ನಮ್ಮ ಸಂಸದರಲ್ಲಿ ಒಂದು ಮನವಿ…

ಮಾತೃಭಾಷೆಗಳ ಉಳಿವಿಗೆ ಕಾಣುತ್ತಿರುವ ಭರವಸೆಯ ದಾರಿಯೆಂದರೆ ನಮ್ಮ ಸಂವಿಧಾನಕ್ಕೆ ತಿದ್ದುಪಡಿ ತರುವುದೊಂದೇ. ಆಗ ಮಾತ್ರ ಪ್ರಾಂತೀಯ ಭಾಷೆಗಳು ಶಿಕ್ಷಣಮಾಧ್ಯಮವಾಗಲು ಅಡ್ಡಿಮಾಡುತ್ತಿರುವ ಖಾಸಗಿ ಶಾಲೆಗಳ ಬಂಡವಾಳಶಾಹಿಗಳನ್ನು ಎದುರಿಸಲು ಸಾಧ್ಯ. ಪ್ರಾಂತೀಯ ಭಾಷೆಗಳು ಶಿಕ್ಷಣಮಾಧ್ಯಮವಾಗದಿದ್ದರೆ ಸಾಮಾಜಿಕ ಬದ್ಧತೆಯ ಉತ್ತಮ ಪ್ರಜೆಗಳನ್ನು ರೂಪಿಸುವುದೂ ಕಷ್ಟಸಾಧ್ಯ.

 ಫೆಬ್ರವರಿ 21ನ್ನು ಅಂತಾರಾಷ್ಟ್ರೀಯ ಮಾತೃಭಾಷಾ ದಿನವೆಂದು ಘೊಷಿಸಿ ಆಚರಿಸಬೇಕೆಂದು ಯುನೆಸ್ಕೊ 1999ರಲ್ಲಿ ತನ್ನ ಮಹಾಧಿವೇಶನದಲ್ಲಿ ನಿರ್ಣಯವನ್ನು ಅಂಗೀಕರಿಸಿತು. 2009ರಲ್ಲಿ ವಿಶ್ವಸಂಸ್ಥೆ ಮೇಲಿನ ನಿರ್ಣಯವನ್ನು ಅನುಮೋದಿಸುತ್ತ, ತಮ್ಮ ತಮ್ಮ ದೇಶಭಾಷೆಗಳನ್ನು ಸಂರಕ್ಷಿಸಿ ಪ್ರೋತ್ಸಾಹಿಸುವಂತೆ ತನ್ನ ಸದಸ್ಯ ರಾಷ್ಟ್ರಗಳಿಗೆಲ್ಲ ಕರೆನೀಡಿತು. ಇದಕ್ಕೆ ಕಾರಣವೂ ಇದೆ. ಆ ವೇಳೆಗಾಗಲೇ ಜಗತ್ತಿನ ಅನೇಕ ದೇಶಭಾಷೆಗಳು ಅವನತಿಯ ಹಾದಿ ಹಿಡಿದಿದ್ದರ ಬಗ್ಗೆ ತಜ್ಞರು ಎಚ್ಚರಿಸಿ, ಅದರಿಂದುಂಟಾಗಬಹುದಾದ ಅಪಾಯಗಳ ಬಗ್ಗೆ ಗಮನ ಸೆಳೆದಿದ್ದರು. ದೇಶಭಾಷೆಗಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆಯೂ ರ್ಚಚಿಸಿದ್ದರು. ಬಂಗಾಳಿ ಭಾಷೆಯ ರಿಫಿಕ್ ಎನ್ನುವವರು ಢಾಕಾದಲ್ಲಿ ಭಾಷಾ ಚಳವಳಿಯ ಸಂದರ್ಭದಲ್ಲಿ ನಡೆದ ಅನೇಕರ ಹತ್ಯೆಯನ್ನು ಪ್ರಸ್ತಾಪಿಸಿ ವಿಶ್ವಸಂಸ್ಥೆಯ ಕೋಫಿ ಅನ್ನಾನ್​ಗೆ ಮನವಿಯೊಂದನ್ನು ಸಲ್ಲಿಸಿ, ಹತ್ಯೆ ನಡೆದ ಫೆಬ್ರವರಿ 21ನೇ ದಿನಾಂಕವನ್ನು ‘ಮಾತೃಭಾಷಾ ದಿನ’ವೆಂದು ಘೊಷಿಸಬೇಕೆಂದು ಕೋರಿದ್ದರು.

ಸಂಕಷ್ಟದಲ್ಲಿ ಪ್ರಾಂತೀಯ ಭಾಷೆಗಳು: ಇತ್ತೀಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ತನ್ನ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಫೆಬ್ರವರಿ 21ರಂದು ‘ಮಾತೃಭಾಷಾ ದಿನ’ವನ್ನು ಆಚರಿಸಿ, ವಿಚಾರಸಂಕಿರಣವೊಂದನ್ನು ಏರ್ಪಡಿಸಿತ್ತು. ಅದರಲ್ಲಿ ದೇಶದ ನಾನಾ ಭಾಷೆಯ ವಿದ್ವಾಂಸರು ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸಿದರು. ವೇದಿಕೆಯಲ್ಲಿ ಮಾತನಾಡಿದ ಎಲ್ಲರೂ ಪ್ರಾಂತೀಯ ಭಾಷೆಗಳು ಎದುರಿಸುತ್ತಿರುವ ಸಂಕಷ್ಟಗಳನ್ನು, ಸವಾಲುಗಳನ್ನು ಪರಿಣಾಮಕಾರಿಯಾಗಿ ಆಧಾರಸಹಿತ ವಿವರಿಸಿದರು. ಆ ನಂತರ ಬೇರೆಬೇರೆ ಭಾಷೆಯ ವಿದ್ವಜ್ಜನರೊಡನೆ ನಾನು ಮಾತನಾಡಿದಾಗ ಎಲ್ಲ ಪ್ರಾಂತೀಯ ಭಾಷೆಗಳೂ ಸಂಕಷ್ಟದಲ್ಲಿರುವುದನ್ನು ಅವರವರದೇ ಆದ ರೀತಿಯಲ್ಲಿ ವಿವರಿಸಿದರು. ಎಲ್ಲರ ಮಾತುಗಳನ್ನು ಕೇಳಿದ ನಂತರ ನಾವು ಕರ್ನಾಟಕದಲ್ಲಿ ಎದುರಿಸುತ್ತಿರುವ ಸಮಸ್ಯೆಗೂ ಬೇರೆಬೇರೆ ರಾಜ್ಯದವರು ಎದುರಿಸುತ್ತಿರುವ ಸಮಸ್ಯೆಗೂ ಅಂತಹ ವ್ಯತ್ಯಾಸಗಳೇನೂ ಇಲ್ಲ ಅನ್ನಿಸಿತು. ಎಲ್ಲರೂ ಸಮಾನದುಃಖಿಗಳೇ. ಎಲ್ಲ ಪ್ರಾಂತೀಯ ಭಾಷೆಗಳ ಸಾಮಾನ್ಯ ಶತ್ರು ಇಂಗ್ಲಿಷ್ ಶಿಕ್ಷಣ ಮಾಧ್ಯಮ.

ಅರಿಸ್ಟಾಟಲ್​ನಿಂದ ಹಿಡಿದು ಗಾಂಧಿಯವರೆಗೆ ಜಗತ್ತಿನ ಎಲ್ಲ ಚಿಂತಕರೂ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಮಕ್ಕಳ ಸರ್ವತೋಮುಖ ವ್ಯಕ್ತಿತ್ವದ ಬೆಳವಣಿಗೆಯ ದೃಷ್ಟಿಯಿಂದ ಎಷ್ಟು ಮಹತ್ವದ್ದೆಂಬುದನ್ನು ನಿಸ್ಸಂದಿಗ್ಧ ರೀತಿಯಲ್ಲಿ ವಿವರಿಸಿದ್ದಾರೆ. ಅರಿಸ್ಟಾಟಲ್ ಮಾತೃಭಾಷೆಯನ್ನು ‘ಮಕ್ಕಳ ಭಾಷೆ’ ಎಂದು ಕರೆಯುತ್ತಾನೆ. ಮಕ್ಕಳು ಸಹಜವಾಗಿ ಕಲಿಯುವ ಭಾಷೆ ತಮ್ಮ ಪರಿಸರದ ಭಾಷೆ. ಅದೇ ಮಾತೃಭಾಷೆ. ಅದನ್ನೇ ಅರಿಸ್ಟಾಟಲ್ ಮಕ್ಕಳ ಭಾಷೆ ಎಂದು ಕರೆದಿದ್ದಾನೆ. ಈ ಪದದ ಪರಿಕಲ್ಪನೆಯೇ ಚೆನ್ನಾಗಿದೆ. ಮಕ್ಕಳು ಈ ಭಾಷೆಯನ್ನು ಯಾವ ತೊಡಕಿಲ್ಲದೆ ಕಲಿಯುತ್ತವೆ. ತಮ್ಮ ಭಾವಜಗತ್ತನ್ನು, ಚಿಂತನಾ ಜಗತ್ತನ್ನು ಈ ಭಾಷೆಯ ಮೂಲಕವೇ ರೂಪಿಸಿಕೊಳ್ಳುತ್ತವೆ. ಮುಂದೆ ಇದೇ ಅವರ ವ್ಯಕ್ತಿತ್ವವನ್ನು ರೂಪಿಸುವಂಥದು. ನಂತರದ ಭಾಷೆಗಳನ್ನು ನಾವು ಅವರಿಗೆ ಬುದ್ಧಿಪೂರ್ವಕವಾಗಿ ಕಲಿಸುತ್ತೇವೆ.

ಮಾತೃಭಾಷೆ ನೀಡುವ ಆತ್ಮವಿಶ್ವಾಸ: ಯುನೆಸ್ಕೊ 1953ರಲ್ಲಿ ಪ್ರಕಟಿಸಿದ ‘ದಿ ಯೂಸ್ ಆಫ್ ವರ್ನಾಕ್ಯುಲರ್ಸ್ ಇನ್ ಎಜುಕೇಷನ್’ ಎಂಬ ಪುಸ್ತಕದಲ್ಲಿ- ‘ಒಂದು ಮಗುವಿಗೆ ಶಿಕ್ಷಣ ನೀಡಲು ಅದರ ಮಾತೃಭಾಷೆಯೇ ಅತ್ಯುತ್ತಮ ಮಾಧ್ಯಮ. ಮನೋವೈಜ್ಞಾನಿಕವಾಗಿ ವಿಶ್ಲೇಷಿಸಿದಾಗಲೂ ಮಗುವಿನ ಮನಸ್ಸು ಸಹಜವಾಗಿ ಅರಳುವುದು, ಚಿಂತನೆಗೆ ಸಜ್ಜಾಗುವುದು ಮಾತೃಭಾಷೆಯ ಮೂಲಕವೇ. ಸಾಮಾಜಿಕವಾಗಿಯೂ ಮಗು ತನ್ನ ಸಮುದಾಯದ ಸದಸ್ಯರೊಡನೆ ಸುಲಭ ಹಾಗೂ ಆತ್ಮವಿಶ್ವಾಸದಿಂದ ಬೆರೆಯುವುದು ತನ್ನ ಪರಿಸರದ ಭಾಷೆಯ ಮೂಲಕವೇ. ಶೈಕ್ಷಣಿಕವಾಗಿಯೂ ಅಪರಿಚಿತ ಭಾಷೆಗಿಂತ ತನ್ನ ಭಾಷೆಯಲ್ಲಿ ಮಗು ಸಮರ್ಥವಾಗಿ ಕಲಿಯುತ್ತದೆ’- ಎಂದು ಅನೇಕ ನೆಲೆಯ ಸಂಶೋಧನೆಗಳ ನಂತರ ವಿವರಿಸಿದ್ದಾರೆ. ಹೀಗಾಗಿ ಶಿಕ್ಷಣದಲ್ಲಿ ಎಷ್ಟು ಸಾಧ್ಯವೋ ಅಷ್ಟು ದೀರ್ಘಹಂತದವರೆಗೆ ಮಾತೃಭಾಷೆಯನ್ನು ಮಾಧ್ಯಮವಾಗಿ ಬಳಸಬೇಕೆಂದು ಯುನೆಸ್ಕೊ ಹೇಳುತ್ತದೆ.

ಕಳೆದ ಶತಮಾನದ ಎಪ್ಪತ್ತರ ದಶಕದವರೆಗೆ ನಮ್ಮ ನಾಡಿನಲ್ಲೂ ಶೇಕಡ ತೊಂಭತ್ತರಷ್ಟು ಶಾಲೆಗಳಲ್ಲಿ ಆಯಾ ಪ್ರಾಂತೀಯ ಭಾಷೆಗಳೇ ಶಿಕ್ಷಣ ಮಾಧ್ಯಮವಾಗಿದ್ದವು. ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಯಲು ಅವಕಾಶವಿತ್ತು. ಆದರೆ ನಂತರ ನಮ್ಮ ಸಾಮಾಜಿಕ ಬದುಕಿನಲ್ಲಿ ಒಂದು ಕ್ರಾಂತಿಕಾರಕ ಪಲ್ಲಟವುಂಟಾಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ನಮ್ಮ ನಾಡನ್ನು ಇಡಿಯಾಗಿ ಆಕ್ರಮಿಸಿಕೊಂಡವು. ಅದಕ್ಕೆ ಪ್ರಮುಖವಾಗಿ ಎರಡು ಕಾರಣಗಳು: ಒಂದು ಇಂಗ್ಲಿಷ್ ಉದ್ಯೋಗದ ಭಾಷೆಯಾಗಿ ಸ್ಥಾಪಿತವಾದದ್ದು. ಮತ್ತೊಂದು ಇದನ್ನೇ ಬಂಡವಾಳವಾಗಿಸಿಕೊಂಡು ಒಂದು ವರ್ಗ ಶಿಕ್ಷಣವನ್ನು ಉದ್ಯಮವಾಗಿ ರೂಪಾಂತರಿಸಿದ್ದು. ಶಿಕ್ಷಣವೆಂದರೆ ಜ್ಞಾನಸಂಪಾದನೆ ಎನ್ನುವ ಪರಿಕಲ್ಪನೆ ಮಾಯವಾಗಿ ಶಿಕ್ಷಣ ಉದ್ಯೋಗ ಪಡೆಯಲು, ಹಣ ಸಂಪಾದಿಸಲು ಒಂದು ಸಾಧನ ಎಂಬ ನಂಬಿಕೆ ಬಲವಾಯಿತು. ಪರಿಣಾಮ ನಮ್ಮ ಮಕ್ಕಳು ಮಾಹಿತಿ ಸಂಗ್ರಹಾಲಯಗಳಾಗಿ ತಮ್ಮ ಸೃಜನಶೀಲತೆಯನ್ನೇ ಕಳೆದುಕೊಳ್ಳುತ್ತಿದ್ದಾರೆಂದು ಜಗತ್ತಿನ ಶಿಕ್ಷಣ ತಜ್ಞರೆಲ್ಲರೂ ಹೇಳುತ್ತಿದ್ದರೂ, ನಮ್ಮ ಪೋಷಕರು ಮಾತ್ರ ತಾವು ಕಳೆದುಕೊಳ್ಳುತ್ತಿರುವುದೇನು ಎಂಬ ಅರಿವಿಲ್ಲದೆ ತಮ್ಮ ಮಕ್ಕಳನ್ನು ಹಣ ಸಂಪಾದಿಸುವ ಯಂತ್ರಗಳನ್ನಾಗಿಸಲು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ನಂಬಿದ್ದಾರೆ. ಇಂಗ್ಲಿಷ್- ವಿಜ್ಞಾನ ಮತ್ತು ತಂತ್ರಜ್ಞಾನದ ಭಾಷೆ, ಅಂತಾರಾಷ್ಟ್ರೀಯ ಸಂವಹನಕ್ಕೆ ಅದು ಅತ್ಯಗತ್ಯ ಎಂಬ ಭ್ರಮೆ ಅವರನ್ನು ಆವರಿಸಿತ್ತು. ಈಗ ಈ ಭ್ರಮೆಯೂ ಕಳಚುತ್ತಿದೆ. ಅಂತಾರಾಷ್ಟ್ರೀಯ ವಾಣಿಜ್ಯ ಕ್ಷೇತ್ರದಲ್ಲಿ ಇಂಗ್ಲಿಷ್ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತಿರುವುದನ್ನು ಇತ್ತೀಚಿನ ಅಧ್ಯಯನಗಳು ದೃಢಪಡಿಸಿವೆ.

ಹಣಸಂಪಾದನೆಯೇ ಗುರಿಯಾಗಿಬಿಟ್ಟಿದೆ: ಶಿಕ್ಷಣತಜ್ಞರು ಮಾತೃಭಾಷೆಯ ಪರವಾಗಿದ್ದಾರೆ. ಸರ್ಕಾರವೂ ಮಾತೃ ಭಾಷೆಯ ಪರವಾಗಿದೆ. ಕರ್ನಾಟಕ ಸರ್ಕಾರ ಶಾಲೆಗಳಲ್ಲಿ ಒಂದನೆಯ ತರಗತಿಯಿಂದ ನಾಲ್ಕನೆಯ ತರಗತಿಯವರೆಗೆ ಕನ್ನಡ ಇಲ್ಲವೇ ತಾಯ್ನುಡಿಯ ಮೂಲಕ ಕಲಿಯುವುದನ್ನು ಕಡ್ಡಾಯಗೊಳಿಸಿ 1994ರಲ್ಲಿಯೇ ಆದೇಶವನ್ನೂ ಮಾಡಿತು. ಹಾಗಾದರೆ ಇದನ್ನು ವಿರೋಧಿಸುತ್ತಿರುವವರು ಯಾರು? ಮಕ್ಕಳ ಪೋಷಕರೇ? ಖಂಡಿತಾ ಅಲ್ಲ. ತಮ್ಮ ಮಕ್ಕಳ ಭವಿಷ್ಯತ್ತಿನ ಬಗ್ಗೆ ನಿಜಕಾಳಜಿಯಿರುವ ಯಾವ ಪೋಷಕರೂ ಇದರ ಪರವಾಗಿಲ್ಲ. ಆದರೆ ಪೋಷಕರಲ್ಲಿ ಸಮೂಹಸನ್ನಿಯ ರೀತಿಯಲ್ಲಿ ಇಂತಹ ಮನೋಭಾವವನ್ನು ರೂಪಿಸಿರುವ ಹಿಂದಿನ ಶಕ್ತಿ ಹಣ ಸಂಪಾದನೆಯನ್ನೇ ಗುರಿಯಾಗಿಸಿಕೊಂಡಿರುವ, ಯಾವ ಬಗೆಯ ಸಾಮಾಜಿಕ ಬದ್ಧತೆಯೂ ಇಲ್ಲದ ಖಾಸಗಿ ಶಾಲೆಯ ಬಂಡವಾಳಶಾಹಿಗಳು.

ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರೂ, ಭಾರತ ಸರ್ಕಾರದ ಮಾನವ ಸಂಪನ್ಮೂಲಾಭಿವೃದ್ಧಿ ಖಾತೆಯ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿಗಳೂ ಆಗಿದ್ದ ಡಾ. ಡಿ.ಪಿ. ಪಟ್ನಾಯಕ್ ಅವರು ಹೇಳುವಂತೆ ಸ್ವಾತಂತ್ರ್ಯೂರ್ವದಲ್ಲಿ ಹಾಗೂ ಸ್ವಾತಂತ್ರ್ಯ ಬಂದ ಹೊಸದರಲ್ಲಿ ಸಮಾಜದ ಬಡವರು, ಶ್ರೀಮಂತರು, ಎಲ್ಲ ವರ್ಗದವರೂ ಒಂದೇ ಶಾಲೆಯಲ್ಲಿ ಓದುವುದು ಸಾಮಾನ್ಯವಾಗಿತ್ತು. ಸರ್ಕಾರಿ ಶಾಲೆಗಳು ಶಿಕ್ಷಣದ ಪ್ರಮುಖ ಕೇಂದ್ರಗಳಾಗಿದ್ದವು. ಕ್ರಮೇಣ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಖಾಸಗಿ ಶಾಲೆಗಳ ಪರ್ವ ಆರಂಭವಾಯಿತು. ಈಗ ನಮ್ಮಲ್ಲಿ ಮೂರು ರೀತಿಯ ಶಾಲೆಗಳಿವೆ. ಸರ್ಕಾರಿ ಶಾಲೆಗಳು, ಸರ್ಕಾರದ ಅನುದಾನ ಪಡೆಯುವ ಖಾಸಗಿ ಶಾಲೆಗಳು ಹಾಗೂ ಸರ್ಕಾರದ ಅನುದಾನ ಪಡೆಯದ ಖಾಸಗಿ ಶಾಲೆಗಳು. ಮೊದಲೆರಡು ಗುಂಪಿನ ಶಾಲೆಗಳ ಮೇಲೆ ಸರ್ಕಾರದ ನೇರ ನಿಯಂತ್ರಣವಿದೆ. ಮೂರನೆಯ ಗುಂಪಿನ ಶಾಲೆಗಳು ಸರ್ಕಾರದ ಮಾನ್ಯತೆ ಪಡೆದಿರಬೇಕು; ಆದರೆ ನೋಂದಣಿ, ನವೀಕರಣ ಬಿಟ್ಟರೆ ಅವುಗಳ ಮೇಲೆ ಸರ್ಕಾರಕ್ಕೆ ಯಾವುದೇ ಬಗೆಯ ನೇರ ನಿಯಂತ್ರಣವಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯನ್ನು ವ್ಯಾಪಾರೀಕರಣಗೊಳಿಸಿ ಲಾಭದಾಯಕ ಉದ್ಯಮವಾಗಿ ರೂಪಾಂತರಿಸಿರುವಂಥವು ಮೂರನೆಯ ಗುಂಪಿನ ಈ ಖಾಸಗಿ ಶಾಲೆಗಳೇ. ಇವುಗಳ ಮೂಲ ಉದ್ದೇಶ ಹಣಸಂಪಾದನೆ. ಸಾಮಾಜಿಕ ನ್ಯಾಯ, ಬದ್ಧತೆ, ಸಮಾನತೆ ಇವುಗಳ ಬಗ್ಗೆ ಈ ಶಾಲೆಗಳಿಗೆ ಕಿಂಚಿತ್ತೂ ಕಾಳಜಿಯಿಲ್ಲ. ಇವುಗಳಿಂದಾಗಿ ನಮ್ಮ ಶಿಕ್ಷಣವೂ ದುಬಾರಿಯಾಗಿ ಎಲ್ಲ ಸವಲತ್ತುಗಳಿರುವ ಖಾಸಗಿ ಶಾಲೆ- ಶ್ರೀಮಂತರ ಮಕ್ಕಳಿಗಾಗಿ, ಸವಲತ್ತುಗಳಿರದ ಸರ್ಕಾರಿ ಶಾಲೆ- ಬಡವರ ಮಕ್ಕಳಿಗಾಗಿ ಎಂಬ ಎರಡು ರೀತಿಯ ಶಿಕ್ಷಣಕ್ರಮ ರೂಪುಗೊಂಡು ಸಾಮಾಜಿಕ ಅಸಮಾನತೆ ಅಧಿಕವಾಗುತ್ತಿದೆ. ಈ ಖಾಸಗಿ ಶಾಲೆಗಳವರೇ ಮಾತೃಭಾಷೆ ಶಿಕ್ಷಣ ಮಾಧ್ಯಮವಾಗದಂತೆ ಅಡ್ಡಿಪಡಿಸುತ್ತಿರುವವರು, ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯದ ಮೆಟ್ಟಲೇರಿರುವಂಥವರು.

