ನಬಾರ್ಡ್​ನಿಂದ 5541 ಕೋಟಿ ರೂ. ಸಾಲ

ಚಿಕ್ಕಮಗಳೂರು: ನಬಾರ್ಡ್​ನಿಂದ 2019-20ನೆಯ ಸಾಲಿಗಾಗಿ ಸಿದ್ಧಪಡಿಸಿರುವ 5541.94 ಕೋಟಿ ರೂ.ನ ಸಂಭವನೀಯ ಸಾಲ ವಿತರಣೆಯ ಅಂಕಿಅಂಶಗಳನ್ನು ಒಳಗೊಂಡ ಪಿಎಲ್​ಪಿ ಯೋಜನಾ ಕೈಪಿಡಿ ಬಿಡುಗಡೆ ಮಾಡಲಾಯಿತು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲೆಯ ಬ್ಯಾಂಕ್ ಪ್ರತಿನಿಧಿಗಳು ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥರ ಸಭೆಯಲ್ಲಿ ಕೈಪಿಡಿ ಬಿಡುಗಡೆ ಮಾಡಿದ ಜಿಪಂ ಉಪ ಕಾರ್ಯದರ್ಶಿ ರಾಜಗೋಪಾಲ್ ಮಾತನಾಡಿ, 2019ರ ಏ.1ರಿಂದ 2020ರ ಮಾರ್ಚ್ 31 ರವರೆಗೆ ಜಿಲ್ಲಾದ್ಯಂತ ಬ್ಯಾಂಕ್​ಗಳು ನೀಡಬಹುದಾದ ಸಾಲ ಬಿಡುಗಡೆಗೆ ಸಂಬಂಧಪಟ್ಟಂತಹ ಯೋಜನೆ ರೂಪಿಸಲು ಇದು ಸಹಕಾರಿ ಎಂದರು.

4706.66 ಕೋಟಿ ರೂ. ಸಾಲ ಸಾಮರ್ಥ್ಯ; ಕೃಷಿ ವಲಯ ಪ್ರಥಮ ಆದ್ಯತೆಯಾಗಿದ್ದು 2888.91 ಕೋಟಿ ರೂ. ಬೆಳೆ ಸಾಲದ ಜತೆಗೆ ಅವಧಿ ಸಾಲವಾಗಿ 962.76 ಕೋಟಿ ರೂ. ಸೇರಿ 3851.67 ಕೋಟಿ ರೂ. ವಿತರಿಸುವ ಅವಕಾಶವಿದೆ. ಕೃಷಿ ಚಟುವಟಿಕೆಗಳಿಗೆ ಮೂಲ ಸೌಕರ್ಯ ಅಭಿವೃದ್ಧಿಗಾಗಿ 328.10 ಕೋಟಿ ರೂ., ಕೃಷಿಗೆ ಪೂರಕವಾಗಿ ಹಸು, ಎಮ್ಮೆ, ಕುರಿ, ಕೋಳಿ, ಹಂದಿ ಮತ್ತಿತರ ಪ್ರಾಣಿಗಳ ಸಾಕಣೆಗಾಗಿ 526.88 ಕೋಟಿ ರೂ. ಸೇರಿ ಒಟ್ಟಾರೆ ಕೃಷಿ ವಲಯಕ್ಕೆ 4706.66 ಕೋಟಿ ರೂ. ಸಾಲ ಪಡೆಯುವ ಸಾಮರ್ಥ್ಯ ಜಿಲ್ಲೆಗಿದೆ ಎಂದು ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಇ.ಪ್ರತಾಪ್ ತಿಳಿಸಿದರು