ನರಗುಂದದಲ್ಲಿ ಕೋಟಿ ಜಪಯಜ್ಞ ನಾಳೆಯಿಂದ

ನರಗುಂದ: ಲೋಕ ಕಲ್ಯಾಣಾರ್ಥವಾಗಿ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಜೂ. 14 ರಿಂದ ಜೂ. 22 ರವರೆಗೆ ಕೋಟಿ ಜಪಯಜ್ಞ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರ್ಯವೈಶ್ಯ ಸಮಾಜದ ತಾಲೂಕಾಧ್ಯಕ್ಷ ಅಶೋಕ ಗುಜಮಾಗಡಿ ತಿಳಿಸಿದರು.

ಕೋಟಿ ಜಪಯಜ್ಞ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯ ವೈಶ್ಯ ಸಮಾಜದವರಿಂದ ಬುಧವಾರ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ‘ಸಕಾಲಿಕವಾಗಿ ಮಳೆ ಬಾರದೇ ರೈತ ವಲಯ ತುಂಬಾ ತೊಂದರೆಗೆ ಸಿಲುಕಿದೆ. ದೇಶದಲ್ಲಿ ಶಾಂತಿ ಮತ್ತು ಸಮಾಧಾನಕರ ಸ್ಥಿತಿಗಳು ನೆಲೆಗೊಳ್ಳುವಂತೆ ಕೃಪೆ ತೋರಲು ಕೋಟಿ ಜಪಯಜ್ಞ ಕಾರ್ಯಕ್ರಮ ಮಾಡಲಾಗುತ್ತಿದೆ. ಜೂ.14 ರಿಂದ ಜೂ.22 ರವರೆಗೆ ಬೆಳಗ್ಗೆ 6.30 ರಿಂದ 8 ಗಂಟೆಯವರೆಗೆ ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಆರ್ಯ ವೈಶ್ಯ ಸಮಾಜ ಹಾಗೂ ಇತರೆ ಸಮಾಜದವರಿಂದ ಕೋಟಿ ಜಪಯಜ್ಞ ಕಾರ್ಯಕ್ರಮ ನಡೆಸಲು ನಿರ್ಣಯಿಸಲಾಗಿದೆ’ ಎಂದರು. ಜಪಯಜ್ಞ ಮುಕ್ತಾಯಗೊಂಡ ನಂತರ ಬೆಳಗ್ಗೆ 9 ಗಂಟೆಗೆ ಪಟ್ಟಣದ ನಗರೇಶ್ವರ ದೇವರ ಮೂರ್ತಿಗೆ ಜಲಾಭಿಷೇಕ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನಡೆಯಲಿದ್ದು, ಮಧ್ಯಾಹ್ನ ಅನ್ನ ಸಂತರ್ಪಣೆ ಜರುಗಲಿದೆ ಎಂದು ತಿಳಿಸಿದರು.

ವರ್ತಕ ಅಶೋಕ ಗುಜಮಾಗಡಿ ಮಾತನಾಡಿದರು. ಸಭೆಯಲ್ಲಿ ವಾಸವಿ ಯುವಜನ ಸಂಘದ ಅಧ್ಯಕ್ಷ ಗೋವಿಂದ ಇಂಗಳಳ್ಳಿ, ವಾಸವಿ ಮಹಿಳಾ ಮಂಡಳದ ಅಧ್ಯಕ್ಷೆ ಶಕುಂತಲಾ ಮಂಗನಹಳ್ಳಿ, ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ರಶ್ಮೀ ಆನೇಗುಂದಿ, ಸಂತೋಷ ಆನೇಗುಂದಿ, ಯಲ್ಲಣ್ಣ ಬೆಳಗಾವಿ, ವಾಸವಿ ಇಂಗಳಳ್ಳಿ, ವಾಸಣ್ಣ ಇಂಗಳಳ್ಳಿ, ಯಶವಂತ ಆನೇಗುಂದಿ, ಕೃಷ್ಣಮೂರ್ತಿ ಆನೇಗುಂದಿ, ವಿ.ಜಿ. ಗುಜಮಾಗಡಿ, ಶೇಷಣ್ಣ ಆನೇಗುಂದಿ, ಸುರೇಶ ಪಟ್ಟದಕಲ್ಲ, ಕಾಶೀನಾಥ ಪತ್ತೇಪೂರ, ಇತರರು ಉಪಸ್ಥಿತರಿದ್ದರು. ಮಂಜು ಬೆಳಗಾವಿ ಕಾರ್ಯಕ್ರಮ ನಿರ್ವಹಿಸಿದರು.