Wednesday, 21st November 2018  

Vijayavani

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೇಸರಿ ಬಲ - ರಾಜ್ಯಾದ್ಯಂತ ಇಂದು ಬಿಜೆಪಿ ಬೃಹತ್ ಪ್ರತಿಭಟನೆ        ಗದಗಿನ ಕದಡಿ ಬಳಿ ಒಡೆದ ಕಾಲುವೆ- ಜಮೀನುಗಳಿಗೆ ನುಗ್ಗಿದ ಅಪಾರ ನೀರು - ಅಧಿಕಾರಿಗಳ ವಿರುದ್ಧ ಆಕ್ರೋಶ        ದ್ರಾಕ್ಷಿ ತೋಟದಲ್ಲಿ ಕರೆಂಟೂ, ನೆಲದಲ್ಲೂ ಕರೆಂಟು - ಚಿಕ್ಕಬಳ್ಳಾಪುರದ ಪವರ್​ ಗ್ರಿಡ್ ಕಂಟಕ        ಮದ್ದೂರು ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ - ಒಬ್ಬ ಲ್ಯಾಬ್ ಟೆಕ್ನೀಷಿಯನ್ ಸ್ಥಿತಿ ಗಂಭೀರ-        ಸ್ಯಾಂಡಲ್​ವುಡ್​​ನಲ್ಲಿ ಮತ್ತೊಂದು ಗಟ್ಟಿಮೇಳ - ಡಿ.11, 12ರಂದು ಹಸೆಮಣೆ ಏರುತ್ತೆ ಐಂದ್ರಿತಾ, ದಿಗಂತ್ ಜೋಡಿ       
Breaking News

ನಮ್ಮ ತಾಯಂದಿರ ಸಮಸ್ಯೆಯೂ, ಸಾಮಾಜಿಕ ಜವಾಬ್ದಾರಿಯೂ….

Sunday, 03.09.2017, 3:05 AM       No Comments

ನಾವು ಪ್ರಗತಿಯ ಬಗ್ಗೆ ದೊಡ್ಡ ದೊಡ್ಡ ಮಾತನಾಡುತ್ತೇವೆ. ಆದರೆ ಕೆಲ ಮೂಲಭೂತ ಸಂಗತಿಗಳನ್ನೇ ಮರೆತಿರುತ್ತೇವೆ. ಸಾರ್ವಜನಿಕ ಶೌಚಗೃಹ ವ್ಯವಸ್ಥೆ ಕೊರತೆ ಅವುಗಳಲ್ಲೊಂದು. ಬೃಹತ್ ಉದ್ಯಮಗಳು ಮನಸ್ಸುಮಾಡಿದರೆ ಈ ಸಮಸ್ಯೆ ನಿವಾರಣೆ ಸಾಧ್ಯವಿದೆ.

ರತ್ನಾಕರನ ‘ಭರತೇಶ ವೈಭವ’ದಲ್ಲಿ ಕವಿ ಭರತನ ವ್ಯಕ್ತಿತ್ವ ಇತರರಿಗಿಂತ ಭಿನ್ನ ಎಂದು ಹೇಳುವಾಗ ಆತನನ್ನು ವಿಶೇಷವೆಂಬಂತೆ ಹೀಗೆ ವರ್ಣಿಸುತ್ತಾನೆ:

ಧರೆಯೊಳೆಲ್ಲವ ಸುಟ್ಟರುಂಟಲ್ಲಿ ಭಸ್ಮ ಕ

ರ್ಪರವ ಸುಟ್ಟರೆ ಭಸ್ಮವುಂಟೆ

ನರತತಿಗಾಹಾರ ನಿಹಾರವುಂಟೆಮ್ಮ

ಭರತೇಶನಿಗಿಲ್ಲ ನಿಹಾರಾ

ಭೂಮಿಯಲ್ಲಿ ಏನನ್ನು ಸುಟ್ಟರೂ ಬೂದಿ ಉಳಿಯುತ್ತದೆ. ಆದರೆ ಕರ್ಪರ ಸುಟ್ಟರೆ ಬೂದಿ ಉಳಿಯುವುದಿಲ್ಲ. ಹಾಗೆಯೇ ಸಾಮಾನ್ಯ ಮನುಷ್ಯರು ಆಹಾರ ಸೇವಿಸಿದರೆ ಅವರಿಗೆ ಮಲಮೂತ್ರದ ಸಮಸ್ಯೆ ಇದ್ದೇ ಇರುತ್ತದೆ. ಆದರೆ ಭರತ ಮಾತ್ರ ಇದರಿಂದ ಮುಕ್ತ. ಆತ ಆಹಾರ ಸೇವಿಸುತ್ತಿದ್ದ. ಆದರೆ ಆತನಿಗೆ ನಿಹಾರ ಅಂದರೆ ಮಲಮೂತ್ರದ ಸಮಸ್ಯೆ ಇರಲಿಲ್ಲವಂತೆ. ಇದು ಕವಿಯ ಕಲ್ಪನೆ. ವ್ಯಕ್ತಿತ್ವ ವಿಶೇಷ ಇಲ್ಲಿ ಚೆನ್ನಾಗಿ ವರ್ಣಿತವಾಗಿದೆ.

ಆದರೆ ನಾವು ಭರತ ಅಲ್ಲವಲ್ಲ! ಆತನ ರೀತಿ ನಮಗೂ ಆಹಾರವಿದ್ದು ನಿಹಾರವಿಲ್ಲದಿದ್ದರೆ ನಮ್ಮ ಅನೇಕ ಸಮಸ್ಯೆ ಪರಿಹಾರವಾಗುತ್ತಿತ್ತು. ನಮಗೆಲ್ಲರಿಗೂ ನಿಹಾರದ ಅಂದರೆ ಮಲಮೂತ್ರದ ಸಮಸ್ಯೆ ಇದ್ದೇ ಇದೆ. ಆಹಾರ ಸೇವಿಸಿ ಅದು ಪಚನವಾಗಿ ದೇಹಕ್ಕೆ ಶಕ್ತಿ ನೀಡಿದ ನಂತರ ತ್ಯಾಜ್ಯವನ್ನು ವಿಸರ್ಜಿಸಲೇಬೇಕು. ಇಲ್ಲದಿದ್ದರೆ ಅದು ಅನಾರೋಗ್ಯಕ್ಕೆ ಹಾದಿ ಮಾಡಿಕೊಡುತ್ತದೆ. ಮಲಮೂತ್ರಬದ್ಧತೆ ರೋಗದ ಮುನ್ಸೂಚನೆ. ದೇಹದ ಈ ತ್ಯಾಜ್ಯ ಮಲಿನ ವಸ್ತು. ಎಲ್ಲೆಂದರಲ್ಲಿ ಅದನ್ನು ವಿಸರ್ಜಿಸುವಂತಿಲ್ಲ. ಹಾಗೆ ಮಾಡಿದರೆ ಅದೂ ಅನಾರೋಗ್ಯಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ತ್ಯಾಜ್ಯ ಒಳಗಿದ್ದರೂ ಕಷ್ಟ, ಹೊರಬಂದರೂ ಸಮಸ್ಯೆ. ಮಾತ್ರವಲ್ಲ ಸೂಕ್ತ ವಿತರಣಾ ವ್ಯವಸ್ಥೆ ಇಲ್ಲದಿದ್ದರೆ ವಾಸಿಸುವುದೂ ಕಷ್ಟವಾಗುತ್ತದೆ. ಹಾಗೆ ನೋಡಿದರೆ ನಾಗರಿಕ ಜಗತ್ತಿನ ಬಹು ದೊಡ್ಡ ಸಮಸ್ಯೆ ತ್ಯಾಜ್ಯ ವಿತರಣೆ. ಪ್ರಾಣಿಗಳಲ್ಲಿ ಕೆಲವು ಪ್ರಾಣಿಗಳ ಮಲ ಬಳಸಲು ಯೋಗ್ಯ. ಜಾನುವಾರುಗಳ ಮಲ- ಅದನ್ನು ಸಗಣಿ ಎಂದು ಕರೆಯುತ್ತೇವೆ, ಶುದ್ಧವೆಂಬ ಪರಿಕಲ್ಪನೆಯಿದೆ. ಆದರೆ ಎಲ್ಲ ಪ್ರಾಣಿಗಳ ಮಲವಲ್ಲ. ಕೆಲವು ಪ್ರಾಣಿಗಳು ತಮ್ಮ ಮಲವನ್ನು ಮಣ್ಣಿನಲ್ಲಿ ಮುಚ್ಚಿಡುತ್ತವೆ.

ಇತ್ತೀಚೆಗೆ ನಮ್ಮ ಮುಖ್ಯಮಂತ್ರಿಗಳು ಸಾರ್ವಜನಿಕ ಸಮಾರಂಭವೊಂದರಲ್ಲಿ

ಜನಪ್ರತಿನಿಧಿಯೊಬ್ಬರು ಶೌಚಗೃಹದ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದಾಗ ತಮಾಷೆಯ ಧಾಟಿಯಲ್ಲಿ ‘ಕುಡಿಯಲು ನೀರು ಕೊಡುವುದು ಹೇಗಪ್ಪಾ ಅಂತ ನಾವು ಒದ್ದಾಡುತ್ತಿದ್ದೇವೆ, ನೀನು ಉಚ್ಚೆ ಹುಯ್ಯಲು ಜಾಗ ಕೇಳ್ತಾ ಇದ್ದೀಯಲ್ಲಪ್ಪಾ’ ಎಂದು ನಗುನಗುತ್ತಲೇ ಆ ವಿಷಯವನ್ನು ತಳ್ಳಿಹಾಕಿದರು. ಹಾಸ್ಯ ಕೆಲವೊಮ್ಮೆ ಸಮಸ್ಯೆಯ ಗಾಂಭೀರ್ಯವನ್ನು ಹಗುರಗೊಳಿಸಿ ಲಘುವಾಗಿಸಿಬಿಡುತ್ತದೆ. ಸಮಸ್ಯೆಯನ್ನು ಮುಖಾಮುಖಿಯಾಗಲು ಕಷ್ಟವಾದಾಗ ಈ ತಂತ್ರ ನೆರವಿಗೆ ಬರುತ್ತದೆ. ಇದೊಂದು ರೀತಿ ಜಾಣತನ. ಎಲ್ಲರೂ ನಕ್ಕರು. ಇದನ್ನು ದೃಶ್ಯಮಾಧ್ಯಮದಲ್ಲಿ ನೋಡಿದಾಗ ನನಗೆ ನಗು ಬರಲಿಲ್ಲ. ನಮ್ಮ ರಾಜಕಾರಣಿಗಳಿಗೆ, ಅದರಲ್ಲೂ ಸಂವೇದನಾಶೀಲ ಮುಖ್ಯಮಂತ್ರಿಗೆ ಜನರ ಮೂಲಭೂತ ಸಮಸ್ಯೆ ತಮಾಷೆಯ ಸಂಗತಿಯಾಯಿತಲ್ಲ ಎಂದು ಮನಸ್ಸು ಮುದುಡಿತು. ಒಂದು ಪ್ರಸಂಗ ನೆನಪಾಯಿತು:

ಒಮ್ಮೆ ನಾನು, ನನ್ನ ಗೆಳೆಯ ಹಾಗೂ ಅವರ ತಾಯಿ ರಾತ್ರಿ ಬಸ್ಸಿನಲ್ಲಿ ದೂರದೂರಿಗೆ ಪ್ರಯಾಣ ಮಾಡುತ್ತಿದ್ದೆವು. ಅದೊಂದು ಸುಖಾಸೀನ ಬಸ್ಸು. ನಡುರಾತ್ರಿ ಮೀರಿತ್ತು. ಬಸ್ಸು ಒಂದು ಚಾ ಅಂಗಡಿಯ ಮುಂದೆ ನಿಂತಿತು. ಚಾಲಕ ಹತ್ತು ನಿಮಿಷ ಸಮಯವಿದೆಯೆಂದೂ, ಪ್ರಯಾಣಿಕರೆಲ್ಲರೂ ತಮ್ಮ ನಿಸರ್ಗಸಹಜ ಒತ್ತಡವನ್ನು ಪರಿಹರಿಸಿಕೊಳ್ಳಬಹುದೆಂದೂ ಸೂಚಿಸಿ, ಗುಡಿಸಲಿನಂತಿದ್ದ ಆ ಚಾ ಅಂಗಡಿಯ ಒಳಹೊಕ್ಕ. ಅರೆನಿದ್ದೆಯಲ್ಲಿದ್ದವರು, ನಿದ್ದೆಯಿಂದೆದ್ದವರು ಎಲ್ಲರೂ ದಢಬಢ ಬಸ್ಸಿನಿಂದಿಳಿದರು. ಅಲ್ಲಿ ಆ ಚಾ ಅಂಗಡಿಯ ‘ಭವನ’ವನ್ನು ಬಿಟ್ಟರೆ ಬೇರೆ ಯಾವ ಕಟ್ಟಡಗಳಾಗಲೀ ಇರಲಿಲ್ಲ. ಬಸ್ಸಿನಿಂದಿಳಿದ ಪುರುಷರೆಲ್ಲ ಅತ್ತಿತ್ತ ನೋಡಿ ರಸ್ತೆ ಬದಿಯಲ್ಲಿಯೇ ನಿಂತು ತಮ್ಮ ಒತ್ತಡವನ್ನು ಪರಿಹರಿಸಿಕೊಂಡು ನಿರಾಳವಾದರು. ನಾನೂ, ನನ್ನ ಗೆಳೆಯನೂ ಅವರನ್ನು ಅನುಸರಿಸಿದೆವು. ನಮ್ಮ ಜೊತೆ ಕೆಲ ಮಹಿಳಾ ಪ್ರಯಾಣಿಕರೂ ಇದ್ದರು. ಅವರಿಗೂ ನಿಸರ್ಗಸಹಜ ಒತ್ತಡ. ಬಸ್ಸಿನಿಂದಿಳಿದ ಅವರು ಅತ್ತಿತ್ತ ಹುಡುಕಾಡಿ ಶೌಚಗೃಹದ ವ್ಯವಸ್ಥೆ ಇಲ್ಲದ್ದನ್ನು ಗಮನಿಸಿ ಗೊಣಗಿಕೊಳ್ಳುತ್ತಾ ಕೆಲವರು ಹಾಗೆಯೇ ಬಸ್ಸು ಹತ್ತಿದರು. ಮತ್ತೆ ಕೆಲವರು ಅಲ್ಲಿ ಹಾಗೆಯೇ ನಿಂತು ಯೋಚಿಸುತ್ತಿದ್ದರು. ನನ್ನ ಗೆಳೆಯನ ತಾಯಿಯೂ ಬಸ್ಸಿನಿಂದಿಳಿದು ಅತ್ತಿತ್ತ ನೋಡುತ್ತಾ ಪರದಾಡುತ್ತಿದ್ದರು. ಅವರಿಗೆ ಡಯಾಬಿಟಿಸ್. ಮೂತ್ರವನ್ನು ತಡೆಹಿಡಿಯುವುದು ಕಷ್ಟ. ನನ್ನ ಗೆಳೆಯ ಅವರತ್ತ ಹೋಗಿ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಕತ್ತಲೆಯ, ಮರೆಯಾಗಿರುವ ಸ್ಥಳಕ್ಕಾಗಿ ಹುಡುಕಾಡಿದ. ಹುಣ್ಣಿಮೆಯ ಬೆಳದಿಂಗಳು ಹಗಲಿನಂತಿದ್ದು ಆ ತಾಯಂದಿರಿಗೆ ಹಿತವಾಗುವ ಬದಲು ಹಿಂಸೆಯಾಗಿತ್ತು. ಆ ವೇಳೆಗೆ ಚಾಲಕ ಬಂದು ಹಾರ್ನ್ ಮಾಡುತ್ತಿದ್ದ. ಎಲ್ಲರೂ ಬಸ್ಸು ಹತ್ತಿದರು. ಆಗ ಕೆಳಗೆ ನಿಂತ ಕೆಲ ಮಹಿಳೆಯರು, ನನ್ನ ಗೆಳೆಯನ ತಾಯಿಯೂ ಸೇರಿ, ಕೊಂಚ ದೂರ ಹೋಗಿ ಮರದ, ಪೊಟರೆಯ ಮರೆ ಹುಡುಕಿ ಮೂತ್ರಬಾಧೆ ಪರಿಹರಿಸಿಕೊಂಡು ಬಂದರು. ನಮ್ಮ ಸಮಾಜದಲ್ಲಿ ಮಹಿಳೆ ಸಾರ್ವಜನಿಕ ಸ್ಥಳಗಳಲ್ಲಿ ಎದುರಿಸುತ್ತಿರುವ ಬಹು ಮುಖ್ಯ ಸಮಸ್ಯೆಯ ಒಂದು ಸಣ್ಣ ನಿದರ್ಶನವಿದು.

ನಮ್ಮಲ್ಲಿ ಪುರುಷರು ಮರ್ಯಾದೆಯ ಗಡಿ ದಾಟಿದವರು. ಎಲ್ಲೆಂದರಲ್ಲಿ, ಬೀದಿಬದಿಯಲ್ಲಿ ನಿಂತು ತಮ್ಮ ನಿಸರ್ಗಸಹಜ ಒತ್ತಡವನ್ನು ಪರಿಹರಿಸಿಕೊಂಡುಬಿಡಬಲ್ಲರು. ನಗರ ಪ್ರದೇಶವಾದರೆ ಕೊಂಚ ಹೊಲಸಾಗಿರುವ ಜಾಗ ಬೇಕಷ್ಟೆ! ಹೊಲಸನ್ನು ಮತ್ತಷ್ಟು ಹೊಲಸು ಮಾಡಲು! ಯಾವುದೇ ಕಾಂಪೌಂಡಿನ ಪಕ್ಕದ ಜಾಗವಾದರೂ ಆದೀತು. ಖಾಲಿ ಸೈಟಿದ್ದು ಗಿಡಗಂಟಿ ಬೆಳೆದಿದ್ದರಂತೂ ಪ್ರಶಸ್ತ ಜಾಗ. ಇವರಿಗೆ ಸಾರ್ವಜನಿಕ ಶೌಚಗೃಹದ ಅಗತ್ಯವೇ ಇಲ್ಲ. ಇದ್ದರೂ ಹೋಗುವುದಿಲ್ಲ. ಏಕೆಂದರೆ ಅದು ಮನುಷ್ಯ ಮಾತ್ರರು ಹೋಗುವ ಹಾಗಿರುವುದಿಲ್ಲ. ನಾವು ಗಾಂಧಿಜಿಯ ಜನ್ಮಸ್ಥಳ ನೋಡಲು ಗುಜರಾತಿನ ಪೋರಬಂದರಿಗೆ ಹೋಗಿದ್ದೆವು. ಅವರು ಹುಟ್ಟಿದ ಮನೆಯನ್ನು ನೋಡಿ ಹಿಂತಿರುಗಿ ಬರುವಾಗ ನಮ್ಮಲ್ಲಿ ಕೆಲವರಿಗೆ ಮೂತ್ರಬಾಧೆಯ ಸಮಸ್ಯೆ ಎದುರಾಯಿತು. ಕೊಂಚ ದೂರದಲ್ಲಿ ಸಾರ್ವಜನಿಕ ಶೌಚಗೃಹ ಕಾಣಿಸಿತು. ಎಲ್ಲರೂ ಹೋದೆವು. ಒಳಗೆ ಕಾಲಿಡಲಾರದಷ್ಟು ಅಸಹ್ಯವಾಗಿತ್ತು. ಮಹಾತ್ಮನ ಸನ್ನಿಧಿ ಕೆಲವರು ಅಲ್ಲಿಯೇ ಹೊರಗೆ ನಿಂತು ಮೂತ್ರ ಮಾಡುತ್ತಿದ್ದರು. ನಮ್ಮಲ್ಲೂ ಕೆಲವರು ಅವರನ್ನು ಅನಿವಾರ್ಯವಾಗಿ ಅನುಸರಿಸಿ ನಿರಾಳರಾದರು. ಆದರೆ ಇಲ್ಲಿಯೂ ನಮ್ಮ ಜೊತೆಗಿದ್ದ ಮಹಿಳೆಯರ ಗತಿ-ಸ್ಥಿತಿ? ನಾವು ಪ್ರವಾಸ ಹೋದಾಗಲೆಲ್ಲಾ ಕುಟುಂಬದವರು ಎದುರಿಸುವ ನಿರಂತರ ಸಮಸ್ಯೆಯಿದು. ನಮ್ಮ ನಾಡಿನ ಅನೇಕ ಪ್ರವಾಸಿ ತಾಣಗಳಲ್ಲಿ ಇದೇ ಸಮಸ್ಯೆ ಕಾಡುತ್ತದೆ.

ಲೋಹಿಯಾ ನಮ್ಮ ಪ್ರಗತಿಯ ಪರಿಕಲ್ಪನೆಯನ್ನು ಹೀಗೆ ವಿವರಿಸಿದ್ದಾರೆ: ‘ಎಲ್ಲಿಯವರೆಗೆ ನಮ್ಮ ಹೆಣ್ಣುಮಕ್ಕಳು ದೂರದಿಂದ ನೀರು ಹೊತ್ತು ತರುವುದನ್ನು ನಾವು ತಪ್ಪಿಸುವುದಿಲ್ಲವೋ, ನಿಸರ್ಗ ಸಹಜ ಒತ್ತಡ ಪರಿಹರಿಸಿಕೊಳ್ಳಲು ಕತ್ತಲಿಗೆ ಕಾಯುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಪ್ರಗತಿ ಎಂಬುದು ಹುಸಿ’. ನಮ್ಮ ಪ್ರಗತಿಯನ್ನು ಈ ಹಿನ್ನೆಲೆಯಲ್ಲಿ ಪರಾಮಶಿಸುವ ಅಗತ್ಯವಿದೆ. ನಮ್ಮ ತಾಯಂದಿರ ಮೂಲಭೂತ ಅನಿವಾರ್ಯ ಸಮಸ್ಯೆಯ ಬಗ್ಗೆಯೇ ಚಿಂತಿಸದ ನಾವು ಪ್ರಗತಿಯ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದೇವೆ. ದೊಡ್ಡ ದೊಡ್ಡ ಜಾಹಿರಾತುಗಳಲ್ಲಿ ಅಂಕಿ ಅಂಶಗಳ ಮೂಲಕ ನಮ್ಮ ಪ್ರಗತಿಯ ತುತ್ತೂರಿ ಊದುತ್ತಿದ್ದೇವೆ. ಇದು ಪ್ರಗತಿಯೇ?

ನಮ್ಮ ಮುಖ್ಯಮಂತ್ರಿಗಳು ಹೇಳಿದ್ದು ಅರ್ಧಸತ್ಯ. ನಿಜ, ಕುಡಿಯುವ ನೀರನ್ನು ಒದಗಿಸ ಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯ. ಹಾಗೆಯೇ ಶೌಚಗೃಹ ವ್ಯವಸ್ಥೆಯನ್ನು ಕಲ್ಪಿಸಬೇಕಾದದ್ದೂ ಅಷ್ಟೇ ಮುಖ್ಯ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

ಪ್ರತಿ ಮನೆಗೂ ಶೌಚಗೃಹ ಕಲ್ಪಿಸಬೇಕೆಂಬ ಆಶಯದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೆಲಸ ಮಾಡುತ್ತಿರುವುದು ನಿಜ. ಆ ಕಾರ್ಯ ಗಂಭೀರವಾಗಿ ನಡೆಯುತ್ತಿದೆ. ಆದರೆ ಅದೇ ಕಾಳಜಿ ಸಾರ್ವಜನಿಕ ಶೌಚಗೃಹಗಳ ಬಗ್ಗೆ ಇದ್ದಂತಿಲ್ಲ. ಅದರಲ್ಲೂ ನಮ್ಮ ಹೆಣ್ಣುಮಕ್ಕಳು ಮನೆಯಿಂದ ಹೊರಗೆ ಹೋದರಂತೂ ಈ ಸಮಸ್ಯೆ ತೀವ್ರವಾಗಿ ಕಾಡುತ್ತದೆ. ಮತ್ತೆ ಮನೆಗೆ ಬರುವವರೆಗೂ ಅವರಿಗೆ ಒತ್ತಡರಹಿತ ಸ್ಥಿತಿ ಸಾಧ್ಯವಿಲ್ಲವೆನ್ನುವಂತಾಗಿದೆ. ನಮ್ಮ ಶಾಲಾ ಕಾಲೇಜುಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಹೇಳಿಕೊಳ್ಳಲಾಗದ ನೋವಿನಿಂದ ನಮ್ಮ ಹೆಣ್ಣುಮಕ್ಕಳು ನರಳುತ್ತಿದ್ದಾರೆ. ಕೆಲವೊಮ್ಮೆ ಇದೇ ಕಾರಣದಿಂದ ತರಗತಿ ತಪ್ಪಿಸಿ ಮನೆಗೆ ಓಡಿದ್ದೂ ಉಂಟು. ಆಫೀಸುಗಳಲ್ಲಿಯೂ ಇದೇ ಸ್ಥಿತಿ. ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿಯೂ ಮಹಿಳೆಯರು ಈ ಸಂಕಷ್ಟ ಅನುಭವಿಸುತ್ತಾರೆ. ಈ ಸಮಸ್ಯೆಯ ಗಂಭೀರತೆ ಅನುಭವಿಸಿದವರಿಗೇ ಗೊತ್ತು. ನೊಂದವರ ನೋವ ನೋಯದವರೆತ್ತ ಬಲ್ಲರು? ಇದಕ್ಕೆ ಪರಿಹಾರವಿಲ್ಲವೇ?

ಒಂದು ಸಾಧ್ಯತೆ ಇತ್ತೀಚೆಗೆ ದಿಗ್ವಿಜಯ ಟಿವಿಯಲ್ಲಿ ಕಾರ್ಯಕ್ರಮವೊಂದನ್ನು ನೋಡುವಾಗ ಗೋಚರಿಸಿತು. ಸಂಗೀತಾ ಎಂಬ ಮಹಿಳೆಯೊಬ್ಬರು ‘ಸ್ಮೈಲ್’ ಎಂಬ ಚಾರಿಟಬಲ್ ಟ್ರಸ್ಟ್ ಮೂಲಕ ಖಾಸಗಿ ಕಂಪನಿಯ ನೆರವಿನೊಡನೆ ಬೆಂಗಳೂರಿನ ಹೊರವಲಯದ ಸರ್ಕಾರಿ ಶಾಲೆಯೊಂದರಲ್ಲಿ ಅತ್ಯಾಧುನಿಕ ಸುಸಜ್ಜಿತ ಶೌಚಗೃಹವನ್ನು ನಿರ್ಮಿಸಿಕೊಟ್ಟಿದ್ದಾರೆ. ಮಾತ್ರವಲ್ಲ, ಇಪ್ಪತ್ತು ವರ್ಷಗಳ ಕಾಲ ಅದನ್ನು ನಿರ್ವಹಣೆ ಮಾಡುವ ಹೊಣೆಯನ್ನೂ ಅವರು ವಹಿಸಿಕೊಂಡಿದ್ದಾರೆ. ಮೊದಲು ಆ ಶಾಲೆಯಲ್ಲಿ ದುಸ್ಥಿತಿಯಲ್ಲಿದ್ದ ಶೌಚಗೃಹ, ಈಗ ‘ಸ್ಮೈಲ್‘ ನಿರ್ಮಿಸಿರುವ ಶೌಚಗೃಹ ಎರಡನ್ನೂ ಕಿರುತೆರೆಯ ಮೇಲೆ ನೋಡಿದಾಗ ನಮ್ಮ ಜನ ಮನಸ್ಸು ಮಾಡಿದರೆ ಬದಲಾವಣೆ ಕಷ್ಟವಿಲ್ಲ ಅನ್ನಿಸಿತು. ಸಂಗೀತಾ ತಾವು ಚಿಕ್ಕಂದಿನಲ್ಲಿ ಅನುಭವಿಸಿದ ಹಿಂಸೆಯನ್ನು ಪ್ರಸ್ತಾಪಿಸಿ, ಮುಂದಿನ ತಲೆಮಾರು ಆ ಹಿಂಸೆ ಅನುಭವಿಸಬಾರದೆನ್ನುವ ಕಾಳಜಿಯಿಂದ ಈ ಕಾರ್ಯ ಕೈಗೊಂಡಿರುವುದಾಗಿ ಹೇಳಿದರು. ಅವರ ಸಾಮಾಜಿಕ ಕಾಳಜಿ ಅಭಿನಂದನಾರ್ಹ. ನಮ್ಮ ಟಿವಿ ಚಾನೆಲ್​ಗಳು ಅಪರೂಪಕ್ಕೆ ಇಂತಹ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡುವುದುಂಟು.

ನಾವು ಎಲ್ಲದಕ್ಕೂ ಸರ್ಕಾರದ ಕಡೆಯೇ ನೋಡುತ್ತೇವೆ. ಹಕ್ಕುಗಳ ಬಗ್ಗೆ ಮಾತನಾಡುವ ನಾವು ನಮ್ಮ ಕರ್ತವ್ಯದ ಬಗ್ಗೆ ಜಾಣತನದ ಮೌನ ವಹಿಸುತ್ತೇವೆ. ನಮ್ಮಲ್ಲಿ ಸಂಪನ್ಮೂಲದ ಕೊರತೆಯಿಲ್ಲ. ಆದರೆ ಅದರ ಸಮರ್ಪಕ ವಿನಿಯೋಗದ ಬಗ್ಗೆ ನಾವು ಚಿಂತಿಸುತ್ತಿಲ್ಲ.

ನಮ್ಮ ಸಾರ್ವಜನಿಕ ಸಂಸ್ಥೆಗಳು, ಖಾಸಗೀ ಸಂಸ್ಥೆಗಳು ಈ ದಿಕ್ಕಿನಲ್ಲಿ ಯೋಚಿಸಿದರೆ ಸಾಮಾಜಿಕ ಬದಲಾವಣೆ ಕಷ್ಟವೇನಲ್ಲ. ಸಾವಿರಾರು ಕೋಟಿ ಲಾಭ ಗಳಿಸುವ ಈ ಸಂಸ್ಥೆಗಳು ತಮ್ಮ ಲಾಭದ ಕಿಂಚಿತ್ ಭಾಗವನ್ನು ಸಾಮಾಜಿಕ ಕೆಲಸಗಳಿಗೆ ತೊಡಗಿಸಿದರೆ ಸಂಸ್ಥೆಗೂ ಗೌರವ, ಸಮಾಜಕ್ಕೂ ಉಪಯೋಗ. ಸಮಾಜದಿಂದ ಎಲ್ಲ ಉಪಯೋಗವನ್ನೂ ಪಡೆದುಕೊಳ್ಳುವ ಈ ಸಂಸ್ಥೆಗಳು ಉದ್ಯಮವಾಗಿಯಲ್ಲದೆ ಸಾಮಾಜಿಕ ಕಾಳಜಿಯಿಂದ ಏನನ್ನು ಮಾಡುತ್ತಿವೆ?

ಈ ಸಂಸ್ಥೆಗಳು ಮನಸ್ಸು ಮಾಡಿದರೆ ಸಾರ್ವಜನಿಕ ಶೌಚಗೃಹದ ಸಮಸ್ಯೆಯನ್ನು ಪರಿಹರಿಸುವುದು ಏನೇನೂ ಸಮಸ್ಯೆಯಲ್ಲ. ಅವರಲ್ಲಿ ಸಂಪತ್ತಿದೆ, ತಂತ್ರಜ್ಞಾನವಿದೆ, ಯೋಜನಾ ಮಾರ್ಗದರ್ಶನವಿದೆ, ನಿರ್ವಹಣಾ ಕೌಶಲವಿದೆ. ಮನಸ್ಸು ಮಾತ್ರ ಇಲ್ಲ. ಮನಸ್ಸು ಮಾಡಿದರೆ ನಮ್ಮ ಹೆಣ್ಣುಮಕ್ಕಳ ಬವಣೆಯನ್ನು ತಪ್ಪಿಸಿದ ಪುಣ್ಯಕ್ಕೆ, ಕೃತಜ್ಞತೆಗೆ ಅವರು ಪಾತ್ರರಾಗುತ್ತಾರೆ.

ಸಾರ್ವಜನಿಕ ಶೌಚಗೃಹದಲ್ಲಿ ಎರಡು ಸಮಸ್ಯೆಯಿದೆ. ಮೊದಲನೆಯದು ನಿರ್ಮಾಣ. ಮತ್ತೊಂದು ಅದರ ನಿರ್ವಹಣೆ. ಕೆಲಮಟ್ಟಿಗೆ ನಿರ್ಮಾಣವನ್ನು ಸರ್ಕಾರ ಮಾಡುತ್ತಿದೆ. ಆದರೆ ಅದರ ನಿರ್ವಹಣೆ ಶೋಚನೀಯ. ಸರ್ಕಾರ ನಿರ್ಮಿಸಿದ ಶೌಚಗೃಹಗಳು ಸರಿಯಾದ ನಿರ್ವಹಣೆಯಿಲ್ಲದೆ ಕೊಚ್ಚೆಗುಂಡಿಗಳಂತಾಗಿವೆ. ಹೀಗಾಗಿ ಅದರ ಸುತ್ತಮುತ್ತ ಕಾಲಿಡಲಾಗದಂತಹ ಪರಿಸ್ಥಿತಿ. ಸ್ವಚ್ಛವಾಗಿದ್ದ ಜಾಗಗಳೂ ಇದರಿಂದಾಗಿ ಕೊಳೆಗೇರಿಯಾಗಿ ರೂಪಾಂತರವಾಗುತ್ತಿವೆ. ಇದರಿಂದ ಏನು ಸಾಧಿಸಿದಂತಾಯಿತು?

ಹೀಗಾಗಿ ನಮ್ಮ ದೊಡ್ಡ ದೊಡ್ಡ ಕಂಪನಿಗಳು ಸಾರ್ವಜನಿಕ ಶೌಚಗೃಹ ನಿರ್ಮಿಸುವುದರ ಜೊತೆಗೆ ಅವುಗಳ ನಿರ್ವಹಣೆಯ ಹೊಣೆಯನ್ನೂ ಹೊತ್ತುಕೊಳ್ಳಬೇಕು. ಇದರಿಂದ ಏನು ಲಾಭ ಎಂಬ ಆಲೋಚನೆ ಬೇಡ. ದುರಂತವೆಂದರೆ ಇಂತಹ ಅವಕಾಶವನ್ನು ನಮ್ಮ ಉದ್ಯಮಿಗಳು ಕಡೆಗೆ ತಮ್ಮ ಸ್ವಾರ್ಥಕ್ಕೆ, ಲಾಭಕ್ಕೆ ಬಳಸಿಕೊಂಡು ಅದರ ಮೂಲ ಉದ್ದೇಶವೇ ಮರೆಯಾಗಿ ಸಾಮಾಜಿಕ ನ್ಯಾಯದಿಂದ ಅದು ದೂರವಾಗಿಬಿಡುತ್ತದೆ. ಇಂತಹ ಯೋಜನೆಗಳೂ ಉಳ್ಳವರ ‘ಸ್ವತ್ತಾ’ಗಿಬಿಡುತ್ತದೆ. ಹಾಗಲ್ಲದೆ ಇದೊಂದು ‘ಸಾಮಾಜಿಕ ಜವಾಬ್ದಾರಿ‘ ಎಂಬ ಅರಿವಿನಿಂದ ಇದನ್ನು ಮಾಡುವಂತಾಗಬೇಕು. ಇಂತಹ ಕಂಪನಿಗಳ ಸಿಇಓಗಳ ಒಂದು ತಿಂಗಳ ಸಂಬಳದಿಂದಲೇ ಸಾಕಷ್ಟು ಶೌಚಗೃಹಗಳನ್ನು ನಿರ್ಮಿಸಿ ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯ, ಸಾಮಾಜಿಕ ಕಾಳಜಿಯಿದ್ದರೆ!

ಕಾರಂತರು ಹೇಳುತ್ತಿದ್ದ ‘ಸಾಮಾಜಿಕ ಋಣ’ದ ಪರಿಕಲ್ಪನೆ ನೆನಪಾಗುತ್ತಿದೆ. ಈ ಸಮಾಜದಿಂದ ನಾವು ಏನೆಲ್ಲ ಪಡೆದಿದ್ದೇವೆ. ಅದಕ್ಕೆ ಬದಲಾಗಿ ಈ ಸಮಾಜಕ್ಕೆ ನಾವು ಏನನ್ನು ನೀಡುತ್ತಿದ್ದೇವೆ? ಪ್ರತಿಯೊಬ್ಬರೂ ಈ ನೆಲೆಯಲ್ಲಿ ಕೆಲವು ಕ್ಷಣ ಯೋಚಿಸಿದರೂ ಆರೋಗ್ಯಕರ ಬದಲಾವಣೆ ಸಾಧ್ಯ. ನಮ್ಮ ಬದುಕು ನರಕವಾಗುತ್ತಿದೆ ಎಂದು ನರಳುತ್ತಿರುವ ನಾವು ಅದನ್ನು ಸಹನೀಯವಾಗಿ ಮಾಡಲು ಸಾರ್ವಜನಿಕ ನೆಲೆಯಲ್ಲಿ ಏನನ್ನು ಮಾಡುತ್ತಿದ್ದೇವೆ? ಈ ದೇಶದ ಪ್ರಜೆಗಳಾಗಿ ನಮಗೆ ಯಾವುದೇ ರೀತಿಯ ಸಾಮಾಜಿಕ ಜವಾಬ್ದಾರಿ ಇಲ್ಲವೇ?

ಆಧುನಿಕ ಜಗತ್ತು ಸ್ವಾರ್ಥಕೇಂದ್ರಿತವಾದುದು. ಕೋಟ್ಯಂತರ ಖರ್ಚುಮಾಡಿ ಬಾತ್​ರೂಂ ಕಟ್ಟಿಸಿರುವ ಉದಾಹರಣೆಗಳು ನಮ್ಮ ಕಣ್ಮುಂದಿವೆ. ಅವು ಚಿನ್ನದ ನಲ್ಲಿಗಳಿಂದ ಅಲಂಕೃತವಾಗಿವೆ ಎಂದೂ ಓದಿದ್ದೇವೆ. ಆದರೆ ಸಾರ್ವಜನಿಕ ಶೌಚಗೃಹಗಳ ಆಲೋಚನೆ ಮನಸ್ಸಿನಲ್ಲಿ ಸುಳಿಯುವುದೂ ಇಲ್ಲ. ಉಳ್ಳವರು ಶಿವಾಲಯವ ಮಾಡುವ ಬದಲು ಶೌಚಗೃಹವ ಮಾಡಿದರೆ ನಮ್ಮ ತಾಯಂದಿರು ಸಾರ್ವಜನಿಕ ಜೀವನದಲ್ಲಿ ಒತ್ತಡರಹಿತರಾಗಿ ಬದುಕಬಹುದು. ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು ಅಂತಹ ಉದಾರ ಮನಸ್ಸಿನವರು ಮುಂದೆ ಬಂದರೆ ಅವರ ಸಾರ್ವಜನಿಕ ಸೇವೆಗೆ ಅವಕಾಶ ಕಲ್ಪಿಸಿಕೊಡಬೇಕು. ಏಕೆಂದರೆ ಸಾರ್ವಜನಿಕ ಸೇವೆಯನ್ನು ನಮ್ಮ ಪುಢಾರಿಗಳು ಗುತ್ತಿಗೆ ತೆಗೆದುಕೊಂಡು ಬಿಟ್ಟಿದ್ದಾರೆ. ನನ್ನ ವಿದ್ಯಾರ್ಥಿಯೊಬ್ಬ ತನ್ನ ವಿಸಿಟಿಂಗ್ ಕಾರ್ಡ್ ನೀಡಿದ. ಅದರಲ್ಲಿ ‘ಸಮಾಜಸೇವಕ’ ಎಂದಿತ್ತು. ‘ಏನಯ್ಯಾ, ಸಮಾಜಸೇವೆ’ ಎಂದೆ. ‘ಸಂಪಾದನೆಗೆ ದಾರಿ ಸರ್’ ಎಂದು ಪ್ರಾಮಾಣಿಕವಾಗಿ ಉತ್ತರ ನೀಡಿದ. ಆತ ರಾಜಕಾರಣಿಗಳ ಹಿಂದೆ ಮುಂದೆ ಓಡಾಡುತ್ತಿರುತ್ತಾನೆ. ನಮ್ಮ ಸಮಾಜಸೇವೆಯ ಸ್ವರೂಪದ ಒಂದು ಸಣ್ಣ ನಿದರ್ಶನವಿದು. ನಮ್ಮ ಸಾಮಾಜಿಕ ಕಾಳಜಿ ಹಾಗಾಗದಿರಲಿ. ಜನಸಮುದಾಯಕ್ಕೆ ಕಿಂಚಿತ್ ಉಪಯೋಗವಾಗುವಂತಿರಲಿ.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *

Back To Top