ನರಗುಂದದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಿನ್ನಡೆ

ರಾಜು ಹೊಸಮನಿ ನರಗುಂದ

ಅರಣ್ಯ ಸಚಿವ ಸಿ.ಸಿ. ಪಾಟೀಲ ಅವರ ಸ್ವಕ್ಷೇತ್ರದಲ್ಲಿ ಆಕರ್ಷಕ ಪ್ರವಾಸಿ ತಾಣಗಳಾಗಿ ನಿರ್ವಣವಾಗಬೇಕಿದ್ದ ಹೈಟೆಕ್ ಟ್ರೀ ಪಾರ್ಕ್, ನರಗುಂದ ಗುಡ್ಡದ ಅರಣ್ಯೀಕರಣ, ಬಾಬಾ ಸಾಹೇಬರ ಕುರುಹುಗಳ ಸ್ಮಾರಕ ಕಾಮಗಾರಿಗಳು ಅನುದಾನ ಕೊರತೆಯಿಂದ ನನೆಗುದಿಗೆ ಬಿದ್ದಿವೆ. ನರಗುಂದವನ್ನು ಪ್ರವಾಸಿ ತಾಣವಾಗಿ ರೂಪಿಸುವ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ.

2016-2017ರಲ್ಲಿ ಪ್ರಾದೇಶಿಕ ವಲಯ ಅರಣ್ಯ ಇಲಾಖೆ, ಪ್ರವಾಸೋದ್ಯಮ, ತೋಟಗಾರಿಕೆ, ಹಟ್ಟಿ ಚಿನ್ನದ ಗಣಿ ನಿಗಮ, ಸ್ಥಳೀಯ ಪುರಸಭೆ ಅನುದಾನ ಸೇರಿ 7 ಕೋಟಿ ರೂ. ವೆಚ್ಚದಲ್ಲಿ ಪ್ರಾಕೃತಿಕ ಸಂಪತ್ತು ಹೆಚ್ಚಿಸಲು ನರಗುಂದ ಗುಡ್ಡದಲ್ಲಿ 1 ಕೋಟಿ ಸಸಿಗಳನ್ನು ನೆಡುವ ಯೋಜನೆಗೆ ಅರಣ್ಯ ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಅವರು ಚಾಲನೆ ನೀಡಿದ್ದರು.

ಯಾವ್ಯಾವ ಕಾಮಗಾರಿಗಳು?: ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಕೆಂಪಕೇರಿಯಲ್ಲಿ ನಡುಗಡ್ಡೆ ನಿರ್ವಿುಸಿ ಪ್ರವಾಸಿಗರಿಗೆ ಬೋಟಿಂಗ್ ವ್ಯವಸ್ಥೆ, ಸುಸಜ್ಜಿತ ಉದ್ಯಾನ, ಗುಡ್ಡದ ಬದಿ ಮಕ್ಕಳ ಉದ್ಯಾನ, ಟ್ರೀ ಪಾರ್ಕ್ ಮತ್ತು ಗುಡ್ಡಕ್ಕೆ ಸಾಗುವ ರಸ್ತೆಗೆ ಬೃಹತ್ ಸ್ವಾಗತ ಕಮಾನುಗಳ ಪರಗೋಲು, ಗುಡ್ಡದ ಮೇಲೆ ಮೊದಲಿದ್ದ ಬಾಬಾಸಾಹೇಬರ ಕಾಲದ ಕುರುಹುಗಳನ್ನು ಸ್ಮರಿಸುವ ಮದ್ದು ಗುಂಡುಗಳ ಸಂಗ್ರಹದ ಕೊಠಡಿ, ನೀರಿನ ಹೊಂಡ, ಸೈನಿಕರ ಕೋಣೆ ಮೊದಲಾದವುಗಳನ್ನು ನಿರ್ವಿುಸಿ, ಪ್ರವಾಸಿಗರನ್ನು ಆಕರ್ಷಿಸುವ ಹಾಗೂ ನರಗುಂದ ಇತಿಹಾಸ ಸ್ಮರಿಸುವ ಮಹತ್ವದ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಇದಕ್ಕಾಗಿ ಸರ್ಕಾರಕ್ಕೆ 7 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದರು. ಈ ಪೈಕಿ ಪ್ರಾದೇಶಿಕ ಅರಣ್ಯ ಇಲಾಖೆಯಿಂದ 48 ಲಕ್ಷ ರೂ., ಹಟ್ಟಿ ಚಿನ್ನದ ಗಣಿ ನಿಗಮದಿಂದ 50 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿತ್ತು. ಆದರೆ, 2018ರ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಯಲ್ಲಿ ಬಿ.ಆರ್. ಯಾವಗಲ್ಲ ಸೋತರು. ಅನಂತರ ಬದಲಾದ ಸರ್ಕಾರದಲ್ಲಿ ವಿವಿಧ ಇಲಾಖೆಯಿಂದ ಬರಬೇಕಾಗಿದ್ದ ಅನುದಾನ ಬಿಡುಗಡೆ ಯಾಗದೆ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ.

98 ಲಕ್ಷ ರೂ. ಮಾತ್ರ ಬಿಡುಗಡೆ: ಪ್ರಾದೇಶಿಕ ಅರಣ್ಯ ಇಲಾಖೆಯಿಂದ 2017ರಲ್ಲಿ ವಿವಿಧ ಇಲಾಖೆಗೆ 7 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪೈಕಿ 98 ಲಕ್ಷ ರೂ. ಮಾತ್ರ ಬಿಡುಗಡೆಯಾಗಿದೆ. ಇದರಲ್ಲಿ ಗುಡ್ಡದ ಮೇಲೆ ಕಬ್ಬಿಣದ ಗ್ರಿಡ್, ಗುಡ್ಡದ ಬಳಿ 1 ಬೋರ್​ವೆಲ್, ಪ್ರವಾಸಿಗರು ಕುಳಿತುಕೊಳ್ಳಲು 2 ಪ್ಯಾರಾಗೇಲ್, 1 ಭದ್ರತಾ ಕೊಠಡಿ, 1 ಟಿಕೆಟ್ ಕೌಂಟರ್ ರೂಂ, ಪುರುಷ ಮತ್ತು ಮಹಿಳೆಯರಿಗಾಗಿ 2 ಶೌಚಗೃಹ, 2 ಗೇಟ್ ಅಳವಡಿಕೆ, ವಿವಿಧ ಜಾತಿಯ 1200 ಸಸಿಗಳನ್ನು ನೆಡಲಾಗಿದೆ. 10 ಸಿಮೆಂಟ್ ಆಸನಗಳು, ವಿವಿಧ ಪ್ರಾಣಿ, ಪಕ್ಷಿಗಳ ಮಾಹಿತಿಯುಳ್ಳ ಬೋರ್ಡ್​ಗಳು ಈಗ ಬಂದಿವೆ. ಗಾರ್ಡನ್, ಪುಟ್ಟ ಮಕ್ಕಳಿಗಾಗಿ ಜೋಕಾಲಿ, ಜಾರುಗುಂಡಿ ಮತ್ತಿತರ ಅಭಿವೃದ್ಧಿ ಕಾಮಗಾರಿ ಆಗಿಲ್ಲ. ಹಾಗಾಗಿ ಅವುಗಳನ್ನು ಅಳವಡಿಸಿಲ್ಲ.

| ಸತೀಶ ಮಾಲಾಪೂರ, ಪ್ರಾದೇಶಿಕ ಉಪವಲಯ ಅರಣ್ಯಾಧಿಕಾರಿ ನರಗುಂದ

ನರಗುಂದ ಗುಡ್ಡವನ್ನು ಅರಣ್ಯೀಕರಣಗೊಳಿಸಿ, ಹೈಟೆಕ್ ಪ್ರವಾಸಿಗರ ತಾಣವಾಗಿಸುವ ಯೋಜನೆಗೆ ಪುರಸಭೆಯಿಂದ 50 ಲಕ್ಷ ರೂ. ಅನುದಾನ ನೀಡುವುದಾಗಿ ತಿಳಿಸಿದ್ದೇವು. ಆದರೆ, ಹಣದ ಕೊರತೆಯಿಂದಾಗಿ ಅದನ್ನು ನೀಡಲು ಸಾಧ್ಯವಾಗಿಲ್ಲ. ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ ಅವರು ಅರಣ್ಯ ಸಚಿವರಾಗಿರುವುದರಿಂದ ಈ ಯೋಜನೆ ಕೈಗೆತ್ತಿಕೊಳ್ಳಲು ಎರಡು ಬಾರಿ ಮನವಿ ಮಾಡಲಾಗಿದೆ. ಸಕಾರಾತ್ಮಕವಾಗಿ ಸ್ಪಂದಿಸಿದ ಅವರು ಅನುದಾನ ನೀಡುವ ಭರವಸೆ ನೀಡಿದ್ದಾರೆ.

| ಎನ್.ಎಸ್. ಪೆಂಡಸೆ, ಮುಖ್ಯಾಧಿಕಾರಿ, ನರಗುಂದ ಪುರಸಭೆ

Leave a Reply

Your email address will not be published. Required fields are marked *