ಅಂಕಗಳಿಕೆಯ ಸಾಧನೆಯೇ ಅಂತಿಮವಲ್ಲ: ಭಾಷಾತಜ್ಞ ಕೆ.ವಿ. ನಾರಾಯಣ ಪ್ರಸಕ್ತ ಶಿಕ್ಷಣ ಪದ್ಧತಿಯ ಒಂದು ಮುಖ್ಯ ಸಂಗತಿಯತ್ತ ನಮ್ಮ ಗಮನ ಸೆಳೆಯುತ್ತಾರೆ. ಕಲಿಕೆಯ ಗುರಿ- ಜೀವನಕೌಶಲಗಳ ಬೆಳವಣಿಗೆ, ಸಾಮರ್ಥ್ಯಗಳ ಅಭಿವೃದ್ಧಿ, ಮೇಲಾಟದ ಜಗತ್ತಿಗೆ ಸಿದ್ಧಗೊಳಿಸುವುದು- ಇವೆಲ್ಲವೂ ಸರಿಯೇ ಸರಿ. ಆದರೆ ಇವೆಲ್ಲದರ ಜತೆಗೆ ಮಗು ತನ್ನನ್ನು ತಾನು ಸಮಾಜದ ಭಾಗ ಎಂದು ತಿಳಿಯುವಂತೆ ಮಾಡುವುದು ಕಲಿಕೆಯ ಗುರಿ. ಇಂಡಿಯಾದ ನಾಳೆಗಳು ಶಾಲೆಯಲ್ಲಿ ನಿರ್ಮಾಣವಾಗುತ್ತವೆ ಎಂದು ಕೊಥಾರಿ ಆಯೋಗ ತನ್ನ ವರದಿಯ ಮೊದಲ ವಾಕ್ಯದಲ್ಲಿ ಹೇಳಿದ್ದು ಇದನ್ನೇ. ನಮ್ಮ ಶಾಲೆಗಳಲ್ಲಿ ಕಲಿಕೆಯ ಈ ಸಮಾಜೀಕರಣದ ಗುರಿ ಎಷ್ಟು ಸಾಧಿತವಾಗುತ್ತಿದೆ? ಒಂದು ವೇಳೆ ಸಮಾಜೀಕರಣವನ್ನು ಅಳೆಯುವ ಸೂಚ್ಯಂಕವೊಂದನ್ನು ಕಟ್ಟಿದರೆ ಅದು ಹೆಚ್ಚಿನ ಪ್ರಮಾಣದಲ್ಲಿ ಕಾಣುವುದು ನಾವು ಯಾವುದನ್ನು ಸವಲತ್ತುಗಳಿಲ್ಲದ ಬಡವರ ಸರ್ಕಾರಿ ಶಾಲೆಗಳೆಂದು ಕರೆಯುತ್ತೇವೆಯೋ ಅಲ್ಲಿ ಎಂಬುದನ್ನು ಮರೆಯಬಾರದು. ಇದನ್ನು ಅಧ್ಯಯನ ದೃಢಪಡಿಸಿದೆ. ಅಂಕಗಳಿಕೆಯ ಸಾಧನೆಯೇ ಅಂತಿಮವಲ್ಲ, ಕಲಿಕೆಯ ಬಳಿಕ ಮಗು ತನ್ನ ಸಮಾಜಕ್ಕೆ ಎಷ್ಟರಮಟ್ಟಿಗೆ ಬಾಧ್ಯಸ್ಥನಾಗುತ್ತಾನೆ ಎಂಬುದೂ ಅಷ್ಟೇ ಮುಖ್ಯ. ಖಾಸಗಿ ಶಾಲೆಗಳಲ್ಲಿ ಓದಿದ ಮಕ್ಕಳು ಅಂಕಗಳಿಕೆಯಲ್ಲಿ ಮುಂದಿರಬಹುದು, ಆದರೆ ಅಂಥವರು ತಮ್ಮ ಸಮಾಜಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ಬದುಕುತ್ತಿದ್ದಾರೆ. ಕಲಿಕೆಯ ನಂತರ ಮಕ್ಕಳು ತಾವು ಬೇರೆ ತಾವು ಬದುಕುತ್ತಿರುವ ಸಮಾಜವೇ ಬೇರೆ ಎಂದು ಭಾವಿಸಿಬಿಟ್ಟರೆ ಅದು ಕಲಿಕೆಯ ದುರಂತವೇ ಸರಿ. ಆಗ ನಮ್ಮ ಕಲಿಕೆ ಸಮಾಜವನ್ನು ಸಮಾನತೆಯ ಕಡೆಗೆ ಒಯ್ಯುವ ಬದಲು ಅದನ್ನು ಒಡೆಯುವ ಸಾಧನವಾಗಿ ಬಿಡುತ್ತದೆ. ಖಾಸಗಿ ಶಾಲೆಗಳ ಅಪಾಯ ಇಲ್ಲಿದೆ.

