ನಮ್ಮ ತಾಳ್ಮೆ ಪರೀಕ್ಷಿಸಬೇಡಿ

ತುಮಕೂರು: ಪ್ರಕೃತಿ ವಿಕೋಪದಂಥ ಭೀಕರ ಸಂದರ್ಭದಲ್ಲಿ ವಿಶೇಷ ನೆರವು ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯ. ಪರಿಹಾರ ಕೇಳುವುದು ನಮ್ಮ ಹಕ್ಕು. ನೆರವಿಗೆ ಬಾರದಿದ್ದರೆ ಅದರ ವಿರುದ್ಧ ಧ್ವನಿ ಎತ್ತಲಾಗುವುದು. ನಮ್ಮ ತಾಳ್ಮೆ ಪರೀಕ್ಷೆ ಮಾಡಬಾರದು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಎಚ್ಚರಿಸಿದರು.
ಸಿದ್ಧಗಂಗಾ ಮಠದ ದಾಸೋಹಕ್ಕೆ ಶ್ರೀ ಸಿದ್ದೇಶ್ವರ ಸಂಸ್ಥೆ, ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಸ್ಥೆ ವತಿಯಿಂದ ಶನಿವಾರ 501 ಚೀಲ ಅಕ್ಕಿ ಹಾಗೂ 5001 ವಿಭೂತಿಗಟ್ಟಿಗಳನ್ನು ದೇಣಿಗೆಯಾಗಿ ನೀಡಿ, ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಿಂದೆಂದೂ ಕೇಳರಿಯದ ದೊಡ್ಡ ಅನಾಹುತ ಕರ್ನಾಟಕದಲ್ಲಿ ಆಗಿದೆ. ಕೇಂದ್ರ ಸರ್ಕಾರ ನಮ್ಮ ನೆರವಿಗೆ ಬರಲೇಬೇಕು ಎಂಬುದು ನಮ್ಮ ಆಗ್ರಹ. ನಮ್ಮ ನೆರವಿಗೆ ಬರುವ ವಿಶ್ವಾಸ ಇದೆ. ಕಾದು ನೋಡುತ್ತೇವೆ ಎಂದರು.
ರಾಜ್ಯ ಸರ್ಕಾರ ಭೀಕರ ಪ್ರವಾಹದಿಂದ 40ಸಾವಿರ ಕೋಟಿ ರೂ. ನಷ್ಟ ಆಗಿದೆ ಎಂದು ಅಂದಾಜು ಮಾಡಿದೆ. ಬಹಳ ಭಯಾನಕ ಪರಿಸ್ಥಿತಿ ಉತ್ತರ ಕರ್ನಾಟಕದಲ್ಲಿದ್ದು ರಸ್ತೆ, ಸೇತುವೆಗಳು, ಮನೆಗಳು ನೆಲಕಚ್ಚಿವೆ, ಬಡವರು ಬದುಕಲಿಕ್ಕೆ ಆಗುತ್ತಿಲ್ಲ. ಸಿಎಂ ಯಡಿಯೂರಪ್ಪ ನೆರೆ ಪ್ರದೇಶದಲ್ಲಿ ಪ್ರವಾಸ ಮಾಡಿ ಮನೆ ನಿರ್ಮಾಣಕ್ಕೆ 5 ಲಕ್ಷ ರೂ., ನೆರವು ಕೊಡುವ ಭರವಸೆ ನೀಡಿದ್ದು, 1 ಲಕ್ಷ ರೂ., ಬಾಡಿಗೆ ಮನೆಯಲ್ಲಿ ಇರುವವರಿಗೆ 10 ಸಾವಿರ ರೂ., ನೆರವು ನೀಡಿದ್ದಾರೆ ಎಂದರು.
ಇಂತಹ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಎನ್‌ಡಿಆರ್‌ಎಫ್‌ನಿಂದ ಸಹಜವಾಗಿ ಬರುವ ಪರಿಹಾರಕ್ಕಿಂತ ಹೆಚ್ಚಿನ ನೆರವಿನ ಅಗತ್ಯವಿದೆ. ಕೇಂದ್ರದ ಹಣಕಾಸು ಸಚಿವರು, ಗೃಹಸಚಿವರು ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಕೇಂದ್ರದ ಅಧಿಕಾರಿಗಳ ತಂಡ ನೆರೆ ಹಾನಿ ಅಂದಾಜು ಕೂಡ ಮಾಡಿದೆ. ಪ್ರಧಾನಿಗಳು ಶಾಶ್ವತ ಪರಿಹಾರ ಕೊಡುವ ನಿರೀಕ್ಷೆ ಇದೆ. ತುರ್ತುಪರಿಹಾರ ಕಾಮಗಾರಿಗಳನ್ನು ಸಿಎಂ ಮಾಡುತ್ತಾ ಇದ್ದಾರೆ ಎಂದು ಹೇಳಿದರು.

ಬಿಜೆಪಿಗೆ ಓಟು ಹಾಕಿರೋದಕ್ಕೆ ಪಶ್ಚಾತಾಪ ಪಡೋ ಅವಶ್ಯಕತೆ ಇಲ್ಲ. ನೆರೆ ಹಾನಿ ವಿಚಾರದಲ್ಲಿ ಪ್ರಧಾನಿ ಶಾಶ್ವತ ಯೋಜನೆ ಕೈಗೊಳ್ಳುವ ವಿಶ್ವಾಸವಿದೆ. ಹಾಗಾಗಿ ಸ್ವಲ್ಪ ವಿಳಂಬವಾಗಿದೆ. ನೆರವು ಕೊಡಬೇಕಾಗಿರೋದು ಕೇಂದ್ರದ ಕರ್ತವ್ಯ. ಕೇಳೋದು ನಮ್ಮ ಹಕ್ಕು.
ಬಸವನಗೌಡ ಪಾಟೀಲ ಯತ್ನಾಳ ಶಾಸಕ

Leave a Reply

Your email address will not be published. Required fields are marked *