ನಭಾ ಜೈಲ್ ಬ್ರೇಕ್ ಸೂತ್ರಧಾರ ನಾನೇ, ಹರ್ಮಿಂದರ್ ಮಿಂಟು

ನವದೆಹಲಿ/ ಪಟಿಯಾಲ: ಪಂಜಾಬಿನ ಪಟಿಯಾಲ ಜಿಲ್ಲೆಯ ನಭಾ ಜೈಲ್ ಬ್ರೇಕ್ ಕೃತ್ಯದ ಸೂತ್ರಧಾರಿ ಬೇರಾರೂ ಅಲ್ಲ, ಸ್ವತಃ ತಾನೇ ಎಂದು ನಭಾ ಸೆರೆಮನೆಯಿಂದ ಪರಾರಿಯಾಗಿ ಮತ್ತೆ ಬಂಧಿತಾಗಿರುವ ಖಲಿಸ್ತಾನ ಲಿಬರೇಶನ್ ಫೋರ್ಸ್ (ಕೆಎಲ್ಎಫ್) ಸಿಖ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟು ಬಹಿರಂಗ ಪಡಿಸಿದ್ದಾನೆ.

ಜೈಲ್ ಬ್ರೇಕ್ ಕೃತ್ಯದ ಸೂತ್ರಧಾರಿ ತಾನೇ ಎಂಬುದಾಗಿ ಮಿಂಟು ಒಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಜರ್ಮನಿಯಲ್ಲಿರುವ ಕೆಎಲ್ಎಫ್ ಅಭಿಮಾನಿಗಳು ಮತ್ತು ಇಂಗ್ಲೆಂಡಿನಲ್ಲಿರುವ ಸಂದೀಪ್ ತಮಗೆ ಹವಾಲಾ ಜಾಲದ ಮೂಲಕ ತನಗೆ ಹಣ ಕಳುಹಿಸಿದ್ದುದಾಗಿಯೂ ಮಿಂಟು ಹೇಳಿದ್ದಾನೆ.

ಜೈಲ್ ಬ್ರೇಕ್ ಕೃತ್ಯಕ್ಕೆ ಕೆಲವೇ ದಿನ ಮುಂಚಿತವಾಗಿ ತಾನು ಪಾಕಿಸ್ತಾನದಲ್ಲಿರುವ ತನ್ನ ಭಂಟ ಹರ್ಮೀತ್ ಜೊತೆಗೆ ಇಂಟರ್ ನೆಟ್ ಚಾಟ್ ನಡೆಸಿದ್ದುದಾಗಿಯೂ ಮಿಂಟು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ಹೇಳಿವೆ.

ತನ್ನ ಭಂಟ ಹರ್ಮೀತ್ ಸಿಂಗ್ ಲಾಹೋರ್ನ ಡೇರಾ ಚಲ್ ಗ್ರಾಮದಲ್ಲಿ ಐಎಸ್ಐ ರಕ್ಷಣೆಯಲ್ಲಿ ಸುರಕ್ಷಿತವಾಗಿದ್ದಾನೆ. ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್ ಮತ್ತು ಥಾಯ್ಲೆಂಡಿನಲ್ಲಿ ತನಗೆ ನೆಲೆಗಳಿವೆ. ಈ ಪ್ರದೇಶಗಳಲ್ಲಿ ಮತ್ತೆ ಭಯೋತ್ಪಾದನೆಯನ್ನು ತರಲು ಐಎಸ್ಐ ಯೋಜನೆ ರೂಪಿಸಿದೆ ಎಂದೂ ಮಿಂಟು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಏಜೆನ್ಸೀಸ್

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *