ನದಿಗಳು ಮಲಿನವಾಗುವ ಮುನ್ನ ಎಚ್ಚೆತ್ತುಕೊಳ್ಳಿ

ಶಿರಸಿ: ಮನುಷ್ಯನ ಅತಿ ಆಸೆಯಿಂದಾಗಿ ನದಿಗಳು ಮಲಿನಗೊಳ್ಳುತ್ತಿವೆ. ಇನ್ನಷ್ಟು ಹಾಳಾಗುವ ಮೊದಲೇ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಲೇಖಕ ಅನಂತ ಪದ್ಮನಾಭ ಅವರ ಪ್ರವಾಸ ಕಥನ ‘ಕೈಲಾಸ ಮಾನಸ ಯಾನ’ ಕೃತಿಯನ್ನು ನಗರದಲ್ಲಿ ಶನಿವಾರ ಸಂಜೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಹಿಮಾಲಯ ಪರ್ವತ ದೇವತಾ ಸ್ವರೂಪಿ. ಇಲ್ಲಿಯ ಪ್ರತಿ ಶಿಖರಗಳಲ್ಲಿಯೂ ದೇವತೆಗಳು ವಾಸವಾಗಿದ್ದಾರೆ. ಈ ಶಿಖರ ಶ್ರೇಣಿಗಳಿಂದ ಜನಿಸಿದ ಹಲವು ನದಿಗಳು ಕಲುಷಿತಗೊಂಡಿವೆ. ಗಂಗಾ ನದಿಗೆ ಹಲವು ಕಡೆಗಳಲ್ಲಿ ಅಣೆಕಟ್ಟು ನಿರ್ವಿುಸಲಾಗಿದೆ. ನದಿಯ ರಕ್ಷಣೆಗೆ ಕಾಳಜಿ ವಹಿಸಬೇಕಾಗಿದೆ’ ಎಂದರು.

ಮಾನಸ ಸರೋವರ ಯಾತ್ರೆ ಮನಸ್ಸಿಗೆ ಪರಿವರ್ತನೆ ತರುವ ಶಕ್ತಿ ಹೊಂದಿದೆ. ವಯಸ್ಸಾದ ಮೇಲೆ ತೀರ್ಥ ಯಾತ್ರೆ ಹೋಗುವುದಕ್ಕಿಂತ ಯೌವನದಲ್ಲಿ ಇದ್ದಾಗಲೇ ಹೋಗಿ ಬರಬೇಕು. ಮನಸ್ಸಿನಲ್ಲಾದ ಪರಿವರ್ತನೆಯನ್ನು ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.

ನಿವೃತ್ತ ಪ್ರಾಚಾರ್ಯ ಕೆ. ಎನ್. ಹೊಸ್ಮನಿ ಕೃತಿ ಪರಿಚಯಿಸಿದರು. ಲೇಖಕ ಅನಂತ ಪದ್ಮನಾಭ ಪ್ರಾಸ್ತಾವಿಕ ಮಾತನಾಡಿದರು. ಡಾ. ಶಿವರಾಮ ಕೆ. ವಿ., ಡಾ. ಕ್ರಷ್ಣಮೂರ್ತಿ ರಾಯ್ಸದ್, ಶ್ರೀಕಾಂತ ಹೆಗಡೆ ಇತರರಿದ್ದರು.

ನಿಷ್ಠೆ ಅಚಲವಾಗಿದ್ದರೆ ಭಗವಂತನ ಅನುಗ್ರಹ: ಯಲ್ಲಾಪುರ: ಭಕ್ತಿಯೊಂದಿಗೆ ಸ್ವಧರ್ವಚರಣೆಯನ್ನು ನಿಯಮಿತವಾಗಿ ಅನುಷ್ಟಾನಗೊಳಿಸಿದರೆ ಭಕ್ತಿಯ ಬೆಳವಣಿಗೆ ಹೊಂದಲು ಸಾಧ್ಯ ಎಂದು ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಅವರು ತಾಲೂಕಿನ ಕನೇನಹಳ್ಳಿಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ವಿುಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರತಿಯೊಬ್ಬರೂ ಪ್ರಾತಃಕಾಲದಲ್ಲಿ ಎದ್ದು, ಯೋಗ, ಪ್ರಾಣಾಯಾಮ ಹಾಗೂ ಸಂಧ್ಯಾವಂದನೆಗಳಂತಹ ವಿಧಿಗಳನ್ನು ಅನುಸರಿಸುವುದರ ಮೂಲಕ ವೈದಿಕ ಧರ್ವಚರಣೆ ಉಳಿಸಲು ಕಾರಣರಾಗಬೇಕು. ಭಕ್ತಿಯಲ್ಲಿ ಆರ್ತ, ಅರ್ಥಾರ್ಥಿ, ಜಿಜ್ಞಾಸು ಹಾಗೂ ಜ್ಞಾನಿಗಳೆಂಬ ಚತುರ್ವಿಧಗಳಿದ್ದು, ನಮ್ಮ ಭಕ್ತಿಯ ನಿಷ್ಠೆ ಅಚಲವಾಗಿದ್ದರೆ ಭಗವಂತನ ಅನುಗ್ರಹ ಸಾಧ್ಯವಾಗುತ್ತದೆ ಎಂದರು. ಜಿ.ಜಿ. ಹೆಗಡೆ ಹಾಗೂ ನಾಗವೇಣಿ ಹೆಗಡೆ ದಂಪತಿ ಪಾದಪೂಜೆ ನೆರವೇರಿಸಿದರು. ಜಿ.ಜಿ. ಹೆಗಡೆ ಸ್ವಾಗತಿಸಿದರು.