ನಮ್ಮನ್ನು ಬಿಟ್ಟು ಹೋಗ್ಬೇಡಿ ಟೀಚರ್!

ಧಾರವಾಡ: ಇಂದಿನ ದಿನಗಳಲ್ಲಿ ಶಿಕ್ಷಕರಿಗೆ ಅಗೌರವ ತೋರುವವರೇ ಹೆಚ್ಚು. ಆದರೆ ಈ ಮಕ್ಕಳು ಮಾತ್ರ ತಮ್ಮ ಶಾಲೆಯಿಂದ ವರ್ಗವಾದ ನೆಚ್ಚಿನ ಶಿಕ್ಷಕಿಯನ್ನು ಬಿಟ್ಟು ಕೊಡದೆ ಶಾಲೆಯಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನರೇಂದ್ರ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1998ರಿಂದ ಸೇವೆ ಸಲ್ಲಿಸುತ್ತಿರುವ ರೇಣುಕಾ ಜಾಧವ ಅವರೇ ಮಕ್ಕಳ ಪ್ರೀತಿಗೆ ಪಾತ್ರರಾದವರು. ಹಿರಿತನದ ಮೇಲೆ ಬಡ್ತಿ ಹೊಂದಿದ ಕಾರಣ ಕೌನ್ಸೆಲಿಂಗ್​ಗೆ ತೆರಳಬೇಕಿತ್ತು. ಇದನ್ನು ಅರಿತ ಮಕ್ಕಳು, ನಮ್ಮ ಟೀಚರ್ ಶಾಲೆ ಬಿಟ್ಟು ಹೋಗುತ್ತಾರೆ ಎಂದು ಗೋಳಿಟ್ಟರು.

ಯಾವುದೇ ಕಾರಣಕ್ಕೂ ನೀವು ಬೇರೆ ಶಾಲೆಗೆ ಹೋಗಲು ಬಿಡುವುದಿಲ್ಲ ಎಂದು ಕಣ್ಣೀರಿಡುತ್ತಲೇ ಶಿಕ್ಷಕಿಗೆ ಹೇಳಿದರಲ್ಲದೇ, ಗ್ರಾಮದ ಹಿರಿಯರು ಹಾಗೂ ಶಾಲಾ ಸುಧಾರಣಾ ಸಮಿತಿ ಸದಸ್ಯರಿಗೂ ಮನವಿ ಮಾಡಿದರು. ಇದಲ್ಲದೇ, ಶಾಲೆಗೆ ಮಧ್ಯಾಹ್ನ ಬಂದ ಬಿಸಿಯೂಟದ ವಾಹನದಿಂದ ಊಟವನ್ನು ಇಳಿಸಲು ಬಿಡದೆ ಊಟ ಬೇಡ ಎಂದು ಹೇಳುವ ಮೂಲಕ ತಮ್ಮ ಸಮರ್ಪಣಾ ಭಾವ ಪ್ರದರ್ಶಿಸಿದರು.

ವಿದ್ಯಾರ್ಥಿಗಳ ಪ್ರೀತಿ ಕಂಡ ಶಿಕ್ಷಕಿ ರೇಣುಕಾ ಅವರು ಸೇರಿದಂತೆ ಪೋಷಕರು, ಗ್ರಾಮಸ್ಥರೂ ಕಣ್ಣೀರಿಟ್ಟರು. ಮಕ್ಕಳ ವಿರೋಧದ ಮಧ್ಯೆಯೂ ಶಾಲಾ ಮೇಲುಸ್ತುವಾರಿ ಸಮಿತಿಯವರು ರೇಣುಕಾ ಅವರನ್ನು ಅನಿವಾರ್ಯವಾಗಿ ಬೀಳ್ಕೊಟ್ಟರು.

ಇಷ್ಟೆಲ್ಲದರ ನಡುವೆ ರೇಣುಕಾ ಅವರು ಕೋಟೂರು ಅಥವಾ ಲೋಕೂರು ಗ್ರಾಮಗಳ ಪೈಕಿ ಒಂದು ಗ್ರಾಮದ ಶಾಲೆ ಆಯ್ಕೆ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಡಿಡಿಪಿಐ ಅವರನ್ನು ಭೇಟಿ ಮಾಡಿ ವರ್ಗಾವಣೆ ರದ್ದುಗೊಳಿಸುವಂತೆ ಮನವಿ ಮಾಡಿದರು. ಡಿಡಿಪಿಐ ಅವರು ಶಿಕ್ಷಕಿ ಮಕ್ಕಳ ಪ್ರೀತ್ಯಾದರಕ್ಕೆ ಪಾತ್ರವಾಗಿರುವ ವಿಷಯ ತಿಳಿದು, ಮಕ್ಕಳ ಹಿತದೃಷ್ಟಿಯಿಂದ ರೇಣುಕಾ ಜಾಧವ ಅವರ ವರ್ಗಾವಣೆ ರದ್ದು ಮಾಡಲು ಒಪ್ಪಿಗೆ ನೀಡಿದ್ದಾರೆ. ಶಿಕ್ಷಕಿಯಿಂದ ಈ ಕುರಿತು ಪತ್ರ ಬಂದರೆ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *