ನಮೋ ಭಾರತ್ ತಂಡದಿಂದ ನಮೋಥಾನ್

ಬೆಂಗಳೂರು: ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ನಮೋ ಭಾರತ್ ತಂಡ ಶನಿವಾರ ನ್ಯಾಷನಲ್ ಕಾಲೇಜು ಆಟದ ಮೈದಾನ ಬಳಿ ‘ನಮೋಥಾನ್’ ಹೆಸರಿನ 5ಕೆ ಮ್ಯಾರಥಾನ್ ಆಯೋಜಿಸಿತ್ತು.

ಬೆಳ್ಳಂಬೆಳಗ್ಗೆ 4 ಸಾವಿರಕ್ಕೂ ಹೆಚ್ಚು ಜನರು ಮ್ಯಾರಥಾನ್​ನಲ್ಲಿ ಭಾಗವಹಿಸಿದ್ದರು. ಸೈಕ್ಲೋಥಾನ್, ವಾಕಾಥಾನ್ ಮತ್ತು ಮ್ಯಾರಥಾನ್ ಎಂಬ ಹಂತಗಳಲ್ಲಿ ನಮೋಥಾನ್ ನಡೆಯಿತು. ಈ ನಮೋಥಾನ್​ಗೆ ಅದಮ್ಯ ಚೇತನ ಮುಖ್ಯಸ್ಥೆ್ಥ ಡಾ. ತೇಜಸ್ವಿನಿ ಅನಂತಕುಮಾರ್ ಚಾಲನೆ ನೀಡಿದರು.

ಬೆಳಗ್ಗೆ 5.30ಕ್ಕೆ ಆರಂಭವಾದ ನಮೋ ಥಾನ್​ನಲ್ಲಿ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಭಾಗವಹಿಸಿದ್ದರು. ಗ್ರ್ಯಾಂಡ್ ಮಾಸ್ಟರ್ ಪಿಯೂಷ್ ಜೀ ಅವರ ಪವರ್ ಯೋಗ ಪ್ರದರ್ಶನ ನಂತರ ಶಂಖನಾದ ಮೊಳಗಿತು. ಜನರು ಪ್ರಧಾನಿ ನರೇಂದ್ರ ಮೋದಿ ಅವರ ‘ಹಮ್ ಫಿಟ್ ಥೋ ಇಂಡಿಯಾ ಫಿಟ್’ ಎಂಬ ಆಶಯದೊಂದಿಗೆ ಸದೃಢ ಭಾರತ ಕಟ್ಟಲು ಮಂದಾಗಬೇಕು. ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬರಬೇಕೆಂದು ಘೋಷಣೆ ಕೂಗಿದರು.

‘ಮೋದಿ ಮತ್ತೊಮ್ಮೆ’, ‘ದೇಶಕ್ಕಾಗಿ ಮೋದಿ’, ‘ಮೋದಿಗಾಗಿ ನಾವು’ ಎಂಬಿತ್ಯಾದಿ ಘೋಷವಾಕ್ಯಗಳ ಜತೆಗೆ 5ಕೆ ರನ್ ಆರಂಭವಾಗಿ 40 ನಿಮಿಷದಲ್ಲಿ ಪೂರ್ಣಗೊಂಡಿತು. ನಮೋಥಾನ್ ಎಂಬ ಹ್ಯಾಷ್​ಟಾಗ್ ಟ್ವಿಟ್ಟರ್​ನಲ್ಲಿ ಟ್ರೆಂಡ್ ಆಗಿದ್ದು, ಕಾರ್ಯಕ್ರಮದ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಬಸವನಗುಡಿ ಸುತ್ತಲಿನ ರಸ್ತೆಗಳ ಮೂಲಕ ಚಲಿಸಿ ಮತ್ತೆ ಆಟದ ಮೈದಾನಕ್ಕೆ ಬಂದು ಸೇರುವ ಮೂಲಕ ಕೊನೆಗೊಂಡಿತು.

ನಮೋಭಾರತ್ ತಂಡದ ಅಧ್ಯಕ್ಷ ಚೇತನ್​ಕುಮಾರ್, ಪ್ರಧಾನ ಕಾರ್ಯದರ್ಶಿ ನೀರಜ್ ಕಾಮತ್, ದೀಪ್​ರಾಜ್ ಉಡುಪ, ಮಾಧ್ಯಮ ಸಮನ್ವಯಕಾರ ಶ್ರೀನಿವಾಸ ಹಂಪನ, ನ್ಯೂ ಹಾರಿಜನ್ ಸಮೂಹ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಮೋಹನ್ ಮಂಗ್ನಾನಿ, ಗೀತ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *