ನನಸಾಗಲಿಲ್ಲ ಅವಳಿನಗರದ ಸಿಎಂ ಕನಸು

ರಾಮನಗರ: ಚನ್ನಪಟ್ಟಣ – ರಾಮನಗರವನ್ನು ಅವಳಿ ನಗರವಾಗಿಸುವ 30 ಅವರ ಕನಸಿನ್ನೂ ನನಸಾಗದೆ, ಎರಡೂ ನಗರಗಳು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಲುಗುತ್ತಿವೆ.

ಪ್ರತಿ ಚುನಾವಣೆ ಹೊಸ್ತಿಲಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಎರಡೂ ನಗರಗಳ ಜನತೆಯಲ್ಲಿ ಅವಳಿ ನಗರದ ಕನಸು ಬಿತ್ತಿ್ತ ಹೋಗುತ್ತಾರೆ. ಆದರೆ, ಈವರೆಗೂ ಎರಡೂ ನಗರಗಳನ್ನು ಬೆಸೆಯುವ ಕಾರ್ಯಕ್ಕೆ ಮಾತ್ರ ಚಾಲನೆ ಸಿಕ್ಕಿಲ್ಲ.

ಬೆಳೆಯುತ್ತಿವೆ ನಗರಗಳು: ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಂತೆ ಇರುವ ನಗರಗಳು ವೇಗವಾಗಿ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿವೆ. ಎರಡೂ ನಗರಗಳ ಜನಸಂಖ್ಯೆ ಸಹ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಬಹುತೇಕ 3 ಲಕ್ಷ ದಾಟುವ ಹಂತದಲ್ಲಿವೆ. ರಾಮನಗರ ಬೆಳವಣಿಗೆ ಹೊಂದುತ್ತಿದೆಯಾದರೂ ಕಲ್ಲಿನ ಬೆಟ್ಟಗಳು ಅಭಿವೃದ್ಧಿ ವಿಸ್ತಾರಕ್ಕೆ ತೊಡಕಾಗಿವೆ. ಅತ್ತ ಚನ್ನಪಟ್ಟಣದಲ್ಲಿ ಇಂತಹ ತೊಂದರೆ ಇಲ್ಲದಿರುವುದರಿಂದ ನಗರ ಪ್ರದೇಶ ವಿಸ್ತಾರಗೊಳ್ಳುತ್ತಿವೆ. ರಾಮನಗರ – ಚನ್ನಪಟ್ಟಣ ನಡುವೆ ಕೇವಲ ಮೂರ್ನಾಲ್ಕು ಕಿ.ಮೀ. ನಡುವಿನ ಅಂತರವಷ್ಟೇ ಬಾಕಿ ಉಳಿದಿದ್ದು, ಒಂದು ವೇಳೆ ಸರ್ಕಾರ ಕೆಲವು ಯೋಜನೆಗಳನ್ನು ಜಾರಿಗೆ ತಂದರೆ, ಸ್ವಾಭಾವಿಕವಾಗಿಯೇ ಈ ಎರಡೂ ನಗರಗಳು ಬೆಸೆದುಕೊಳ್ಳುತ್ತವೆ.

ಸಮಸ್ಯೆಗಳ ಸರಮಾಲೆ: ಎರಡೂ ನಗರಗಳಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಕುಡಿಯುವ ನೀರು, ಕಸ ವಿಲೇವಾರಿ, ಒಳಚರಂಡಿ ವ್ಯವಸ್ಥೆ, ಕೊಳಚೆ ಪ್ರದೇಶದ ನಿರಾಶ್ರಿತರಿಗೆ ಮನೆ ನೀಡುವುದು ಹೀಗೆ ಹಲವಾರು ಸಮಸ್ಯೆಗಳಿಂದ ರಾಮನಗರ, ಚನ್ನಪಟ್ಟಣ ನಗರಗಳ ಜನತೆ ತತ್ತರಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹಲವಾರು ಯೋಜನೆಗಳು ಜಾರಿಯಲ್ಲಿವೆಯಾದರೂ, ಒಳಚರಂಡಿ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದು, ಸಮಸ್ಯೆಯನ್ನು ಹೆಚ್ಚಿಸಿದೆ. ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಅಧಿಕಾರ ವರ್ಗ ವಿಫಲವಾಗಿದೆ. ಇನ್ನು ನಿರಾಶ್ರಿತರ ಪಾಲಿಗೆ ಮನೆಗಳು ಗಗನ ಕುಸುಮವಾಗಿವೆ. ಒಂದುವೇಳೆ ಅವಳಿ ನಗರವಾದರೆ ಸರ್ಕಾರದಿಂದ ಹೆಚ್ಚಿನ ಅನುದಾನ ಲಭ್ಯವಾಗಿ ಈ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಸಾಧ್ಯತೆ ಹೆಚ್ಚಿದೆ.

ಭರವಸೆ ನೀಡಿ ವರ್ಷ ಕಳೆಯಿತು: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ರಾಮನಗರದ ಚಾಮುಂಡೇಶ್ವರಿ ದೇವಾಲಯಕ್ಕೆ ಎಚ್​ಡಿಕೆ ದಂಪತಿ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ್ದ ಕುಮಾರಸ್ವಾಮಿ, ಚನ್ನಪಟ್ಟಣ ಮತ್ತು ರಾಮನಗರವನ್ನು ಅವಳಿ ನಗರವನ್ನಾಗಿಸುವ ನನ್ನ ಕನಸಿನ ಯೋಜನೆಯನ್ನು ಇನ್ನು ಕೆಲವೇ ದಿನಗಳಲ್ಲಿ ಜನರ ಮುಂದೆ ಇಡುತ್ತೇನೆ ಎಂದು ಘೊಷಿಸಿದ್ದರು. ಆದರೆ, ಹೀಗೆ ಭರವಸೆ ನೀಡಿ ಒಂದು ವರ್ಷ ಕಳೆದಿದ್ದು, ಯೋಜನೆಯನ್ನು ಮಾತ್ರ ಜನರ ಮುಂದಿಟ್ಟಿಲ್ಲ. ಮತ್ತೊಂದೆಡೆ ಕಳೆದ ಒಂದು ವರ್ಷದಿಂದಲೂ ಮೈತ್ರಿ ಸರ್ಕಾರದಲ್ಲಿ ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿಯೇ ಮಗ್ನರಾಗಿರುವ ಎಚ್​ಡಿಕೆ ಕ್ಷೇತ್ರದ ಕಡೆಗೂ ಕಾಲಿಡದೇ ಇರುವುದು ವಿರ್ಪಯಾಸ.

ದಂಪತಿ ಕಾಳಜಿ ವಹಿಸಬೇಕಿದೆ: ಎರಡೂ ನಗರಗಳನ್ನು ಅವಳಿ ನಗರವಾಗಿಸುವ ಜವಾಬ್ದಾರಿ ಶಾಸಕ ದಂಪತಿ ಮೇಲಿದೆ. ಚನ್ನಪಟ್ಟಣದಲ್ಲಿ ಸ್ವತಃ ಮುಖ್ಯಮಂತ್ರಿಯೇ ಶಾಸಕರಾದರೆ, ರಾಮನಗರದಲ್ಲಿ ಪತ್ನಿ ಅನಿತಾ ಶಾಸಕಿ. ಇಬ್ಬರೂ ಮನಸ್ಸು ಮಾಡಿದರೆ ಅವಳಿ ನಗರದ ಕನಸು ನನಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಇಬ್ಬರೂ ಸಹ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ.

ರಾಮನಗರ – ಚನ್ನಪಟ್ಟಣವನ್ನು ಅವಳಿ ನಗರವಾಗಿಸುವುದರಿಂದ ನಗರವಾಸಿಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ರಮ ಕೈಗೊಳ್ಳಬೇಕಿದೆ. ಈ ಮೂಲಕ ತಾವು ಕಂಡ ಕನಸನ್ನು ನನಸು ಮಾಡಬೇಕಿದೆ.

| ಎಲ್.ರಮೇಶ್​ಗೌಡ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ. ರಾಜ್ಯಾಧ್ಯಕ್ಷ.

 

ರಾಮನಗರ ಮತ್ತು ಚನ್ನಪಟ್ಟಣ ನಗರಗಳು ಬೆಂಗಳೂರಿಗೆ ಹತ್ತಿರದಲ್ಲೇ ಇರುವುದರಿಂದ ಎರಡೂ ನಗರಗಳ ಬೆಳವಣಿಗೆಗೆ ಸಾಕಷ್ಟು ಅವಕಾಶವಿದೆ. ಅವಳಿ ನಗರಗಳಾಗಿ ಘೊಷಣೆ ಮಾಡುವುದರಿಂದ ಮತ್ತಷ್ಟು ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮುಖ್ಯಮಂತ್ರಿಗಳು ತಮ್ಮ ಘೋಷಣೆಯನ್ನು ಕಾರ್ಯರೂಪಕ್ಕೆ ತರಬೇಕು.

| ರವಿ, ಜಯ ಕರ್ನಾಟಕ ಸಂಘಟನೆ, ಜಿಲ್ಲಾಧ್ಯಕ್ಷ

Leave a Reply

Your email address will not be published. Required fields are marked *