ಮೈಸೂರು: ನಮ್ಮ ಪರಂಪರೆಯ ಕುರಿತು ಹೆಮ್ಮೆ ಪಡುವ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತ ನೀಡುತ್ತಿದ್ದು, ಹೀಗಾಗಿ ತಮ್ಮ ಪೂರ್ವಿ ಕರು ಹಿಂದುಗಳಾಗಿದ್ದರು ಎಂದು ಮುಸ್ಲಿಮರು ಹೇಳಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಮೋ ಬ್ರಿಗೇಡ್ ವತಿಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಇನ್ನೂ ಮಲಗಿದರೆ ಏಳುವಾಗ ಭಾರತವಿರುವುದಿಲ್ಲ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಪರಂಪರೆಯ ಬಗ್ಗೆ ನಾವು ಹೆಮ್ಮೆ ಪಡಬೇಕು. ಬ್ರಿಟಿಷರು ಅವರ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ನಮ್ಮ ಪರಂಪರೆಯನ್ನು ಕಂಡ ಹಿನ್ನೆಲೆಯಲ್ಲಿ ಅವರ ಕಣ್ಣಿಗೆ ನಾವು ಅನಾಗರಿಕರಾಗಿ ಕಂಡೆವು. ಇಂದಿಗೂ ಬ್ರಿಟಿಷರು ಬಿತ್ತಿದ ಮನಸ್ಥಿತಿಯಲ್ಲಿ ಭಾರತೀಯರು ತೊಳಲಾಡುತ್ತಿದ್ದು, ಅದರಿಂದ ಹೊರ ಬರಬೇಕು ಎಂದು ಕರೆ ನೀಡಿದರು.
ಹಿರಿಯ ಸಾಹಿತಿ ಜಾವೇದ್ ಅಫ್ತಾರ್ ನಮ್ಮ ಹಿರಿಕರು ಹಿಂದುಗಳು ಎಂದು ಹೇಳಿಕೆ ನೀಡಿದ್ದಾರೆ. ಹಿರಿಯ ರಾಜಕಾರಣಿ ಗುಲಾಂ ನಬೀ ಆಜಾದ್ ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಕೊಂಡಾಡಿದ್ದಾರೆ. ಇಂತಹವರ ನಡುವೆಯೂ ದೇಶದ ಸಂಸ್ಕೃತಿ ಹಾಳು ಮಾಡಬೇಕು ಅನ್ನುವವರ ಸಂಖ್ಯೆಯೂ ಇದೆ. ದೇಶದ ವಿಶ್ವವಿದ್ಯಾಲಯ, ಮಾಧ್ಯಮ, ಎನ್‌ಜಿಒ, ವ್ಯವಹಾರ ಕ್ಷೇತ್ರಗಳಲ್ಲಿ ಭಾರತ ವಿರೋಧಿ ವಿಷ ಸರ್ಪಗಳು ಇದ್ದು, ಅವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.