ಧಾರವಾಡ: ಗ್ರಾಮೀಣ ಕ್ಷೇತ್ರದ ಬಹು ದಿನಗಳ ಕನಸಾಗಿರುವ ತುಪ್ಪರಿ ಹಳ್ಳ ಏತ ನೀರಾವರಿ ಹಾಗೂ ಅದರ ಜೀಣೋದ್ಧಾರ ಕಾರ್ಯ ಕೈಗೊಳ್ಳಲಾಗುತ್ತಿದೆ. ಅದರ ಡಿಪಿಆರ್ (ವಿಸõತ ಯೋಜನಾ ವರದಿ) ತಯಾರಿಕೆಗಾಗಿ ಸರ್ವೆ ಕಾರ್ಯಕ್ಕೆ ಶಾಸಕ ಅಮೃತ ದೇಸಾಯಿ ಭಾನುವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ‘ತುಪ್ಪರಿ ಹಳ್ಳವು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕಿತ್ತೂರ ಬಳಿ ಉಗಮಿಸಿ ಹಳೇತೇಗೂರ ಗ್ರಾಮದ ಹತ್ತಿರ ಧಾರವಾಡ ಜಿಲ್ಲೆ ಪ್ರವೇಶಿಸುತ್ತದೆ. ಹಳೇತೇಗೂರ, ಬೋಗೂರ, ಸಿಂಗನಹಳ್ಳಿ, ಅಗಸನಹಳ್ಳಿ, ಗರಗ, ಕೊಟಬಾಗಿ, ಲೋಕೂರ, ಉಪ್ಪಿನಬೆಟಗೇರಿ, ಕಲ್ಲೆ, ಕಬ್ಬೇನೂರ, ಹಾರೋಬೆಳವಡಿ ಗ್ರಾಮಗಳ ಪಕ್ಕ ಹರಿದು ನವಲಗುಂದದ ಹತ್ತಿರ ಬೆಣ್ಣಿಹಳ್ಳಕ್ಕೆ ಸೇರುತ್ತದೆ. 1,123 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿದ್ದು, ಮಳೆಗಾಲದಲ್ಲಿ 2.175 ಟಿಎಂಸಿ ನೀರಿನ ಲಭ್ಯತೆ ಇರುತ್ತದೆ.
ಈ ಯೋಜನೆಯಿಂದ ರೈತರ ಹನಿ ಹಾಗೂ ತುಂತುರು ನೀರಾವರಿಯ ಕನಸು ನನಸಾಗಲಿದೆ. ಆದರೆ, ಬ್ಯಾರೇಜ್ಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ನೀರಿನ ಶೇಖರಣೆ ಕುಂದಿದೆ. ಬ್ಯಾರೇಜ್ಗಳ ಪುನಶ್ಚೇತನ ಮಾಡಿ ಏತ ನೀರಾವರಿ ಮೂಲಕ ಹನಿ, ತುಂತುರು ನೀರಾವರಿ ಯೋಜನೆಗಳನ್ನು ಕೈಗೊಂಡರೆ ತಾಲೂಕಿನ 20 ಹಳ್ಳಿಗಳ ಅಂದಾಜು 10,000 ಹೆಕ್ಟೇರ್ ಜಮೀನಿಗೆ ನೀರಾವರಿ ಕಲ್ಪಿಸಬಹುದು ಎಂದರು.
ತುಪ್ಪರಿ ಹಳ್ಳ ಏತ ನೀರಾವರಿ ಯೋಜನೆಯ ಡಿಪಿಆರ್ ತಯಾರಿಕೆಗೆ ಇಐ ಟೆಕ್ನಾಲಜಿ ಕಂಪನಿಯಿಂದ ಸರ್ವೆ ನಡೆಸಲಾಗುತ್ತಿದೆ. ನಂತರ ದಿನಗಳಲ್ಲಿ ಡ್ರೋನ್ ಮೂಲಕ ಸರ್ವೆ ನಡೆಯಲಿದೆ. ಒಂದೂವರೆ ತಿಂಗಳಲ್ಲಿ ಸರ್ವೆ ಕಾರ್ಯ ಮುಗಿಯಲಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲೆಯ ಸಚಿವ, ಶಾಸಕರ ಬೆಂಬಲದೊಂದಿಗೆ ಬಹುನಿರೀಕ್ಷಿತ ಯೋಜನೆಯ ಅನುಷ್ಠಾನ ಖಚಿತ.
– ಅಮೃತ ದೇಸಾಯಿ, ಶಾಸಕ