ನಮ್ಮ ಮಾನವೀಯತೆ, ವಿದೇಶಿ ಮಾನವ ಹಕ್ಕುಗಳಿಗಿಂತ ಮೇಲು!

ಹಸ್ರಾರು ವರ್ಷಗಳಿಂದ ಮಾನವೀಯ ಮೌಲ್ಯಗಳಿಗೆ ಮಹತ್ವ ಕೊಟ್ಟ ಭಾರತೀಯ ಸಂಸ್ಕೃತಿಯಲ್ಲಿ ಇಂದು ಮಾನವೀಯತೆ ಮಾಯವಾಗಿ ವಿದೇಶಿಯರ ಮಾನವ ಹಕ್ಕುಗಳ ಕಾರುಬಾರು ಹೆಚ್ಚಿದೆ. ಡಿಸೆಂಬರ್ 10ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಿದರು. ಆದರೆ ದುರಂತವೆಂದರೆ ಎಲ್ಲೆಡೆಯೂ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚುತ್ತಿದ್ದು ಮಾನವೀಯ ಮೌಲ್ಯಗಳು ನೆಲಕಚ್ಚಿವೆ. ನಾವು ಮಾನವ ಹಕ್ಕಿನ ಜತೆಗೆ ನಮ್ಮ ಹೊಣೆ ಅರಿತುಕೊಳ್ಳುವುದು ಬಹಳ ಮುಖ್ಯ.

ಮೂಲಭೂತ ಮಾನವ ಹಕ್ಕುಗಳು ಪ್ರತಿಯೊಬ್ಬ ವ್ಯಕ್ತಿಗೂ ಅನ್ವಯಿಸುತ್ತವೆ. ಪ್ರತಿಯೊಬ್ಬರೂ ಸ್ವತಂತ್ರರು, ಸಮಾನ ಹಕ್ಕುಗಳಿಗೆ ಭಾಗಿದಾರರು ಎಂದು ಆಧುನಿಕ ಜಗತ್ತು ಸಾರಿದರೆ, ನಮ್ಮ ಸನಾತನ ಧರ್ಮದ ಪ್ರಕಾರ, ಪರಮಾತ್ಮನ ಅಂಶ ಪ್ರತಿಯೊಬ್ಬರ ಆತ್ಮದಲ್ಲಿರುವುದರಿಂದ ಪ್ರಕೃತಿಯಲ್ಲಿ ಎಲ್ಲರೂ ಸಮಾನರು. ನಾವು ನಮಸ್ಕಾರ ಮಾಡಿದಾಗ ನಮ್ಮಲ್ಲಿಯ ಆತ್ಮ ಎದುರಿಗೆ ಇರುವ ವ್ಯಕ್ತಿಯಲ್ಲಿರುವ ಪರಮಾತ್ಮನ ಅಂಶವಾದ ಆತ್ಮಕ್ಕೆ ಗೌರವ ಸೂಚಿಸುತ್ತದೆ. ಇದನ್ನೇ ಶರಣರು ಸಮಾನತೆಯನ್ನು ಸಾರುತ್ತ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದರು. ಇದನ್ನೇ ಭಾರತೀಯ ಸಂವಿಧಾನ ಕಾನೂನಾತ್ಮಕವಾಗಿ ಸಮಾನತೆ ಕೊಟ್ಟಿತು. ಆದರೂ ಯಾಕೆ ಮನುಷ್ಯರು ದಾನವರಾಗಿ ಇತರರ ಶೋಷಣೆ ಮಾಡುತ್ತಿರುವುದು? ಚಿಂತಕ ಮಾರ್ಕಸ್ ಟುಲಿಕಸ್ ಸಿಸೆರೊ ಹೇಳುತ್ತಾರೆ-“The more the laws, the less the justice’ ಅಂದರೆ, ಜನರ ಹಕ್ಕು ಅವರಿಗೆ ಸಿಗಲೆಂದು ಕಾನೂನು ಮಾಡಿದರೂ ಅದನ್ನು ಪಾಲಿಸುವವರ ಸಂಖ್ಯೆ ವಿರಳ ಮತ್ತು ಉಲ್ಲಂಘಿಸುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ! ಇಂದು ಓದದ ರಾಜಕಾರಣಿಗಳು ಕಾನೂನು ಮಾಡುತ್ತಿದ್ದರೆ, ದುರ್ಬುದ್ಧಿಯ ದುರಾಚಾರಿಗಳು ಅವುಗಳನ್ನು ಉಲ್ಲಂಘಿಸುತ್ತಾರೆ. ದುಷ್ಟರು ಅವರಿಗೆ ರಕ್ಷಣೆ ಕೊಡುತ್ತಿದ್ದಾರೆ. ಇದರಿಂದ ದೇಶದಲ್ಲಿ ಶಾಂತಿ-ಸುವ್ಯವಸ್ಥೆ ಹದಗೆಟ್ಟು ಜನರ ಬದುಕು ನರಕವಾಗುತ್ತಿದೆ!

ಉದಾಹರಣೆಗೆ, ನಮ್ಮ ಸಂವಿಧಾನದಲ್ಲಿ ಮದ್ಯಪಾನವನ್ನು ನಿಷೇಧಿಸಲಾಗಿದೆ. ಆದರೆ ಶಾಲೆ, ಕಾಲೇಜು, ದೇವಸ್ಥಾನಗಳ ಹತ್ತಿರ 100 ಮೀ. ವ್ಯಾಪ್ತಿಯಲ್ಲಿ ಸಾರಾಯಿ ಅಂಗಡಿ ಇರಬಾರದೆಂದು ಕಾನೂನು ಇದ್ದರೂ, ಸಹಸ್ರಾರು ಸಾರಾಯಿ ಅಂಗಡಿಗಳು ಕಾನೂನು ಉಲ್ಲಂಘಿಸಿ ವಿದ್ಯಾರ್ಥಿಗಳನ್ನು ವ್ಯಸನಿಗಳನ್ನಾಗಿ ಮಾಡುತ್ತಿವೆ. ಸ್ವತಃ ಸವೋಚ್ಚ ನ್ಯಾಯಾಲಯ, ಹೆದ್ದಾರಿಗಳಿಂದ ಮದ್ಯದ ಅಂಗಡಿ ದೂರವಿರಬೇಕು, ಇದರಿಂದ ಕುಡಿದ ಅಮಲಿನಲ್ಲಿ ವಾಹನ ಚಾಲನೆ ಮಾಡಿ ಅಪಘಾತದಲ್ಲಿ ಸಾಯುವವರ ಸಂಖ್ಯೆ ಕಡಿಮೆ ಮಾಡಬಹುದು ಎಂದು ಕಾನೂನು ಜಾರಿಗೆ ತರಲು ಆದೇಶ ಮಾಡಿದರೆ, ರಾಜಕಾರಣಿಗಳು ರಂಗೋಲಿ ಕೆಳಗೆ ನುಸುಳಿ ಮದ್ಯದ ಅಂಗಡಿ ಮಾಲೀಕರ ಸಹಾಯಕ್ಕೆ ನಿಂತಿದ್ದು ಮಾನವ ಹಕ್ಕಿನ ಮತ್ತು ಕಾನೂನಿನ ಘೋರ ಅಪಚಾರವೆನ್ನಬಹುದು.

ಹೀಗೆ ಸಂವಿಧಾನ ಮತ್ತು ಸವೋಚ್ಚ ನ್ಯಾಯಾಲಯದ ವಿರುದ್ಧ ಹೋಗುತ್ತಿರುವ ರಾಜಕಾರಣಿಗಳು, ಸಮಾಜದ ಮಾನವೀಯ ಮೌಲ್ಯಗಳ ಪತನಕ್ಕೆ ನೇರಹೊಣೆಯಾಗಿದ್ದಾರೆ. ಒಂದು ನವೋದಯ ಶಾಲೆಗೆ ಹೋದಾಗ ಆ ಮಕ್ಕಳ ಚುರುಕುಬುದ್ಧಿ, ಚೈತನ್ಯ ಕಂಡು ಬಹಳ ಸಂತಸದಿಂದ ರಕ್ಷಕರಿಗೆ ‘ತುಂಬ ಚೆನ್ನಾಗಿ ಮಕ್ಕಳಿಗೆ ಕಲಿಸಿದ್ದೀರಿ, ಭೇಷ್’ ಎಂದೆ. ಆಗ ಒಬ್ಬ ಶಿಕ್ಷಕರು ಪೆಚ್ಚಾಗಿ- ‘ಏನು ಪ್ರಯೋಜನ ಡಾಕ್ಟೆ ್ರ ನಾವು ವರ್ಷಗಟ್ಟಲೆ ಶ್ರಮಪಟ್ಟು ಮಕ್ಕಳನ್ನು ಉತ್ತಮ ಮಾರ್ಗದಲ್ಲಿ ನಡೆಸುತ್ತೇವೆ. ಆದರೆ ಈ ರಾಜಕಾರಣಿಗಳು ತಮ್ಮ ವೋಟಿಗಾಗಿ ಒಂದು ಗಣೇಶ ಚತುರ್ಥಿ ಬಂದರೆ ಸಾಕು ಮಕ್ಕಳನ್ನು ಹಾಳುಮಾಡುತ್ತಾರೆ’ ಅಂದರು! ನನಗೆ ಅವರ ಮಾತು ಅರ್ಥವಾಗಲಿಲ್ಲ. ಸ್ವಾತಂತ್ರ್ಯ ಸೇನಾನಿಯಾದ ಬಾಲಗಂಗಾಧರ ತಿಲಕರು ಗಣೇಶ ಚತುರ್ಥಿಯನ್ನು ಸಾರ್ವತ್ರಿಕ ಆಚರಣೆ ಮಾಡಿ ದೇವರ ಭಕ್ತಿ ಮತ್ತು ದೇಶಭಕ್ತಿಯನ್ನು ಬೆಸೆದಿದ್ದರು. ಆದರೆ ಇಂದು ಗಣೇಶ ಚತುರ್ಥಿಯನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಂಬಲಾಗದೆ ಹೇಗೆ ಎಂದು ಕೇಳಿದೆ. ಆಗ ಆ ಶಿಕ್ಷಕರು, ‘ಪ್ರತಿ ಎಂಎಲ್​ಎ ಪ್ರತಿವರ್ಷ ತಮ್ಮ ಲಾಭಕ್ಕಾಗಿ 10-15 ಲಕ್ಷ ರೂ. ಹಣವನ್ನು ಗಣೇಶ ಚತುರ್ಥಿಗೆ ಖರ್ಚುಮಾಡುತ್ತಾರೆ. ಅವರು ಕೊಟ್ಟ ದೇಣಿಗೆಯಿಂದ ಗಣೇಶನನ್ನು ತಂದು ಕೆಟ್ಟ ಹಾಡುಗಳನ್ನು ಸ್ಪೀಕರ್ ಮುಖಾಂತರ ಮೊಳಗಿಸಿ ಕುಡಿದು ಕುಣಿಯುತ್ತಾರೆ. ಹನ್ನೊಂದು ದಿನಗಳು ಭಕ್ತಿಭಾವ ಮರೆತು ಮೋಜುಮಸ್ತಿ ಮಾಡುವ ಹುಡುಗರು, ಗಣೇಶ ವಿಸರ್ಜನೆ ಆಗುವಷ್ಟರಲ್ಲಿ ಕುಡುಕರಾಗಿಬಿಡುತ್ತಾರೆ. ರಾಜಕಾರಣಿಯ ಹಿಂಬಾಲಕರಾಗಿಬಿಡುತ್ತಾರೆ’ ಎಂದು ತಿಳಿಸಿದರು. ಕಾನೂನಿನ ಪ್ರಕಾರ 23 ವರ್ಷದ ಕೆಳಗಿನ ಹುಡುಗರಿಗೆ ಮದ್ಯ ಮಾರಾಟ ಮಾಡಬಾರದು. ಆದರೆ ನಮ್ಮ ದೇಶದಲ್ಲಿ ರಾಜಕಾರಣಿಗಳೇ ಹುಡುಗರಿಗೆ ಮದ್ಯ ಕೊಟ್ಟು ಅವರನ್ನು ಪ್ರಜ್ಞಾಶೂನ್ಯರನ್ನಾಗಿ ಮಾಡುತ್ತಿದ್ದಾರೆ.

ಹಿಂದೆ ಕುಡಿತ ಪ್ರಾರಂಭಿಸಿದ ವ್ಯಕ್ತಿ ಎಲ್ಲ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುವ ರಾಕ್ಷಸನಾಗುತ್ತಾನೆ. ಒಂದು ಸಲ ಗಾರ್ವೆಂಟ್ ಕಾರ್ಖಾನೆಯ ಒಬ್ಬ ಮಹಿಳಾ ಉದ್ಯೋಗಿ ತನ್ನ ಮಗುವನ್ನು ತೋರಿಸಲು ಬಂದಿದ್ದಳು. ಆ ಮಗುವಿನ ಹೃದಯದ ಸುತ್ತಲಿರುವ ಕವಚದಲ್ಲಿ ಕೀವು ಸೇರಿತ್ತು (pyopericardium). ನಾನು ಎಲ್ಲಿಂದ ಕೀವು ಬಂತು ಎಂದು ಪರೀಕ್ಷಿಸಿದಾಗ, ಆ ಮಗುವಿನ ಬಲಗೈ ಸುಟ್ಟು ಗಾಯವಾಗಿದ್ದು ಕಂಡು ಗಾಬರಿಯಿಂದ ಹೇಗೆ ಮಗು ಸುಟ್ಟುಕೊಂಡಿತು ಎಂದು ಕೇಳಿದಾಗ ಆ ತಾಯಿ ದುಃಖ ತಡೆಯಲಾರದೇ ಅಳುತ್ತ ಹೇಳಿದಳು- ‘ನನಗೆ ರಾತ್ರಿಪಾಳಿಯಿತ್ತು ಡಾಕ್ಟೆ ್ರ ಅಡುಗೆ ಮಾಡಿ ಗಂಡನಿಗೆ, ಮಗುವಿಗೆ ಊಟ ಮಾಡಿಸಿ, ನಾನು ಕೆಲಸಕ್ಕೆ ಹೋಗಿದ್ದೆ. ಬೆಳಗ್ಗೆ ಕೆಲಸದಿಂದ ಬಂದಾಗ ಮಗು ಅಳುತ್ತಿತ್ತು. ಕೈ ಸುಟ್ಟಿತ್ತು. ರಾತ್ರಿ ಕುಡಿದು ಮಲಗಿದ ನನ್ನ ಗಂಡನಿಗೆ ಮಗು ಹಾಲಿಗೆ ಎದ್ದಿದ್ದು ಗೊತ್ತಾಗಿಲ್ಲ. ಪಾಪ ಮಗು ಅಳುತ್ತ ಕತ್ತಲಲ್ಲಿ ಅಂಬೆಗಾಲು ಇಡುತ್ತ ಒಲೆ ಕಡೆಗೆ ಹೋಗಿದೆ. ಕೆಂಡ ಗೊತ್ತಾಗದೆ ಸುಟ್ಟುಕೊಂಡಿದೆ’.

ಎಂಥ ಮೇಧಾವಿಗಳನ್ನೂ ಕ್ರಿಮಿನಲ್​ಗಳಿಗಿಂತ ಕಡೆ ಮಾಡುವ ಮದ್ಯಪಾನದ ಮತ್ತಿನ ಪ್ರಭಾವವನ್ನು ನಾವು ದಿನನಿತ್ಯದ ಬದುಕಿನಲ್ಲಿ ನೋಡುತ್ತಿದ್ದೇವೆ. ಇಂದು ದೇಶದಲ್ಲಿ ಶೇ. 90ರಷ್ಟು ಅಪರಾಧಿಗಳು ಕುಡಿತದ ಅಮಲಿನಲ್ಲಿ ಅಪರಾಧ ಮಾಡುತ್ತಿದ್ದಾರೆಂದು ತಿಳಿದುಬಂದಿದೆ. ಆದ್ದರಿಂದ ಮಾನವ ಹಕ್ಕುಗಳ ಉಲ್ಲಂಘನೆಯ ಮೂಲಕಾರಣವಾದ ಮದ್ಯಪಾನ ನಿಷೇಧ ದೇಶದಲ್ಲಿ ಆಗಬೇಕು.

ಆತಂಕವಾದಿಗಳ ಪರವಾಗಿ ಕಲ್ಲುತೂರಾಡುವ ಕಾಶ್ಮೀರಿ ಯುವಕರಿಂದ ರಕ್ಷಿಸಲು ಜೀಪಿಗೆ ಯುವಕನನ್ನು ಕಟ್ಟಿಕೊಂಡು 700 ಜನರ ದಾಳಿಯಿಂದ ತಪ್ಪಿಸಿಕೊಂಡು ಸೈನಿಕರನ್ನು ಪೊಲೀಸರನ್ನು ರಕ್ಷಿಸಿದ ಸೈನ್ಯಾಧಿಕಾರಿ ಮೇಲೆ ಮಾನವ ಹಕ್ಕಿನ ಹೆಸರಿನಲ್ಲಿ ಮುಗಿಬಿದ್ದದ್ದನ್ನು ಕಂಡು ದೇಶ ಬೆಚ್ಚಿಬಿದ್ದಿತ್ತು. ಬಡಪಾಯಿ ಸೈನಿಕರು ಮತ್ತು ಪೊಲೀಸರಿಗೆ ತಮ್ಮ ಜೀವ ಉಳಿಸಿಕೊಳ್ಳುವ ಹಕ್ಕಿಲ್ಲವೇ? ಇದೇ ಮಾನವ ಹಕ್ಕಿಗಾಗಿ ಹೋರಾಡುವವರು, ಲಕ್ಷಾಂತರ ಕಾಶ್ಮೀರಿ ಪಂಡಿತರನ್ನು ಮನೆ-ಮಠ ಬಿಟ್ಟು ಓಡಿಸಿದಾಗ ತುಟಿಪಿಟಕ್ ಅನ್ನದವರು ಇಂದು ರೋಹಿಂಗ್ಯಾಗಳಿಗೆ ನೆಲೆ ಕಲ್ಪಿಸಿಕೊಡುವ ನೆಪದಲ್ಲಿ ದೇಶದ ಜನರ ಸುರಕ್ಷತೆಯ ಹಕ್ಕನ್ನು ಉಲ್ಲಂಘಿಸಿಲ್ಲವೇ?

ಇಂಥವರಿಗಿಂತ ಮಗುವಿನ ನಿರ್ಮಲ ಮನಸ್ಸು ಉತ್ತಮ ಎನಿಸಿದ್ದು 9 ವರ್ಷ ವಯಸ್ಸಿನ ಒಂದು ಬುದ್ಧಿಮಾಂದ್ಯ ಮಗುವಿನ ಮಾತು ಕೇಳಿದಾಗ. ಒಬ್ಬ ತಾಯಿ ತನ್ನ ಛಟಡ್ಞಿ ಠಢ್ಞಛ್ಟಟಞಛಿ ಮಗುವನ್ನು ಹೃದಯದ ಕಾಯಿಲೆ ತೋರಿಸಲು ಕರೆತಂದಿದ್ದಳು. ಸಾಮಾನ್ಯವಾಗಿ ಮಕ್ಕಳು ತಾಯಿ ಸೆರಗನ್ನೇ ಹಿಡಿದುಕೊಂಡಿರುತ್ತವೆ. ಆದರೆ ಈ ಮಗು- ‘ಡಾಕ್ಟರ್ ಸಾಹಿಬಾ, ಅಮ್ಮೀ ಕೋ ಬಾಹರ್ ಭೇಜಿಯೆ’ ಅಂದಿತು. ನನಗೆ ಆಶ್ಚರ್ಯವಾಗಿ ತಾಯಿಯನ್ನು ರೂಮಿನಿಂದ ಹೊರಗೆ ಇರಲು ಹೇಳಿ, ಯಾಕೆ? ಎಂದು ಕೇಳಿದಾಗ ಆ ಮಗು ಆಡಿದ ಮಾತು ಕೇಳಿ ಮನ ಕರಗಿತು. ಅವರ ಗುಡಿಸಲಿಗೆ ಬೆಂಕಿ ಹೊತ್ತಿದಾಗ ಎಲ್ಲ ಸುಟ್ಟು ಕರಕಲಾಗಿತ್ತು. ಸಾಮಾನು ಉಳಿಸಲು ಹೋದ ತಾಯಿಯೂ ಸುಟ್ಟುಕೊಂಡಿದ್ದಳು. ಮಗು ಹೇಳಿತು- ‘ನಮ್ಮಮ್ಮ ತುಂಬ ಅಳುತ್ತಾಳೆ. ಅವಳಿಗೆ ಉಳಿದದ್ದು ನಾನೊಬ್ಬನೇ. ನನ್ನ ಹೃದಯ ಸರಿ ಇಲ್ಲ ಅಂತ ಹೇಳಿದರೆ ಅವಳು ಇನ್ನೂ ಹೆಚ್ಚು ಅಳುತ್ತಾಳೆ. ಆದ್ದರಿಂದ, ನನ್ನ ಹೃದಯದ ಕಾಯಿಲೆ ಬಗ್ಗೆ ನನಗೆ ಹೇಳಿ’ ಎಂದು ಕೇಳಿಕೊಂಡಿತು!

ಒಂದು ಕಾಲಕ್ಕೆ ಇಂಗ್ಲೆಂಡಿನ ಪಾರ್ಲಿಮೆಂಟಿನಲ್ಲಿ ಭಾರತದ ಕೌಟುಂಬಿಕ ಮೌಲ್ಯಗಳ ಘನತೆಯನ್ನು ಎತ್ತಿಹಿಡಿದು- ‘ನಾವು ಇಂಗ್ಲೆಂಡಿನಲ್ಲಿ ಭಾರತೀಯರಂತೆ ತುಂಬು ಕುಟುಂಬದಲ್ಲಿ ಮುದಿ ತಂದೆ-ತಾಯಿಯರನ್ನು ನೋಡಿಕೊಂಡಿದ್ದೇ ಆದರೆ ಸರ್ಕಾರದ ಬೊಕ್ಕಸಕ್ಕೆ ವೃದ್ಧರನ್ನು ನೋಡಿಕೊಳ್ಳುವ ಖರ್ಚು ಕಡಿಮೆ ಆಗುವುದು’ ಎಂದಿದ್ದರು. ಆದರೆ ಇಂದು ನಮ್ಮ ದೇಶದಲ್ಲಿ ಏನಾಗಿದೆ?

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿದ್ದ ದಿ. ವಿ.ಎಸ್. ಮಳೀಮಠ ಅವರು ಒಂದು ಸಲ ಗೋವೆಗೆ ಹೋದಾಗ ಮನೆಮುರಿದು ಜೇಲಿಗೆ ಹಾಕಿದ ನಿರಾಶ್ರಿತರನ್ನು ನೋಡಿದಾಗ ಅವರು ಕನ್ನಡದಲ್ಲೇ ಮಾತಾಡುವುದು ಕಿವಿಮೇಲೆ ಬಿದ್ದಿತು. ತಕ್ಷಣವೇ ಅಲ್ಲೇ ವಿಚಾರಣೆ ಮಾಡಿ, ವಿಜಯಪುರದಿಂದ ಕೆಲಸಕ್ಕೆ ಗುಳೆ ಹೋದ ಆ ಕನ್ನಡಿಗರಿಗೆ ರಕ್ಷಣೆ ಕೊಡುವಂತೆ ಅಲ್ಲಿಯೇ ಆದೇಶ ನೀಡಿದರು. ಮಾನವ ಹಕ್ಕಿನ ಆಯೋಗದ ಇತಿಹಾಸದಲ್ಲೇ ಪ್ರಪ್ರಥಮವಾಗಿ ನಿಂತಲ್ಲೇ ತಕ್ಷಣ ಆದೇಶ ನೀಡಿದ ಅಪರೂಪದ ಘಟನೆ ಅದಾಗಿತ್ತು!

‘ಕಟ್ಟಬೇಕು ಮನವ, ಮೆಟ್ಟಬೇಕು ಮದವ, ಸುಟ್ಟುರುಹಬೇಕು ಸಪ್ತ ವ್ಯಸನಂಗಳ; ಆ ತೊಟ್ಟಿಲು ಮುರಿದು ಕಣ್ಣಿಯ ಹರಿದು, ಆ ಬಟ್ಟಬಯಲಲ್ಲಿ ನಿಂದಡೆ ಬಸವಪ್ರಿಯ ಕೂಡಲ ಚೆನ್ನಬಸವಣ್ಣ’ ಎಂದು ಶರಣರು ಹೇಳಿದಂತೆ, ನಾವು ಪಂಚೇಂದ್ರಿಯಗಳ ನಿಗ್ರಹಿಸಿ, ಮದ ಮತ್ಸರ ತ್ಯಜಿಸಿ

ಮಾನವರಾಗಬೇಕು. ಆದರೆ ಇಂದು ದುರಂತವೆಂದರೆ ಧೂರ್ತರು, ಭ್ರಷ್ಟರು ಸೇರಿ- ಕಟ್ಟುವುದು ಕುಸಿಯುವ ಸೇತುವೆಯ, ಚಟ್ಟಕಟ್ಟುವರು ಬಡಬಗ್ಗರ, ಸುಡುವರು ಸನಾತನ ಧರ್ಮದ ಮಾನವ ಮೌಲ್ಯಗಳ, ಶಿಕ್ಷಕರೇ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಮಕ್ಕಳ ಭವಿಷ್ಯ ಭಗ್ನಮಾಡುವ ಸ್ವಾರ್ಥಿಗಳಿಗೆ ಎಲ್ಲಿದೆ ಮಾನವ ಮಕ್ಕಳ ಹಕ್ಕಿನ ಪರಿವೆ? ನಾವು ಪ್ರತಿಯೊಬ್ಬರೂ- ತನ್ನಂತೆ

ಪರರನ್ನು ಕಂಡರೆ ಕೈಲಾಸ ಬಿನ್ನಾಣವಕ್ಕುದು ಸರ್ವಜ್ಞ ಎನ್ನುವಂತೆ ಸಮಾನರಾಗಿ ಕಂಡು ಗೌರವದಿಂದ ಕಾಣುವ ಹೊಣೆ ನಮ್ಮದಾಗಿಸಿಕೊಂಡರೆ ಮಾನವ ಹಕ್ಕಿಗೆ ಹೋರಾಡುವ ಪ್ರಮೇಯವೇ ಇರುವುದಿಲ್ಲ.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

Leave a Reply

Your email address will not be published. Required fields are marked *