ನಮಸ್ತೇ ಸದಾ ವತ್ಸಲೇ ಮಾತೃಭೂಮಿ….

ಹುಬ್ಬಳ್ಳಿ: ವಿಜಯದಶಮಿ ನಿಮಿತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್) ಹುಬ್ಬಳ್ಳಿ ಮಹಾನಗರ ಘಟಕದ ಗಣವೇಷಧಾರಿಗಳಿಂದ ಭಾನುವಾರ ನಗರದಲ್ಲಿ ನಡೆದ ಬೃಹತ್ ಪಥ ಸಂಚಲನ ದಸರಾ ಹಬ್ಬದ ಸೊಬಗನ್ನು ಮೆಲುಕು ಮಾಡುವಂತೆ ಮಾಡಿತು.

ಇಲ್ಲಿಯ ನೆಹರು ಮೈದಾನದಿಂದ ಪ್ರತ್ಯೇಕ 2 ಮಾರ್ಗದಲ್ಲಿ ಸ್ವಯಂ ಸೇವಕರು ಪಥ ಸಂಚಲನ ಆರಂಭಿಸಿದರು. ಒಂದು ತಂಡದವರು ಸರ್. ಸಿದ್ಧಪ್ಪ ಕಂಬಳಿ ಮಾರ್ಗ, ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನ ಪೇಟ, ತುಳಜಾಭವಾನಿ ವೃತ್ತ, ಪೆಂಡಾರಗಲ್ಲಿ, ಶಂಕರಮಠ, ಸರಾಫಗಟ್ಟಿ, ಜವಳಿ ಸಾಲ, ದುರ್ಗದಬೈಲ್ ವೃತ್ತ ಮಾರ್ಗವಾಗಿ ಮರಳಿ ಮೈದಾನಕ್ಕೆ ಆಗಮಿಸಿದರು. ಇನ್ನೊಂದು ತಂಡದವರು ಜೆ.ಸಿ. ನಗರ, ಶಕ್ತಿ ರಸ್ತೆ, ಸ್ಟೇಶನ್ ರಸ್ತೆ, ಗಣೇಶಪೇಟೆ ವೃತ್ತ, ಸಿಬಿಟಿ, ಮಕಾನದಾರ ಗಲ್ಲಿ, ಮಂಗಳವಾರ ಪೇಟೆ, ಮಾರುತಿ ಗಲ್ಲಿ, ರಾಧಾಕೃಷ್ಣ ಗಲ್ಲಿ, ದುರ್ಗದಬೈಲ್ ವೃತ್ತದ ಮೂಲಕ ಬಂದು ಮೊದಲನೇ ತಂಡವನ್ನು ಸೇರಿಕೊಂದು ಮುಂದುವರಿದರು.

ಹೂವಿನ ಸುರಿಮಳೆ…

ಪಥ ಸಂಚಲನದುದ್ದಕ್ಕೂ ಸಾರ್ವಜನಿಕರು ಸ್ವಯಂ ಸೇವಕರ ಮೇಲೆ ಹೂವಿನ ಮಳೆ ಸುರಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗಣವೇಷಧಾರಿಗಳ ಸ್ವಾಗತಕ್ಕಾಗಿ ರಸ್ತೆಯುದ್ದಕ್ಕೂ ರಂಗೋಲಿ ಚಿತ್ತಾರ, ಕೇಸರಿ ಸ್ವಾಗತ ಕಮಾನು ನಿರ್ವಿುಸಿದ್ದರು. ಮಹಿಳೆಯರು, ಮಕ್ಕಳು, ಮಾರುಕಟ್ಟೆಗೆ ಬಂದಿದ್ದ ಗ್ರಾಮೀಣ ಭಾಗದ ಜನರು ಮಾರ್ಗದುದ್ದಕ್ಕೂ ನಿಂತು ಪಥಸಂಚಲನದ ಶಿಸ್ತನ್ನು ಕಣ್ತುಂಬಿಕೊಂಡರು. ಚಿಕ್ಕಮಕ್ಕಳೂ ಗಣವೇಷಧಾರಿಗಳಾಗಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಹಬ್ಬ ಹಿಂದು ಧರ್ಮ ರಕ್ಷಣೆಯ ಸಂದೇಶ

ಸಂಜೆ ನೆಹರು ಮೈದಾನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಬೌದ್ಧಿಕ ಭಾಷಣ ಮಾಡಿದ ಹಿಂದು ಜಾಗರಣ ವೇದಿಕೆ ದಕ್ಷಿಣ ಭಾರತ ಸಂಚಾಲಕ ಶೃಂಗೇರಿಯ ಜಗದೀಶ ಕಾರಂತ, ನಮ್ಮ ಹಬ್ಬ ಹರಿದಿನಗಳು ಆಚರಣೆಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿಯೊಂದು ಹಬ್ಬ ಹಿಂದು ಧರ್ಮ ರಕ್ಷಣೆಯ ಸಂದೇಶ ಮತ್ತು ಸ್ಪೂರ್ತಿ ನೀಡುತ್ತದೆ. ಧರ್ಮದ ರಕ್ಷಣೆಗಾಗಿ ದುಷ್ಟರ ಸಂಹಾರ ಮಾಡಿರುವುದರ ಸಂಕೇತವಾಗಿ ವಿಜಯದಶಮಿಯನ್ನು ಆಚರಿಸಲಾಗುತ್ತದೆ ಎಂದರು.

ಸ್ವಾತಂತ್ರ್ಯ ನಂತರ ಕಮ್ಯುನಿಸ್ಟರ ತುಳಿತದ ನಡುವೆಯೂ ಆರ್​ಎಸ್​ಎಸ್ 93 ವರ್ಷಗಳಿಂದ ನಿರಂತರವಾಗಿ ಬೆಳೆದು ಬಂದಿದೆ. ಇದು ದೇಶ ಮತ್ತು ಹಿಂದು ಧರ್ಮ ರಕ್ಷಣೆಗಾಗಿ ಇರುವ ಸಂಘಟನೆ. ಭಾರತವನ್ನು ಹಿಂದು ರಾಷ್ಟ್ರವೆಂದು ಪ್ರತಿಪಾದಿಸಿರುವುದು ಆರ್​ಎಸ್​ಎಸ್ ಮಾತ್ರ. ಇಂದು ಪ್ರಧಾನಿ ನರೇಂದ್ರ ಮೋದಿಯವರು ಕೂಡ ವಿದೇಶ ಪ್ರವಾಸ ಮಾಡಿದಾಗ ಇವರು ಹಿಂದುಸ್ತಾನದವರು ಎಂದು ಗುರುತಿಸುವಂತಾಗಿದೆ ಎಂದರು.

ಕಳೆದ ಐದು ವರ್ಷದಲ್ಲಿ ರಾಷ್ಟ್ರ ಬೆಳೆದಂತೆ ಅರಾಷ್ಟ್ರೀಯರ ದುಷ್ಕೃತ್ಯ ನಿಂತಿದೆ. ನಕ್ಸಲರ ಅಟ್ಟಹಾಸ ಅಡಗಿ ಹೋಗಿದೆ. ಕಮ್ಯುನಿಸ್ಟರಿಗೆ ಈಗ ಅಸ್ತಿತ್ವವಿಲ್ಲದಂತಾಗಿದೆ. ಕ್ರೖೆಸ್ತ ಮಿಷನರಿಗಳು ಬಡವರಿಗೆ ಆರ್ಥಿಕ ಧನಸಹಾಯದ ಹೆಸರಿನಲ್ಲಿ ಮತಾಂತರ ಮಾಡುತ್ತಿದ್ದ ಕಪಟತನ ಬಯಲಾಗಿದೆ. ಈಗ ಅದು ಕೂಡ ಕಪ್ಪು ಪಟ್ಟಿಗೆ ಸೇರಿದೆ. ಇದು ಒಬ್ಬ ಆರ್​ಎಸ್​ಎಸ್ ಸ್ವಯಂ ಸೇವಕನಿಂದ ಸಾಧ್ಯವಾಗಿದೆ ಎಂಬುದು ಹೆಮ್ಮೆಯ ಸಂಗತಿ. ದೇಶದ ಜನತೆ ಇಂದು ಆರ್​ಎಸ್​ಎಸ್​ಅನ್ನು ವ್ಯಾಪಕವಾಗಿ ಸ್ವೀಕರಿಸುತ್ತಿದ್ದಾರೆ. ಕೇರಳದಲ್ಲಿ ಮಾತ್ರ ಅವಶ್ಯಕವಾಗಿ ಹಿಂದುಗಳನ್ನು ಕೆಣಕಲಾಗಿದೆ. ಇದರ ಪರಿಣಾಮವಾಗಿ ಮುಂದೆ ಅಲ್ಲಿ ಹಿಂದು ಕ್ರಾಂತಿ ಆಗಲಿದೆ ಎಂದು ಗುಡಗಿದರು.

ನಾವು ಬೇರೆ ಧರ್ಮ ವಿರೋಧಿಗಳಲ್ಲ. ಆದರೆ ನಮ್ಮ ಧರ್ಮದ ತಂಟೆಗೆ ಬಂದರೆ ಯಾರನ್ನೂ ಬಿಡುವುದಿಲ್ಲ. ದೇಶದ ಸಂಸ್ಕಾರ, ಸಂಪ್ರದಾಯ, ಪರಂಪರೆಯೊಂದಿಗೆ ಮುನ್ನಡೆಯುತ್ತಿರುವ ಆರ್​ಎಸ್​ಎಸ್ ಸೇರುವ ಮೂಲಕ ಎಲ್ಲರೂ ದೇಶ ಹಾಗೂ ನಮ್ಮ ಜನರ ರಕ್ಷಣೆಗೆ ಮುಂದಾಗಬೇಕು ಎಂದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಗುಪ್ತಚರ ಇಲಾಖೆ ನಿವೃತ್ತ ಡಿಐಜಿ ರವಿಕುಮಾರ ನಾಯಕ ಮಾತನಾಡಿ, ಪೊಲೀಸ್ ಇಲಾಖೆ ನಾಡು ರಕ್ಷಣೆಯಲ್ಲಿ ಸರ್ಕಾರಿ ಸಂಬಳ ಪಡೆದು ಕೆಲಸ ಮಾಡುತ್ತಿದ್ದರೆ, ಆರ್​ಎಸ್​ಎಸ್ ಸ್ವಯಂ ಸೇವಕರು ತಮ್ಮದೇ ಹಣ ಖರ್ಚು ಮಾಡಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಬ್ರಿಟಿಷರು ಬಿಟ್ಟು ಹೋದ ಪದ್ಧತಿಯಲ್ಲೇ ಪೊಲೀಸರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಸ್ವಯಂ ಸೇವಕರು ದೇಶೀಯ ಪದ್ಧತಿ, ಹಿಂದಿ, ಸಂಸ್ಕೃತ ಭಾಷೆ ಹಾಗೂ ಶಾರೀರಿಕ ವಿದ್ಯೆ ಅಳವಡಿಸಿಕೊಂಡು ಮಹತ್ವದ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ತಮ್ಮ ಮಕ್ಕಳನ್ನು ಆರ್​ಎಸ್​ಎಸ್​ಗೆ ಸೇರಿಸಬೇಕು ಎಂದರು.

ಸಂಸದ ಪ್ರಲ್ಹಾದ ಜೋಶಿ, ಪಾಲಿಕೆ ಮೇಯರ್ ಸುಧೀರ ಸರಾಫ, ಮಾಜಿ ಮೇಯರ್ ಡಿ.ಕೆ. ಚವ್ಹಾಣ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ, ಆರ್​ಎಸ್​ಎಸ್ ಮಹಾನಗರ ಸಂಘಚಾಲಕ ಶಿವಾನಂದ ಆವಟಿ, ಪ್ರಮುಖರಾದ ಬಸವರಾಜ ಕುಂದಳ್ಳಿ, ಹರೀಶ ಬೊಮ್ಮನಹಳ್ಳಿ, ಸುಧಾಕರ ಶೆಟ್ಟಿ, ಇತರರು ಇದ್ದರು.

ಗಮನ ಸೆಳೆದ ದಂಡ ಪ್ರಯೋಗ…

ಪಥಸಂಚಲನ ಬಳಿಕ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರು ಪ್ರದರ್ಶಿಸಿದ ದಂಡ ಪ್ರಯೋಗ, ಸರಪಳಿ ದಾಟುವುದು, ಸುರಂಗಮಾರ್ಗ, ವ್ಯಾಯಾಮಗಳು ಗಮನ ಸೆಳೆದವು. ಸ್ವಯಂ ಸೇವಕರು ಆಕರ್ಷಕ ಘೊಷ ಪ್ರದರ್ಶಿಸಿದರು. ವಿವಿಧ ಕವಾಯತು, ಸಾಂಪ್ರದಾಯಿಕ ವಾದ್ಯ ಮೇಳಗಳ ತಂಡದವರು ಕೌಶಲ ಪ್ರದರ್ಶಿಸಿದರು.

ಕಾಡಿದ ಎದೆನೋವು…

ಕಾರ್ಯಕ್ರಮ ಮುಕ್ತಾಯ ಸಮಯಕ್ಕೆ ಗಣವೇಷಧಾರಿ, ಚಾಣಕ್ಯಪುರಿ ಶಾಖೆಯ ಸಚಿನ್ ಎಂಬ ಯುವಕನಿಗೆ ದಿಢೀರನೆ ಎದೆನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಯಿತು.

ಗಣ ವೇಷದ ಶಿಸ್ತಿನ ಸಿಪಾಯಿಗಳು

ಧಾರವಾಡ: ವಿಜಯ ದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಭಾನುವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಪಥ ಸಂಚಲನ ಜನರ ಕಣ್ಮನ ಸೆಳೆಯಿತು.

