ನನ್ನ ಗೆಲುವು ನರೇಂದ್ರ ಮೋದಿಯದ್ದು

ಶಿವಮೊಗ್ಗ: ಇಡೀ ಸಮ್ಮಿಶ್ರ ಸರ್ಕಾರವೇ ನನ್ನ ವಿರುದ್ಧ ಪ್ರಚಾರಕ್ಕೆ ನಿಂತಿತ್ತು. ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಂಡಿತ್ತು. ಹಣದ ಹೊಳೆಯನ್ನೇ ಹರಿಸಿ ಚುನಾವಣೆ ಮಾಡಿದ್ದರು. ಆದರೆ ದೇಶಕ್ಕಾಗಿ ಮೋದಿ ಬೇಕು ಎಂದು ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಮತ ಎಣಿಕೆ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನನ್ನ ಗೆಲುವಲ್ಲ, ಪ್ರಧಾನಿ ನರೇಂದ್ರ ಮೋದಿ ಗೆಲುವಾಗಿದೆ. ಅವರ ಪ್ರತಿನಿಧಿಯಾಗಿ ಕ್ಷೇತ್ರದ ಜನತೆ ನನ್ನನ್ನು ಕಳಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ 52 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೆ. ಈಗ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ಇದಕ್ಕೆ ಪಕ್ಷದ ಕಾರ್ಯಕರ್ತರು ಹಗಲಿರುಳೂ ಶ್ರಮಿಸಿರುವುದೇ ಕಾರಣ ಎಂದರು.

ನರೇಂದ್ರ ಮೋದಿ ನೀಡಿದ ಅಭಿವೃದ್ಧಿ ಕಾರ್ಯಕ್ರಮಗಳು, ಯಡಿಯೂರಪ್ಪ ಸಂಸದ, ಸಿಎಂ ಆಗಿ ಜಿಲ್ಲೆಯಲ್ಲಿ ಕೈಗೊಂಡ ಅಭಿವೃದ್ಧಿ ನನಗೆ ಶ್ರೀರಕ್ಷೆಯಾಗಿದೆ. ಪಕ್ಷದ ನಾಯಕರು ಜಿಲ್ಲೆಯಲ್ಲಿ ಪ್ರಚಾರಕ್ಕೆ ಬಂದಾಗ ಕ್ಷೇತ್ರದ ಜನತೆ ತೋರಿದ ಸ್ಪಂದನೆ ಅದ್ಭುತವಾಗಿತ್ತು. ಜನರ ಸ್ಪಂದನೆ ಮತಗಳಾಗಿ ಪರಿವರ್ತನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ದೇಶದಲ್ಲೇ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸುತ್ತೇನೆ ಎಂದು ಭರವಸೆ ನೀಡಿದ ಅವರು, ಗೆಲುವಿನ ಸಂಭ್ರಮವನ್ನು ಹಂಚಿಕೊಂಡರು. ಹೆಚ್ಚಿನ ಮತಗಳನ್ನು ನೀಡಿ ಪ್ರಚಂಡ ಗೆಲುವಿಗೆ ಅವಕಾಶ ಮಾಡಿಕೊಟ್ಟ ಎಲ್ಲ ಮತದಾರರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *