ನಡುಬೀದಿಯಲ್ಲೇ ಗುಂಪು ಘರ್ಷಣೆ

ಧಾರವಾಡ: ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪಿನವರು ಗುದ್ದಲಿ, ಸಲಾಕೆ ಹಿಡಿದು ನಡುಬೀದಿಯಲ್ಲೇ ಬಡಿದಾಡಿಕೊಂಡ ಘಟನೆ ಗುರುವಾರ ಇಲ್ಲಿಯ ಲೈನ್ ಬಜಾರ ಆಂಜನೇಯ ದೇವಸ್ಥಾನ ಬಳಿ ಜನನಿಬಿಡ ಪ್ರದೇಶದಲ್ಲಿ ನಡೆದಿದ್ದು, ಸಾರ್ವಜನಿಕರು ಕೆಲ ಕಾಲ ಆತಂಕಗೊಂಡಿದ್ದರು.

ಅವಳಿ ನಗರದಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡಲು ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಿದರೂ ರೌಡಿಗಳ ಅಟ್ಟಹಾಸ ಪ್ರಕರಣಗಳು ಮುಂದುವರಿದಿರುವುದಕ್ಕೆ ಹುಬ್ಬಳ್ಳಿಯ ಲಾಜರಸ್ ಎಂಬಾತ ಎರಡು ದಿನದ ಹಿಂದೆ ನಗರದಲ್ಲಿ ಅಟ್ಟಹಾಸ ನಡೆಸಿದ್ದು ಉದಾಹರಣೆಯಾದರೆ, ಪೊಲೀಸರ ಬಗ್ಗೆ ಭಯ ಮತ್ತು ಕಾನೂನಿನ ಬಗೆಗೆ ಅನೇಕರಿಗೆ ಗೌರವ ಮೂಡಿಲ್ಲ ಎನ್ನಲು ಎರಡು ಗುಂಪುಗಳ ಬೀದಿ ರಂಪಾಟ ಸಾಕ್ಷಿಯಂತಿತ್ತು.

ಗೋವಿನಜೋಳ ತೆನೆ ಮಾರಾಟ ಮಾಡುತ್ತಿದ್ದ ಹುಡುಗನನ್ನು ಮತ್ತೊಂದು ಗುಂಪಿನವರು ಹೊಡೆದಿದ್ದರಿಂದ ಜಗಳ ಉಂಟಾಗಿತ್ತು. ಇದು ಮುಂದುವರಿದು ಮದಾರಮಡ್ಡಿ ಹಾಗೂ ಭೂಸಪ್ಪ ಚೌಕ್ ಹುಡುಗರ ಹೊಡೆದಾಟಕ್ಕೆ ಕಾರಣವಾಯಿತು. ನಂತರ ಎರಡೂ ಗುಂಪಿನವರು ಕೈ ಕೈ ಮಿಲಾಯಿಸಿ ಕಟ್ಟಡ ನಿರ್ವಣಕ್ಕಾಗಿ ಬಳಸುತ್ತಿದ್ದ ಸಲಿಕೆ, ಗುದ್ದಲಿಯಿಂದ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ನಿಖಿಲ್ ಎಂಬಾತನ ತಲೆಗೆ ಗಾಯವಾಗಿದೆ. ತಕ್ಷಣ ಸ್ಥಳಕ್ಕೆ ಬಂದ ಶಹರ ಠಾಣೆ ಪೊಲೀಸರು ಎರಡೂ ಗುಂಪುಗಳ ಯುವಕರನ್ನು ವಶಕ್ಕೆ ಪಡೆದಿದ್ದಾರೆ.

ಯುವಕರು ಹೊಡೆದಾಡಿಕೊಂಡ ಸ್ಥಳದ ಸಮೀಪದಲ್ಲೇ ಕಟ್ಟಡ ನಿರ್ಮಾಣ ಕೆಲಸ ನಡೆದಿದ್ದು, ಅಲ್ಲಿ ಗುದ್ದಲಿ ಸಲಿಕೆಗಳಿದ್ದವು. ಒಂದು ಗುಂಪಿನವರು ಅವನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ಇನ್ನೊಂದು ಗುಂಪಿನವರೂ ಹಾಗೇ ಮಾಡಿದರು. ಪರಸ್ಪರರ ಮೇಲೆ ಹಲ್ಲೆ ಮಾಡಿಕೊಂಡರು. ಅನಿರೀಕ್ಷಿತವಾಗಿ ಬೀದಿಯಲ್ಲಿ ಕೂಗಾಟ, ಬಡಿದಾಟ ನಡೆದಾಗ ಸಾರ್ವಜನಿಕರು ಆತಂಕಗೊಂಡಿದ್ದರು.

ಇತ್ತೀಚೆಗೆ ಕೆಲಗೇರಿ ಆಂಜನೇಯ ನಗರದ ಮಹಿಳೆಯೊಬ್ಬರ ಮನೆಯನ್ನು ಹುಬ್ಬಳ್ಳಿಯ ರೌಡಿ ಲಾಜರಸ್ ಹಾಗೂ ಬೆಂಬಲಿಗರು ಹಾಡಹಗಲೇ ನೆಲಸಮ ಮಾಡಿದ್ದರು. ಪ್ರಮುಖ ಆರೋಪಿ ಲಾಜರಸ್ ಸೇರಿ ನಾಲ್ವರ ವಿರುದ್ಧ ಮನೆ ಧ್ವಂಸ ಪ್ರಕರಣ ದಾಖಲಾಗಿದೆ. 2 ದಿನಗಳಾದರೂ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಲ್ಲ. ಕಾಪೋರೇಟರ್ ಒಬ್ಬರ ಸಂಬಂಧಿಯಾಗಿರುವ ಹಾಗೂ ಸರ್ಕಾರದಲ್ಲಿರುವ ಪಕ್ಷದ ಜೊತೆಗೆ ಗುರುತಿಸಿಕೊಂಡಿರುವ ಲಾಜರಸ್​ನ ಬಂಧನಕ್ಕೆ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿರುವಾಗಲೇ ಮತ್ತೊಂದು ಬೀದಿ ರಂಪಾಟ ನಡೆದಿರುವುದು ವಿದ್ಯಾನಗರಿಯ ಘನತೆಗೆ ಕುಂದು ತಂದಿದೆ. ಆದ್ದರಿಂದ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.