ಗಣ ವೇಷಧಾರಿಗಳು ಶಿಸ್ತಿನ ಸಿಪಾಯಿಗಳಂತೆ ಘೊಷ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರೆ, ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು. ಸಂಚಲನ ಅಂಗವಾಗಿ ನಗರದ ಪ್ರಮುಖ ಬೀದಿಗಳನ್ನು ರಂಗೋಲಿ, ಕೇಸರಿ ಧ್ವಜಗಳಿಂದ ಅಲಂಕಾರ ಮಾಡಲಾಗಿತ್ತು.

ಸಂಚಲನದಲ್ಲಿದ್ದ ಸಂಘದ ಸಂಸ್ಥಾಪಕರಾದ ಡಾಕ್ಟರಜಿ, ಗುರೂಜಿ ಭಾವಚಿತ್ರಕ್ಕೆ ಹಾಗೂ ಭಗವಾ ಧ್ವಜಕ್ಕೆ ಜನರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಭಾರತ ಹೈಸ್ಕೂಲ್​ನಿಂದ ಪ್ರಾರಂಭವಾದ ಪಥ ಸಂಚಲನ ರೀಗಲ್ ವೃತ್ತ, ಕಾಮತ್ ಹೋಟೆಲ್ ವೃತ್ತ, ಸುಭಾಷ ರಸ್ತೆ, ಗಾಂಧಿ ಚೌಕ್, ಶಿವಾಜಿ ರಸ್ತೆ, ಹೆಬ್ಬಳ್ಳಿ ಅಗಸಿ, ಮಂಗಳವಾರಪೇಟ, ಕಾಮನಕಟ್ಟಿ, ಶೀಲವಂತರ ಓಣಿ, ಭೂಸಪ್ಪ ಚೌಕ್, ಜಕಣಿ ಭಾವಿ ರಸ್ತೆ, ವಿವೇಕಾನಂದ ವೃತ್ತ, ಅಕ್ಕಿಪೇಟೆ ಮಾರ್ಗವಾಗಿ ಭಾರತ ಹೈಸ್ಕೂಲ್​ನಲ್ಲಿ ಸಮಾರೋಪಗೊಂಡಿತು.

ನಂತರ ನಡೆದ ಸಮಾರಂಭದಲ್ಲಿ ಉತ್ತರ ಕರ್ನಾಟಕ ಪ್ರಾಂತ ಶಾರೀರಿಕ ಶಿಕ್ಷಣ ಪ್ರಮುಖ ನಾಗೇಶ ಚಿನ್ನಾರೆಡ್ಡಿ ಮಾತನಾಡಿ, ಭಾರತ ಹಬ್ಬಗಳ ನಾಡು. ನಮ್ಮ ಸಂಸ್ಕೃತಿಯಲ್ಲಿನ ಶ್ರೇಷ್ಠತೆ ಅರ್ಥ ಮಾಡಿಕೊಂಡು ಆ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸುವುದು ಪೂರ್ವಜರಿಂದಲೂ ನಡೆದು ಬಂದಿದೆ. ಸತ್ಯಕ್ಕೆ ಹಾಗೂ ಜೀವನದ ಮೌಲ್ಯಗಳಿಗೆ ವಿಜಯವಾದ ದಿನವೇ ವಿಜಯ ದಶಮಿ. ಜೀವನ ಮೌಲ್ಯಗಳಿಗೆ ಧಕ್ಕೆಯಾದ ಸಂದರ್ಭದಲ್ಲಿ ನಮ್ಮ ಪೂರ್ವಜರು ಲಕ್ಷಾಂತರ ಜೀವಕೋಶಗಳ ಮಾರಣಹೋಮ ನಡೆಸಲೂ ಸಿದ್ಧರಾಗಿದ್ದರು. ಜೀವನದ ಮೌಲ್ಯಗಳನ್ನು ರಕ್ಷಣೆ ಮಾಡುವುದೇ ಅವರ ಮುಖ್ಯ ಉದ್ದೇಶವಾಗಿತ್ತು ಎಂದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಭಾರತೀಯ ವಾಯುಸೇನೆಯ ವಿಶ್ರಾಂತ ಏರ್ ಕಮಡೋರ್ ಸಿ.ಎಸ್. ಹವಾಲ್ದಾರ ಮಾತನಾಡಿದರು. ಇದಕ್ಕೂ ಪೂರ್ವದಲ್ಲಿ ಸ್ವಯಂ ಸೇವಕರು ನಡೆಸಿದ ಘೊಷ, ಯೋಗಾಸನ, ವಿವಿಧ ಆಟಗಳು ಹಾಗೂ ಶಾರೀರಿಕ ಪ್ರದರ್ಶನ ಆಕರ್ಷಕವಾಗಿತ್ತು.