ನರಗುಂದ ಬಂದ್​ಗೆ ಉತ್ತಮ ಪ್ರತಿಕ್ರಿಯೆ

ನರಗುಂದ: ಮಂಗಳವಾರ ಕರೆ ನೀಡಿದ್ದ ನರಗುಂದ ಬಂದ್​ಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗ್ಗೆಯಿಂದ ರೈತ ಹೋರಾಟಗಾರರು ರಸ್ತೆ, ಅಂಗಡಿ ಮುಂಗ್ಗಟ್ಟು ಬಂದ್ ಮಾಡಿಸಲಿಲ್ಲ. ವ್ಯಾಪಾರಸ್ಥರೇ ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗ್ಗಟ್ಟು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ನೀಡಿದರು.

ತರಕಾರಿ ಮಾರುಕಟ್ಟೆ, ಶಾಲೆ-ಕಾಲೇಜ್​ಗಳು, ಸರ್ಕಾರಿ ಕಚೇರಿಗಳು ಬಂದಾಗಿದ್ದವು. ಬೆಳಗ್ಗೆಯಿಂದ ಬಸ್ ಸಂಚಾರವಿಲ್ಲದೆ ಬಸ್ ನಿಲ್ದಾಣ, ಜನರಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಇದರಿಂದ ಬೇರೆ ಊರಿಗೆ ತೆರಳುವ ಪ್ರಯಾಣಿಕರು ತೊಂದರೆ ಅನುಭವಿಸಿದರು. ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶಸ್ವಾಮಿ ಸೊಬರದಮಠ ನೇತೃತ್ವದಲ್ಲಿ ಪುರಸಭೆಯಿಂದ ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ಶಿವಾಜಿ ವರ್ತಲವರೆಗೆ ಪ್ರತಿಭಟನಾ ರ‍್ಯಾಲಿ ನಡೆಯಿತು. ಪ್ರತಿಭಟನಾಕಾರರು ಕೆಲಕಾಲ ರಸ್ತೆ ಸಂಚಾರ ತಡೆ ನಡೆಸಿ ಜೈ ಜವಾನ್, ಜೈ ಕಿಸಾನ್ ಎಂಬ ಘೊಷಣೆ ಕೂಗಿದರು.

ಮಹಿಳಾ ಹೋರಾಟಗಾರರು ಒಂದೇ ತರಹದ ಹಸಿರು ಬಣ್ಣದ ಸೀರೆ ಉಟ್ಟಿದ್ದರು. ದಲಿತ ಮುಖಂಡ ಕೃಷ್ಣಪ್ಪ ಜೋಗಣ್ಣವರ ಸಂಗೊಳ್ಳಿ ರಾಯಣ್ಣನ ವೇಷ ಧರಿಸಿ ಕುದರೆ ಮೇಲೆ ಕುಳಿತಿದ್ದು ಎಲ್ಲರ ಗಮನ ಸೆಳೆಯಿತು.

ಮುಂಜಾಗ್ರತೆ ಕ್ರಮವಾಗಿ ಪಟ್ಟಣದಲ್ಲಿ ಬೆಳಗ್ಗೆ 5ರಿಂದ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ರಾಜ್ಯಪಾಲರ ಭೇಟಿಗೆ ಮನವಿ

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸರ್ಕಾರದೊಂದಿಗೆ ರ್ಚಚಿಸಿ ರಾಜ್ಯಪಾಲರ ಭೇಟಿಗೆ ದಿನಾಂಕ ನಿಗದಿಪಡಿಸಿ 50 ರೈತರ ನಿಯೋಗ ಕೊಂಡೊಯ್ಯಲು ಅವಕಾಶ ನೀಡಬೇಕು. ರಾಜ್ಯಪಾಲರಿಗೆ ಮಹದಾಯಿ ಯೋಜನೆಯ ಸಮಗ್ರ ವರದಿ ನೀಡಬೇಕಾಗಿದೆ. 8 ದಿನದೊಳಗೆ ಅವರ ಭೇಟಿಗೆ ದಿನಾಂಕ ನಿಗದಿಗೊಳಿಸದಿದ್ದಲ್ಲಿ ರಾಜಭವನ ಚಲೋ ಹಮ್ಮಿಕೊಳ್ಳಲಾಗುವುದು ಎಂದು ರೈತ ಹೋರಾಟಗಾರರು ಮನವಿಯಲ್ಲಿ ತಿಳಿಸಿದ್ದಾರೆ.

ಪ್ರಾಣ ಹೋದರೂ ಹೋರಾಟ ಬಿಡಲ್ಲ

ಮಹದಾಯಿ-ಮಲಪ್ರಭೆ ನದಿ ಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ನಾಲ್ಕು ವರ್ಷಗಳಿಂದ ನಡೆದ ನಿರಂತರ ಹೋರಾಟವನ್ನು 1300ಕ್ಕೂ ಅಧಿಕ ಸಂಘಟನೆಗಳು ಬೆಂಬಲಿಸಿವೆ. ಆದರೆ, ಹೋರಾಟವನ್ನು ಎಲ್ಲೋ ಒಂದು ಕಡೆ ವ್ಯವಸ್ಥಿತವಾಗಿ ಕಗ್ಗೊಲೆ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ಪ್ರಾಣ ಹೋದರೂ ಸರಿ, ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ರೈತಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶಸ್ವಾಮಿ ಸೊಬರದಮಠ ಹೇಳಿದರು.

ಮಹದಾಯಿ-ಮಲಪ್ರಭೆ ನದಿ ಜೋಡಣೆಗೆ ಆಗ್ರಹಿಸಿ ನಡೆಸಿದ ಹೋರಾಟ ಮಂಗಳವಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ 1461ನೇ ದಿನದ ನಿರಂತರ ಹೋರಾಟ ವೇದಿಕೆಯಲ್ಲಿ ಬಂದ್ ಕರೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಐದು ವರ್ಷಗಳಿಂದ ನಡೆದ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದ ಮೂಲ ಹೋರಾಟಗಾರರು ಚುನಾವಣೆಗೆ ನಿಲ್ಲುತ್ತಾರೆಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿ ವೇದಿಕೆಯಿಂದ ದೂರ ಮಾಡಿದ್ದಾರೆ. ಮಹದಾಯಿ ನೀರು ಬರುವುದಿಲ್ಲ ಎಂಬ ಸಂಶಯವನ್ನು ರೈತರು ಕೈಬಿಡಬೇಕು. ನೀರಿಗಾಗಿ ನಡೆದ ಈ ಹೋರಾಟದಲ್ಲಿ ಇದುವರೆಗೂ ರಾಜ್ಯದ ವಿವಿಧೆಡೆ 12 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ನೀರು ತರಲೇಬೇಕಾಗಿದೆ. ಹೋರಾಟದ ಪ್ರತಿಫಲವಾಗಿ ನ್ಯಾಯಾಧಿಕರಣ 13.5 ಟಿಎಂಸಿ ನೀರು ಬಳಕೆಗೆ ಆದೇಶಿಸಿದೆ. ರಾಜ್ಯ, ಕೇಂದ್ರ ಸರ್ಕಾರದ ಸಮನ್ವಯತೆ ಕೊರತೆಯಿಂದಾಗಿ ಯೋಜನೆಗೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಹಿನ್ನಡೆಯಾಗಿದೆ ಎಂದು ದೂರಿದರು.

ಉತ್ತರ ಕರ್ನಾಟಕದ 45 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗವಿಲ್ಲದೆ ಬೆಂಗಳೂರಿಗೆ ವಲಸೆ ಹೋಗಿದ್ದಾರೆ. ಮಹದಾಯಿ ನೀರು ಬಂದರೆ ನಿರುದ್ಯೋಗ ಸಮಸ್ಯೆ ಪರಿಹಾರವಾಗಲಿದೆ ಎಂದು ತಿಳಿಸಿದರು.

ರೈತ ಮುಖಂಡ ಶಿವಕುಮಾರ ಮೇಟಿ ಮಾತನಾಡಿ, ರೈತರ ಜ್ವಲಂತ ಸಮಸ್ಯೆಗಳನ್ನು ಕೇಳದ ರಾಜ್ಯದ ಶಾಸಕರು, ಎಂಎಲ್ಸಿಗಳು, ಸಂಸದರು ನಮ್ಮ ಪಾಲಿಗೆ ಸತ್ತಿದ್ದಾರೆ. ಜು. 17ರಂದು ಬೆಂಗಳೂರಿನ ವಿಧಾನಸೌಧದ ಎದುರಿಗೆ ಸಾವನ್ನಪ್ಪಿದ ಜನಪ್ರತಿನಿಧಿಗಳಿಗೆ ಶ್ರದ್ಧಾಂಜಲಿ ಅರ್ಪಿಸಿ ತಿಥಿ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ರೈತ ಮುಖಂಡರಾದ ಮುತ್ತಣ್ಣ ಕುರಿ, ವಿಶ್ವನಾಥ ಗುಡಿಸಾಗರ, ಬಸವರಾಜ ದಿಂಡೂರ, ವೀರಬಸಪ್ಪ ಹೂಗಾರ, ಫಕೀರಪ್ಪ ಜೋಗಣ್ಣವರ ಮಾತನಾಡಿದರು.

ರಾಘವೇಂದ್ರ ಗುಜಮಾಗಡಿ ಈರಬಸಪ್ಪ ಹೂಗಾರ, ಅರ್ಜುನ ಮಾನೆ, ವಾಸು ಚವ್ಹಾಣ, ನಾಗರತ್ನಾ ಸವಳಬಾವಿ, ಅನಸಮ್ಮ ಶಿಂಧೆ, ಚನ್ನಮ್ಮ ಕರ್ಜಗಿ, ಕರವೇ ಅಧ್ಯಕ್ಷ ನಬಿಸಾಬ್ ಕಿಲ್ಲೇದಾರ, ಎಚ್.ಎಚ್. ಮಜ್ಜಿಗುಡ್ಡ, ಶಾಂತಸ್ವಾಮಿ ಮಠ, ಕೆ.ಎಂ. ಬಡಿಗೇರ, ಬಡಲಾಗಪುರ ನಾಗೇಂದ್ರ, ಯಲ್ಲಪ್ಪ ಶೆಟ್ಟಗಾರ, ಗಂಗಣ್ಣ ಈರೇಶನವರ, ಶಿವಪ್ಪ ಹೊರಕೇರಿ, ಎ.ಪಿ. ಪಾಟೀಲ, ತಿಪ್ಪಣ್ಣ ಮೇಟಿ, ಅಶೋಕ ಸಾತನ್ನವರ, ಆರ್.ಎನ್. ಪಾಟೀಲ, ಇದ್ದರು.

Leave a Reply

Your email address will not be published. Required fields are marked *