮಲಾ ಸೀತಾರಾಮನ್ ಬಣ್ಣಿಸಿದರು. ಕಾಂಗ್ರೆಸ್​ಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಬಡವರ ನೆನಪಾಗುತ್ತದೆ. 1971ರಲ್ಲಿ ಇಂದಿರಾಗಾಂಧಿ ಗರೀಬಿ ಹಠಾವೋ ಘೊಷಣೆ ಮಾಡಿದರು. ಆದರೆ ಮನಮೋಹನ್ ಸಿಂಗ್ ಆಡಳಿತದಲ್ಲೂ ಬಡತನ ನಿಮೂಲನೆಯಾಗಿಲ್ಲ. ಅಜ್ಜಿ ಕಾಲದಿಂದಲೂ ಇರುವ ದೇಶದ ಬಡವರ ಸಮಸ್ಯೆ ದೂರ ಮಾಡಲು ‘ನ್ಯಾಯ್’ ಯೋಜನೆ ರೂಪಿಸಿರುವುದಾಗಿ ರಾಹುಲ್ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಮೋದಿ ಪರ ಜನಪ್ರವಾಹ:ಎಲ್ಲೆಡೆ ಮೋದಿ ಪರವಾಗಿ ಜನಪ್ರವಾಹವೇ ಹರಿದುಬರುತ್ತಿದೆ. ಬೈಂದೂರು ಕ್ಷೇತ್ರದ 22 ಯುವಕರು ಮತದಾನ ಮಾಡಲು ಸ್ವಂತ ಖರ್ಚಿನಲ್ಲಿ ಸೌದಿಯಿಂದ ಆಗಮಿಸುವುದಾಗಿ ಹೇಳಿದ್ದಾರೆ. ಇದು ಮೋದಿ ಜನಪ್ರಿಯತೆಗೆ ಸಾಕ್ಷಿ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು. ಕೇಂದ್ರ ಸರ್ಕಾರ ಎಲ್ಲ ವರ್ಗದ ಜನರಿಗೆ ಯೋಜನೆಗಳನ್ನು ರೂಪಿಸಿದೆ. ಫಲಾನುಭವಿಗಳಿಗೆ ನೇರವಾಗಿ ಪ್ರಯೋಜನ ಸಿಗುವಂತೆ ನೋಡಿಕೊಂಡಿದೆ. ದೇಶಕ್ಕೆ ಮತ್ತೊಮ್ಮೆ ಮೋದಿ ಆಳ್ವಿಕೆ ಅವಶ್ಯಕತೆಯಿದೆ. ಇದನ್ನು ಎಲ್ಲರಿಗೂ ತಿಳಿಸುವ ಕೆಲಸ ಆಗಬೇಕು ಎಂದರು.

ಮುಖಂಡರು, ಕಾರ್ಯಕರ್ತರ ಫೋಟೋ ಕ್ರೇಜ್:ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜತೆ ಫೋಟೋ ತೆಗೆಸಿಕೊಳ್ಳಲು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮುಗಿಬಿದ್ದರು. ವೇದಿಕೆ ಮೇಲೆ ಕೆಲವರು ಸೆಲ್ಪಿಗೆ ಮೊರೆ ಹೋದರು. ಸಭಾ ಕಾರ್ಯಕ್ರಮದ ಬಳಿಕ ಶಾಸಕ ಕೆ.ಎಸ್.ಈಶ್ವರಪ್ಪ ಕುಟುಂಬ ಸಮೇತರಾಗಿ ನಿರ್ಮಲಾ ಸೀತಾರಾಮನ್ ಜತೆಗೆ ಫೋಟೋಗೆ ಫೋಸ್ ನೀಡಿದರು. ಬಿ.ವೈ.ರಾಘವೇಂದ್ರ ಪತ್ನಿ ಹಾಗೂ ಸಹೋದರಿಯರೊಂದಿಗೆ ಫೋಟೋ ತೆಗೆಸಿಕೊಂಡರು.