Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

‘ನನಗೆ ಮೂಗಿನ ತುದೀಲೇ ಕೋಪ’ ಎಂಬುದು ಹೆಮ್ಮೆಯಲ್ಲ!

Thursday, 02.11.2017, 3:01 AM       No Comments

| ದೀಪಾ ಹಿರೇಗುತ್ತಿ

ಈ ಆಧುನಿಕ ಬದುಕಿನಲ್ಲಿ ನಮಗೆ ಕೋಪ ಮಾಡಿಕೊಳ್ಳಲು ಹೇರಳ ಅವಕಾಶಗಳು ದಿನದಿನವೂ ಲಭಿಸುತ್ತವೆ. ಕೋಪ ಬರುವುದು ಸಹಜ. ಕೋಪವನ್ನು ಯಾರು ಬೇಕಾದರೂ ಮಾಡಿಕೊಳ್ಳಬಹುದು, ಆದರೆ ಅದನ್ನು ನಿಯಂತ್ರಿಸುವ ಕಲೆಯನ್ನು ಕಷ್ಟಪಟ್ಟು ರೂಢಿಸಿಕೊಳ್ಳಬೇಕಾಗುತ್ತದೆ.

 ಬಹು ಹಿಂದೆ ರಾಜನೊಬ್ಬನ ಹತ್ತಿರ ಒಂದು ಹದ್ದು ಇತ್ತು. ಅದೆಂದರೆ ಆತನಿಗೆ ಬಲು ಪ್ರೀತಿ. ಆತ ಅದನ್ನು ಯಾವಾಗಲೂ ತನ್ನ ಜತೆಯೇ ಇರಿಸಿಕೊಳ್ಳುತ್ತಿದ್ದ. ಬೇಟೆಗೆ ಹೋಗುವಾಗಲಂತೂ ಅದರ ಜತೆ ಬೇಕೇ ಬೇಕು. ಏಕೆಂದರೆ ಆಗಿನ ಕಾಲದಲ್ಲಿ ಬೇಟೆಗೆ ಸಹಾಯ ಮಾಡಲು ಹದ್ದುಗಳನ್ನು ತರಬೇತುಗೊಳಿಸುತ್ತಿದ್ದರು. ಒಂದು ದಿನ ರಾಜ ತನ್ನ ಜತೆಗಾರರೊಂದಿಗೆ ಬೇಟೆಗೆ ಹೊರಟ. ಬೇಟೆನಾಯಿಗಳು, ಬಿಲ್ಲು ಬಾಣಗಳೊಂದಿಗೆ ಎಲ್ಲರೂ ಗದ್ದಲವೆಬ್ಬಿಸುತ್ತ ಹೊರಟರು.

ಆದರೆ ದುರದೃಷ್ಟವಶಾತ್, ಸೂರ್ಯ ನೆತ್ತಿಗೆ ಬಂದರೂ ಅವರಿಗೆ ಒಂದೇ ಒಂದು ಬೇಟೆ ಸಿಗಲಿಲ್ಲ. ಎಲ್ಲರಿಗೂ ನಿರಾಸೆ. ಇದೇ ಪರಿಸ್ಥಿತಿ ಸಂಜೆಯವರೆಗೂ ಮುಂದುವರಿಯಿತು. ಎಲ್ಲರೂ ಮನೆಗೆ ವಾಪಸಾಗತೊಡಗಿದರು. ಸುಸ್ತಾದ ಬೇಟೆಗಾರರು ಹತ್ತಿರದ ದಾರಿಯನ್ನೇ ಆಯ್ದುಕೊಂಡರು. ಆದರೆ ರಾಜನಿಗೆ ರಾಜಧಾನಿಗೆ ಹೋಗುವ ಪ್ರತೀ ದಾರಿಯೂ ಚಿರಪರಿಚಿತವಾಗಿತ್ತು. ಹಾಗಾಗಿ ಆತ ಎರಡು ಗುಡ್ಡಗಳ ನಡುವಿನ ಕಂದಕವೊಂದರ ಹಾದಿಯ ಮೂಲಕ ವಾಪಾಸ್ ಹೊರಟ. ಜತೆಗೆ ಆತನ ಪ್ರಿಯ ಹದ್ದೂ ಇತ್ತು. ರಾಜನಿಗೆ ಬಾಯಾರಿಕೆ ಆಗುತ್ತಿತ್ತು. ಅರ್ಧದಾರಿ ಕ್ರಮಿಸುವಷ್ಟರಲ್ಲಿ ಮುಂದೆ ಹೆಜ್ಜೆ ಇಡಲಾರದಂತಾಯಿತು. ನೀರಿನ ತೊರೆಗಳನ್ನು ಬಿರುಬೇಸಿಗೆ ಬತ್ತಿಸಿಬಿಟ್ಟಿತ್ತು. ಅಂತೂ ಇಂತೂ ಒಂದು ಕಡೆ ಬಂಡೆಗಲ್ಲಿನ ಸಂದಿಯಿಂದ ನೀರು ಹನಿಹನಿಯಾಗಿ ತೊಟ್ಟಿಕ್ಕುತ್ತಿದ್ದುದು ಕಂಡಿತು.

ರಾಜ ತೋಳಿನ ಮೇಲೆ ಕೂತಿದ್ದ ಹದ್ದನ್ನು ಇಳಿಸಿ, ಚೀಲದಿಂದ ಪುಟ್ಟ ಬೆಳ್ಳಿಯ ಲೋಟ ಹೊರತೆಗೆದು ಆ ತೊಟ್ಟಿಕ್ಕುವ ನೀರನ್ನು ಸಂಗ್ರಹಿಸತೊಡಗಿದ. ನೀರು ತುಂಬಲು ಬಹಳ ಹೊತ್ತೇ ಹಿಡಿಯಿತು. ಬಾಯಾರಿಕೆಯಿಂದ ತಲೆತಿರುಗಿ ಬೀಳುವಂತಾಗಿದ್ದ ರಾಜ ಅದು ತುಂಬಿದ್ದೇ ಕುಡಿಯಲೆಂದು ತುಟಿಯ ಹತ್ತಿರ ತೆಗೆದುಕೊಂಡು ಹೋದ. ಏನೋ ಬಡಿದಂತಾಗಿ ಲೋಟ ಕೆಳಗೆ ಬಿದ್ದು ನೀರು ಚೆಲ್ಲಿ ಹೋಯಿತು. ಕುದಿಯುವ ಸಿಟ್ಟಿನಿಂದ ಯಾರು ಹೀಗೆ ಮಾಡಿದವರೆಂದು ನೋಡಿದರೆ ಅದು ಅವನ ಪ್ರೀತಿಯ ಹದ್ದು! ತನ್ನ ರೆಕ್ಕೆಗಳಿಂದ ಅದು ಲೋಟವನ್ನು ಕೆಳಗೆ ಬೀಳಿಸಿತ್ತು! ಬಾಯಾರಿದ್ದ ರಾಜ ಕಿರಿಕಿರಿಯಾದರೂ ಲೋಟವನ್ನು ಮತ್ತೆ ತುಂಬತೊಡಗಿದ. ಈ ಸಲ ಅದು ಪೂರ್ತಿ ತುಂಬುವಷ್ಟು ತಾಳ್ಮೆಯಾಗಲೀ, ಶಕ್ತಿಯಾಗಲೀ ಅವನಿಗೆ ಇರಲಿಲ್ಲ. ಹಾಗಾಗಿ ಲೋಟ ಅರ್ಧ ತುಂಬುತ್ತಿದ್ದಂತೆ ಕುಡಿಯಹೊರಟ. ಆದರೆ ಆ ಲೋಟ ಅವನ ತುಟಿ ಸೋಕುವ ಮೊದಲೇ ಹದ್ದು ಮತ್ತೆ ಲೋಟವನ್ನು ಕೆಳಗೆ ಬೀಳಿಸಿತು. ರಾಜನ ಕೋಪ ನೆತ್ತಿಗೇರಿತು. ಮೂರನೇ ಸಲವೂ ಹಕ್ಕಿ ಹಾಗೆಯೇ ಮಾಡಿದಾಗ ರಾಜ ಹೇಳಿದ, ‘ಈ ಸಲ ನನ್ನ ಕೈಗೆ ಸಿಕ್ಕಿದರೆ ನಿನ್ನ ಕುತ್ತಿಗೆ ಮುರಿದುಬಿಡುತ್ತೇನೆ.’

ನಾಲ್ಕನೇ ಸಲ ನೀರು ಕುಡಿಯುವ ಮುನ್ನ ರಾಜ ಒರೆಯಿಂದ ಖಡ್ಗವನ್ನು ಹೊರತೆಗೆದು ಇಟ್ಟುಕೊಂಡ. ಮತ್ತೆ ಹಕ್ಕಿ ಹಾರಿ ಬಂದು ಲೋಟವನ್ನು ಬೀಳಿಸಿತು. ಅದೇ ವೇಳೆಗೆ ರಾಜನ ಕತ್ತಿ ಹಕ್ಕಿಯ ಎದೆಸೀಳಿತು. ಹಕ್ಕಿ ರಾಜನ ಪಾದದ ಬಳಿ ಬಿದ್ದು ಒದ್ದಾಡಿ ಪ್ರಾಣಬಿಟ್ಟಿತು. ‘ನಿನ್ನ ಅಧಿಕ ಪ್ರಸಂಗಿತನಕ್ಕೆ ತಕ್ಕ ಶಾಸ್ತಿಯಾಯಿತು’- ಕೋಪದಿಂದ ಕೆಂಪಾಗಿದ್ದ ರಾಜ ಹಕ್ಕಿಯ ಶವವನ್ನು ನೋಡುತ್ತ ಹೇಳಿದ. ಲೋಟಕ್ಕಾಗಿ ಹುಡುಕಿದರೆ ಅದು ಬಂಡೆಯ ಕೆಳಗೆ ಬಿದ್ದು ಹೋಗಿತ್ತು. ನೀರು ಕುಡಿಯಲೇಬೇಕೆಂದು ರಾಜ ಆ ಕಡಿದಾದ ಬಂಡೆಯನ್ನು ಏರತೊಡಗಿದ. ಬಂಡೆಯನ್ನು ಏರಿ ಕೊಂಚ ದೂರ ಹೋಗುವಷ್ಟರಲ್ಲಿ ನೀರಿನ ಕೊಳ ಸಿಕ್ಕಿತು. ಅದರಲ್ಲಿ ಆತ ಕಂಡ ದೃಶ್ಯ ಎದೆ ನಡುಗಿಸುವಂತಿತ್ತು. ಅತ್ಯಂತ ಅಪಾಯಕಾರಿಯಾದ ವಿಷಯುಕ್ತ ಹಾವೊಂದು ಆ ಕೊಳದಲ್ಲಿ ಸತ್ತು ಬಿದ್ದಿತ್ತು. ಒಂದು ವೇಳೆ ರಾಜ ಆ ನೀರನ್ನು ಕುಡಿದದ್ದೇ ಆಗಿದ್ದರೆ ಅದಾಗಲೇ ಇಹಲೋಕದ ವ್ಯಾಪಾರವನ್ನಾತ ಮುಗಿಸಿರುತ್ತಿದ್ದ. ರಾಜನಿಗೆ ಸತ್ತು ಬಿದ್ದ ಹದ್ದಿನ ನೆನಪಾಯಿತು. ‘ಛೇ, ಹದ್ದು ನನ್ನ ಜೀವ ಉಳಿಸಿತು. ಅದು ನನ್ನ ಅತ್ಯುತ್ತಮ ಸ್ನೇಹಿತನಾಗಿತ್ತು, ಆದರೆ ನಾನು ಅದನ್ನು ಕೊಂದುಬಿಟ್ಟೆ!’ ಪಶ್ಚಾತ್ತಾಪದಿಂದ ಮರುಗಿದನಾತ.

ಸತ್ತ ಹಕ್ಕಿಯನ್ನು ತನ್ನ ಬೇಟೆಯ ಚೀಲದಲ್ಲಿ ಹಾಕಿಕೊಂಡು ರಾಜ ರಾಜಧಾನಿಗೆ ಮರಳಿದ. ಬಂಗಾರದ ಹದ್ದಿನ ಪ್ರತಿಮೆಯನ್ನು ಮಾಡಿಸಿದ. ಅದರ ಎರಡೂ ರೆಕ್ಕೆಗಳ ಮೇಲೆ ಎರಡು ವಾಕ್ಯಗಳನ್ನು ಕೆತ್ತಿಸಿದ. ಮೊದಲ ರೆಕ್ಕೆಯ ಮೇಲಿನ ಬರಹ ಹೀಗಿತ್ತು: ‘ನಿನಗಿಷ್ಟವಾಗದ ಕೆಲಸವನ್ನು ನಿನ್ನ ಸ್ನೇಹಿತ ಮಾಡಿದರೂ ಆತ ನಿನ್ನ ಸ್ನೇಹಿತನೇ ಆಗಿರುತ್ತಾನೆ’. ಎರಡನೇ ರೆಕ್ಕೆಯ ಮೇಲೆ ಕೆತ್ತಿಸಿದ ವಾಕ್ಯ ಹೀಗಿತ್ತು: ‘ಸಿಟ್ಟಿನಲ್ಲಿ ಮಾಡಿದ ಯಾವುದೇ ಕೆಲಸ ವಿನಾಶಕ್ಕೆ ಹಾದಿ’.

ಹೌದು, ನಾವೆಲ್ಲ ನಮ್ಮ ಭಾವನೆಗಳ ದಾಸರು. ಕೋಪ, ಅಹಂಕಾರ, ನಿರಾಸೆ, ಸಂಶಯ, ದ್ವೇಷಗಳಂತಹ ನೆಗೆಟಿವ್ ಸಂಗತಿಗಳಿರಲಿ ಅಥವಾ ಪ್ರೀತಿ, ಕರುಣೆ, ಸಹನೆಯಂತಹ ಧನಾತ್ಮಕ ಸಂಗತಿಗಳಿರಲಿ ಅವುಗಳ ಕಾಣದ ಕೈಗಳಲ್ಲಾಡುವ ಬುಗುರಿಗಳಂತೆ ನಾವು. ಈ ಜಗತ್ತಿನ ಅತೀ ಬುದ್ಧಿವಂತರು, ಶಕ್ತಿವಂತರು ಎಲ್ಲರೂ ಭಾವನೆಗಳ ಮಹಾಪೂರದಲ್ಲಿ ಕೊಚ್ಚಿಕೊಂಡು ಹೋದವರೇ, ಭಾವನೆಗಳ ಕೈಲಿ ಬುದ್ಧಿ ಕೊಟ್ಟು ಮೂರ್ಖರಾದವರೇ.

ಕೋಪದಲ್ಲಿ ಕೊಯ್ದುಕೊಂಡ ಮೂಗು ಮತ್ತೆ ಬಾರದು ಎಂದು ನಾವೆಲ್ಲ ಚಿಕ್ಕಂದಿನಿಂದಲೂ ಕೇಳಿ ಕೇಳಿ ಹಳೆಯದಾದ ಮಾತು ಕೋಪದ ಪರಿಣಾಮಗಳನ್ನು ಅತ್ಯಂತ ಸರಳವಾಗಿ, ಸ್ಪಷ್ಟವಾಗಿ ತಿಳಿಸುತ್ತದೆ. ಕೋಪ ಮನುಷ್ಯನ ದೌರ್ಬಲ್ಯ. ವ್ಯಕ್ತಿಯೊಬ್ಬನ ಬದುಕನ್ನು ಸಂಪೂರ್ಣವಾಗಿ ಬದಲಿಸಬಲ್ಲ ಸಾಮರ್ಥ್ಯ ಕೋಪಕ್ಕಿದೆ. ‘ಬೇರೆಯವರ ತಪ್ಪಿಗೆ ನಾವು ನಮ್ಮ ಮೇಲೆ ಸೇಡು ತೀರಿಸಿಕೊಳ್ಳುವುದೇ ಕೋಪ’ ಎಂದು ಅಲೆಕ್ಸಾಂಡರ್ ಪೋಪ್ ಹೇಳುತ್ತಾನೆ. ನಿಜ, ಸಿಟ್ಟು ವಿಚಾರಮಾಡುವ ಶಕ್ತಿಯನ್ನೇ ಕುಂದಿಸಿ ವ್ಯಕ್ತಿಯನ್ನು ಹಿಂಸ್ರಪಶುವಿನಂತಾಗಿಸುತ್ತದೆ. ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿಗಳನ್ನು ಕೇಳಿ ನೋಡಿ. ಅರೆಕ್ಷಣದ ಕೋಪ ತಮ್ಮ ಕುಟುಂಬವನ್ನೇ ಬೀದಿಗೆ ತಂದುದನ್ನು ಅಸಹಾಯಕ ಪಶ್ಚಾತ್ತಾಪದಿಂದ ವರ್ಣಿಸುತ್ತಾರೆ.

ಕೋಪದಿಂದ ಎದುರಿಗಿರುವವರ ಕೆನ್ನೆಗೆ ಬೀಸಿದ ಒಂದೇ ಏಟು ಇಬ್ಬರ ಬದುಕಿನ ಕೊನೆಯಾಗಬಹುದು! ಕೋಪದಲ್ಲಿ ಆಡಿದ ಒಂದೇ ಒಂದು ಕಟುಮಾತು ವರ್ಷವರ್ಷಗಳ ಸಂಬಂಧವನ್ನು, ಸ್ನೇಹವನ್ನು ನಿರ್ದಯತೆಯಿಂದ ಕತ್ತರಿಸಿ ಹಾಕಬಹುದು. ಅದೇನೂ ಇಲ್ಲವಾದರೆ ಕೋಪದಿಂದ ಕುದಿಯುವ ವ್ಯಕ್ತಿ ಒಳಗೊಳಗೇ ನವೆದು ಹೋಗಬಹುದು. ಕೋಪದ ಉದ್ರಿಕ್ತತೆಯಲ್ಲಿ ಆತ್ಮಹತ್ಯೆಯಂತಹ ಪ್ರಯತ್ನಗಳಿಗೆ ಕೈ ಹಾಕಬಹುದು. ಸಂಗಾತಿಗೆ ಬುದ್ಧಿ ಕಲಿಸಲು ಮಕ್ಕಳ ಜತೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಗಂಡ/ಹೆಂಡತಿಯರ ಸಂಖ್ಯೆ ದೊಡ್ಡದಿದೆ. ಅಪ್ಪ ಅಮ್ಮನಿಗೆ ಪಾಠ ಕಲಿಸಲು ಜೀವ ತೆಗೆದುಕೊಳ್ಳುವ ಮೂರ್ಖ ಹದಿಹರಯದವರ ಸಂಖ್ಯೆಯಂತೂ ದಿನದಿಂದ ದಿನಕ್ಕೆ ಏರುತ್ತಲೇ ಇದೆ!

ಕೋಪದಿಂದ ಹಾನಿಯಾಗುವುದಂತೂ ಖಂಡಿತ. ಅದು ಕೋಪಗೊಂಡ ವ್ಯಕ್ತಿಗಾದರೂ ಆಗಬಹುದು, ಇತರರಿಗಾದರೂ ಆಗಬಹುದು. ‘ಕೋಪವೆಂದರೆ ಸುಡುವ ಇದ್ದಲನ್ನು ಬೇರೆಯವರೆಡೆ ಎಸೆಯುವ ಉದ್ದೇಶದಿಂದ ಕೈಯ್ಯಲ್ಲಿ ಹಿಡಿದುಕೊಂಡಹಾಗೆ’ ಎಂದು ಬುದ್ಧ ಹೇಳುತ್ತಾನೆ. ಬೇರೆಯವರನ್ನು ಸುಡುವ ಮೊದಲು ಅದು ನಮ್ಮನ್ನು ಸುಟ್ಟಿರುತ್ತದೆ! ಸದಾ ಸಿಡಿಮಿಡಿಗೊಳ್ಳುವ ವ್ಯಕ್ತಿಯನ್ನು ಯಾರೂ ಇಷ್ಟಪಡುವುದಿಲ್ಲ. ಮತ್ತು ಕೋಪದಿಂದ ಏನೂ ಸೃಷ್ಟಿಯಾಗುವುದಿಲ್ಲ, ಆದರೆ ಏನನ್ನು ಬೇಕಾದರೂ ನಾಶ ಮಾಡುವ ಶಕ್ತಿ ಅದಕ್ಕಿದೆ.

ಆಧುನಿಕ ಬದುಕು ನಮಗೆ ಕೊಟ್ಟಿರುವ ಕೊಡುಗೆಯೆಂದರೆ ಕೋಪ ಮಾಡಿಕೊಳ್ಳುವ ಹೇರಳ ಅವಕಾಶಗಳು ದಿನದಿನವೂ ನಮಗೆ ಲಭ್ಯ! ಆದರೆ ನಾವು ವಿಚಾರ ಮಾಡುವ ಸಾಮರ್ಥ್ಯ ಇರುವ ಮಾನವರು. ಕೋಪ ಬರುವುದು ಸಹಜ. ಆದರೆ ಅದನ್ನು ನಿಯಂತ್ರಣ ಮಾಡಿಕೊಳ್ಳದೇ ಹೋದರೆ ಅಪಾಯ ಖಂಡಿತ. ಎಮರ್ಸನ್ ಹೇಳುವಂತೆ ಒಂದು ನಿಮಿಷದ ಕೋಪ ಅರವತ್ತು ಸೆಕೆಂಡುಗಳ ಮನಃಶಾಂತಿಯನ್ನು ನಾಶಮಾಡಬಲ್ಲದು. ಕೋಪ ಬಂದಾಗ ಹತ್ತು ಅಥವಾ ನೂರರವರೆಗೆ ಎಣಿಸುವುದು ಸಿಲ್ಲಿ ಎಂದು ಬಹಳ ಮಂದಿ ಅಂದುಕೊಂಡಿದ್ದಾರೆ. ಆದರೆ ಅದನ್ನು ಅಳವಡಿಸಿಕೊಳ್ಳುವುದು ಎಷ್ಟೋ ಸಮಸ್ಯೆಗಳಿಗೆ ಪರಿಹಾರ. ಉದಾಹರಣೆಗೆ ತಂದೆತಾಯಿಗಳಿಗೆ ಮಕ್ಕಳ ಮೇಲೆ ಕೋಪ ಬಂದ ಮರುಕ್ಷಣವೇ ಅವರಿಗೆ ಏಟು ಬಿದ್ದಿರುತ್ತದೆ ಅಲ್ಲವೇ? ಅದೇ ಐದು ನಿಮಿಷ ಆದ ಮೇಲೆ ಕೋಪದ ತೀವ್ರತೆ ಉಳಿದಿರುವುದಿಲ್ಲ. ಯಾರಾದರೂ ಏನನ್ನಾದರೂ ಕಿರಿಕಿರಿಯಾಗುವಂತೆ ಹೇಳಿದರೆ ತಕ್ಷಣ ಮಾತಾಡುವ ಮೊದಲು ಯೋಚಿಸೋಣ, ಇಲ್ಲ ಮೌನ ವಹಿಸೋಣ. ಒಬ್ಬರಿಗೆ ಕೋಪ ಬಂದಾಗ ಇನ್ನೊಬ್ಬರು ಮೌನ ವಹಿಸಿದರೆ ಅಡುಗೆ ಮನೆಯಲ್ಲಿ, ಮಲಗುವ ಕೋಣೆಯಲ್ಲಿ, ಕಚೇರಿಯಲ್ಲಿ ಮನಸ್ತಾಪಗಳಿಗೆ ಅವಕಾಶವೇ ಇರುವುದಿಲ್ಲ!

ನಾವು ನಮಗೆ ಕೋಪ ಬರಿಸಿದವರ ಬಗ್ಗೆಯೇ ಯಾವಾಗಲೂ ಯೋಚಿಸು ತ್ತಿರುತ್ತೇವೆ. ಅವರನ್ನು ಕ್ಷಮಿಸಿಬಿಡುವುದರ ಮೂಲಕವೂ ನೆಮ್ಮದಿಯನ್ನು ಗಳಿಸಿಕೊಳ್ಳಬಹುದು. ಅಷ್ಟೇ ಅಲ್ಲ, ದಿನವೂ ಬೆಳಿಗ್ಗೆ ಬರೀ ಐದೇ ನಿಮಿಷ ಒಂದೆಡೆ ಕೂತು ದೀರ್ಘವಾಗಿ ಉಸಿರಾಡುವುದರಿಂದಲೂ ಕೋಪದ ನಿಗ್ರಹ ಸಾಧ್ಯ. ‘ನನಗೆ ಮೂಗಿನ ತುದೀಲೇ ಕೋಪ ಇರುತ್ತೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅಭ್ಯಾಸ ಯಾರಿಗಾದರೂ ಇದ್ದರೆ ಮೊದಲು ಅದನ್ನು ನಿಲ್ಲಿಸಿ. ಏಕೆಂದರೆ ಕೋಪವನ್ನು ಯಾರು ಬೇಕಾದರೂ ಮಾಡಿಕೊಳ್ಳಬಹುದು, ಆದರೆ ಅದನ್ನು ನಿಯಂತ್ರಿಸುವ ಕಲೆಯನ್ನು ಕಷ್ಟಪಟ್ಟು ರೂಢಿಸಿಕೊಳ್ಳಬೇಕಾಗುತ್ತದೆ. ಮತ್ತು ಇಂತಹ ಅಸಂಖ್ಯ ಕಲೆಗಳ ಮೊತ್ತವೇ ಬದುಕು.

(ಲೇಖಕರು ಉಪನ್ಯಾಸಕಿ, ಕವಯಿತ್ರಿ)

Leave a Reply

Your email address will not be published. Required fields are marked *

Back To Top