ನಮ್ಮನ್ನೇ ಮತ್ತೆ ಅಧಿಕಾರಕ್ಕೆ ತನ್ನಿ

ಕುಷ್ಟಗಿ/ಕನಕಗಿರಿ/ಗಂಗಾವತಿ: ತಮ್ಮ ಸರ್ಕಾರದ ನಾಲ್ಕುವರೆ ವರ್ಷದ ಸಾಧನೆ ಸಂಭ್ರಮದ ರಿಪೋರ್ಟ್ ಕಾರ್ಡ್​ನೊಂದಿಗೆ ಹೈದರಾಬಾದ್ ಕರ್ನಾಟಕ ಭಾಗದ ಜನರ ಮುಂದೆ ಆಗಮಿಸಿರುವ ಸಿಎಂ ಸಿದ್ದರಾಮಯ್ಯ ಗುರುವಾರ ಕೊಪ್ಪಳ ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶನ ನಡೆಸಿದರು.

‘ಕೋಮುವಾದಿ ಬಿಜೆಪಿಗೆ ಮತ ಕೊಡಬೇಡಿ, ನಮ್ಮ ಪಕ್ಷವನ್ನೇ ಮತ್ತೆ ಅಧಿಕಾರಕ್ಕೆ ತನ್ನಿ’ ಎಂದು ಸಾಧನಾ ಸಂಭ್ರಮ ವೇದಿಕೆಯಿಂದಲೇ ಸಿಎಂ ಸಿದ್ದರಾಮಯ್ಯ ಜನರಿಗೆ ಕರೆಕೊಟ್ಟರು. ‘ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ ಸೇರಿ ಹತ್ತಾರು ಯೋಜನೆಗಳನ್ನು ಯಡಿಯೂರಪ್ಪ ನೀಡಿಲ್ಲ ಎಂದಾದ ಮೇಲೆ ಅವರಿಗೇಕೆ ಮತ ಕೊಡುತ್ತೀರಿ, ಮತ ಕೊಡಕೂಡದು’ ಎಂದು ಜನರಿಗೆ ಅಪ್ಪಣೆ ಹೊರಡಿಸಿದರು. ಜತೆಗೆ ಕೊಪ್ಪಳದ ಎಲ್ಲ ಐವರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಕರೆಯಿತ್ತರು. ಬೆಳಗ್ಗೆ ಕುಷ್ಟಗಿಯಲ್ಲಿ ಕಾರ್ಯ ಕರ್ತರ ಸಮಾವೇಶದಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ, ಮಧ್ಯಾಹ್ನ ಕನಕಗಿರಿಯಲ್ಲಿ ಹಾಗೂ ಸಂಜೆ ಗಂಗಾವತಿಯಲ್ಲಿ ನಡೆದ ಸಾಧನಾ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿವಿಧ ಯೋಜನೆಗೆ ಚಾಲನೆ- ಶಂಕುಸ್ಥಾಪನೆ ನೆರವೇರಿಸಿದರು.

ಬಾಯಿ ತಪ್ಪಿದ ಸಿಎಂ: ಕುಷ್ಟಗಿಯಲ್ಲಿ ಸಿಎಂ ಮಾತನಾಡುವ ಭರದಲ್ಲಿ ಬಾಯಿತಪ್ಪಿ ‘ರಾಹುಲ್ ಗಾಂಧಿ ಹತ್ಯೆ’ ಎಂದರು. ರಾಜೀವ್​ಗಾಂಧಿ ಹತ್ಯೆ ಎನ್ನುವ ಬದಲು ಹೋಗಿ ರಾಹುಲ್ ಗಾಂಧಿ ಹತ್ಯೆ ಎಂದು ಎರಡು ಬಾರಿ ಹೇಳಿದರು. ಕೂಡಲೇ ಸಾವರಿಸಿಕೊಂಡ ಸಿಎಂ, ನಾನು ರಾಜೀವ್ ಗಾಂಧಿ ಅಂದು ಹೇಳುತ್ತಿದ್ದೆ, ಆದರೆ ಆದರೆ ನೀವೇ ಮಧ್ಯೆ ಬಾಯಿ ಹಾಕಿ ರಾಹುಲ್ ಹೆಸರು ಬರುವಂತೆ

ಮಾಡಿದಿರಿ ಎಂದು ಹೇಳಿದರು. ರಾಜೀವ್ ಗಾಂಧಿ ಹತ್ಯೆಯಾಗದಿದ್ದರೆ ನಾನು ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಗೆಲ್ಲುತ್ತಿದ್ದೆ. ಅಕಸ್ಮಾತ್ ಗೆದ್ದಿದ್ದರೆ ಇವತ್ತು ನಾನು ಸಿಎಂ ಆಗುತ್ತಿರಲಿಲ್ಲ ಎಂದರು.

ಮುಖ್ಯಾಂಶಗಳು

# ಚುನಾವಣೆಗೆ ನಾವು ತಯಾರಾಗಬೇಕು, ನಮಗೆ ಕನಕಗಿರಿ ಉತ್ಸವ ಹಾಗೂ ಆನೆಗುಂದಿ ಉತ್ಸವಕ್ಕೆ ಹಣ ಕೊಡಿ ಎಂದು ಸಿಎಂಗೆ ಬೇಡಿಕೆ ಇಟ್ಟ ಶಾಸಕ ಶಿವರಾಜ್ ತಂಗಡಗಿ, ಒಪ್ಪಿದ ಸಿಎಂ.

# ಜೆಡಿಎಸ್​ನಿಂದ ಹೊರಬಂದಿರುವ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಕನಕಗಿರಯಲ್ಲಿ ನಡೆದ ಸಾಧನಾ ಸಂಭ್ರಮ ವೇದಿಕೆಯಲ್ಲಿ ಪ್ರತ್ಯೇಕ್ಷ.

# ಶಿವರಾಜ್ ತಂಗಡಗಿ ಮೇಲೆ ಯಾವುದೇ ಆರೋಪಗಳಿರಲಿಲ್ಲ, ಬೇರೆಯವರಿಗೆ ಅವಕಾಶ ಕೊಡಬೇಕೆಂದು ಅವರ ಸಚಿವ ಸ್ಥಾನ ವಾಪಾಸು ಪಡೆಯಲಾಯಿತೆಂದು ಕ್ಲೀನ್​ಚಿಟ್ ನೀಡಿದ ಸಿಎಂ.

# ಮೋದಿ ಮೂಗು ಹಿಡಿದು ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಿಸಿ ಎಂದು ಪರಿವರ್ತನಾ ರ್ಯಾಲಿಗೆ ಬರುವ ಬಿಎಸ್​ವೈಗೆ ಕೇಳಿ ಎಂದು ಸಿಎಂ ಸಿದ್ದರಾಮಯ್ಯ ಕರೆ

# ಅಮರೇಗೌಡ ಬಯ್ಯಾಪುರ, ಬಸವರಾಜ ರಾಯರಡ್ಡಿ, ಶಿವರಾಜ್ ತಂಗಡಗಿ, ಇಕ್ಬಾಲ್ ಅನ್ಸಾರಿ ಹಾಗೂ ರಾಘವೇಂದ್ರ ಹಿಟ್ನಾಳ್​ಗೆ ಆಶೀರ್ವಾದ ಮಾಡಿ

ಹೊಸ ಧರ್ಮ ದಾಳ ಉರುಳಿಸುವ ಸುಳಿವು

ಹೊಸ ಧರ್ಮ ರಚನೆ ವಿಚಾರದಲ್ಲಿ ತಮ್ಮ ಬದ್ಧತೆ ಪ್ರದರ್ಶಿಸಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ, ಚುನಾವಣೆಗೆ ಮುನ್ನ ಲಿಂಗಾಯತ ಹೊಸ ಧರ್ಮದ ಪ್ರಸ್ತಾಪವನ್ನು ಕೇಂದ್ರಕ್ಕೆ ಕಳುಹಿಸಲು ನಿರ್ಧರಿಸಿದ್ದಾರೆ. ಈ ಮೂಲಕ ಹೊಸ ಧರ್ಮ ರಚನೆ ಚೆಂಡನ್ನು ತಮ್ಮ ಅಂಗಳದಿಂದ ಕೇಂದ್ರದ ಅಂಗಳಕ್ಕೆ ದಾಟಿಸುವ ಮೂಲಕ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ದಾಳ ಉರುಳಿಸಲು ಮುಂದಾಗಿದ್ದಾರೆ. ಈ ಬಗ್ಗೆ ಕೊಪ್ಪಳದಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾನು ಯಾವುದೇ ಧರ್ಮ ಒಡೆಯುತ್ತಿಲ್ಲ. ನನ್ನ ಬಳಿ ಇರುವ ಮನವಿಯನ್ನು ಶೀಘ್ರವೇ ಕೇಂದ್ರಕ್ಕೆ ಪ್ರಸ್ತಾಪ ಕಳುಹಿಸಲಾಗುವುದು’ ಎಂದರು.

ಸೋತ 8 ಕ್ಷೇತ್ರಗಳಲ್ಲಿ 8 ಪ್ರಚಾರ ಸಭೆ

ಬೆಂಗಳೂರು: ಸೋತ ಕ್ಷೇತ್ರಗಳಲ್ಲಿ ಕೆಪಿಸಿಸಿ ಪ್ರವಾಸ ಡಿ.21ರಿಂದ ಆರಂಭವಾಗಲಿದ್ದು, ಕ್ಷೇತ್ರಕ್ಕೊಂದು ಸಮಾವೇಶದಂತೆ 8 ವಿಧಾನಸಭೆ ಕ್ಷೇತ್ರಗಳಿಗೆ ಕೈ ಮುಖಂಡರ ತಂಡ ತೆರಳಲಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್, ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ, ಆಸ್ಕರ್ ಫರ್ನಾಂಡೀಸ್, ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ್ ಹಾಗೂ ಸಂಪುಟದ ಹಿರಿಯ ಸದಸ್ಯರು ಈ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಸಂಭಾವ್ಯರ ಪಟ್ಟಿ ಸುಳ್ಳು: ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸುಳ್ಳು. ಕಾಂಗ್ರೆಸ್​ನಲ್ಲಿ ಟಿಕೆಟ್ ಹಂಚಿಕೆಗೆ ಸೂಕ್ತ ನಿಯಮವಿದೆ. ಎಲ್ಲ ಸಂಭಾವ್ಯರ ಪಟ್ಟಿ ಕೇವಲ ಕಾಲ್ಪನಿಕ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ವೋಟಿಂಗ್ ಮಷಿನ್ ದುರುಪಯೋಗ

ಉತ್ತರ ಪ್ರದೇಶ, ಗುಜರಾತ್​ನಲ್ಲಿ ಇವಿಎಂ ದುರುಪಯೋಗದ ಬಗ್ಗೆ ಆರೋಪ ಕೇಳಿಬಂದಿದೆ. ಕರ್ನಾಟಕದಲ್ಲಿಯೂ ಇದು ಮರುಕಳಿಸಬಹುದು. ದೇಶಾದ್ಯಂತ ಪಕ್ಷ ಹೋರಾಟ ನಡೆಸಲಿದೆಂದು ಪರಮೇಶ್ವರ್ ಹೇಳಿದ್ದಾರೆ.

Leave a Reply

Your email address will not be published. Required fields are marked *