ಈಗ ಮಾತೃಭಾಷೆ ಶಿಕ್ಷಣ ಮಾಧ್ಯಮವಾಗುವುದನ್ನು ವಿರೋಧಿಸುತ್ತಿರುವ ಖಾಸಗಿ ಶಾಲೆಗಳ ನಿಲವು ಕೇವಲ ಭಾಷಾಪ್ರಶ್ನೆ ಮಾತ್ರವಲ್ಲ, ಸಾಮಾಜಿಕವಾಗಿಯೂ ಅಪಾಯಕಾರಿ ಎಂಬುದನ್ನು ನಾವು ಅರಿಯಬೇಕಾಗಿದೆ. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಮಕ್ಕಳು ತಮ್ಮ ಜೀವನಕೌಶಲವನ್ನು ವೃದ್ಧಿಪಡಿಸಿಕೊಳ್ಳಲು, ತಮ್ಮ ಅಸ್ತಿತ್ವವನ್ನು ದೃಢಪಡಿಸಿಕೊಳ್ಳಲು, ತಮ್ಮ ಸಮಾಜದ ಹಿತವನ್ನು ಕಾಪಾಡಲು, ಸಾಂಸ್ಕೃತಿಕ ಪರಂಪರೆ ಆಳವಾಗಿ ಬೇರುಬಿಡುವಂತೆ ಮಾಡಲು, ಸುತ್ತಮುತ್ತಲಿನವರೊಂದಿಗೆ ಸಾಮರಸ್ಯವನ್ನು ಸಾಧಿಸಲು ನೆರವಾಗುತ್ತದೆಂಬುದನ್ನು ಜಾಗತಿಕ ಅಧ್ಯಯನ ಮತ್ತೆಮತ್ತೆ ದೃಢಪಡಿಸಿದೆ. ಮಿಗಿಲಾಗಿ ಮಕ್ಕಳ ಭಾವಜಗತ್ತು ಶ್ರೀಮಂತವಾಗುತ್ತದೆ. ಅವರ ಸೃಜನಶೀಲ ಶಕ್ತಿಗೆ ಇಂಬು ದೊರಕುತ್ತದೆ. ಅವರ ಸ್ವತಂತ್ರ ಯೋಚನಾಶಕ್ತಿ ಬಲಗೊಳ್ಳುತ್ತದೆ.

ಹೋರಾಟ ರೂಪುಗೊಂಡಿಲ್ಲ: ಭಾರತದ ಎಲ್ಲ ಪ್ರಾಂತೀಯ ಭಾಷೆಗಳೂ ಬಂಡವಾಳಶಾಹಿಗಳ ಹಿಡಿತದಲ್ಲಿರುವ ಖಾಸಗಿ ಶಾಲೆಗಳ ದಬ್ಬಾಳಿಕೆಯಿಂದ ನಲುಗುತ್ತಿವೆ. ಕಾನೂನಿನ ಕಪಿಮುಷ್ಟಿಯಲ್ಲಿ ಸಿಕ್ಕಿ ದೇಶಭಾಷೆಗಳು ನರಳುತ್ತಿವೆ. ಪ್ರತಿ ರಾಜ್ಯದಲ್ಲೂ ಅವರವರದೇ ಆದ ರೀತಿಯಲ್ಲಿ ಇದರ ವಿರುದ್ಧ ಪ್ರತಿಭಟನೆಗಳೂ ನಡೆಯುತ್ತಿವೆ. ಆದರೆ ರಾಷ್ಟ್ರಮಟ್ಟದಲ್ಲಿ ಇದರ ವಿರುದ್ಧ ಸಂಘಟಿತ ನೆಲೆಯಲ್ಲಿ ಹೋರಾಟ ರೂಪುಗೊಂಡಿಲ್ಲ. ನಮ್ಮ ಹಿರಿಯ ಸಾಹಿತಿ ಕೇಂದ್ರ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷರಾದ ಚಂದ್ರಶೇಖರ ಕಂಬಾರರು ಈ ಬಗ್ಗೆ ಆಸಕ್ತಿ ತಾಳಿದ್ದಾರೆ. ಮೊದಲ ಹೆಜ್ಜೆಯಾಗಿ ಎಲ್ಲ ಭಾರತೀಯ ಭಾಷೆಗಳ ಪ್ರತಿನಿಧಿಯಾಗಿರುವ ಕೇಂದ್ರ ಸಾಹಿತ್ಯ ಅಕಾಡೆಮಿಯ ಜನರಲ್ ಕೌನ್ಸಿಲ್​ನಲ್ಲಿ ಪ್ರಾಂತೀಯ ಭಾಷೆಗಳನ್ನು ಶಿಕ್ಷಣಮಾಧ್ಯಮವನ್ನಾಗಿ ಮಾಡಬೇಕೆಂಬ ನಿಲುವಳಿಯೊಂದನ್ನು ಮಂಡಿಸಿ ಎಲ್ಲ ಸದಸ್ಯರ ಒಪ್ಪಿಗೆ ಪಡೆದು ಅದನ್ನು ಕೇಂದ್ರಸರ್ಕಾರಕ್ಕೆ ಸಲ್ಲಿಸಲಾಯಿತು. ನಂತರ ಪ್ರಾಂತಭಾಷೆ ಶಿಕ್ಷಣಮಾಧ್ಯಮವಾಗಬೇಕೆಂದು ರಾಷ್ಟ್ರಾದ್ಯಂತ ಸುಮಾರು ಐದು ಲಕ್ಷ ಜನರ ಸಹಿ ಸಂಗ್ರಹಿಸಿ ರಾಷ್ಟ್ರಪತಿಗಳನ್ನು ಭೇಟಿಮಾಡಿ ಮನವಿ ಸಲ್ಲಿಸಲಾಯಿತು. ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಎಲ್ಲ ಭಾಷೆಗಳ ವಿದ್ವಜ್ಜನರನ್ನು ಕೂಡಿಸಿ, ಈ ವಿಚಾರದ ಬಗ್ಗೆ ಸಂಕಿರಣ ನಡೆಸಿ ರ್ಚಚಿಸಲಾಯಿತು.

ಈಗ ಮಾತೃಭಾಷೆಗಳ ಉಳಿವಿಗೆ ಭರವಸೆಯ ದಾರಿಯಾಗಿ ಕಾಣುತ್ತಿರುವ ದಾರಿಯೆಂದರೆ ನಮ್ಮ ಸಂವಿಧಾನಕ್ಕೆ ತಿದ್ದುಪಡಿ ತರುವುದೊಂದೇ. ಆಗ ಮಾತ್ರ ಪ್ರಾಂತೀಯ ಭಾಷೆಗಳು ಶಿಕ್ಷಣಮಾಧ್ಯಮವಾಗಲು ಅಡ್ಡಿಮಾಡುತ್ತಿರುವ ಖಾಸಗಿ ಶಾಲೆಗಳ ಬಂಡವಾಳಶಾಹಿಗಳನ್ನು ಎದುರಿಸಲು ಸಾಧ್ಯ. ಪ್ರಾಂತೀಯ ಭಾಷೆಗಳು ಶಿಕ್ಷಣಮಾಧ್ಯಮವಾಗದಿದ್ದರೆ ಸಾಮಾಜಿಕ ಬದ್ಧತೆಯ ಉತ್ತಮ ಪ್ರಜೆಗಳನ್ನು ರೂಪಿಸುವುದೂ ಕಷ್ಟಸಾಧ್ಯ. ನಮ್ಮ ಸಂಸದರು ಈ ದಿಕ್ಕಿನಲ್ಲಿ ಯೋಚಿಸುತ್ತಾರೆಯೇ? ಲೋಕಸಭೆಯಲ್ಲಿ ಪಕ್ಷಭೇದ ಮರೆತು ನಿರ್ಣಯ ಮಂಡಿಸಿ ತಮ್ಮ ತಮ್ಮ ತಾಯ್ನುಡಿಗಳನ್ನು ಉಳಿಸುವ ಪ್ರಯತ್ನ ಮಾಡುತ್ತಾರೆಯೇ? ಇದನ್ನು ಯಾರೋ ಮಾಡಲಿ ಎಂದು ಕಾಯದೆ ನಮ್ಮ ರಾಜ್ಯದ ಸಂಸದರೇ ಒಗ್ಗಟ್ಟಿನಿಂದ ಇಂಥದೊಂದು ನಿರ್ಣಯ ತಂದು ರಾಷ್ಟ್ರಕ್ಕೆ ಮಾದರಿಯಾಗುತ್ತಾರೆಯೇ? ಇದು ಆಧುನಿಕ ಸಾಮ್ರಾಜ್ಯಶಾಹಿಯಿಂದ ಬಹುಸಂಸ್ಕೃತಿಯನ್ನು ಕಾಪಾಡುವ ಸಾಮಾಜಿಕ ಹೊಣೆಗಾರಿಕೆಯ ಕರ್ತವ್ಯವೂ ಹೌದು. ನಾಡು-ನುಡಿಗೆ ಅವರು ನೀಡುವ ಬಹು ದೊಡ್ಡ ಕೊಡುಗೆಯೂ ಹೌದು.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *