ನಮ್ಮೊಳಗಿನ ಕರುಣೆ, ದಾನ ಅನುಷ್ಠಾನಕ್ಕೆ ಬರಲಿ

ಯಲ್ಲಾಪುರ: ನಮಗಾಗಿ ನಾವು ಅತ್ತರೆ ಅದು ಸ್ವಾರ್ಥವೆನಿಸುತ್ತದೆ. ನಮ್ಮೊಳಗಿನ ದಯೆ, ಕರುಣೆ, ದಾನ ಎಲ್ಲ ಗುಣಗಳು ಆದರ್ಶಪೂರ್ಣವಾಗಿ ಅನುಷ್ಠಾನಕ್ಕೆ ಬರಬೇಕು ಎಂದು ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ತಾಲೂಕಿನ ತುಂಬೇಬೀಡಿನ ಶ್ರೀ ಮಹಾಗಣಪತಿ ದೇವಸ್ಥಾನ, ಶ್ರೀ ಸದಾಶಿವ ದೇವಸ್ಥಾನ ಹಾಗೂ ಶ್ರೀ ಹನುಮಂತ ದೇವಸ್ಥಾನಗಳ ಟ್ರಸ್ಟ್ ಆಯೋಜಿಸಿದ್ದ ವಾರ್ಷಿಕ ದೇವತಾ ಕಾರ್ಯ ಹಾಗೂ ಭರತನಹಳ್ಳಿ ಸೀಮಾ ಪರಿಷತ್, ಧಾರ್ವಿುಕ ಪರಿಷತ್ ಹಾಗೂ ಚಿಪಗೇರಿ ಭಾಗಿ ಪರಿಷತ್​ಗಳು ಹಮ್ಮಿಕೊಂಡಿದ್ದ ಸೀಮಾ ಭಿಕ್ಷ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಪ್ರತಿಯೊಬ್ಬರೂ ವಿವೇಕವಂತರಾಗಿ ಇಂದ್ರಿಯಾಕರ್ಷಣೆಗಳಿಗೆ ಕಡಿವಾಣ ಹಾಕಿದರೆ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಅತಿಯಾದ ಸಂಪಾದನೆಯ ಆಸೆ ತೊರೆದು ಸಂಪಾದನೆಯ ಕೆಲ ಭಾಗವನ್ನು ಕಷ್ಟದಲ್ಲಿರುವ ವ್ಯಕ್ತಿಗಳಿಗೆ ನೀಡಬೇಕು ಎಂದರು.

ಹಿರಿಯ ವೈದಿಕ ಶಿವರಾಮ ಭಟ್ಟ ಮಾಳಕೊಪ್ಪ ಮತ್ತು ನ್ಯಾಯಾಧೀಶ ಗಣಪತಿ ಭಟ್ಟ ಬಾಳ್ಕಲ್ ದಂಪತಿಯನ್ನು ಸೀಮೆಯ ಪರವಾಗಿ ಶ್ರೀಗಳು ಸನ್ಮಾನಿಸಿದರು. ಜ್ಯೋತಿಷಾಚಾರ್ಯ ವಿ. ನಾಗೇಂದ್ರ ಭಟ್ಟ ಹಿತ್ಲಳ್ಳಿ ಬರೆದ ‘ತಾರಾನುಕೂಲ್ಯಂ’ ಪುಸ್ತಕವನ್ನು ಶ್ರೀಗಳಿಗೆ ಸಮರ್ಪಿಸಲಾಯಿತು. ಗೋಪಾಲ ಹೆಗಡೆ ಕಂಪ್ಲಿ ದಂಪತಿ ಶ್ರೀಗಳಿಗೆ ಫಲ ಸಮರ್ಪಣೆ ಮಾಡಿದರು. ಸೀಮಾ ಪರಿಷತ್ ಉಪಾಧ್ಯಕ್ಷ ಭಾಸ್ಕರ ಹೆಗಡೆ ಹಿರೇಸರ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಮಹಾರುದ್ರಹವನ, ವೇದ ಪಾರಾಯಣ, ಮಾತೃ ಮಂಡಳಿಯಿಂದ ಕುಂಕುಮಾರ್ಚನೆ ನಡೆಯಿತು.

ಸೀಮಾ ಪರಿಷತ್ ಅಧ್ಯಕ್ಷ ಶ್ರೀಪಾದ ಹೆಗಡೆ, ಕಾರ್ಯದರ್ಶಿ ಸುರೇಶ ಹೆಗಡೆ ಕೋಸಗುಳಿ, ಗಣೇಶ ಹೆಗಡೆ ಗೋರ್ಸಗದ್ದೆ, ಎನ್.ಜಿ. ಹೆಗಡೆ ಭಟ್ರಕೇರಿ ಇತರರಿದ್ದರು.