ನನಸಾಗುತ್ತಿಲ್ಲ ಶುದ್ಧ ಕುಡಿಯುವ ನೀರಿನ ಕನಸು !

ಸಂತೋಷ ದೇಶಪಾಂಡೆ
ಬಾಗಲಕೋಟೆ: ಕೋಟೆನಗರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ರಾಜ್ಯ ಸರ್ಕಾರ ಕೋಟ್ಯಂತರ ರೂ. ಬಿಡುಗಡೆ ಮಾಡಿ ಬರೋಬ್ಬರಿ ಒಂಬತ್ತು ವರ್ಷ ಕಳೆದಿವೆ. ಅಂದುಕೊಂಡಂತೆ ಕಾಮಗಾರಿ ನಡೆದಿದ್ದರೆ ಸಾವಿರಾರು ಮನೆಗಳಿಗೆ ನೀರು ಹರಿದು ವರ್ಷಗಳೇ ಗತಿಸುತ್ತಿದ್ದವು. ಆದರೆ, ಇದುವರೆಗೂ ಹನಿ ನೀರು ಹರಿಯದೆ ಜನರು ತೊಂದರೆ ಅನುಭವಿಸುವುದು ತಪ್ಪಿಲ್ಲ.

ಹೌದು, ಬಾಗಲಕೋಟೆ ಹಳೇ ನಗರ, ವಿದ್ಯಾಗಿರಿ, ಕೆಎಚ್‌ಬಿ ಕಾಲನಿಗೆ ಕುಡಿಯುವ ನೀರು ಒದಗಿಸುವ ಹಿನ್ನೆಲೆ ರೂಪಿಸಿರುವ ಸಿಮೆಂಟ್ ಕ್ವಾರಿಯಿಂದ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಯ ಕಥೆ-ವ್ಯಥೆ ಇದು. 2010ರಲ್ಲಿ ಕಾಮಗಾರಿ ಆರಂಭವಾದರೂ ಇಂದಿಗೂ ಪೂರ್ಣಗೊಂಡಿಲ್ಲ. ನಗರಸಭೆಯ ಪ್ರತಿ ಸಭೆಯಲ್ಲಿ ಈ ವಿಷಯದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆದರೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬಳಿಕ ಮತ್ತದೇ ರಾಗ ಅದೇ ಹಾಡು ಎನ್ನುವಂತಾಗಿದೆ. ಶುದ್ಧ ಕುಡಿಯುವ ನೀರು ಸಿಗುತ್ತೆ ಎಂದು ಕನಸು ಕಟ್ಟಿಕೊಂಡಿದ್ದ ನಗರದ ಜನತೆಗೆ ನಿರಾಸೆ ಉಂಟು ಮಾಡಿದೆ.

ಏನಿದು ಕ್ವಾರಿ ನೀರಿನ ಯೋಜನೆ?
ಆಲಮಟ್ಟಿ ಜಲಾಶಯದಿಂದ ಮುಳುಗಡೆ ಆಗದೆ ಇರುವ ಹಳೇ ಬಾಗಲಕೋಟೆ ಜನರಿಗೆ ಶುದ್ಧ ಕುಡಿವ ನೀರು ಸರಬರಾಜು ಮಾಡುವ ಉದ್ದೇಶದಿಂದ ಇಲ್ಲಿನ ಸಿಮೆಂಟ್ ಕ್ವಾರಿಯಲ್ಲಿ ಸಂಗ್ರಹವಾಗುವ ಹಿನ್ನೀರು ಶುದ್ಧೀಕರಿಸಿ ವಿತರಣೆ ಮಾಡುವ ಯೋಜನೆ ಇದಾಗಿದೆ.

ಶಾಸಕ ವೀರಣ್ಣ ಚರಂತಿಮಠ ಪ್ರಯತ್ನ ಫಲವಾಗಿ ಅಂದಾಜು 10 ಕೋಟಿ ರೂ. ಅಧಿಕ ವೆಚ್ಚದ ಯೋಜನೆಗೆ 2010ರ ಮಾರ್ಚ್ ತಿಂಗಳಲ್ಲಿ ಚಾಲನೆ ನೀಡಲಾಯಿತು. ಆರಂಭದಲ್ಲಿಯೇ ಕೆಲವರು ಇದು ಕುಡಿಯಲು ಯೋಗ್ಯವಲ್ಲ ಎಂದು ತಕರಾರು ಎತ್ತಿದರು. ಇದೆಲ್ಲವನ್ನು ಅಂದಿನ ಅಧಿಕಾರಿಗಳು ಸಮರ್ಥವಾಗಿ ಎದುರಿಸಿ ಯೋಜನೆ ಆರಂಭಗೊಳ್ಳುವಂತೆ ಮಾಡಿದರು. 24 ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಂಡು ನಗರದ ಜನತೆಗೆ ನೀರು ಪೂರೈಕೆಯೂ ಆಗಬೇಕಿತ್ತು. 9 ವರ್ಷ ಕಳೆದರೂ ಯೋಜನೆ ಪೂರ್ಣಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯೋಜನೆಗೆ ಹೊಸ ಸಂಕಷ್ಟ ?
2014ರಲ್ಲಿಯೇ ಯೋಜನೆ ಪೂರ್ಣಗೊಳ್ಳಬೇಕಿತ್ತು. ಪ್ರತಿ ವರ್ಷ ಬೇಸಿಗೆ ವೇಳೆಗೆ ಖಂಡಿತ ಸಿಮೆಂಟ್ ಕ್ವಾರಿಯಿಂದ ಶುದ್ಧ ಕುಡಿವ ನೀರು ಪೂರೈಕೆ ಮಾಡುತ್ತೇವೆ ಎನ್ನುವ ಅಧಿಕಾರಿಗಳ ಕಂಠಪಾಠ ಕೇಳಿ ಕೇಳಿ ಇಲ್ಲಿನ ಜನರಿಗೆ ಸಾಕಾಗಿ ಹೋಗಿದೆ. ಕಾಮಗಾರಿ ಮುಕ್ತಾಯವಾಗಿದೆ. ಕೆಲವೇ ದಿನಗಳಲ್ಲಿ ನೀರು ಪೂರೈಕೆ ಮಾಡುವುದಾಗಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಹೇಳುತ್ತಲೇ ಬರುತ್ತಿದ್ದಾರೆ. ಆದರೆ, ಹತ್ತಾರು ಸಮಸ್ಯೆಗಳನ್ನು ಎದುರಿಸಿ ಅನುಷ್ಠಾನಗೊಳಿಸಿರುವ ಯೋಜನೆಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಕ್ವಾರಿಯಿಂದ ಎಲ್ಲೆಡೆ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ದಡ್ಡೇನ್ನವರ ಕ್ರಾಸ್ ಬಳಿ 100 ಮೀಟರ್ ಪೈಪ್‌ಲೈನ್ ಅಳವಡಿಸಲು ಸಾಧ್ಯವಾಗುತ್ತಿಲ್ಲ. ಬಸಪ್ಪ ದೊಡ್ಡಮನಿ ಎನ್ನುವ ರೈತನಿಂದ ಬಿಟಿಡಿಎ ಈ ಕ್ರಾಸ್ ಬಳಿ ಜಮೀನು ಭೂಸ್ವಾಧೀನ ಮಾಡಿಕೊಂಡಿದೆ. ಇದುವರೆಗೂ ರೈತನಿಗೆ ಪರಿಹಾರ ಧನ ನೀಡಿಲ್ಲ. ಇದರಿಂದ ಆಕ್ರೋಶಗೊಂಡಿರುವ ರೈತ ಬಸಪ್ಪ ದೊಡ್ಡಮನಿ ಕಾಮಗಾರಿ ಕೈಗೊಳ್ಳಲು ಬಿಡುತ್ತಿಲ್ಲ. ಈ ಬಗ್ಗೆ ಕೋರ್ಟ್ ಮೊರೆ ಹೋಗಿದ್ದಾರೆ. ಇದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಲ್ಲಿ ರೈತ ಬಸಪ್ಪ ದೊಡ್ಡಮನಿ ಅವರ ಮನವೊಲಿಸುವ ಪ್ರಯತ್ನ ನಡೆದರೂ ಯಶಸ್ವಿಯಾಗುತ್ತಿಲ್ಲ.

ಗುತ್ತಿದಾರರ ವಿಳಂಬ ನೀತಿ
ರೈತನ ತಕಾರರು ಸದ್ಯದ ಸಮಸ್ಯೆಯಾಗಿದ್ದರೆ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷೃ ಧೋರಣೆಯೂ ಪ್ರಮುಖ ಕಾರಣವಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಹುಬ್ಬಳ್ಳಿ ಮೂಲದ ಸಂಸ್ಥೆಗೆ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ಈ ಸಂಸ್ಥೆ ಕೂಡಾ ಕಾಮಗಾರಿ ನಡೆಸಲು ವಿಳಂಬ ನೀತಿ ಅನುಸರಿಸಿತು. ಹೀಗಾಗಿ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಗುತ್ತಿಗೆ ರದ್ದು ಪಡಿಸಲಾಯಿತು. ನಂತರ ಬಾಕಿ ಉಳಿದ 1.8 ಕೋಟಿ ವೆಚ್ಚದ ಕಾಮಗಾರಿಯನ್ನು ವಿಜಯಪುರದ ಎಸ್.ಎಸ್.ಪಾಟೀಲ ಕಂಪನಿಗೆ ಗುತ್ತಿಗೆ ನೀಡಲಾಯಿತು. ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಬಸಪ್ಪ ದೊಡ್ಡಮನಿ ಅವರ ತಕರಾರು ಬಗೆ ಹರಿದಾಗ ಮಾತ್ರ ಯೋಜನೆ ಯಶಸ್ವಿಯಾಗಲಿದೆ ಎನ್ನುತ್ತಾರೆ ನೀರು ಸರಬರಾಜು ಮತ್ತು ಒಳಚರಂಡಿ ಅಧಿಕಾರಿಗಳು.

93 ಎಂಸಿಎಫ್‌ಟಿ ಸಾಮರ್ಥ್ಯ
ಸಿಮೆಂಟ್ ಕ್ವಾರಿ 93 ಎಂಸಿಎಫ್‌ಟಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಪ್ರತಿ ನಿತ್ಯ 11.2 ಎಂಜಿಡಿ ನೀರು ಶುದ್ಧೀಕರಿಸಬಹುದು. ಶುದ್ಧೀಕರಿಸಿದ ನೀರನ್ನು ನಾಡಗೌಡ ಪಾರ್ಕ್ ಹಾಗೂ ಪ್ರೆಸ್‌ಕ್ಲಬ್ ಹಿಂದೆ ಇರುವ ಟ್ಯಾಂಕ್‌ಗಳಿಗೆ ಲಿಫ್ಟ್ ಮಾಡಿ ಹಳೇ ಬಾಗಲಕೋಟೆ ಜನರಿಗೆ ನಿತ್ಯ ತಲಾ 150 ಲೀಟರ್ ಪೂರೈಸಬಹುದು.

ಸಿಮೆಂಟ್ ಕ್ವಾರಿ ಯೋಜನೆ ಬಹುತೇಕ ಪೂರ್ಣಗೊಂಡಿದೆ. ಗುತ್ತಿಗೆದಾರರ ನಿರ್ಲಕ್ಷೃದಿಂದ ಕಾಮಗಾರಿ ವಿಳಂಬವಾಯಿತು. ಇದೀಗ ರೈತ ಬಸಪ್ಪ ದೊಡ್ಡಮನಿ ಅವರ ತಕಾರರಿನಿಂದಾಗಿ ಕಾಮಗಾರಿ ಬಾಕಿ ಉಳಿದಿದೆ. 100 ಮೀಟರ್ ಪೈಪ್‌ಲೈನ್ ಅಳವಡಿಸಿದಲ್ಲಿ ಯೋಜನೆ ಸಂಪೂರ್ಣ ಮುಗಿಯಲಿದೆ. ಜಿಲ್ಲಾಧಿಕಾರಿಗಳು ಕೂಡ ರೈತನ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಶೀಘ್ರದಲ್ಲಿ ಸಮಸ್ಯೆ ಬಗೆ ಹರಿಯುವ ವಿಶ್ವಾಸವಿದೆ.
ಗುರುರಾಜ ಬಂಗೆನ್ನವರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬಾಗಲಕೋಟೆ

Leave a Reply

Your email address will not be published. Required fields are marked *