ನಮ್ಮ ಪವಿತ್ರ ಗ್ರಂಥ ಭಾರತದ ಸಂವಿಧಾನ, ಅದರಂತೆ ನಡೆದುಕೊಳ್ಳಬೇಕು: ಬಳ್ಳಾರಿ ವಲಯ ಪೊಲೀಸ್​ ಮಹಾನಿರೀಕ್ಷಕ ಎಂ. ನಂಜುಂಡಸ್ವಾಮಿ

ರಾಯಚೂರು: ನಮ್ಮ ಧರ್ಮ ಭಾರತ. ನಮ್ಮ ಪವಿತ್ರ ಗ್ರಂಥ ಭಾರತದ ಸಂವಿಧಾನ. ಈ ಪವಿತ್ರ ಗ್ರಂಥದನ್ವಯವೇ ನಾವು ಕಾರ್ಯನಿರ್ವಹಿಸಬೇಕು ಎಂದು ಬಳ್ಳಾರಿ ವಲಯ ಪೊಲೀಸ್​ ಮಹಾನಿರೀಕ್ಷಿಕ ಎಂ. ನಂಜುಂಡ ಸ್ವಾಮಿ ಸಲಹೆ ನೀಡಿದ್ದಾರೆ.

ರಾಯಚೂರಿನ ಪೊಲೀಸ್​ ಮೈದಾನದಲ್ಲಿ ಮಂಗಳವಾರ ನಡೆದ ನಾಗರಿಕ ಹಾಗೂ ಸಶಸ್ತ್ರ ಪೊಲೀಸ್​ ಕಾನ್​ಸ್ಟೆಬಲ್​ಗಳ 10ನೇ ತಂಡದ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಗೌರವವಂದನೆ ಸ್ವೀಕರಿಸಿ ಮಾತನಾಡಿದರು. ನಾವು ಯಾವುದೇ ಧರ್ಮದವರಾಗಿದ್ದರೂ ನಾವೆಲ್ಲರೂ ಭಾರತೀಯರು. ಹಾಗಾಗಿ ಭಾರತ ನಮ್ಮ ಧರ್ಮವಾಗಬೇಕು. ಅದರಂತೆ ಭಾರತದ ಸಂವಿಧಾನ ನಮ್ಮ ಪವಿತ್ರ ಗ್ರಂಥ ಆಗಬೇಕು. ಈಗ ಹೊಸ, ಹೊಸ ಕಾನೂನುಗಳು ಬರುತ್ತಿದ್ದು, ಅವುಗಳ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದರು.

157 ಪ್ರಶಿಕ್ಷಣಾರ್ಥಿಗಳು ಎಂಟು ತಿಂಗಳಿಂದ ಪೊಲೀಸ.ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದರು. ವಿವಿಧ ಅತಿಥಿ ಉಪನ್ಯಾಸಕರು ಹಲವು ವಿಷಯಗಳ ಬಗ್ಗೆ ಕಲಿಸಿಕೊಟ್ಟಿದ್ದರು. ಬಳಿಕ ಹೊರಾಂಗಾಣದ ತರಬೇತಿಯನ್ನೂ ನೀಡಲಾಗಿತ್ತು. ಈ ಕುರಿತು ಎಎಸ್ಪಿ ಹರಿಬಾಬು ವರದಿ ಮಂಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್ಪಿ ಡಾ. ಸಿ.ಬಿ. ವೇದಮೂರ್ತಿ, ತರಬೇತಿ ಪಡೆದು ವೃತ್ತಿಗೆ ಹೋಗುವವರು ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಸಲಹೆ ನೀಡಿದರು.

ತರಬೇತಿ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಪ್ರಶಿಕ್ಷಣಾರ್ಥಿಗಳಿಗೆ ಐಜಿಪಿ ನಂಜುಂಡಸ್ವಾಮಿ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ತರಭೇತಿ ಪಡೆದ ಪೊಲೀಸರ ಪಾಲಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *