Monday, 12th November 2018  

Vijayavani

ಕಳಚಿತು ರಾಜಕೀಯ ರಂಗದ ಮತ್ತೊಂದು ಕೊಂಡಿ- ಬಾರದ ಲೋಕಕ್ಕೆ ಅನಂತ್ ಕುಮಾರ್ ಪಯಣ - ಶೋಕದ ಕಡಲಲ್ಲಿ ಬಿಜೆಪಿ ಪಾಳಯ        ಅಗಲಿದ ನಾಯಕನ ಅಂತಿಮ ದರ್ಶನ- ಇನ್ನು ಕೆಲವೇ ಹೊತ್ತಲ್ಲಿ ಬೆಂಗಳೂರಿಗೆ ಪ್ರಧಾನಿ ಆಗಮನ- ಅದಮ್ಯ ಚೇತನ ನೇತಾರನ ಗುಣಗಾನ        ನಾಳೆ ವೈದಿಕ ಸಂಪ್ರದಾಯದಂತೆ ಅಂತ್ಯಸಂಸ್ಕಾರ- ಬೆಳಗ್ಗೆ 8ಗಂಟೆಯಿಂದ ಸಾರ್ವಜನಿಕ ದರ್ಶನ - ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳೋರಿಗಾಗಿ ವಿಶೇಷ ರೈಲು        ಜೈಲು ಹಕ್ಕಿಯಾಗಿರೋ ರೆಡ್ಡಿಗೆ ಸಿಗುತ್ತಾ ಜಾಮೀನು- ನಾಳೆ ನಡೆಯಲಿದೆ ಅರ್ಜಿ ವಿಚಾರಣೆ- ಪರಪ್ಪರ ಅಗ್ರಹಾರದಲ್ಲಿ ದಿನಕಳೆದ ನಾಯಕ        ಸಿಲಿಕಾನ್ ಸಿಟಿಯಲ್ಲಿ ಎದೆ ಝಲ್ಲೆನಿಸುವ ಘಟನೆ- ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು- ಡೆತ್​ನೋಟ್ ಬರೆದಿಟ್ಟು ಸೂಸೈಡ್        ಕಾರ್ತಿಕ ಮಾಸದ ಮೊದಲ ಸೋಮವಾರ- ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ- ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಂದಿಮೂರ್ತಿಗೆ ರುದ್ರಾಭಿಷೇಕ       
Breaking News

ನಟನೆಗೆ ಬೇಕು ಮತ್ತೊಂದು ಕಲೆಯ ಶಕ್ತಿ

Sunday, 19.08.2018, 3:00 AM       No Comments

| ದೀಪಾ ರವಿಶಂಕರ್

ಈಗ್ಗೆ ಕೆಲವು ವರ್ಷಗಳ ಹಿಂದೆ ದೇಶದ ಖ್ಯಾತ ಮತ್ತು ಪ್ರತಿಭಾವಂತ ಹಾಡುಗಾರ ಸೋನು ನಿಗಮ್ ತಮ್ಮ ಸ್ಟೇಜ್ ಪ್ರೋಗ್ರಾಂ ಒಂದರಲ್ಲಿ ಹೇಳಿದ್ದರು, ‘ವೇದಿಕೆಯ ಮೇಲೆ ಹಾಡುತ್ತಾ ಕುಣಿಯುತ್ತಾ ಪ್ರೋಗ್ರಾಂಗಳನ್ನು ಕೊಡಬೇಕೆಂದರೆ ಅದಕ್ಕೆ ಸ್ಟುಡಿಯೋನಲ್ಲಿ ಹಾಡುವುದಕ್ಕಿಂತ ಬಹಳ ಭಿನ್ನವಾದ ಶಕ್ತಿ ಸಾಮರ್ಥ್ಯ ಬೇಕು’. ಎರಡರಲ್ಲೂ ಮೂಲದ್ರವ್ಯ ಹಾಡುಗಾರಿಕೆಯೇ ಆದರೂ ಎರಡಕ್ಕೂ ಶಕ್ತಿಮೂಲ ಬೇರೆ ಬೇರೆ. ಆದ್ದರಿಂದ ವೇದಿಕೆಯ ಮೇಲಿನ ಕಾರ್ಯಕ್ರಮಗಳಿಗೆ ದೇಹದಲ್ಲಿ ಅಪಾರ ಕಸುವು ಬೇಕಾಗುತ್ತದೆ. ಆದ್ದರಿಂದ ಅವರು ಬೆಳೆಯ ಬಯಸುವ ಹೊಸ ಹಾಡುಗಾರರಿಗೆ ಒಂದು ಕಿವಿ ಮಾತು ಹೇಳಿದ್ದರು. ‘ನಿಮ್ಮ ಹಾಡುಗಾರಿಕೆಯ ಜೊತೆ ಹೊರಾಂಗಣ ಕ್ರೀಡೆ ಮೈಗೂಡಿಸಿಕೊಳ್ಳಿ. ಅದು ನಿಮಗೆ ಗಂಟೆಗಳ ಕಾಲ ವೇದಿಕೆಯುದ್ದಕ್ಕೂ ಓಡಾಡಿ, ನರ್ತಿಸಿದರೂ ದಣಿವಾಗದಂತೆ, ಹಾಡು ಶ್ರುತಿ ತಪ್ಪದಂತೆ, ನಡುವೆ ಏದುಸಿರು ಬರದಂತೆ ಸಹಕರಿಸುತ್ತದೆ’ ಎಂದಿದ್ದರು.

ಈ ಮಾತುಗಳು ಹಾಡುಗಾರಿಕೆಗಷ್ಟೇ ಅಲ್ಲ, ನಟನೆಗೂ ಅನ್ವಯಿಸುತ್ತದೆ. ಕಿರುತೆರೆಯ ಕ್ಷೇತ್ರದಲ್ಲಿ ಈ ವಿಷಯವನ್ನು ಬಹಳಷ್ಟು ಬಾರಿ ಗುರುತಿಸಿದ್ದೇನೆ ನಾನು. ಯಾವ ನಟ/ನಟಿ ನಟನೆಯಷ್ಟೇ ಅಲ್ಲದೇ ತನ್ನನ್ನು ತಾನು ಬೇರೊಂದು ಕಲಾ ಪ್ರಕಾರದಲ್ಲಿ ತೊಡಗಿಸಿಕೊಂಡಿರುತ್ತಾರೋ ಅವರು ನಟನೆಯಲ್ಲೂ ಒಳ್ಳೆಯ ಹೆಸರು ತೆಗೆದುಕೊಂಡಿರುತ್ತಾರೆ. ಆಕೆ ಅಥವಾ ಆತ ಉತ್ತಮ ನಟಿ ಅಥವಾ ನಟ ಎಂಬ ಅಭಿಪ್ರಾಯ ಎಲ್ಲರಲ್ಲೂ ಮೂಡುತ್ತದೆ. ವೇದಿಕೆಯ ಮೇಲಿನ ಹಾಡುಗಾರಿಕೆಯಂತೆ ತೆರೆಯ ಮೇಲಿನ ನಟನೆಗೆ ದೈಹಿಕವಾಗಿ ವಿಶೇಷ ಶಕ್ತಿ, ಸಾಮರ್ಥ್ಯಗಳ ಅಗತ್ಯವಿಲ್ಲ. ಇಲ್ಲಿ ಬಹಳ ಹೆಚ್ಚಿನ ಅಗತ್ಯವಿರುವುದು ನೆನಪಿನ ಶಕ್ತಿಯದು ಮತ್ತು ಪಾತ್ರ ಅನುಭವಿಸಬಹುದಾದ ಸಂಕೀರ್ಣ ಭಾವನೆಗಳನ್ನು ಅನುಭವಿಸಿ ಆ ಭಾವನೆಗಳನ್ನು ಕಣ್ಣು, ಭಾವ, ಭಂಗಿಗಳ ಮೂಲಕ ಪುನರುತ್ಪತ್ತಿ ಮಾಡುವ ಸಾಮರ್ಥ್ಯದ್ದು. ಇವುಗಳಿಗೆ ತಾನು ಕಲಿತಿರಬಹುದಾದ ಮತ್ತು ಅಭ್ಯಸಿಸುತ್ತಿರಬಹುದಾದ ಬೇರೆ ಕಲಾ ಅಥವಾ ಕ್ರೀಡಾ ಪ್ರಕಾರಗಳು ಹೇಗೆ ಅನುಕೂಲಕರವಾಗಿ ಮಾರ್ಪಡುತ್ತವೆ ಎಂಬುದು ಕುತೂಹಲಕಾರಿ.

ಮೊದಲಿಗೆ ಈ ಹಿಂದೆ ಕೂಡಾ ನಾನು ಪ್ರಸ್ತಾಪಿಸಿದ್ದೇನೆ. ನಟನೆಯಲ್ಲಿ ನಮ್ಮ ದೇಹ, ಮುಖದ ಸ್ನಾಯುಗಳಲ್ಲಿ ನಾವು ಕೂಡಿಸಿಕೊಳ್ಳುವ ಎನರ್ಜಿ ನಟನೆಗೆ ಬಹು ಮುಖ್ಯವಾದ ಅಂಶ. ಈ ಅಂಶದಲ್ಲಿ ನಟ ನಟಿಯರಿಗೆ ತಾವು ಕಲಿತ ಭರತನಾಟ್ಯವೋ, ಯಕ್ಷಗಾನವೋ, ತಬಲವೋ, ಯೋಗವೋ ಸಹಾಯ ಮಾಡುತ್ತದೆ. ಸಾಧಾರಾಣವಾಗಿ ನಟನೆಗೆ ಒಂದು ರೆಫರೆನ್ಸ್ ಬೇಕಾಗುತ್ತದೆ. ಉದಾಹರಣೆಗೆ ಬೆಳೆದ ಮಗನ ಮದುವೆಯ ಸಮಯದಲ್ಲಿ ತಾಯಿ ಪಡುವ ಆತಂಕವನ್ನು ತೋರಿಸಬೇಕು ಎಂದಿಟ್ಟುಕೊಳ್ಳಿ. ನಿಜ ಜೀವನದಲ್ಲಿ ಮೂರನೇ ಕ್ಲಾಸಿನ ಮಗನ ತಾಯಿಯಾದವಳು ಮಗನ ಮದುವೆಯ ಸಮಯದಲ್ಲಿ ಉಂಟಾಗುವ ತಲ್ಲಣವನ್ನು ಹೇಗೆ ತೋರಿಸಿಯಾಳು? ಅಂಥ ಭಾವವನ್ನು ಆಕೆ ಅನುಭವಿಸಿರುವುದೇ ಇಲ್ಲ. ಆಗ ಯಾವುದೋ ಸಂದರ್ಭದಲ್ಲಿ ತನ್ನವರು ಯಾರೋ ಒಬ್ಬ ತಾಯಿ ಅನುಭವಿಸಿದ್ದನ್ನು ನೋಡಿದ್ದು ಸಹಾಯಕ್ಕೆ ಬರುತ್ತದೆ. ತನ್ನದಾಗಿಲ್ಲದ ಅನುಭವಗಳನ್ನು ಅನುಭವಿಸಿ ತೋರಿಸುವ ಈ ಬಗೆಯಲ್ಲಿ ನಾವು ಕಲಿತ ಅಥವಾ ಕಲಿತಿರುವ ವಿದ್ಯೆಗಳು ನಮ್ಮ ಭಂಗಿಗಳನ್ನು, ಆ ಭಾವಕ್ಕೆ ತಕ್ಕ ಎನರ್ಜಿ ಕೂಡಿಸಿಕೊಳ್ಳುವುದಕ್ಕೂ ಸಹಾಯ ಮಾಡುತ್ತವೆ. ನಮ್ಮ ದೇಹ ಭಾಷೆ (ಬಾಡಿ ಲ್ಯಾಂಗ್ವೇಜ್) ಸ್ಪಷ್ಟವಾಗಿರುವಂತೆ ಸಹಕರಿಸುತ್ತವೆ. ಪಾತ್ರ ಅನುಭವಿಸಿದ್ದನ್ನು ಪಾತ್ರಧಾರಿ ಅನುಭವಿಸಿಲ್ಲದಿದ್ದಾಗಲೂ ಆ ಭಾವ ಯಶಸ್ವಿಯಾಗಿ ಪ್ರೇಕ್ಷಕ ಅಥವಾ ವೀಕ್ಷಕನನ್ನು ಮುಟ್ಟಿಸುವಲ್ಲಿ ಸಹಕಾರಿಯಾಗುತ್ತದೆ.

ನೃತ್ಯ, ಸಂಗೀತ, ವಾದ್ಯ ವಾದನ ಹೀಗೆ ಎಲ್ಲಾ ಪ್ರದರ್ಶನ ಕಲೆಗಳಿಗೂ ತಾಲೀಮು ಮಾಡುವ ಅವಕಾಶ ಇದೆ. ಆ ಸೌಲಭ್ಯ ನಟನೆಗಿಲ್ಲ. ಅಂದರೆ ಬೆಳಗೆದ್ದು ನಾನು ನನ್ನ ವಿದ್ಯೆಯನ್ನು ಅಭ್ಯಸಿಸಬೇಕು ಎಂದರೆ ಉಳಿದೆಲ್ಲವನ್ನೂ ಅಭ್ಯಸಿಸಬಹುದು. ಆದರೆ ನಟನೆಗೆ ಮಾತ್ರ ಅದಕ್ಕೆ ಅನುಕೂಲವಾಗುವಂಥ ವ್ಯಾಯಾಮಗಳನ್ನು, ಅಂದರೆ ದೇಹದ ಅಥವಾ ಗಂಟಲಿನ ವ್ಯಾಯಾಮಗಳನ್ನು ಮಾಡಬಹುದೇ ಹೊರತು ನಟನೆಯನ್ನು ಅಭ್ಯಸಿಸುವ ವಿಧಾನಗಳಿಲ್ಲ. ನಟರಿಗೆ ಈ ಕೊರತೆಯನ್ನು ನೀಗಿಸುವ ವಿಧಾನವೇ ನಾವು ಮೈಗೂಡಿಸಿಕೊಳ್ಳುವ ಮತ್ತೊಂದು ಕಲೆ. ಸಂಗೀತ, ನೃತ್ಯ, ವಾದ್ಯ ಸಂಗೀತ, ಶಿಲ್ಪಕಲೆ, ಚಿತ್ರಕಲೆ, ಯಾವುದರಲ್ಲಿಯೇ ಆಗಲಿ ನಟನೆಯನ್ನು ಅಂದರೆ ನಾವನುಭವಿಸದ ಭಾವವನ್ನು ಕೂಡಾ ಬಿಂಬಿಸುವ ವಿಪುಲವಾದ ಅವಕಾಶಗಳಿರುತ್ತವೆ. ಅವುಗಳ ಶಿಸ್ತುಬದ್ಧ ಅಭ್ಯಾಸ ನಟನೆಯ ಅಭ್ಯಾಸವೂ ಆಗಿ ಮಾರ್ಪಟ್ಟು ನಮ್ಮ ನಟನೆಯನ್ನು ಹೆಚ್ಚು ಹೆಚ್ಚು ಸೂಕ್ಷ್ಮವಾಗಿಸುತ್ತದೆ.

ಬಹಳ ಸಮಯ ಒಂದೇ ಬಗೆಯ ಪಾತ್ರದಲ್ಲಿ ಒಂದೇ ಬಗೆಯ ನಟನೆ ಮಾಡುವ ಕಿರುತೆರೆಯ ನಟರಿಗೆ ಇರುವ ದೊಡ್ಡ ಥ್ರೆಟ್ ಎಂದರೆ ಬೇರೊಂದು ಬಗೆಯ ನಟನೆಗೆ ಹೊಂದಿಕೊಳ್ಳಲಾಗದೇ ಹೋಗಿ ಉದ್ಯಮಕ್ಕೆ ಅಪ್ರಸ್ತುತವಾಗಿಬಿಡುವ ಸಾಧ್ಯತೆ. ಒಂದು ಧಾರಾವಾಹಿಯಲ್ಲಿ ಖಳನ ಪಾತ್ರವನ್ನು ಕೆಲ ವರ್ಷಗಳು ಮಾಡಿದ ನಟನೊಬ್ಬನಿಗೆ ವಿಧೇಯ ಮಗನ ಪಾತ್ರ ಮತ್ತೊಂದು ಧಾರಾವಾಹಿಯಲ್ಲಿ ಸಿಕ್ಕಿದಾಗ ತೀಕ್ಷ್ಣಕಣ್ಣೋಟವನ್ನು ಬದಲಿಸಿಕೊಂಡು ಆ ಕಣ್ಣುಗಳಲ್ಲಿ ಭಯ, ಭಕ್ತಿ ತುಂಬಿಕೊಳ್ಳುವುದು ಕಷ್ಟವಾಗಬಹುದು. ಅದು ನಟನಾಗಿ ಬಹಳ ದೊಡ್ಡ ಸೋಲು. ಅಂಥಾ ಸೋಲುಗಳನ್ನು ತಡೆಯುವಲ್ಲಿ ನಮ್ಮ ಪರ್ಯಾಯ ವಿದ್ಯೆ ಕೆಲಸಕ್ಕೆ ಬರುತ್ತದೆ. ಧಾರಾವಾಹಿ ನಡೆಯುತ್ತಿರುವಾಗಲೂ ಸಮಾನಾಂತರವಾಗಿ ಬೇರೆ ಬೇರೆ ಬಗೆಗಳಲ್ಲಿ ಬೇರೆ ಬೇರೆ ಭಾವಗಳನ್ನು ವ್ಯಕ್ತ ಪಡಿಸುವುದನ್ನು ಇವು ನಮಗೆ ರೂಢಿಸಿರುತ್ತವೆ. ಈ ಕಲೆಗಳು ನಟನೊಬ್ಬನನ್ನು ವರ್ಸಟೈಲ್ ಆಗಿಸುತ್ತವೆ.

ಎಲ್ಲಕ್ಕಿಂತ ಮಿಗಿಲಾಗಿ ಕಲಿಕೆ ನಮ್ಮನ್ನು ವಿಧೇಯರನ್ನಾಗಿಸುತ್ತದೆ. ಸವಾಲುಗಳನ್ನೊಡ್ಡಿ, ಸೋಲಿಸಿ ನಮ್ಮ ಕಾಲುಗಳು ಭೂಮಿಯ ಮೇಲೆಯೇ ಇರುವಂತೆ ನೋಡಿ

ಕೊಳ್ಳುತ್ತವೆ. ಒಮ್ಮೆ ಸೋಲಿಸಿದ ಸವಾಲುಗಳು ಮತ್ತೊಮ್ಮೆ ಗೆಲ್ಲಿಸಿ ಆತ್ಮವಿಶ್ವಾಸ ತುಂಬುತ್ತವೆ. ಶ್ರದ್ಧೆಯ, ಪರಿಶ್ರಮದ ಬೆಲೆ ತಿಳಿಸುತ್ತವೆ. ಕಲಿಕೆ ನಿರಂತರ ಎಂಬ ಶಾಶ್ವತ ಸತ್ಯವನ್ನು ಮನದಟ್ಟು ಮಾಡಿಸುತ್ತವೆ. ಇವೆಲ್ಲವೂ ನಮ್ಮ ನಟನೆಯನ್ನು ಚೊಕ್ಕವಾಗಿಸುತ್ತವೆ. ಆದ್ದರಿಂದ ಇಲ್ಲಿ ಬೆಳೆಯಬಯಸುವ ಚಿಗುರುಗಳಿಗೆ ಕಿವಿಮಾತೊಂದು ಹೇಳಬಹುದಾದರೆ, ತಯಾರಾಗಿ ಬನ್ನಿ, ಸುಂದರವಾಗಿದ್ದರೆ ಅದರಲ್ಲಿ ನಿಮ್ಮ ತಯಾರಿ ಏನಿಲ್ಲ. ಅದು ನಿಮಗೆ ಸಿಕ್ಕ ಬೋನಸ್. ನಟನೆಗೆ, ಅದನ್ನೇ ವೃತ್ತಿಯಾಗಿಸಿಕೊಳ್ಳುವ ನಿರ್ಧಾರಕ್ಕೆ ತಯಾರಾಗಿ. ನಿಮ್ಮ ತಯಾರಿಯ ಪ್ರಕ್ರಿಯೆಯಲ್ಲಿ ನಟನೆಯೊಡನೆ ಮತ್ತೊಂದು ಕಲೆಯನ್ನೂ ರೂಢಿಸಿಕೊಳ್ಳಿ. ನನ್ನನ್ನು ನಂಬಿ ಆ ಕಲೆ ನಿಮ್ಮನ್ನು ನಟನೆಯಲ್ಲಿ ಗೋಡೆಯಂತೆ ಕಾಯುತ್ತದೆ.

Leave a Reply

Your email address will not be published. Required fields are marked *

Back To Top